ಸೋಮವಾರ, ಸೆಪ್ಟೆಂಬರ್ 20, 2021
20 °C

ಅಖಾಡಕ್ಕಿಳಿದ ಮಠಾಧೀಶರು: 'ಲಕೋಟೆ' ವಿತರಣೆ- ‘ಭಕ್ತರಿಗಾಗಿ ಕಾಣಿಕೆ ಸ್ವೀಕಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಈವರೆಗೂ ಗುಂಪು ಗುಂಪಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಬೆಂಬಲ ವ್ಯಕ್ತಪಡಿಸುತ್ತಿದ್ದ ಮಠಾಧೀಶರು, ಭಾನುವಾರ ಬಹಿರಂಗ ಸಮಾವೇಶದ ಮೂಲಕ ನೇರವಾಗಿ ಅಖಾಡಕ್ಕೆ ಇಳಿದು ಬಲ ಪ್ರದರ್ಶನ ನಡೆಸಿದರು.

‘ವರ್ತಮಾನದ ಸಮಸ್ಯೆಗಳು ಮತ್ತು ಪರಿಹಾರ’ ಎಂಬ ವಿಷಯದ ಕುರಿತು ಚರ್ಚೆಗಾಗಿ ನಗರದ ಅರಮನೆ
ಮೈದಾನದಲ್ಲಿ ಭಾನುವಾರ ನಡೆದಸಮಾವೇಶದಲ್ಲಿ ರಾಜ್ಯದ ವಿವಿಧೆಡೆಯಿಂದ ಬಂದಿದ್ದ 450 ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಂಡಿದ್ದರು. ಸಮಾವೇಶದುದ್ದಕ್ಕೂ ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆಯ ಕುರಿತೇ ಹೆಚ್ಚು ಚರ್ಚೆಯಾಯಿತು. ‘ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ ಮಾಡಬಾರದು’ ಎಂದು ಹಲವು ಮಠಾಧೀಶರು ಸಮಾವೇಶದ ವೇದಿಕೆಯಿಂದಲೇ ಬಿಜೆಪಿ ವರಿಷ್ಠರನ್ನು  ಆಗ್ರಹಿಸಿದರು.

ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ, ತಿಪಟೂರು ಷಡಾಕ್ಷರಿ ಮಠದ ರುದ್ರಮುನಿ ಸ್ವಾಮೀಜಿ ಮತ್ತು ಚಿತ್ರದುರ್ಗದ ಬಸವಕುಮಾರ ಸ್ವಾಮೀಜಿ ನೇತೃತ್ವದಲ್ಲಿ ಸಮಾವೇಶ ನಡೆಯಿತು. ಉಜ್ಜೈನಿ ಪೀಠದ ಸಿದ್ದಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ, ಧಾರವಾಡದ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಚಿಕ್ಕತೊಟ್ಟಿಲಕೆರೆ ಅಟವಿ ಶಿವಲಿಂಗ ಸ್ವಾಮೀಜಿ ಸೇರಿದಂತೆ ವೀರಶೈವ ಮತ್ತು ಲಿಂಗಾಯತ ಸಮುದಾಯಗಳ ಸ್ವಾಮೀಜಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ನೊಳಂಬ, ಕೊರವ, ಕೊರಚ, ಕೊರಮ ಸಮುದಾಯಗಳ ಮಠಾಧೀಶರು ಸಹ ಪಾಲ್ಗೊಂಡಿದ್ದರು.

ಸಸಿಗೆ ನೀರೆರೆಯುವ ಮೂಲಕ ಸಮಾವೇಶವನ್ನು ಉದ್ಘಾಟಿಸಿದ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು, ‘ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಕೊನೆಯಾಗಬೇಕು. ಇದಕ್ಕಾಗಿ ನಾವು ನಮ್ಮ ಅಹವಾಲನ್ನು ಹೇಳುತ್ತಿದ್ದೇವೆ. ಈ ಕುರಿತು ಬಿಜೆಪಿ ಹೈಕಮಾಂಡ್‌ನವರು ಸರಿಯಾದ ನಿರ್ಧಾರ ಕೈಗೊಳ್ಳಬೇಕು’ ಎಂದರು.

ಯಡಿಯೂರಪ್ಪ ಉತ್ತಮ ಕೆಲಸ ಮಾಡಿದ್ದಾರೆ. ಅಭಿವೃದ್ಧಿ ಪರವಾದ ರಾಜಕಾರಣ ಅವರದ್ದು. ಹಾಗಾಗಿ ಮಠಾಧೀಶರೆಲ್ಲ ಅವರ ಬೆಂಬಲಕ್ಕೆ ನಿಂತಿದ್ದಾರೆ. ರಾಜ್ಯ ಮತ್ತು ಜನರ ಹಿತಕ್ಕಾಗಿ ಈ ನಿರ್ಧಾರ ಎಂದು ಹೇಳಿದರು.

ಜಾತ್ಯತೀತ ನಾಯಕ: ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ‘ಯಡಿಯೂರಪ್ಪ ಅವರು ಎಲ್ಲ ಜಾತಿ, ಸಮುದಾಯಗಳ ಮಠಗಳಿಗೂ ಅನುದಾನ ನೀಡಿದ್ದಾರೆ. ಅವರು ಜಾತ್ಯತೀತ ನಾಯಕ. ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಬದಲಿಸಬಾರದು ಎಂಬುದು ಎಲ್ಲ ಮಠಾಧೀಶರ ಒಕ್ಕೊರಲ ಅಭಿಪ್ರಾಯ’ ಎಂದರು.

‘ಸಮಾವೇಶವನ್ನು ಯಡಿಯೂರಪ್ಪ ಅವರ ಮಕ್ಕಳು ಆಯೋಜಿಸಿದ್ದಾರೆ ಎಂಬ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಇದು ಮಠಾಧೀಶರೇ ಸ್ವಯಂಪ್ರೇರಿತವಾಗಿ ಕೈಗೊಂಡ ನಿರ್ಧಾರ. ಯಾರ ಸೂಚನೆ ಅಥವಾ ನೆರವಿನಿಂದ ಸಮಾವೇಶ ನಡೆದಿಲ್ಲ’ ಎಂದು ಹೇಳಿದರು.

ರಾಜ್ಯದ ಎಲ್ಲ ಮಠಾಧೀಶರನ್ನು ಒಳಗೊಂಡ ಮಠಾಧೀಶರ ಪರಿಷತ್‌ ಅಸ್ತಿತ್ವಕ್ಕೆ ತರುವ ನಿರ್ಣಯವನ್ನು ಸಮಾವೇಶದಲ್ಲಿ ಕೈಗೊಳ್ಳಲಾಗಿದೆ.

‘ಭಕ್ತರಿಗಾಗಿ ಕಾಣಿಕೆ ಸ್ವೀಕಾರ’

ಮುಖ್ಯಮಂತ್ರಿಯವರ ಮನೆಯಲ್ಲಿ ಇತ್ತೀಚೆಗೆ ಮಠಾಧೀಶರಿಗೆ ‘ಲಕೋಟೆ’ ವಿತರಿಸಿದ ಘಟನೆಗೆ ಸಂಬಂಧಿಸಿದ ಸುದ್ದಿಗಳ ಕುರಿತು ಪ್ರತಿಕ್ರಿಯಿಸಿದ ದಿಂಗಾಲೇಶ್ವರ ಸ್ವಾಮೀಜಿ, ‘ಮಠಾಧೀಶರು ಯಾವುದೇ ಕಾಣಿಕೆ ತೆಗೆದುಕೊಂಡರೂ ಮಾಧ್ಯಮದವರೂ ಸೇರಿದಂತೆ ಜನ ಸಾಮಾನ್ಯರು ಮಠಕ್ಕೆ ಬಂದಾಗ ದಾಸೋಹ ಮತ್ತು ವಸತಿಗಾಗಿ ಬಳಸಲಾಗುತ್ತದೆ. ಮದ್ಯ ಕುಡಿಯಲು ಮೋಜು ಮಾಡಲು ಅಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು