ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಸಿ-ಎಸ್‌‍ಟಿ ಮೀಸಲಾತಿ; ಬಿಜೆಪಿ ತಪ್ಪು ದಾರಿಗೆಳೆಯುತ್ತಿದೆ: ಸಿದ್ದರಾಮಯ್ಯ

Last Updated 10 ಅಕ್ಟೋಬರ್ 2022, 11:07 IST
ಅಕ್ಷರ ಗಾತ್ರ

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳದ ನಿರ್ಧಾರವನ್ನು ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿರುವ ರಾಜ್ಯದ ಬಿಜೆಪಿ ಸರ್ಕಾರ, ಈ ಹೆಚ್ಚಳದ ಅನುಷ್ಠಾನದ ಪ್ರಕ್ರಿಯೆ ಬಗ್ಗೆ ವಿವರ ನೀಡದೆ ಮೌನವಾಗಿದ್ದುಕೊಂಡು ಎಸ್‌ಸಿ-ಎಸ್‌‍ಟಿ ಸಮುದಾಯವನ್ನು ತಪ್ಪುದಾರಿಗೆಳೆಯುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೋಮವಾರ ಆರೋಪಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ನಮ್ಮ ಸರ್ಕಾರ ನೇಮಿಸಿದ್ದ ನ್ಯಾ. ನಾಗಮೋಹನ್ ದಾಸ್ ಸಮಿತಿಯ ಶಿಫಾರಸಿನಂತೆ ಎಸ್‌ಸಿ-ಎಸ್‌‍ಟಿ ಮೀಸಲಾತಿ ಹೆಚ್ಚಿಸುವ ರಾಜ್ಯ ಬಿಜೆಪಿ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಆದರೆ ಈ ನಿರ್ಧಾರವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯದಿದ್ದರೆ ಇದು ಬಿಜೆಪಿಯ ಸುಳ್ಳಿನ ಕಂತೆಗೆ ಇನ್ನೊಂದು ಸೇರ್ಪಡೆಯಾಗುತ್ತದೆ ಅಷ್ಟೆ ಎಂದು ಹೇಳಿದರು.

ಎಸ್‌ಸಿ-ಎಸ್‌‍ಟಿ ಮೀಸಲಾತಿ ಹೆಚ್ಚಳದ ಅನುಷ್ಠಾನದ ಪ್ರಕ್ರಿಯೆ ದೀರ್ಘವಾದುದು ಮಾತ್ರವಲ್ಲ ಆಳುವ ಪಕ್ಷದ ರಾಜಕೀಯ ಇಚ್ಛಾಶಕ್ತಿಯನ್ನೂ ಅವಲಂಬಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗಾಗಲಿ, ರಾಜ್ಯವನ್ನು ಪ್ರತಿನಿಧಿಸುವ ಬಿಜೆಪಿ ಸಂಸದರಿಗಾಗಲಿ ಕೇಂದ್ರ ಸರ್ಕಾರದಿಂದ ಈ ಕೆಲಸ ಮಾಡಿಸುವ ಶಕ್ತಿ ಇದೆಯೇ ಎಂದು ಪ್ರಶ್ನಿಸಿದರು.

ಎಸ್‌ಸಿ-ಎಸ್‌‍ಟಿ ಮೀಸಲಾತಿಯ ಹೆಚ್ಚಳಕ್ಕಾಗಿ ರಾಜ್ಯದ ವಿಧಾನಮಂಡಲ ನಿರ್ಣಯ ಕೈಗೊಂಡು ಸಂವಿಧಾನದ ತಿದ್ದುಪಡಿಗಾಗಿ ಕೇಂದ್ರ ಸರ್ಕಾರಕ್ಕೆ ಕಳಿಸಬೇಕಾಗುತ್ತದೆ. ಕೇಂದ್ರ ಸರ್ಕಾರ ಸಂಸತ್‌ನಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಗೆ ಅಂಗೀಕಾರ ಪಡೆಯಬೇಕು. ಮಸೂದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ ನಂತರ ಮೀಸಲಾತಿ ಹೆಚ್ಚಳ ಜಾರಿಯಾಗಲಿದೆ ಎಂದು ಉಲ್ಲೇಖಿಸಿದರು.

ಸುಪ್ರೀಂ ಕೋರ್ಟ್ (ಇಂದಿರಾ ಸಹಾನಿ ಪ್ರಕರಣದ) ತೀರ್ಪಿನಂತೆ ಒಟ್ಟು ಮೀಸಲಾತಿ ಶೇ 50 ಮೀರುವಂತಿಲ್ಲ. ಮೀಸಲು ಹೆಚ್ಚಳದ ನಿರ್ಧಾರದಿಂದಾಗಿ ರಾಜ್ಯದ ಒಟ್ಟು ಮೀಸಲಾತಿ ಪ್ರಮಾಣ ಶೇ.56 ಆಗಲಿದೆ. ಕಾನೂನಿನ ಈ ಬಿಕ್ಕಟ್ಟಿನ ಬಗ್ಗೆ ರಾಜ್ಯದ ಬಿಜೆಪಿ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT