ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2014–15ನೇ ಸಾಲಿನ ಸಹ ಶಿಕ್ಷಕರ ನೇಮಕಾತಿ ಅಕ್ರಮ: ನಿರ್ದೇಶಕರ ಸೆರೆ

ದಾಖಲೆ ಪರಿಶೀಲಿಸದೇ ಆದೇಶ ವಿತರಣೆ
Last Updated 26 ಸೆಪ್ಟೆಂಬರ್ 2022, 20:34 IST
ಅಕ್ಷರ ಗಾತ್ರ

ಬೆಂಗಳೂರು: 2014–15ನೇ ಸಾಲಿನ ಸಹ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಕರ್ನಾಟಕ ಪಠ್ಯಪುಸ್ತಕ ಸಂಘದ ನಿರ್ದೇಶಕ ಎಂ.ಪಿ. ಮಾದೇಗೌಡ ಹಾಗೂ ಸಮಗ್ರ ಶಿಕ್ಷಣ ಅಭಿಯಾನ ನಿರ್ದೇಶಕಿ ಗೀತಾ ಸೇರಿದಂತೆ ಆರು ಮಂದಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಅಕ್ಟೋಬರ್ 1ರವರೆಗೆ ಕಸ್ಟಡಿಗೆ ಪಡೆದಿದ್ದಾರೆ.

‘ಅಧಿಕಾರ ದುರುಪಯೋಗಪಡಿಸಿಕೊಂಡು ಅಕ್ರಮದಲ್ಲಿ ಭಾಗಿಯಾಗಿದ್ದ ಆರೋಪದಡಿ ಮಾದೇಗೌಡ, ಗೀತಾ, ನಿವೃತ್ತ ಜಂಟಿ ನಿರ್ದೇಶಕರಾದಡಿ.ಕೆ. ಶಿವಕುಮಾರ್, ಕೆ. ರತ್ನಯ್ಯ, ಜಿ.ಆರ್. ಬಸವರಾಜ್ ಹಾಗೂ ಕಂಪ್ಯೂಟರ್ ಪ್ರೋಗ್ರಾಮರ್‌ ನರಸಿಂಹರಾವ್ ಅವರನ್ನು ಬಂಧಿಸಲಾಗಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

ರಾಜ್ಯದ ಬಹುತೇಕ ಜಿಲ್ಲೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ನೇಮಕಾತಿಯಲ್ಲಿ ಅಕ್ರಮ ಕುರಿತು ವಿಧಾನಸೌಧ ಠಾಣೆಯಲ್ಲಿ ದಾಖಲಾಗಿದ್ದ ಮೂರು ಪ್ರತ್ಯೇಕ ಪ್ರಕರಣಗಳ ಬಗ್ಗೆ ಸಿಐಡಿ ಅಧಿಕಾರಿಗಳು ತನಿಖೆ ಮುಂದು
ವರಿಸಿದ್ದಾರೆ.

ಸಹ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಎಫ್‌ಡಿಎ ಕೆ.ಎಂ. ಪ್ರಸಾದ್ ಅವರನ್ನು ಬಂಧಿಸಿದ್ದ ಸಿಐಡಿ ಅಧಿಕಾರಿಗಳು, ಅವರೆಲ್ಲರ ಹೇಳಿಕೆ ದಾಖಲಿಸಿಕೊಂಡಿದ್ದರು. ಇಲಾಖೆಯ ಉನ್ನತ ಅಧಿಕಾರಿಗಳೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಅವರೇ ತರಾತುರಿಯಲ್ಲಿ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಕೊಟ್ಟಿದ್ದರು’ ಎಂಬುದಾಗಿ ಬಂಧಿತರು ಬಾಯ್ಬಿಟ್ಟಿದ್ದರೆಂದು ಸಿಐಡಿ ಮೂಲಗಳು ಹೇಳಿವೆ.

‘ಜಿಲ್ಲಾವಾರು ಅರ್ಜಿ ಸಲ್ಲಿಸಿದ್ದ ಕೆಲ ಅಭ್ಯರ್ಥಿಗಳು, ನೇಮಕಾತಿ ಮಂಡಳಿಯಲ್ಲಿದ್ದ ಸಿಬ್ಬಂದಿ ಹಾಗೂ ಇತರರಿಗೆ ₹ 5ಲಕ್ಷದಿಂದ ₹ 10 ಲಕ್ಷ ನೀಡಿ ಸಹ ಶಿಕ್ಷಕ ಹುದ್ದೆಗೆ ಆಯ್ಕೆಯಾಗಿದ್ದರು. ಇವರೆಲ್ಲರ ಹೆಸರು ಹೆಚ್ಚುವರಿ ಪಟ್ಟಿಯಲ್ಲಿತ್ತು. ಅಕ್ರಮವಾಗಿ ಆಯ್ಕೆಯಾಗಿದ್ದ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ನಡೆಸದೇ ನಿರ್ದೇಶಕರು ಹಾಗೂ ಜಂಟಿ ನಿರ್ದೇಶಕರು, ನೇಮಕಾತಿ ಆದೇಶ ಪತ್ರಗಳನ್ನು ನೀಡಿದ್ದರು.’

‘ಬಂಧಿತ ಆರೋಪಿಗಳೆಲ್ಲರೂ ಸಂಘಟಿತರಾಗಿ ಅಕ್ರಮದಲ್ಲಿ ಭಾಗಿಯಾ
ಗಿರುವುದು ಇದುವರೆಗಿನ ತನಿಖೆಯಿಂದ ಗೊತ್ತಾಗಿದೆ. ಬಂಧಿತ ನಿರ್ದೇಶಕರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಕಸ್ಟಡಿಗೆ ಪಡೆಯಲಾಗಿದೆ. ವಿಚಾರಣೆ ಬಳಿಕವೇ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ’ ಎಂದೂ ತಿಳಿಸಿವೆ.

ಲಕ್ಷಾಂತರ ರೂಪಾಯಿ ಪಡೆದಿರುವ ಶಂಕೆ: ‘ಬಂಧಿತ ನಿರ್ದೇಶಕರು ತರಾತುರಿಯಲ್ಲಿ ನೇಮಕಾತಿ ಪ್ರಕ್ರಿಯೆ ಮುಗಿಸಲು ಯತ್ನಿಸಿದ್ದರು. ಇದಕ್ಕಾಗಿ ಅವರು ಲಕ್ಷಾಂತರ ರೂಪಾಯಿ ಪಡೆದಿರುವ ಶಂಕೆ ಇದ್ದು, ಈ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಕೋಲಾರ, ವಿಜಯಪುರ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಹ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆದಿತ್ತು. ಜಿಲ್ಲಾವಾರು ಹೆಚ್ಚುವರಿ ಆಯ್ಕೆಪಟ್ಟಿ ಸಿದ್ಧಪಡಿಸಲಾಗಿತ್ತು. ಈ ಪಟ್ಟಿಯಲ್ಲಿದ್ದ ಬಹುತೇಕ ಅಭ್ಯರ್ಥಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಇವರೆಲ್ಲರಿಗೂ ನಿರ್ದೇಶಕರು ಹಾಗೂ ಇತರರು ನೇಮಕಾತಿ ಆದೇಶ ನೀಡಿದ್ದರು. ಅವುಗಳ ಪ್ರತಿಗಳನ್ನೂ ಈಗಾಗಲೇ ಜಪ್ತಿ ಮಾಡಲಾಗಿದೆ’ ಎಂದೂ ತಿಳಿಸಿವೆ.

ಶಿಕ್ಷಣ ಇಲಾಖೆಗೆ ಮಾಹಿತಿ: ‘ಅಕ್ರಮದಲ್ಲಿ ಭಾಗಿಯಾದ ಬಗ್ಗೆ ಪುರಾವೆಗಳನ್ನು ಸಂಗ್ರಹಿಸಿ, ನಿರ್ದೇಶಕರಾದ ಮಾದೇಗೌಡ ಹಾಗೂ ಗೀತಾ ಅವರನ್ನು ಬಂಧಿಸಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಅಮಾನತು ಬಗ್ಗೆ ಅವರೇ ಕ್ರಮಕೈಗೊಳ್ಳಲಿದ್ದಾರೆ’ ಎಂದು ಸಿಐಡಿ ಮೂಲಗಳು
ಹೇಳಿವೆ.

'ಕಂಪ್ಯೂಟರ್ ದಾಖಲೆ ತಿದ್ದಿದ್ದ ಪ್ರೋಗ್ರಾಮರ್'

‘ನೇಮಕಾತಿ ಪ್ರಕ್ರಿಯೆಗಾಗಿ ಕಂಪ್ಯೂಟರ್ ಪ್ರೋಗ್ರಾಮ್ ರೂಪಿಸಲಾಗಿತ್ತು. ಇದರ ನಿರ್ವಹಣೆ ಜವಾಬ್ದಾರಿಯನ್ನು ಆಂಧ್ರಪ್ರದೇಶದ ನರಸಿಂಹರಾವ್ ವಹಿಸಿಕೊಂಡಿದ್ದ. ಈತ ಆರೋಪಿಗಳ ಕೃತ್ಯಕ್ಕೆ ಅನುಕೂಲವಾಗುವಂತೆ ಪ್ರೋಗ್ರಾಮ್ ತಿದ್ದುಪಡಿ ಮಾಡಿದ್ದಾನೆ ಎಂಬುದು ತನಿಖೆಯಿಂದ ಗೊತ್ತಾಗಿದೆ. ಈತನನ್ನು ಆಂಧ್ರದಲ್ಲಿ ಬಂಧಿಸಿ ನಗರಕ್ಕೆ ಕರೆತರಲಾಗಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ಮತ್ತಷ್ಟು ಅಧಿಕಾರಿಗಳಿಗೆ ನೋಟಿಸ್’

ಬಂಧಿತ ಆರೋಪಿಗಳು ನೀಡಿರುವ ಹೇಳಿಕೆ ಆಧರಿಸಿ ಮತ್ತಷ್ಟು ಸಹ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನೋಟಿಸ್ ನೀಡಲು ಸಿಐಡಿ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

‘ಪ್ರಕರಣದಲ್ಲಿ ಬಂಧಿಸಲಾಗಿರುವ ಮಾದೇಗೌಡ ಹಾಗೂ ಗೀತಾ, ಇತರೆ ಅಧಿಕಾರಿಗಳು ಹಾಗೂ ಕೆಲ ರಾಜಕಾರಣಿಗಳ ಅಣತಿಯಂತೆ ಕೆಲಸ ಮಾಡಿರುವ ಮಾಹಿತಿಯೂ ಇದೆ. ಈ ಸಂಬಂಧ ತನಿಖೆ ಮುಂದುವರಿಸಲಾಗಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT