ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ನಿಯಂತ್ರಣಕ್ಕೆ ರಾಜ್ಯದ ಶಾಲೆ–ಕಾಲೇಜು ಮುಚ್ಚಿ: ಎಚ್‌.ಡಿ. ಕುಮಾರಸ್ವಾಮಿ

Last Updated 18 ಜನವರಿ 2022, 13:45 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಪ್ರಕರಣ ಹೆಚ್ಚಳವಾಗುತ್ತಿರುವುದರಿಂದ ರಾಜ್ಯದಾದ್ಯಂತ ಮುಂದಿನ 15 ರಿಂದ 20 ದಿನ ಶಾಲಾ–ಕಾಲೇಜು, ವಿದ್ಯಾರ್ಥಿ ನಿಲಯಗಳನ್ನು ಮುಚ್ಚುವುದು ಸೂಕ್ತ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಸರ್ಕಾರಕ್ಕೆ ಸಲಹೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಇಂತಹ ಕ್ರಮ ಕೈಗೊಳ್ಳದೇ ಇದ್ದರೆ ವಿದ್ಯಾರ್ಥಿಗಳು ಸಮಸ್ಯೆಗೆ ಸಿಲುಕುವ ಅಪಾಯ ಇದೆ ಎಂದು ಹೇಳಿದರು.

ಕರ್ಫ್ಯೂ ಬಗ್ಗೆ ಬಿಜೆಪಿ ಗೊಂದಲ: ರಾತ್ರಿ ಮತ್ತು ವಾರಾಂತ್ಯ ಕರ್ಫ್ಯೂ ಜಾರಿ ಮಾಡಿರುವ ಬಗ್ಗೆ ಸರ್ಕಾರ ಮತ್ತು ಬಿಜೆಪಿ ಮಧ್ಯೆ ಉಂಟಾಗಿರುವ ಗೊಂದಲದಿಂದಾಗಿ ಜನರಿಗೆ ತೊಂದರೆಯಾಗುತ್ತಿದೆ ಎಂದರು.

ಆಡಳಿತ ಪಕ್ಷದ ಕೆಲವು ನಾಯಕರು ಕರ್ಫ್ಯೂ ಹೇರಿರುವುದನ್ನು ವಿರೋಧಿಸಿದರೆ, ಕೆಲವರು ಅದರ ಪರವಾಗಿದ್ದಾರೆ. ವ್ಯಾಪಾರಿಗಳು. ಹೋಟೆಲ್‌ ಮಾಲೀಕರು, ವಿವಿಧ ಸಂಘಟನೆಗಳೂ ಇದನ್ನು ವಿರೋಧಿಸುತ್ತಿದ್ದಾರೆ. ಯಾರ ಮಾತು ಸತ್ಯ ಎಂಬುದು ಜನರಿಗೆ ಗೊತ್ತಾಗುತ್ತಿಲ್ಲ. ಬಿಜೆಪಿ ಮುಖಂಡರು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಕರ್ಫ್ಯೂ ಜಾರಿ ಮಾಡಿದ್ದರೂ ವಾಹನಗಳು, ಜನರು ಆ ವೇಳೆಯಲ್ಲಿ ಓಡಾಡುತ್ತಿದ್ದಾರೆ. ಇಂತಹ ಕ್ರಮದಿಂದಾಗಿ ಕೋವಿಡ್‌ ನಿಯಂತ್ರಣಕ್ಕೆ ಬರಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ತಜ್ಞರು ಯಾವ ಆಧಾರದ ಮೇಲೆ ಕರ್ಫ್ಯೂ ಹೇರಲು ಶಿಫಾರಸು ಮಾಡಿದ್ದಾರೋ ಗೊತ್ತಿಲ್ಲ ಎಂದರು.

ಕರ್ಫ್ಯೂ ಜಾರಿ ಮಾಡಿರುವುದರಿಂದಾಗಿ ಕೆಲ ಜಿಲ್ಲೆಗಳಲ್ಲಿ ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ತೊಂದರೆ ಆಗಿದೆ. ಈ ಸಂದರ್ಭದಲ್ಲಿ ಸರ್ಕಾರ ಅವರ ಜೀವನ ನಿರ್ವಹಣೆಗೆ ಸಹಾಯ ಮಾಡಬೇಕು. ಹಿಂದೆ ನೀಡಿದ್ದಕ್ಕಿಂತ ಉತ್ತಮ ಪ್ಯಾಕೇಜ್‌ ನೀಡಬೇಕು ಎಂದು ಒತ್ತಾಯಿಸಿದರು.

ಪಾದಯಾತ್ರೆ ಹೆಸರಿನಲ್ಲಿ ಇತ್ತೀಚೆಗೆ ಜಾತ್ರೆ ನಡೆಯಿತು. ಅವರಿಗೆ ಅವಕಾಶ ಕೊಟ್ಟಿದ್ದರಿಂದಾಗಿ, ನಮಗೆಲ್ಲ ಯಾಕೆ ನಿರ್ಬಂಧ ಎಂದು ಜನರು ಪ್ರಶ್ನಿಸುವ ಪರಿಸ್ಥಿತಿ ಬಂತು. ರಾಮನಗರ ಸೇರಿದಂತೆ ಎಲ್ಲೆಡೆ ಕೊರೊನಾ ಸೋಂಕು ಹೆಚ್ಚಾಯಿತು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಶಾಸಕ ಬಂಡೆಪ್ಪ ಕಾಶೆಂಪೂರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT