ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಬೆಳಕು | ಸ್ವಾವಲಂಬಿ ಬದುಕಿಗೆ ‘ಸನಾ’ ಮುನ್ನುಡಿ

ಲಿಂಗತ್ವ ಅಲ್ಪಸಂಖ್ಯಾತರ ಶೈಕ್ಷಣಿಕ ಹಾಗೂ ಉದ್ಯೋಗದ ಹಕ್ಕಿಗಾಗಿ ಹೋರಾಟ
Last Updated 16 ಫೆಬ್ರುವರಿ 2022, 19:21 IST
ಅಕ್ಷರ ಗಾತ್ರ

ಬೆಂಗಳೂರು: ಲಿಂಗತ್ವ ಅಲ್ಪಸಂಖ್ಯಾತ ರೆಂದರೆ ಲೈಂಗಿಕ ಕಾರ್ಯಕರ್ತರು, ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಭಿಕ್ಷೆ ಬೇಡು- ವವರು ಎನ್ನುವ ಚಿತ್ರಣವೇ ಥಟ್ಟನೆ ಕಣ್ಮುಂದೆ ಬರುತ್ತದೆ. ಆದರೆ, ಇಂಥ ದೊಂದು ಚಿತ್ರಣವನ್ನು ಬದಲಾಯಿಸಲು ಪ್ರಯತ್ನಿಸಿ ಯಶಸ್ವಿಯಾಗಿರುವವರಲ್ಲಿ ಸನಾ ಅವರದ್ದು ವಿಶಿಷ್ಟ ವ್ಯಕ್ತಿತ್ವ.

ಹದಿಹರೆಯದಲ್ಲಿ ಸನಾಗೆ ತಾನು ‘ಅವನಲ್ಲ ಅವಳು’ ಎಂದು ಗೊತ್ತಾದಾಗ ಹೆತ್ತವರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಮಗ ಸುಮನ್ (ಸನಾ) ಮನಸು ಬದಲಿಸಲು ಪೋಷಕರು ಹೋಗದ ಆಸ್ಪತ್ರೆಗಳಿಲ್ಲ, ಪೂಜೆ ಮಾಡದ ದೇವಸ್ಥಾನಗಳಿಲ್ಲ. ಮನೆ ಬಿಟ್ಟು ಬೀದಿಗಿಳಿದಾಗ ಬಾಣಲೆಯಿಂದ ಬೆಂಕಿಗೆ ಬಿದ್ದ ಅನುಭವ.

‘ಸೆಕ್ಸ್ ವರ್ಕ್’ ಎಂದರೇನು ಎಂದು ಗೊತ್ತಿಲ್ಲದ ದಿನಗಳಲ್ಲಿ 50 ರೂಪಾಯಿಗಾಗಿ ಅನುಭವಿಸಿದ ಹಿಂಸೆ ಹೇಳಲಸಾಧ್ಯ. ಕೊನೆಗೆ ಸನಾ ಅವರ ನೆರವಿಗೆ ಬಂದದ್ದು ಅವರದ್ದೇ ಸಮುದಾಯ. ಬೆಂಗಳೂರಿನಲ್ಲಿದ್ದರೂ ಹೆತ್ತವರಿಗೆ ಮುಖ ತೋರಿಸಲಾಗದೆ ಪುಣೆಗೆ ಹೋದರೆ ಅಲ್ಲಿಯೂ ಪಂಜರದ ಗಿಳಿಯ ಬದುಕೇ. ಹಗಲು–ರಾತ್ರಿ ಎನ್ನದೇ ಭಿಕ್ಷೆ ಬೇಡಿ ತಂದ ದುಡ್ಡನ್ನು ಸಮುದಾಯದ ಮುಖಂಡರಿಗೆ ಒಪ್ಪಿಸುವ ಕಾಯಕ. ಒಂದು ತುತ್ತು ಒಳ್ಳೆಯ ಊಟಕ್ಕೂ ಕೈಚಾಚುವ ಸ್ಥಿತಿ. ಇದಕ್ಕೆ ಸ್ವಾಭಿಮಾನಿ ಮನಸು ಒಪ್ಪದೇ ಇದ್ದಾಗ ಮತ್ತೆ ಬೆಂಗಳೂರಿಗೆ ವಾಪಸ್ ಬಂದ ಸನಾ, ಬದುಕು ಕಟ್ಟಿಕೊಂಡಿದ್ದು ಎನ್‌ಜಿಒವೊಂದರಲ್ಲಿನ ಉದ್ಯೋಗದ ಮೂಲಕ.

ಹೊಟ್ಟೆಯ ಹಸಿವು ನೀಗಿದರೂ ಜ್ಞಾನದ ಹಸಿವು ಮೂಡಿಸಿದ್ದು ಕಚೇರಿಯ ವಾತಾವರಣ. ತಾನು ಪದವೀಧರೆ ಅಲ್ಲ ಎನ್ನುವ ಕಾರಣಕ್ಕೆ ಬಡ್ತಿ ವಂಚಿತಳಾದ ಸನಾ ಅವರಿಗೆ ಕಾಡಿದ್ದು ತಾನೂ ಇತರರಂತೆ ಪದವೀಧರೆ ಆಗಬೇಕೆಂಬ ಹಂಬಲ. ರಾಜಧಾನಿಯ ಹಲವು ಪ್ರತಿಷ್ಠಿತ ಕಾಲೇಜುಗಳ ಮೆಟ್ಟಿಲು ಹತ್ತಿಳಿದರೂ ಓದುವ ಇಚ್ಛೆಗೆ ನೀರೆರೆಯಲಿಲ್ಲ. ಸಮುದಾಯದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಹೋಗುತ್ತಿದ್ದ ಸೇಂಟ್ ಜೋಸೆಫ್ಸ್ ಕಾಲೇಜಿನಲ್ಲೇ ಪತ್ರಿಕೋದ್ಯಮದ ಪದವಿಗೆ ಪ್ರವೇಶ.

ಕಾಲೇಜು ಪ್ರವೇಶ ಪಡೆದರೂ ತರಗತಿಯಲ್ಲಿ ಏಕಾಂಗಿ ಭಾವ. ವಿದ್ಯಾರ್ಥಿಗಳೊಡನೆ ನಿರಂತರ ಒಡನಾಟದ ಮೂಲಕ ತಮ್ಮ ಸಮುದಾಯದ ಕುರಿತು ಇದ್ದ ಪೂರ್ವಗ್ರಹಪೀಡಿತ ಮನಃಸ್ಥಿತಿ ಹೋಗಲಾಡಿಸಿದ ಸನಾ, ಇದೀಗ ರಾಜ್ಯದಲ್ಲೇ ಲಿಂಗತ್ವ ಅಲ್ಪಸಂಖ್ಯಾತರಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದ ಮೊದಲಿಗರು ಎನ್ನುವ ವಿಶೇಷಣಕ್ಕೆ ಭಾಜನರು. ಕಾಲೇಜು ಶುಲ್ಕ ಭರಿಸಲು ಬೆಳ್ಳಿತೆರೆ– ಕಿರುತೆರೆಯಲ್ಲಿ ಅಭಿನಯ ನೆರವಿಗೆ ಬಂದದ್ದನ್ನು ಸ್ಮರಿಸುವ ಸನಾ, ತನ್ನ ಶಿಕ್ಷಣಕ್ಕೆ ನೆರವಾದ ದಾನಿಗಳನ್ನೂ ನೆನಪಿಸಿಕೊಳ್ಳುವುದನ್ನು ಮರೆಯುವುದಿಲ್ಲ. ‘ನಮ್ಮ ಸಮುದಾಯವನ್ನು ಭಿಕ್ಷುಕರು, ಸೆಕ್ಸ್ ವರ್ಕರ್‌ಗಳು’ ಎಂದು ಕೀಳಾಗಿ ನೋಡುತ್ತಿದ್ದ ಇದೇ ಸಮಾಜ ಈಗ ನನ್ನನ್ನು ನಟಿ, ಸಾಮಾಜಿಕ ಕಾರ್ಯಕರ್ತೆ ಎಂದು ಗುರುತಿಸುತ್ತಿದೆ. ನಾವೂ ಘನತೆಯ ಬದುಕು ಕಟ್ಟಿಕೊಳ್ಳಲು ಸಾಧ್ಯ. ಅದಕ್ಕೆ ಶಿಕ್ಷಣ ಅತ್ಯವಶ್ಯಕ’ ಎಂದು ಪ್ರತಿಪಾದಿಸುತ್ತಾರೆ ಸನಾ.

‘ಉದಯ’ ವಾಹಿನಿಯಲ್ಲಿ ಪ್ರಸಾರ ವಾದ ‘ಯಾರಿವಳು’ ಧಾರಾವಾಹಿಯಲ್ಲಿ ನನ್ನದು ನೆಗೆಟಿವ್ ಪಾತ್ರವಾದರೂ, ಮಗುವೊಂದನ್ನು ರಕ್ಷಿಸುವ ಪಾತ್ರ. ಅಲ್ಲಿನ ಸಂಭಾವನೆಯಿಂದ ನನ್ನ ಜೀವನಕ್ಕೆ ಸಹಾಯಕವಾಯಿತು. ಧಾರಾವಾಹಿಯಲ್ಲೂ ನಾನು ನನ್ನದೇ ಸಮುದಾಯದ ಪ್ರತಿನಿಧಿಯಾಗುವು- ದಕ್ಕಿಂತ ಇತರ ಪಾತ್ರಗಳಲ್ಲಿ ಅಂದರೆ, ನಾಯಕಿ, ತಾಯಿ, ತಂಗಿ ಪಾತ್ರಗಳಲ್ಲಿ ಅಭಿನಯಿಸುವಾಸೆ’ ಎನ್ನುತ್ತಾರೆ ಅವರು.

ಕಾಲೇಜು ಮೆಟ್ಟಿಲು ಹತ್ತುವಾಗ ನನ್ನದೇ ಸಮುದಾಯದ ಕೆಲವರು, ‘ನಮಗೆ ವಿದ್ಯೆ ಹತ್ತಂಗಿಲ್ಲ. ಸುಮ್ಮನೆ ಯೌವ್ವನ ವ್ಯರ್ಥ ಮಾಡಿಕೊಳ್ಳಬೇಡ’ ಎಂದು ಸಲಹೆ ನೀಡಿದ್ದರು. ಆದರೆ, ಆಗ ನನಗೆ ಸ್ಥೈರ್ಯ ತುಂಬಿದ್ದು ಅನೇಕ ಮಹಿಳಾ ಪರ ಹೋರಾಟಗಾರರು. ನಮ್ಮ ಬಗ್ಗೆ ಸಮಾಜಕ್ಕಿರುವ ಚಿತ್ರಣವನ್ನು ಬದಲಿಸಲು ಶಿಕ್ಷಣ ಅಗತ್ಯವೆಂದು ಮನಗಾಣಿಸಿದರು. ಅವರ ಮಾತಿನಂತೆ ಸ್ನಾತಕೋತ್ತರ ಪದವೀಧರೆಯಾಗಿರುವ ನನ್ನಲ್ಲಿ ಹಿಂದಿಗಿಂತಲೂ ಹೆಚ್ಚು ಆತ್ಮವಿಶ್ವಾಸ, ಬದುಕು ಕಟ್ಟಿಕೊಳ್ಳುವ ಛಲ ಮೂಡಿದೆ’ ಎನ್ನುತ್ತಾರೆ ಸನಾ.

ತನ್ನಂತೆಯೇ ಓದಲು ಇಚ್ಛಿಸುವ ಸಮುದಾಯದವರಿಗೆ ನೆರವಾಗಲು ‘ಸ್ವತಂತ್ರ’ ಎನ್ನುವ ಟ್ರಸ್ಟ್ ಅನ್ನೂ ಸನಾ ಸ್ಥಾಪಿಸಿದ್ದಾರೆ. ಅನೇಕರಿಗೆ ನೆರವು ನೀಡಿರುವ ಅವರು ಇದೀಗ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಉನ್ನತ ಅಧಿಕಾರಿಯಾಗುವ ಕನಸು ಹೊತ್ತಿದ್ದಾರೆ. ಅದಕ್ಕಾಗಿ ಸದ್ದಿಲ್ಲದೇ ಸಿದ್ಧತೆ ಆರಂಭಿಸಿರುವ ಸನಾ, ಲಿಂಗತ್ವ ಅಲ್ಪಸಂಖ್ಯಾತರಿಗೆ ಶೈಕ್ಷಣಿಕ, ಉದ್ಯೋಗದ ಹಕ್ಕಿಗಾಗಿ ಕಾನೂನು ಮೂಲಕ ಹಲವು ಹೋರಾಟಗಳಲ್ಲೂ ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT