ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾವಯವ ಸಿರಿ’: ಕೊನೆ ಕ್ಷಣದ ತರಾತುರಿ

ಹಣಕಾಸು ವರ್ಷದ ಕೊನೆಯಲ್ಲಿ ₹500 ಕೋಟಿ ಬಳಕೆಗೆ ಅರ್ಜಿ ಆಹ್ವಾನ
Last Updated 27 ಮಾರ್ಚ್ 2022, 19:12 IST
ಅಕ್ಷರ ಗಾತ್ರ

ಬೆಂಗಳೂರು: ‘ಸಾವಯವ ಸಿರಿ’ ಯೋಜನೆಯಡಿ ಮೂರು ವರ್ಷಗಳಲ್ಲಿ ₹ 500 ಕೋಟಿ ಬಳಕೆಗೆ ಫಲಾನುಭವಿಗಳನ್ನು ಗುರುತಿಸಲು ಹಾಲಿ ಆರ್ಥಿಕ ವರ್ಷದ ಕೊನೆಯ ಹಂತದಲ್ಲಿ ತರಾತುರಿಯಲ್ಲಿ ಪ್ರಕ್ರಿಯೆ ಆರಂಭಿಸಲಾಗಿದೆ.ಮೂರು ವರ್ಷಗಳ ಅವಧಿಗೆ ಒಮ್ಮೆಯೇ ಫಲಾನುಭವಿಗಳನ್ನು ಗುರುತಿಸಲು ನಿರ್ಧರಿಸಲಾಗಿದೆ.

ರಾಸಾಯನಿಕ ಮುಕ್ತ ಮತ್ತು ಸಾವಯವ ಕೃಷಿಗೆ ಉತ್ತೇಜನ ನೀಡಲು ರಾಜ್ಯ ಸರ್ಕಾರ ಪದೇ ಪದೇ ಘೋಷಣೆಗಳನ್ನು ಹೊರಡಿಸಿತ್ತು. ಇದಕ್ಕೆ ಹಣವನ್ನೂ ನಿಗದಿಪಡಿಸಿತ್ತು. ಆದರೆ, ಆರ್ಥಿಕ ವರ್ಷದ ಕೊನೆಯವರೆಗೂ ಯೋಜನೆಗೆ ಚಾಲನೆ ನೀಡಲಿಲ್ಲ. ಘೋಷಿಸಿದ್ದ ₹ 500 ಕೋಟಿ ಬಿಡುಗಡೆ ಮಾಡಲೂ ಇಲ್ಲ.ಯೋಜನೆ ಅವಧಿಯ ಮೂರು ವರ್ಷಗಳಲ್ಲಿ ಒಂದು ವರ್ಷ ಹಾಗೆಯೇ ಕಳೆದುಹೋಗಿದೆ.

‘ಸಾವಯವ ಸಿರಿ’ ಯೋಜನೆಗೆ ₹ 500 ಕೋಟಿ ಒದಗಿಸುವ ಘೋಷಣೆಯನ್ನು 2021–22ರ ಬಜೆಟ್‌ನಲ್ಲಿ ಪ್ರಕಟಿಸಲಾಗಿತ್ತು. ಆರ್ಥಿಕ ವರ್ಷ ಕೊನೆಗೊಳ್ಳಲು (ಮಾರ್ಚ್‌ 31) ನಾಲ್ಕು ದಿನವಷ್ಟೇ ಉಳಿದಿದೆ. ಈ ಅಲ್ಪಾವಧಿಯಲ್ಲೇ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಕಾರ್ಯಾದೇಶ ನೀಡುವ ತಯಾರಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅರ್ಹತೆಗಳ ಕುರಿತೂ ಆಕ್ಷೇಪ:

ಈ ಮಧ್ಯೆ ‘ಸಾವಯವ ಸಿರಿ’ ಯೋಜನೆಗೆ ಅರ್ಜಿ ಸಲ್ಲಿಸಲು ನಿಗದಿ ಮಾಡಿರುವ ‘ಅರ್ಹತೆ’ಗಳ ಬಗ್ಗೆಯೂ ತಕರಾರು ಕೇಳಿ ಬಂದಿದೆ. ಈ ಅರ್ಹತೆಯ ಮಾನದಂಡಗಳಿಂದಾಗಿ ಸ್ವಯಂಸೇವಾ ಸಂಸ್ಥೆಗಳು ಅರ್ಜಿ ಸಲ್ಲಿಸಲೂ ಸಾಧ್ಯವಾಗಿಲ್ಲ. ತೀರಾ ಕಡಿಮೆ ಅರ್ಜಿಗಳು ಬಂದ ಕಾರಣ ಅರ್ಹತೆಯಲ್ಲಿ ಕೆಲವನ್ನು ಸಡಿಲಿಸಲಾಗಿದೆ ಎಂದೂ ಮೂಲಗಳು ತಿಳಿಸಿವೆ.

ಏನಿದು ‘ಸಾವಯವ ಸಿರಿ’ ಯೋಜನೆ?: ಸಾವಯವ ಕೃಷಿ ಪದ್ಧತಿಯನ್ನು ಉತ್ತೇಜಿಸಲು ರೈತರಿಗೆ ತರಬೇತಿ ನೀಡುವುದರ ಜತೆಗೆ ಪೂರಕವಾಗಿ ಅವರಿಗೆ ಹಸಿರೆಲೆ ಗೊಬ್ಬರ, ಬೀಜ ವಿತರಣೆ, ಸಾವಯವ ಗೊಬ್ಬರ ಉತ್ಪಾದನೆ, ಪೋಷಕಾಂಶ ನಿರ್ವಹಣೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು ಸೇವಾ ಸಂಸ್ಥೆಗಳ ಕಾರ್ಯ.

ಮೂರು ವರ್ಷಗಳಲ್ಲಿ ಮೂರು ಹಂತಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ಸಾಮಾಜಿಕ ಸಂಸ್ಥೆಗಳ ಮೂಲಕ, ತಾಲ್ಲೂಕು ಮಟ್ಟದಲ್ಲಿ ಸಾವಯವ ಕೃಷಿಕರ ಸಂಘ, ಸಂಸ್ಥೆ, ಒಕ್ಕೂಟಗಳ ಮೂಲಕ ಮತ್ತು ಕ್ಷೇತ್ರ ಮಟ್ಟದಲ್ಲಿ ಆಯ್ಕೆಯಾಗುವ ಫಲಾನುಭವಿಗಳಾಗಿ ಸಾವಯವ ಕೃಷಿಕರ ಮೂಲಕ ಜಾರಿ ಆಗಲಿದೆ.

ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗುವ ಸಾಮಾಜಿಕ ಸಂಸ್ಥೆಗಳುಟ್ರಸ್ಟ್‌, ಸೊಸೈಟಿ ಕಾಯ್ದೆಯಡಿ ನೋಂದಾಯಿತಗೊಂಡಿರ ಬೇಕು. ಈ ಸಂಸ್ಥೆಗಳು ಜಿಲ್ಲೆಯಲ್ಲಿ ಗುರುತಿಸುವ ರೈತರನ್ನು ಸಾವಯವ ಕೃಷಿಯ ವ್ಯಾಪ್ತಿಗೆ ಒಳಪಡಿಸುವ ಜವಾಬ್ದಾರಿ ಹೊಂದಿರುತ್ತವೆ. ತಾಲ್ಲೂಕಿನಿಂದ ಆಯ್ಕೆಯಾಗುವ ನೋಂದಾಯಿತ ಕೃಷಿಕರ ಸಂಘಗಳು ಪ್ರತಿ ತಾಲ್ಲೂಕಿನಲ್ಲಿ 750 ರೈತರನ್ನು ಗುರುತಿಸಿ ತಲಾ 30 ರೈತರನ್ನೊಳಗೊಂಡಂತೆ ಪ್ರತಿ ತಾಲ್ಲೂಕಿನಲ್ಲಿ 25 ಗುಚ್ಛಗಳನ್ನು (ಕ್ಲಸ್ಟರ್‌) ರಚಿಸಿ ಅನುಷ್ಠಾನಗೊಳಿಸಬೇಕು.

ಆಯಾ ಜಿಲ್ಲೆಗಳಲ್ಲಿ ಆಯ್ಕೆಯಾಗುವ ಸಾಮಾಜಿಕ ಸಂಸ್ಥೆಗಳು ರೈತರಿಗೆ ತರಬೇತಿ, ಅಧ್ಯಯನ ಪ್ರವಾಸ, ಕ್ಷೇತ್ರೋತ್ಸವಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಕಡ್ಡಾಯ.

ತರಾತುರಿಯ ವೇಳಾಪಟ್ಟಿ:

* 16.02.22 ರಂದು ಅರ್ಜಿ ಆಹ್ವಾನ

*21.02.22ರೊಳಗೆ ಅರ್ಜಿಗಳ ಪರಿಶೀಲನೆ ಮತ್ತು ಶಿಫಾರಸ್ಸಿನೊಂದಿಗೆ ಚಾಲನಾ ಸಮಿತಿಗೆ ಅರ್ಜಿಗಳ ಮಂಡನೆ

*28.02.22ರೊಳಗೆ ರಾಜ್ಯ ಮಟ್ಟದ ಸಾವಯವ ಕೃಷಿ ಉನ್ನತ ಮಟ್ಟದ ಅಧಿಕಾರಯುಕ್ತ ಸಮಿತಿಯ ಅನುಮೋದನೆಗಾಗಿ ಕೇಂದ್ರ ಕಚೇರಿಗೆ ಸಲ್ಲಿಕೆ

*03.03.22 ಸೇವಾ ಸಂಸ್ಥೆಗಳ ಆಯ್ಕೆಗಾಗಿ ರಾಜ್ಯ ಮಟ್ಟದ ಅನುಮೋದನೆ

*10.03.22ರೊಳಗೆ ಜಿಲ್ಲಾವಾರು ನೋಂದಾಯಿತ ಸೇವಾ ಸಂಸ್ಥೆಗಳಿಗೆ ಕಾರ್ಯಾದೇಶ ಮತ್ತು ಸೇವಾ ಸಂಸ್ಥೆಗಳ ಜತೆ ಒಪ್ಪಂದ ಹಾಗೂ ಜಂಟಿ ಖಾತೆ ತೆರೆಯುವಿಕೆ.

*14.03.22 ರೊಳಗೆ ಜಂಟಿ ಖಾತೆಗೆ ಯೋಜನಾ ಅನುಷ್ಠಾನಕ್ಕಾಗಿ ಕೇಂದ್ರ ಕಚೇರಿಯಿಂದ ಅನುದಾನ ವರ್ಗಾವಣೆ

*25.03.22 ರೊಳಗೆ ಜಿಲ್ಲಾ ಮಟ್ಟದ ಸೇವಾ ಸಂಸ್ಥೆಗಳು ಪ್ರತಿ ತಾಲ್ಲೂಕಿನ ಕ್ಷೇತ್ರಮಟ್ಟದಲ್ಲಿ ಆಯ್ಕೆಯಾಗುವ 750 ಕೃಷಿಕರಿಗೆ ತರಬೇತಿ, ಅಧ್ಯಯನ ಪ್ರವಾಸಕ್ಕೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಉಪ ಕೃಷಿ ನಿರ್ದೇಶಕರಿಗೆ ಸಲ್ಲಿಸಬೇಕು.

ಆಕ್ಷೇಪಕ್ಕೆ ಕಾರಣವಾದ ‘ಅರ್ಹತೆ’

ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳಲ್ಲಿ ಮುಖ್ಯವಾಗಿ ಎರಡು ಅಂಶಗಳು ಟೀಕೆಗೆ ಒಳಗಾಗಿವೆ. ‘ಕೆಲವೇ ಸೇವಾ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಇದರಲ್ಲಿದೆ’ ಎಂದು ಕೆಲವು ಸೇವಾ ಸಂಸ್ಥೆಗಳು ದೂರಿವೆ. ಸಾಮಾಜಿಕ ಸಂಸ್ಥೆಗಳು ಕನಿಷ್ಠ 10 ಹೆಕ್ಟೇರ್‌ ವ್ಯವಸಾಯ ಯೋಗ್ಯ ಜಮೀನು ಹೊಂದಿರಬೇಕು ಮತ್ತು ಈ ಸಂಸ್ಥೆಗಳು ಗೋಶಾಲೆಗಳನ್ನು ನಿರ್ವಹಿಸುತ್ತಿರಬೇಕು ಎಂಬ ಷರತ್ತು ಫಲಾನುಭವಿಗಳ ಆಯ್ಕೆಗೆ ನಿಗದಿಪಡಿಸಿರುವ ಮಾರ್ಗಸೂಚಿಗಳಲ್ಲಿದೆ. ಇದಕ್ಕೆ ಪೂರಕವಾದ ದಾಖಲೆ ಸಲ್ಲಿಸುವುದು ಕಡ್ಡಾಯ. ಇದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT