ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ– ಕಾಲೇಜು ಆರಂಭ ಕೋವಿಡ್‌ನಿಂದ ಮಕ್ಕಳಿಗೆ ಸ್ವಾತಂತ್ರ್ಯ ಸಿಕ್ಕಂತೆ: ಬೊಮ್ಮಾಯಿ

Last Updated 23 ಆಗಸ್ಟ್ 2021, 7:20 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಶಾಲೆ– ಕಾಲೇಜು ಮತ್ತೆ ಆರಂಭಗೊಂಡಿದ್ದರಿಂದ ಕೋವಿಡ್‌ನಿಂದ ಮಕ್ಕಳಿಗೆ ಸ್ವಾತಂತ್ರ್ಯ ಸಿಕ್ಕಂತೆ ಆಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಮಲ್ಲೇಶ್ವರ ಬಡಾವಣೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸೋಮವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಶಾಲೆ– ಕಾಲೇಜುಗಳು ಆರಂಭವಾಗಿದ್ದರಿಂದ ನನಗೆ ಬಹಳ ಸಂತೋಷ ಆಗಿದೆ. ಇಷ್ಟು ದಿನಗಳಿಂದ ಮಕ್ಕಳ ಮನದಾಳದಲ್ಲಿ ಹುದುಗಿದ್ದ ಭಾವನೆಗಳನ್ನು ಅವರು ಹೊರಗಡೆ ತೆಗೆದುಕೊಂಡು ಬಂದು ಅನುಭವಿಸಿ, ಮತ್ತೆ ಶಾಲೆಗೆ ಬರುವುದಕ್ಕಿಂತ ದೊಡ್ಡ ಸಂತೋಷದ ವಿಷಯ ಬೇರೊಂದು ಇಲ್ಲ’ ಎಂದರು.

‘ಶಾಲೆ ಆರಂಭಗೊಂಡ ಈ ಸಂದರ್ಭವನ್ನು ಬಹಳ ಸೂಕ್ಷ್ಮವಾಗಿ ಅವಲೋಕಿಸುತ್ತೇವೆ. ಇದು ಯಶಸ್ವಿಯಾಗಬೇಕು. ಕೋವಿಡ್‌ ಕಡಿಮೆ ಆಗಬೇಕು’ ಎಂದೂ ಅವರು ಆಶಿಸಿದರು.

‘ರಾಜ್ಯದ ಗಡಿ ಜಿಲ್ಲೆಗಳಲ್ಲಿ ಕೋವಿಡ್‌ ದೃಢ ಪ್ರಮಾಣ ಶೇ 2ಕ್ಕಿಂತ ಕಡಿಮೆ ಆದ ತಕ್ಷಣ ಅಲ್ಲಿ ಕೂಡಾ ಶಾಲೆಗಳನ್ನು ಆರಂಭಿಸಲು ಎಲ್ಲ ಕ್ರಮ ತೆಗೆದುಕೊಳ್ಳುತ್ತೇವೆ. ಮುಂದಿನ ಒಂದು ವಾರದಲ್ಲಿ ಅಲ್ಲಿಯೂ ಕೋವಿಡ್‌ ಸೋಂಕು ಕಡಿಮೆ ಆಗುವ ನಿರೀಕ್ಷೆ ಇದೆ. ನಿರೀಕ್ಷೆಯಂತೆ ಕಡಿಮೆಯಾದರೆ ಅಲ್ಲಿ ಕೂಡಾ ಹಂತ ಹಂತವಾಗಿ ಶಾಲೆ– ಕಾಲೇಜುಗಳನ್ನು ಆರಂಭಿಸುತ್ತೇವೆ’ ಎಂದರು.

‘ಪ್ರಾಥಮಿಕ ಶಾಲೆಗಳನ್ನು ಯಾವ ರೀತಿ ತೆರೆಯಬೇಕು ಎಂಬ ಬಗ್ಗೆ ವರದಿ ಕೊಡಲು ತಜ್ಞರ ಸಮಿತಿಗೆ ಹೇಳಿದ್ದೇವೆ. ಈ ತಿಂಗಳ ಕೊನೆಯಲ್ಲಿ ರಾಜ್ಯದಲ್ಲಿನ ಕೋವಿಡ್‌ ಸ್ಥಿತಿಗತಿಯ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಪ್ರಾಥಮಿಕ ಹಂತದಿಂದ ತರಗತಿಗಳನ್ನು ಆರಂಭಿಸುವ ಬಗ್ಗೆ ತಜ್ಞರ ಸಮಿತಿ ನೀಡುವ ವರದಿ ಆಧರಿಸಿ ತೀರ್ಮಾನಿಸುತ್ತೇವೆ’ ಎಂದರು.

‘ಕಳೆದ ಒಂದೂವರೆ ವರ್ಷದಿಂದ ಶಾಲೆಗಳನ್ನು ಮುಚ್ಚಿದ್ದೆವು. ಈ ಅವಧಿಯಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಲು ಹಲವು ಪ್ರಯೋಗಗಳನ್ನು ಮಾಡಿದ್ದೇವೆ. ಆನ್‌ಲೈನ್‌, ಶಾಲೆಗಳ ಆವರಣದ ಹೊರಗಡೆ ಶಿಕ್ಷಣ ಕೊಡುವ ವ್ಯವಸ್ಥೆ ಮಾಡಿದ್ದೇವೆ. ಮಕ್ಕಳ ಜೊತೆ ನಿರಂತರ ಸಂಪರ್ಕದಲ್ಲಿರುವ ಎಲ್ಲ ಪ್ರಯತ್ನಗಳನ್ನು ಉನ್ನತ ಶಿಕ್ಷಣ ಇಲಾಖೆ ಮತ್ತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಮಾಡಿದೆ’ ಎಂದರು.

‘ಕೋವಿಡ್‌ ಒಂದನೇ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಶಿಕ್ಷಣ ಮತ್ತು ಮಕ್ಕಳನ್ನು ನಿಭಾಯಿಸುವುದು ಸವಾಲಿನ ಕೆಲಸ ಆಗಿತ್ತು. ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಉತ್ತಮ ಕೆಲಸ ಮಾಡಿದೆ. ಮಕ್ಕಳ ಕಾಳಜಿಯ ಜೊತೆಗೆ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ, ಹಲವು ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಇಲಾಖೆಯ ಅಧಿಕಾರಿಗಳು ಕೂಡಾ ಒಳ್ಳೆಯ ಕೆಲಸ ಮಾಡಿದ್ದಾರೆ’ ಎಂದು ಶ್ಲಾಘಿಸಿದರು.

‘ತಜ್ಞರು ನೀಡಿದ ವರದಿ ಪಡೆದುಕೊಂಡು, ಹೆಚ್ಚಿನ ಸಮಯ ಕೊಟ್ಟು ಶಾಲೆ– ಕಾಲೇಜುಗಳನ್ನು ಆರಂಭಿಸಿದ್ದೇವೆ. ಅಂದರೆ, 16–17 ದಿನಗಳ ಹಿಂದೆಯೇ ಶಾಲೆ ಆರಂಭಿಸಲು ಅಗತ್ಯವಾದ ಸಿದ್ಧತೆ ಮಾಡಿಕೊಳ್ಳಲು ಸಮಯ ನೀಡಿದ್ದೆವು. ಇವತ್ತು 9ರಿಂದ 12ರವರೆಗೆ ತರಗತಿ ಆರಂಭವಾಗಿದೆ. ಮಲ್ಲೇಶ್ವರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಜೊತೆ ಮಾತನಾಡಿದ್ದೇನೆ. ಶಿಕ್ಷಕರು ಮತ್ತು ಪ್ರಾಂಶುಪಾಲರು ಬಹಳ ಖುಷಿಯಲ್ಲಿದ್ದಾರೆ. ಹಬ್ಬದ ವಾತಾವರಣ ಶಾಲೆ– ಕಾಲೇಜುಗಳಲ್ಲಿ ಇದೆ. ಶಿಕ್ಷಕರು– ಮಕ್ಕಳ ನಡುವೆ ಮತ್ತೆ ಭಾವನಾತ್ಮಾಕ ಸಂಬಂಧ ಬರುತ್ತಿದೆ. ಮಕ್ಕಳಂತೂ ಬಹಳ ಆನಂದ ಪಟ್ಟಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT