ಶುಕ್ರವಾರ, ಆಗಸ್ಟ್ 12, 2022
24 °C
ಎಸ್ಎಟಿಎಸ್ ಪೋರ್ಟಲ್‌ನಿಂದ ಮಾಹಿತಿ ಕಾಣೆ: ಫಲಿತಾಂಶ ನಿರ್ಣಯಕ್ಕೆ ನಮೂದಿಸಿದ್ದ ಪ್ರಥಮ ಪಿಯುಸಿ, ಎಸ್ಸೆಸ್ಸೆಲ್ಸಿ ಅಂಕ

ಪಿಯುಸಿ: ಫಲಿತಾಂಶ ನಿರ್ಣಯದ ಅಂಕವೇ ಕಣ್ಮರೆ!

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ರದ್ದುಗೊಳಿಸಿರುವುದರಿಂದ, ವಿದ್ಯಾರ್ಥಿಗಳ  ಫಲಿತಾಂಶ ನಿರ್ಣಯಿಸಲು ‘ವಿದ್ಯಾರ್ಥಿಗಳ ಸಾಧನೆ ಟ್ರ್ಯಾಕಿಂಗ್ ವ್ಯವಸ್ಥೆ’ (ಎಸ್ಎಟಿಎಸ್) ಪೋರ್ಟಲ್‌ನಲ್ಲಿ ನಮೂದಿಸಿದ್ದ, ಪ್ರಥಮ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಅಂಕಗಳೇ ಕಣ್ಮರೆ ಆಗಿವೆ!

ರಾಜ್ಯದಾದ್ಯಂತ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಈಗಾಗಲೇ ಈ ಕೆಲಸವನ್ನು ಬಹುತೇಕ ಪೂರ್ಣಗೊಳಿಸಿದ್ದರು. ‘ಪೋರ್ಟಲ್‌ನಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯಿಂದ ಈ ರೀತಿ ಆಗಿದೆ. ಅಂಕಗಳನ್ನು ಮತ್ತೊಮ್ಮೆ ನಮೂದಿಸಬೇಕಾಗಿದೆ’ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಪ್ರಥಮ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿಯಲ್ಲಿ ಪಡೆದ ಅಂಕಗಳನ್ನು ಈ ಪೋರ್ಟಲ್‌ನಲ್ಲಿ ನಮೂದಿಸುವಂತೆ ಇದೇ 7ರಂದು ಪದವಿಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿತ್ತು. ವಾರದ ಒಳಗೆ ಈ ಕೆಲಸವನ್ನು ಪೂರ್ಣಗೊಳಿಸಬೇಕೆಂದು ಪ್ರಾಂಶುಪಾಲರಿಗೆ ಸೂಚಿಸಲಾಗಿತ್ತು.

ಅಂಕಗಳು ಸಂಪೂರ್ಣ ಅಳಿಸಿ ಹೋಗಿರುವ ವಿಷಯ ಗೊತ್ತಾಗುತ್ತಿದ್ದಂತೆ ಇಲಾಖೆಯ ನಿರ್ದೇಶಕಿ ಸ್ನೇಹಲ್‌ ಅವರು ಶನಿವಾರ
ಮಧ್ಯಾಹ್ನ ಝೂಮ್‌ ತಂತ್ರಾಂಶದ ಮೂಲಕ ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರ ತುರ್ತು ಸಭೆ ನಡೆಸಿ, ಅಂಕಗಳನ್ನು ಮತ್ತೆ ನಮೂದಿಸುವಂತೆ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ, ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರು, ಅಂಕಗಳನ್ನು ಮತ್ತೆ ನಮೂದಿಸಿ ಪರಿಶೀಲನಾ ಪಟ್ಟಿ ತಯಾರಿಸುವಂತೆ ತಮ್ಮ ವ್ಯಾಪ್ತಿಯ ಕಾಲೇಜುಗಳ ಪ್ರಾಂಶುಪಾಲರಿಗೆ ವಾಟ್ಸ್ಆ್ಯಪ್‌ ಸಂದೇಶ ರವಾನಿಸಿದ್ದಾರೆ.

‘ಈಗಾಗಲೇ ಅಂಕಗಳನ್ನು ನಮೂದಿಸಿ ಪರಿಶೀಲನಾ ಪಟ್ಟಿಯನ್ನು (ಚೆಕ್‌ಲಿಸ್ಟ್) ಡೌನ್‌ಲೋಡ್‌ ಮಾಡಿಕೊಂಡಿರುವ ಪ್ರಾಂಶುಪಾಲರು, ಮತ್ತೊಮ್ಮೆ ಅಂಕಗಳನ್ನು ನಮೂದಿಸಿ, ಚೆಕ್‌ಲಿಸ್ಟ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಬಳಿಕ ದಾಖಲೆಗಳನ್ನು ಪರಿಶೀಲಿಸಿ ಅನುಮೋದನೆಗೆ ಸಲ್ಲಿಸಬೇಕು. ಈಗಾಗಲೇ ಡೌನ್‌ಲೋಡ್‌ ಮಾಡಿಕೊಂಡಿರುವ ಚೆಕ್‌ಲಿಸ್ಟ್‌ ತೆಗೆದುಕೊಂಡು ಬಂದರೆ ಅದಕ್ಕೆ ಅನುಮೋದನೆ ಕೊಡಲು ಸಾಧ್ಯವಿಲ್ಲ.ಇದರಲ್ಲಿ ಲೋಪಗಳಾದರೆ ಆಯಾ ಕಾಲೇಜುಗಳ ಪ್ರಾಂಶುಪಾಲರೇ ಹೊಣೆ’ ಎಂದು ಉಪ ನಿರ್ದೇಶಕರು ಸಂದೇಶದಲ್ಲಿ ಎಚ್ಚರಿಸಿದ್ದಾರೆ.

‘ಎರಡು ದಿನಗಳಲ್ಲಿ ಅಂಕಗಳನ್ನು ನಮೂದಿಸುವುದು ಕಷ್ಟವಾಗಿದ್ದು, ಅವಧಿ ವಿಸ್ತರಿಸಬೇಕು’ ಎಂದು ಝೂಮ್‌ ಸಭೆಯಲ್ಲಿ ಕೆಲವು ಉಪ ನಿರ್ದೇಶಕರು ಮಾಡಿದ ಮನವಿಗೆ ನಿರ್ದೇಶಕರು ಒಪ್ಪಿಲ್ಲ ಎನ್ನಲಾಗಿದೆ.

ಈ ಬಗ್ಗೆ ಮಾಹಿತಿಗೆ ಸ್ನೇಹಲ್‌ ಅವರನ್ನು ಸಂಪರ್ಕಿಸಲು ಯತ್ನಿಸಿದರೂ, ಅವರು ಕರೆ ಸ್ವೀಕರಿಸಲಿಲ್ಲ.

‘ಫಲಿತಾಂಶದ ಮೇಲೆ ಪರಿಣಾಮ’

‘ಮತ್ತೆ ಅಂಕ ನಮೂದಿಸಲು ತರಾತುರಿಯಲ್ಲಿ ಮತ್ತು ಒತ್ತಡದಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ಇದರಿಂದ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ. ಕರಾವಳಿ, ಮಲೆನಾಡು ಭಾಗದಲ್ಲಿ ತೀವ್ರ ಮಳೆ ಮತ್ತು ವಿದ್ಯುತ್ ವ್ಯತ್ಯಯದ ಕಾರಣ ಸಕಾಲದಲ್ಲಿ ಅಂಕ ನಮೂದಿಸಲು ಸಮಸ್ಯೆ ಆಗುತ್ತಿದೆ. ಅಲ್ಲದೆ, ಸಿಬಿಎಸ್‌ಇ ಹಾಗೂ ಇತರ ರಾಜ್ಯಗಳ 10ನೇ ತರಗತಿಯ ಅಂಕಗಳನ್ನು ನಮೂದಿಸುವ ಬಗ್ಗೆ ಗೊಂದಲಗಳಿವೆ. ಆದ್ದರಿಂದ, ಅಂಕ ನಮೂದಿಸಲು ನಿಗದಿಪಡಿಸಿದ ಕಾಲಾವಧಿ ವಿಸ್ತರಿಸಬೇಕು’ ಎಂದು ಪ್ರಾಂಶುಪಾಲರೊಬ್ಬರು ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು