ಶನಿವಾರ, ನವೆಂಬರ್ 26, 2022
24 °C
ಮರುಪರಿಶೀಲನಾ ಅರ್ಜಿ ವಜಾ: ಜೇಷ್ಠತಾ ಪಟ್ಟಿ ಪ್ರಕಟಿಸುವಂತೆ ‘ಅಹಿಂಸಾ’ ಒತ್ತಾಯ

ಬಡ್ತಿ ಮೀಸಲು: ಸರ್ಕಾರಕ್ಕೆ ಮತ್ತೆ ‘ಮುಂಬಡ್ತಿ’ ಸಂಕಷ್ಟ?

ರಾಜೇಶ್ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬಡ್ತಿ ಮೀಸಲು’ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ತ್ರಿಸದಸ್ಯ ಪೀಠ ಇದೇ ಜ. 28ರಂದು ನೀಡಿದ ಆದೇಶಕ್ಕೂ ಕರ್ನಾಟಕಕ್ಕೂ ಸಂಬಂಧ ಇಲ್ಲವೆಂದು ಎಸ್‌ಸಿ, ಎಸ್‌ಟಿ ಎಂಜಿನಿಯರ್‌ ಕಲ್ಯಾಣ ಸಂಘ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿ ವಜಾಗೊಂಡ ಬೆನ್ನಲ್ಲೆ, ‘ಹಿಂದಿನ ಆದೇಶದಂತೆ ರಾಜ್ಯದಲ್ಲೂ ಜ್ಯೇಷ್ಠತಾ ಪಟ್ಟಿ ಪರಿಷ್ಕರಿಸಿ, ಬಡ್ತಿ ನೀಡಬೇಕು’ ಎಂದು ‘ಅಹಿಂಸಾ’ (ಅಲ್ಪಸಂಖ್ಯಾತ, ಹಿಂದುಳಿದ, ಸಾಮಾನ್ಯ) ಸಂಘಟನೆ ಆಗ್ರಹಿಸಿದೆ.

‘ಸುಪ್ರೀಂ’ ಆದೇಶ ಜಾರಿಯಾದರೆ 15ಕ್ಕೂ ಹೆಚ್ಚು ಇಲಾಖೆಗಳಲ್ಲಿ ಬ್ಯಾಕ್‌ಲಾಗ್‌ ಹುದ್ದೆಗಳಿಗೆ ನೇಮಕಗೊಂಡ 1,500ಕ್ಕೂ ಹೆಚ್ಚು ಎಸ್‌ಸಿ ಮತ್ತು ಎಸ್‌ಟಿ ನೌಕರರ ಮುಂಬಡ್ತಿ ಮೇಲೆ ಪರಿಣಾಮ ಬೀಳಲಿದೆ. ಸ್ವಂತ ಅರ್ಹತೆಯಲ್ಲಿ ನೇಮಕಗೊಂಡು ಬಡ್ತಿ ಪಡೆದ ಎಸ್‌ಸಿ, ಎಸ್‌ಟಿ ನೌಕರರ ಬಡ್ತಿಗೂ ಸಮಸ್ಯೆ ಆಗಲಿದೆ.‌

ರಾಜ್ಯದಲ್ಲಿ ಜ. 28ರ ಆದೇಶವನ್ನು ಜಾರಿ ಮಾಡುವಂತೆ ಕಳೆದ ಫೆಬ್ರುವರಿಯಲ್ಲೇ ಮನವಿ ಸಲ್ಲಿಸಿದ್ದ ಅಹಿಂಸಾ, ‘ಎಲ್ಲ ಇಲಾಖೆಗಳಲ್ಲಿ ಶೇ 15ರಷ್ಟು ಎಸ್‌ಸಿ, ಶೇ 3ರಷ್ಟು ಎಸ್‌ಟಿ ಪ್ರಾತಿನಿಧ್ಯ ಮೀರದಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿತ್ತು. ಆ ಬಗ್ಗೆ ಮುಖ್ಯ ಕಾರ್ಯದರ್ಶಿ ಟಿಪ್ಪಣಿ ಸಿದ್ಧಪಡಿಸುತ್ತಿದ್ದಂತೆ, ತೀವ್ರ ವಿರೋಧ ವ್ಯಕ್ತಪಡಿಸಿ ಎಸ್‌ಸಿ ಎಸ್‌ಟಿ ನೌಕರರ ಸಂಘ ಕೂಡಾ ಮನವಿ ಸಲ್ಲಿಸಿದ್ದರಿಂದ ಸರ್ಕಾರ ಈ ವಿಚಾರದಲ್ಲಿ ಮುಂದಡಿ ಇಟ್ಟಿಲ್ಲ. ಅಲ್ಲದೆ, ಜ. 28ರ ಆದೇಶವನ್ನು ಕರ್ನಾಟಕಕ್ಕೆ ಅನ್ವಯಿಸುವ ವಿಚಾರವೂ ಗೊಂದಲಕ್ಕೆ ಕಾರಣವಾಗಿತ್ತು.

ಈ ಮಧ್ಯೆ, ಜ. 28ರ ಆದೇಶವನ್ನು ಮರು ಪರಿಶೀಲಿಸುವಂತೆ ಎಸ್‌ಸಿ, ಎಸ್‌ಟಿ ಎಂಜಿನಿಯರ್‌ ಕಲ್ಯಾಣ ಸಂಘ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಜರ್ನೈಲ್‌ ಸಿಂಗ್‌ ಮತ್ತು ಇತರರ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಅರ್ಜಿ ಇಲ್ಲದೇ ಇರುವುದರಿಂದ, ಈ ಪ್ರಕರಣದಿಂದ ಕರ್ನಾಟಕದ ವಿಷಯವನ್ನು ಕೈಬಿಡಬೇಕು. ಅಗತ್ಯವಿದ್ದರೆ ಪ್ರತ್ಯೇಕವಾಗಿ ವಿಚಾರಣೆ ಮಾಡಬೇಕೆಂದು ಕೋರಿತ್ತು. ಈ ಅರ್ಜಿ 21ರಂದು ವಜಾಗೊಂಡಿದೆ.

ಜ. 28ರ ಆದೇಶದಲ್ಲೇನಿದೆ?

‘ಜರ್ನೈಲ್‌ ಸಿಂಗ್‌ ವಿರುದ್ಧ ಲಚ್ಚಿಮಿ ನೈಯಾನ್‌ ಗುಪ್ತಾ ಮತ್ತು ಇತರರು’ ಪ್ರಕರಣದಲ್ಲಿ ನ್ಯಾಯಮೂರ್ತಿ ಎಲ್‌. ನಾಗೇಶ್ವರರಾವ್‌ ನೇತೃತ್ವದ ಪೀಠವು, ‘ಎಸ್‌ಸಿ ಮತ್ತು ಎಸ್‌ಟಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವ ವೇಳೆ ಅಗತ್ಯ ಪ್ರಾತಿನಿಧ್ಯ ಇಲ್ಲ ಎಂಬುದನ್ನು ಇಡೀ ಸೇವೆಯಲ್ಲಿ ಅಥವಾ ವರ್ಗದಲ್ಲಿ ಇರುವ ಪ್ರಾತಿನಿಧ್ಯದ ಆಧಾರದಲ್ಲಿ
ನಿರ್ಧರಿಸುವಂತಿಲ್ಲ. ಯಾವ ಶ್ರೇಣಿ ಅಥವಾ ಹುದ್ದೆಯ ವರ್ಗಕ್ಕೆ ಬಡ್ತಿ ಕೇಳಲಾಗಿದೆಯೋ ಆ ಶ್ರೇಣಿ ಅಥವಾ ಹುದ್ದೆ ವರ್ಗದಲ್ಲಿ ಪ್ರಾತಿನಿಧ್ಯ ಎಷ್ಟಿದೆ ಎಂಬುದನ್ನು ನೋಡಿಕೊಂಡು ನಿರ್ಧರಿಸಬೇಕು’ ಎಂದು ಆದೇಶ ನೀಡಿತ್ತು.

ಪುನರ್‌ ಪರಿಶೀಲನಾ ಅರ್ಜಿ ವಜಾಗೊಂಡಿರುವುದರಿಂದ ಜ. 28ರ ಆದೇಶದಂತೆ ಸರ್ಕಾರಿ ನೌಕರರ ಜ್ಯೇಷ್ಠತಾ ಪಟ್ಟಿ ಪರಿಷ್ಕರಿಸಿ, ಬಡ್ತಿ ನೀಡುವಂತೆ ಮುಖ್ಯಮಂತ್ರಿ, ಸಿಎಸ್‌ ಮತ್ತೊಮ್ಮೆ ಮನವಿ ಸಲ್ಲಿಸುತ್ತೇವೆ

- ಎಂ. ನಾಗರಾಜ್‌, ಅಧ್ಯಕ್ಷ, ‘ಅಹಿಂಸಾ’

ಕರ್ನಾಟಕದ ಬಡ್ತಿ ಪ್ರಕರಣಕ್ಕೂ ಜರ್ನೈಲ್‌ ಸಿಂಗ್‌ ಪ್ರಕರಣಕ್ಕೂ ಸಂಬಂಧ ಇಲ್ಲ. ಹೀಗಾಗಿ ಮರುಪರಿಶೀಲನಾ ಅರ್ಜಿ ವಜಾಗೊಳಿಸಲಾಗಿದೆ

- ಡಿ. ಚಂದ್ರಶೇಖರಯ್ಯ, ಅಧ್ಯಕ್ಷ, ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಂಘ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು