ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಂಟ್ರೊ ರವಿ ಆಸ್ತಿ ಮುಟ್ಟುಗೋಲು: ಬಸವರಾಜ ಬೊಮ್ಮಾಯಿ

Last Updated 10 ಜನವರಿ 2023, 7:43 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸ್ಯಾಂಟ್ರೊ ರವಿ ವಿಚಾರದಲ್ಲಿ ಈಗಾಗಲೇ ಸೂಕ್ತ ತನಿಖೆ ಮಾಡಲಾಗಿದ್ದು, ಆತನ ಎಲ್ಲಾ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ವಿಷಯದಲ್ಲಿ ಬಿಜೆಪಿ ವಿರುದ್ಧ ಟೀಕೆ ಮಾಡುತ್ತಿರುವವರ ಕಾಲದಲ್ಲೇ ಆತ ಅವ್ಯವಹಾರ ಮಾಡಿ ಜೈಲು ಸೇರಿ, ಬಿಡುಗಡೆ ಕೂಡ ಆಗಿದ್ದ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಆದರ್ಶ ನಗರದಲ್ಲಿರುವ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು.

ರವಿ ವಿಚಾರಕ್ಕೆ ಹೆಚ್ಚು ಮಹತ್ವ ಕೊಡುವುದು ಬೇಡ. ಆತ ಯಾರ್ಯಾರ ಜೊತೆಗೆ ನಂಟು ಹೊಂದಿದ್ದ, ಆತನ ಹಿನ್ನೆಲೆ ಏನು ಎಂಬ ಬಗ್ಗೆ ಹೆಚ್ಚು ಪ್ರಾಮುಖ್ಯತೆ ಕೊಡುವುದು ಸರಿಯಲ್ಲ. ಆ ಬಗ್ಗೆ ನಮ್ಮ ಪೊಲೀಸರು ವಿಚಾರಣೆ ಮಾಡುತ್ತಾರೆ. ಆತ ಯಾವ ಸರ್ಕಾರದಲ್ಲಿ ಏನೇನು ಅವ್ಯವಹಾರ ಮಾಡಿದ್ದ, ಯಾರ ಪಾತ್ರ ಎಷ್ಟಿದೆ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ ಎಂದರು.

ಮೊದಲ ಬಾರಿಗೆ ಉತ್ತರ ಕರ್ನಾಟಕದಲ್ಲಿ, ಅದರಲ್ಲೂ ಹುಬ್ಬಳ್ಳಿ -ಧಾರವಾಡದಲ್ಲಿ ನಡೆಯಲಿರುವ ಯುವ ಮಹೋತ್ಸವಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಮಿಸಲಿದ್ದಾರೆ. ಇದನ್ನು ಮಾದರಿ ಕಾರ್ಯಕ್ರಮ ಆಗಿಸಲು ಒತ್ತು ನೀಡಲಾಗುತ್ತದೆ. ಐದು ದಿನಗಳ ಯುವ ಜನೋತ್ಸವದಲ್ಲಿ ಕಲೆ, ಸಾಹಿತ್ಯ, ಸಂಗೀತಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಪರಿಸರ ಇಲಾಖೆ ಮಾಹಿತಿ ಕೇಳಿದೆ

ಮಹದಾಯಿ ಯೋಜನೆ ಜಾರಿಗೆ ಸಂಬಂಧಿಸಿದಂತೆ, ಕೇಂದ್ರ ಪರಿಸರ ಇಲಾಖೆ ರಾಜ್ಯದ ಸ್ಪಷ್ಟನೆ ಕೇಳಿದೆ. ಇದರಲ್ಲಿ ಆತಂಕಪಡುವ ವಿಚಾರವಿಲ್ಲ. ಹುಬ್ಬಳ್ಳಿ ಅಂಕೋಲಾ ಯೋಜನೆ ಜಾರಿಯಲ್ಲಿಯೂ ಸ್ಪಷ್ಟನೆ ಕೇಳಿತ್ತು. ಅವರಿಗೆ ಬೇಕಾದುದನ್ನು ಕೊಡುತ್ತೇವೆ ಎಂದರು.

ಕಾನೂನು ಚೌಕಟ್ಟಿನಲ್ಲಿ ಮೀಸಲಾತಿ

ಪಂಚಮಸಾಲಿ ಸಮಾಜ ಮೀಸಲಾತಿ ಬೇಡ ಎಂದು ತಕಾರರು ತೆಗೆದ ಬಗ್ಗೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಒಕ್ಕಲಿಗ ಅಥವಾ ಪಂಚಮಸಾಲಿ ಸಮಾಜ ಏನು ಕೇಳಿದೆ ಎಂಬುದು ನನ್ನ ಗಮನ ಬಂದಿದೆ. ಇನ್ನು ಏನು ಮೀಸಲಾತಿ ಕೊಡಬೇಕು ಅದನ್ನು ಕಾನೂನು ಚೌಕಟ್ಟಿನಲ್ಲಿ ಕೊಡುತ್ತೇವೆ. ಶಾಶ್ವತವಾದ ಮೀಸಲಾತಿ ಕೊಡುವ ಕುರಿತು ಸಹ ಚಿಂತನೆ ನಡೆದಿದೆ. ಏನೇ ಮಾಡಲು ಹಿಂದುಳಿದ ವರ್ಗಗಳ ಆಯೋಗದ ಪೂರ್ಣ ವರದಿ ಬರಬೇಕು. ಬೇಗ ನೀಡುವಂತೆ ಆಯೋಗವನ್ನು ಕೋರಲಾಗಿದೆ ಎಂದು ಪ್ರತಿಕ್ರಿಯಿಸಿದರು.

ವೈಯಕ್ತಿಕ ನಿರ್ಧಾರ

ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರವನ್ನು ಚುನಾವಣೆಗೆ ನಿಲ್ಲಲು ಆಯ್ಕೆ ಮಾಡಕೊಂಡಿರುವುದು ಅವರ ವೈಯಕ್ತಿಕ ನಿರ್ಧಾರ.‌ ಅವರನ್ನು ಗೆಲ್ಲಿಸುವುದು ಬಿಡುವುದು, ಅಲ್ಲಿನ ಜನರಿಗೆ ಬಿಟ್ಟಿದ್ದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT