ಸೋಮವಾರ, ಮಾರ್ಚ್ 1, 2021
28 °C
ಜೀವ ಪಣಕ್ಕಿಟ್ಟು ಕೊರೊನಾ ಮಣಿಸಲು ಹೆಣಗಿದವರಿಗೆ ನಮನ

‘ಪ್ರಜಾವಾಣಿ ಕೊರೊನಾ ಸೇನಾನಿಗಳು 2021’ ಪ್ರಶಸ್ತಿ ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೊರೊನಾ ಸೋಂಕಿನ ಭೀತಿಯಿಂದ ಜಗವೇ ತಲ್ಲಣಿಸಿರುವಾಗಲೂ ಆತ್ಮತೃಪ್ತಿಯ ಬೆನ್ನುಹತ್ತಿ ಕರ್ತವ್ಯಪ್ರಜ್ಞೆ ಮೆರೆದು ಮಾದರಿಯಾದವರು ಅವರು. ತಮ್ಮ ಕಷ್ಟಗಳನ್ನೆಲ್ಲ ಒತ್ತಟ್ಟಿಗಿಟ್ಟು ಪರರ ಸಂಕಟಗಳಿಗೆ ಮಿಡಿದವರು ಅವರು. ಕ್ಲಿಷ್ಟಕಾಲದಲ್ಲೂ ಪ್ರತಿಫಲ ಬಯಸದೆ ದುಡಿದುದಕ್ಕೆ ಸಿಕ್ಕ ಮನ್ನಣೆ ಅವರಲ್ಲಿ ಸಾರ್ಥಕ ಭಾವ ಮೂಡಿಸಿತ್ತು.

ಕೃತಾರ್ಥ ಭಾವ ತುಂಬಿದ್ದ ಮನಸುಗಳನ್ನು ಒಂದುಗೂಡಿಸಿದ್ದು ’ಪ್ರಜಾವಾಣಿ‘. ಪತ್ರಿಕೆಯ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ‘ಪ್ರಜಾವಾಣಿ ಕೊರೊನಾ ಸೇನಾನಿಗಳು 2021’ ಪ್ರಶಸ್ತಿ ಪ್ರದಾನ ಸಮಾರಂಭ ಸಂತೃಪ್ತ ಭಾವಗಳ ಸಮ್ಮಿಲನದಂತಿತ್ತು. ‘ದುಡಿಮೆಯೇ ದೇವರು, ‘ಪರೋಪಕಾರವೇ ಪರಮಧರ್ಮ’ ಎಂದು ದುಡಿದ ಒಬ್ಬೊಬ್ಬರ ಸಾಧನೆಯೂ ಇತರರಿಗೆ ಮಾದರಿ.

ಕೊರೊನಾ ಸೇನಾನಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್‌, ‘ನೀವು ದೀಪದಂತೆ ಕೆಲಸ ಮಾಡಿದ್ದೀರಿ. ನೀವು ಮಾಡಿದ ಒಳ್ಳೆಯ ಕೆಲಸವನ್ನು ಪತ್ರಿಕೆ ಸಮಾಜಕ್ಕೆ ಪರಿಚಯಿಸಿದೆ. ಜೀವನವೆಂಬ ಪುಸ್ತಕದ ಮೊದಲ ಪುಟ ಹಾಗೂ ಕೊನೆಯ ಪುಟಗಳ ನಡುವಿನ ಹಾಳೆಗಳನ್ನು ನೀವು ನಿಮ್ಮ ಮನಃಸ್ಸಾಕ್ಷಿಗೊಪ್ಪುವ ಕೆಲಸದ ಮೂಲಕ ತುಂಬಿದ್ದೀರಿ. ನಾಲ್ಕು ಜನರಿಗೆ ಸಹಾಯ ಮಾಡುವ ನಿಮ್ಮಂತವರ ಸಂತತಿ ಹೆಚ್ಚಲಿ’ ಎಂದು ಹಾರೈಸಿದರು. ಸಮಾಜ ಕಟ್ಟುವ ಬಗ್ಗೆ ‘ಪ್ರಜಾವಾಣಿ’ ತೋರಿದ ಕಾಳಜಿಗೂ ಅಭಿನಂದನೆ ಸಲ್ಲಿಸಿದರು.

‘ಮನುಷ್ಯ ಪ್ರತಿ ಮನೆಯಲ್ಲೂ ಹುಟ್ಟುತ್ತಾನೆ. ಆದರೆ, ಮನುಷ್ಯತ್ವ ಹುಟ್ಟುವುದು ಕೆಲವು ಮನೆಗಳಲ್ಲಿ ಮಾತ್ರ. ನಮ್ಮ ನೋವು ನಮಗೆ ಗೊತ್ತಾದರೆ ನಾವು ಜೀವಂತವಾಗಿದ್ದೇವೆ ಎಂದರ್ಥ. ಬೇರೆಯವರ ನೋವು ನಮಗೆ ಗೊತ್ತಾದರೆ ಮಾತ್ರ ನಾವು ಮನುಷ್ಯರಾಗಿದ್ದೇವೆ ಎಂದರ್ಥ. ಸಾಧನೆ ಇಲ್ಲದೇ ಸತ್ತರೆ ಸಾವಿಗೆ ಅವಮಾನ. ಆದರ್ಶ ಇಲ್ಲದೇ ಬದುಕಿದರೆ ಬದುಕಿಗೆ ಅವಮಾನ.  ನಿಮ್ಮಲ್ಲಿ ಆದರ್ಶ ಇದೆ, ಸಾರ್ಥಕತೆ ಇದೆ, ಪರೋಪಕಾರಿ ಮನೋಭಾವ ಇದೆ. ನೀವು ಹೃದಯಮುಟ್ಟುವ ಕೆಲಸ ಮಾಡಿದ್ದೀರಿ. ಯಾರನ್ನೋ ಮೆಚ್ಚಿಸಲು ಕೆಲಸ ಮಾಡಿಲ್ಲ. ಮನಸ್ಸಾಕ್ಷಿಗೆ ತಕ್ಕಂತೆ ಮಾಡಿದ ಕೆಲಸವಿದು’ ಎಂದು ಕೊರೊನಾ ಯೋಧರನ್ನು ಕೊಂಡಾಡಿದರು.

‘ಜೀವನದ ಮಹತ್ವವನ್ನು ಮೂರು ಜಾಗಗಳಲ್ಲಿ ನೋಡಬಹುದು. ಆಸ್ಪತ್ರೆಯಲ್ಲಿ ರೋಗಿಗಳನ್ನು ನೋಡಿದಾಗ ಆರೋಗ್ಯ ಎಷ್ಟು ಮುಖ್ಯ ಎಂಬುದು ತಿಳಿಯುತ್ತದೆ. ಜೈಲಿನಲ್ಲಿ ಕೈದಿಗಳನ್ನು ನೋಡಿದಾಗ ಸ್ವಾತಂತ್ರ್ಯದ ಮಹತ್ವದ ಅರಿವಾಗುತ್ತದೆ. ಸ್ಮಶಾನವು ಜೀವನ ಇಷ್ಟೇ ಎಂಬುದನ್ನು ನೆನಪಿಸುತ್ತದೆ. ಮಾಡಿದ ಒಳ್ಳೆಯ ಕೆಲಸ ಮಾತ್ರ ನಮ್ಮ ಜೊತೆ ಬರುವುದು. ಒಳ್ಳೆಯ ಕೆಲಸದ ಮೂಲಕ ನಿಮ್ಮ ಕ್ಷೇತ್ರದಲ್ಲಿ ನೀವು ಸ್ವರ್ಗ ಸೃಷ್ಟಿಸಿದ್ದೀರಿ’ ಎಂದರು.

‘ಗಡಿ ಕಾಯುವ ಯೋಧರು ಕಣ್ಣಿಗೆ ಕಾಣುವ ವೈರಿಗಳ ವಿರುದ್ಧ ಹೋರಾಟ ಮಾಡಿದರೆ, ಕೊರೊನಾ ಯೋಧರು ಕಣ್ಣಿಗೆ ಕಾಣದ ವೈರಸ್‌ ಜೊತೆ ಸೆಣಸುತ್ತಿದ್ದಾರೆ. ಕೋವಿಡ್‌–19 ಆಯಿತು, ಕೋವಿಡ್‌– 20 ಮುಗಿಯಿತು, ಈಗ ಕೋವಿಡ್‌–21ರ ಹೊಸ್ತಿಲಿನಲ್ಲಿ ಇದ್ದೇವೆ. ಬಹುಷಃ ಈ ವರ್ಷದ  ಮೇ– ಜೂನ್‌ನಲ್ಲಿ ಇದು ಅಂತ್ಯವಾಗಬೇಕು. ಸರ್ಕಾರದ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರ ಕೊರೋನಾವನ್ನು ನಿಯಂತ್ರಿಸಬಹುದು’ ಎಂದು ನೆನಪಿಸಿದರು.

ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೀತಾರಾಮನ್‌ ಶಂಕರ್‌, ‘ನಿಮ್ಮೆಲ್ಲ ಸಾಧನೆ ಸ್ಫೂರ್ತಿದಾಯಕ. ನಿಜಕ್ಕೂ ನಿಮ್ಮ ಕಾರ್ಯ ಶ್ಲಾಘನೀಯ‘ ಎಂದರು.

‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ’ಮೊದಲು ಕೊರೊನಾ ಕಡಿಮೆ ಆಗಲಿ, ಉಳಿದದ್ದು ಆಮೇಲೆ ನೋಡುವ ಎಂಬ ಏಕೈಕ ಉದ್ದೇಶ ಇಟ್ಟುಕೊಂಡು ನೀವೆಲ್ಲ ಕೆಲಸ ಮಾಡಿದ್ದೀರಿ. ಆ ಕಾರಣಕ್ಕೆ ನಿಮ್ಮನ್ನು ಗುರುತಿಸಿದ್ದೇವೆ. ಕಾಡಿನಲ್ಲಿ ಅರಳಿದ ಹೂವಿನ ಸುವಾಸನೆಯನ್ನು ಗಾಳಿಯು ಪಸರಿಸುವಂತೆ ಎಲೆ ಮರೆಯ ಕಾಯಿಯ ಹಾಗೆ ಆತ್ಮ ತೃಪ್ತಿಗೆ ಕೆಲಸ ಮಾಡಿದ ನಿಮ್ಮ ಸಾಧನೆಯನ್ನು ಗುರುತಿಸುವ ಕಾರ್ಯ ಮಾಡಿದ್ದೇವೆ’ ಎಂದರು.

‘ಮಾಸ್ಕ್‌ ನಿಜವಾದ ಲಸಿಕೆ’

‘ಮಾಸ್ಕ್‌ ನಿಜವಾದ ಲಸಿಕೆ. ವ್ಯಕ್ತಿಗತ ಅಂತರ ಕಾಪಾಡಿ, ಮಾನಸಿಕವಾಗಿ ಹತ್ತಿರ ಇರುವುದು ಕೊರೊನಾ ನಿಯಂತ್ರಿಸುವ ಗುಟ್ಟು. ಯಾವುದೇ ಕ್ಷಣದಲ್ಲೂ ಮಾನವೀಯತೆ ಕಳೆದುಕೊಳ್ಳಬಾರದು. ಲಸಿಕೆ ಬಂತು ಎಂಬ ಕಾರಣಕ್ಕೆ ಮಾಸ್ಕ್‌ ಧರಿಸುವುದನ್ನು ಬಿಡಬಾರದು. ಕೊರೊನಾ ಎರಡನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಮಾರ್ಚ್‌ ಕೊನೆಯ ತನಕ ಕಾದು ನೋಡಬೇಕು’ ಎಂದು ‌ಡಾ.ಸಿ.ಎನ್.ಮಂಜುನಾಥ್‌ ಹೇಳಿದರು.

‘ಮುಕ್ತ ಮಾರುಕಟ್ಟೆಯಲ್ಲಿ ಲಸಿಕೆ ಸಿಗಲಿ’

ಕೋವಿಡ್‌ ಲಸಿಕೆಯನ್ನು 15 ದಿನಗಳ ಬಳಿಕ ಮುಕ್ತ ಮಾರುಕಟ್ಟೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕು. ಅದರ ದರಕ್ಕೆ ಬೇಕಿದ್ದರೆ ಮಿತಿಯನ್ನು ನಿಗದಿಪಡಿಸಲಿ’ ಎಂದು ಡಾ.ಸಿ.ಎನ್‌. ಮಂಜುನಾಥ್‌ ಸಲಹೆ ನೀಡಿದರು.

‘ಹಣ ಉಳ್ಳವರು ಎಲ್ಲಿ ಬೇಕಾದರೂ ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಅವಕಾಶ ಸಿಗಲಿ. ಇದರಿಂದಾಗಿ ಲಸಿಕೆ ಹಾಕಿಸಿಕೊಳ್ಳಲು ಸರದಿಗಾಗಿ ಕಾಯುವುದು ತಪ್ಪುತ್ತದೆ’ ಎಂದರು.

‘ಲಸಿಕೆ ಹಾಕಿಸಿಕೊಳ್ಳಲು ಭಯಪಡದಿರಿ’

‘ಕೋವಿಡ್‌ ಲಸಿಕೆ ಪಡೆಯಲು ಆರೋಗ್ಯ ಕಾರ್ಯಕರ್ತರು ಸ್ವಲ್ಪ ಹಿಂದೇಟು ಹಾಕುತ್ತಿದ್ದಾರೆ. ವೈದ್ಯರಲ್ಲೂ ಆತಂಕವಿದೆ. ಲಸಿಕೆ ಬಗ್ಗೆ ಯಾವುದೇ ಆತಂಕ ಬೇಡ’ ಎಂದು ಡಾ.ಸಿ.ಎನ್‌. ಮಂಜುನಾಥ್‌ ಸ್ಪಷ್ಟಪಡಿಸಿದರು.

‘ನೀವು ಹಾಕಿಸಿಕೊಂಡಿದ್ದೀರಾ, ಹಾಗಾದರೆ ನಾವೂ ಹಾಕಿಸಿಕೊಳ್ಳುತ್ತೇವೆ ಎಂಬ ಮನೋಭಾದವರು ನಮ್ಮಲ್ಲಿ ಜಾಸ್ತಿ. ನಾನೂ ಲಸಿಕೆ ಹಾಕಿಸಿಕೊಂಡಿದ್ದೇನೆ. ನಮ್ಮ ಸಂಸ್ಥೆಯ 2,300 ಆರೋಗ್ಯ ಕಾರ್ಯಕರ್ತರಲ್ಲಿ 1,900 ಮಂದಿ ಈಗಾಗಲೇ ಲಸಿಕೆ ಹಾಕಿಸಿಕೊಂಡಿದ್ದಾರೆ’ ಎಂದು ಧೈರ್ಯ ತುಂಬಿದರು.

‘ನಮ್ಮ ದೇಶದಲ್ಲಿ ಈಗಾಗಲೇ ಶೇ 40ರಿಂದ ಶೇ 50ರಷ್ಟು ಮಂದಿ ಈ ಕಾಯಿಲೆಗೆ ಒಡ್ಡಿಕೊಂಡಿದ್ದಾರೆ. ಅನೇಕರಲ್ಲಿ ರೋಗಲಕ್ಷಣ ಕಾಣಿಸಿಕೊಳ್ಳದಿದ್ದರೂ ಈ ಕಾಯಿಲೆ ಬಂದು ಹೋಗಿದೆ. ಇಡೀ ಜನ ಸಮುದಾಯವೇ ಈ ಸೋಂಕಿನ ವಿರುದ್ಧ ನಿರೋಧಕ ಶಕ್ತಿ (ಹರ್ಡ್‌ ಇಮ್ಯುನಿಟಿ) ಬೆಳೆಸಿಕೊಳ್ಳಬೇಕಾದರೆ ಶೇ 75ರಷ್ಟು ಜನರಿಗೆ ಲಸಿಕೆ ಕೊಡಬೇಕಾಗುತ್ತದೆ’ ಎಂದರು.

‘ಲಸಿಕೆಯಿಂದ ಅಡ್ಡ ಪರಿಣಾಮಗಳಿಲ್ಲ. ಲಸಿಕೆ ಹಾಕಿಸಿಕೊಂಡ ಬಳಿಕ ಸ್ವಲ್ಪ ಜ್ವರ, ಮೈಕೈ ನೋವು ಕಾಣಿಸುವುದು ಅಡ್ಡ ಪರಿಣಾಮ ಅಲ್ಲ. ಅದು ಪರಿಣಾಮ ಮಾತ್ರ. ಲಸಿಕೆ ಕೊಟ್ಟಾಗ ಕುಸಿದು ಬಿದ್ದು ಪ್ರಾಣ ಹೋಗುವುದು ಅಡ್ಡಪರಿಣಾಮ. ನಮ್ಮ ದೇಶದಲ್ಲಿ ಲಸಿಕೆಯಿಂದಾಗಿ ಯಾರೂ ಸತ್ತಿಲ್ಲ’ ಎಂದರು.

‘ಕೊರೊನಾ ಬಂದು ಹೋದವರೂ ಲಸಿಕೆ ಹಾಕಿಸಿಕೊಳ್ಳಬೇಕು. ಲಸಿಕೆ ಹಾಕಿಸಿಕೊಂಡ ಬಳಿಕವೂ ಕೆಲವರಿಗೆ ಮತ್ತೆ ಕೊರೊನಾ ಬರಬಹುದು. ಆದರೆ ಅಂತಹವರಿಗೆ ರೋಗ ಲಕ್ಷಣ ಇರಲ್ಲ ಹಾಗೂ ಪ್ರಾಣ ಹಾನಿ ಸಾಧ್ಯತೆ ಕಡಿಮೆ. ಲಸಿಕೆ ಅಭಿಯಾನಕ್ಕೆ ಸಾರ್ವಜನಿಕರು ಸಹಕರಿಸಬೇಕು. ಇದು ಜವಾಬ್ದಾರಿ ಕೂಡ’ ಎಂದರು.

‘ವಿದೇಶದಿಂದ ಬಂದವುಗಳ ಬಗ್ಗೆ ನಮಗೆ ಆಕರ್ಷಣೆ ಜಾಸ್ತಿ. ನಮ್ಮ ದೇಶದಲ್ಲೇ ತಯಾರಾದ ಕೋವಿಶೀಲ್ಡ್‌ ಹಾಗೂ ಕೊವ್ಯಾಕ್ಸೀನ್‌ಗಳೆರಡೂ ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿವೆ. ವೈಜ್ಞಾನಿಕ ಸಂಶೋಧನೆಗಳ ಬಗ್ಗೆ ಬೆಳಕು ಚೆಲ್ಲುವ ವಿಶ್ವವಿಖ್ಯಾತ ‘ದಿ ಲ್ಯಾನ್ಸೆಟ್‌’ ನಿಯತಕಾಲಿಕದಲ್ಲೂ ಕೊವ್ಯಾಕ್ಸಿನ್‌ ಲಸಿಕೆಯ ಮಹತ್ವದ ಬಗ್ಗೆ ಲೇಖನ ಪ್ರಕಟ ಆಗಿದೆ’ ಎಂದು ಮಾಹಿತಿ ನೀಡಿದರು.

***

ಮಾಡುವ ಕೆಲಸದಿಂದ ದೊಡ್ಡವರಾಗುತ್ತೇವೆಯೇ ಹೊರತು ಹುದ್ದೆಯಿಂದಲ್ಲ. ಎಷ್ಟೋ ಜನ ದೊಡ್ಡ ಹುದ್ದೆಯಲ್ಲಿದ್ದು ಬೇರೆ ತರಹದ ಕೆಲಸ ಮಾಡಿದ್ದಾರೆ. ಇನ್ನು ಕೆಲವರು ಸಣ್ಣ ಹುದ್ದೆಯಲ್ಲಿದ್ದು ಅದ್ಭುತ ಕೆಲಸ ಮಾಡಿದ್ದಾರೆ

- ಡಾ.ಸಿ.ಎನ್‌.ಮಂಜುನಾಥ್

 

ಕೊರೊನಾ ಯೋಧರ ಮಾತು

‘ಚಿಣ್ಣರ ಮೊಗದ ನಗುವೇ ಸ್ಫೂರ್ತಿ’

ನಮ್ಮಲ್ಲಿ ಒಂದು ಕಡೆ ಕಂಪ್ಯೂಟರ್‌ ‍ಪರಿಭಾಷೆ ಬರೆಯುವ ಚಿಣ್ಣರಿದ್ದರೆ, ಇನ್ನೊಂದೆಡೆ ಕಂಪ್ಯೂಟರ್‌ ಎಂದರೆ ಏನೆಂದೇ ತಿಳಿಯದ ಮಕ್ಕಳೂ ಇದ್ದಾರೆ. ಶಿಕ್ಷಣ ಪ್ರತಿಯೊಬ್ಬರ ಬದುಕಿನಲ್ಲಿ ಒಂದೇ ಬಾರಿ ಮಾತ್ರ ಸಿಗುವ ಅವಕಾಶ. ಕೊರೊನಾ ಲಾಕ್‌ಡೌನ್‌ ಕಾಲದಲ್ಲಿ ಉಳ್ಳವರ ಮಕ್ಕಳು ಆನ್‌ಲೈನ್‌ ತರಗತಿ ಮೂಲಕ ಕಲಿಕೆ ಮುಂದುವರಿಸಿದ್ದರೆ, ಉತ್ತರ ಕರ್ನಾಟಕದಿಂದ ಕೆಲಸ ಹುಡುಕಿ ವಲಸೆ ಬಂದ ಕಾರ್ಮಿಕರ ಮಕ್ಕಳು ಈ ಸೌಲಭ್ಯದಿಂತ ವಂಚಿತರಾಗಿದ್ದರು. ಅಂತಹವರಿಗೆ ಪಾಠ ಮಾಡುವ ಮೂಲಕ ತಾರತಮ್ಯ ನಿವಾರಿಸಲು ನೆರವಾದೆ. ಬಡವರ ಮಕ್ಕಳಲ್ಲೂ ತುಂಬ ಪ್ರತಿಭಾವಂತರಿದ್ದಾರೆ. ಅವರಿಗೆ ಅವಕಾಶಗಳಿಲ್ಲ. ಅದನ್ನು ನೀಡುವ ಕಾರ್ಯ ಆಗಬೇಕು. ಎಲೆಮರೆಯ ಕಾಯಿಗಳನ್ನು ಗುರುತಿಸಿದಕ್ಕಾಗಿ ‘ಪ್ರಜಾವಾಣಿ’ಗೆ ಕೃತಜ್ಞತೆ.

ಶಾಂತಪ್ಪ ಜಡೆಮ್ಮನವರ್‌, ಪಿಎಸ್‌ಐ

 

‘ದುಗುಡಗಳ ವಿಶ್ವದರ್ಶನ’

ಚೀನಾದ ವುಹಾನ್‌ನಿಂದ ಮರಳಿದವರೊಬ್ಬರು ರಾಜ್ಯದಲ್ಲಿ ಕ್ವಾರಂಟೈನ್‌ಗೆ ಒಳಗಾದ ಮೊದಲ ವ್ಯಕ್ತಿ. ಅವರನ್ನು ರಾತ್ರಿ 11.30ಕ್ಕೆ ಆಸ್ಪತ್ರೆಗೆ ಕರೆದುಕೊಂಡು ಬಂದ ಸನ್ನಿವೇಶ ಈಗ ಊಹಿಸಲೂ ಆಗದು. ಒಂದೂವರೆ ವರ್ಷದ ಮಗು ಮತ್ತು ಪತ್ನಿಯಿಂದ ದೂರ ಇರಬೇಕಾದ  ವ್ಯಕ್ತಿಯ ತಳಮಳ ವಿವರಣೆಗೆ ನಿಲುಕದ್ದು. ಯಾರೂ ಶುಶ್ರೂಷೆಗೆ ಮುಂದೆ ಬಂದಿರಲಿಲ್ಲ. ಆಗ ನಾನು ಒಪ್ಪಿದ್ದೆ. 2020ರ ಮಾ. 9ಕ್ಕೆ ರಾಜ್ಯದ ಮೊದಲ ಕೋವಿಡ್‌ ಪ್ರಕರಣ ಪತ್ತೆಯಾಗಿದ್ದು ಅಮೆರಿಕದಿಂದ ಮರಳಿದ ಟೆಕಿಯಲ್ಲಿ. ನನ್ನ ಮಕ್ಕಳನ್ನೂ ಬೇರೆಯವರ ಮನೆಗೆ ಕಳುಹಿಸಿ ನಾನು ಕೆಲಸ ಮಾಡಿದೆ. ಮೊದಲು ಆರೈಕೆ ಮಾಡಿದ ಟೆಕಿ ಕುಟುಂಬದವರು ಈಗಲೂ ಸಂಪರ್ಕದಲ್ಲಿದ್ದಾರೆ. ಸರ್ಕಾರಿ ಆಸ್ಪತ್ರೆಯ ಉತ್ತಮ ಸೇವೆ ಬಗ್ಗೆ ಅವರ ತೃಪ್ತಿದಾಯಕ ಪ್ರತಿಕ್ರಿಯೆಯೇ ನಮಗೆ ಪ್ರಶಸ್ತಿ. 

ಶಾಂತ ಎಂ. ಶುಶ್ರೂಷಕಿ, ರಾಜೀವ ಗಾಂಧಿ ಎದೆರೋಗಗಳ ಆಸ್ಪತ್ರೆ

 

‘ಅಗತ್ಯ ಇರುವವರಿಗೆ ಚಿಕಿತ್ಸೆ ನೀಡಿದೆವು’

ಕೋವಿಡ್‌ ಕಾಣಿಸಿಕೊಳ್ಳುವ ಮುನ್ನವೂ ಕೆಮ್ಮು ನೆಗಡಿ, ಜ್ವರ, ಹೃದಯಾಘಾತ, ಮಧುಮೇಹದಂತಹ ರೋಗಗಳಿದ್ದವು. ಆದರೆ, ಕೋವಿಡ್‌ ಉತ್ತುಂಗದಲ್ಲಿದ್ದಾಗ ಇಂತಹ ರೋಗಿಗಳಿಗೆ ಎಲ್ಲೂ ಚಿಕಿತ್ಸೆ ಸಿಗುತ್ತಿರಲಿಲ್ಲ. ಸಮಾನಮನಸ್ಕ ವೈದ್ಯರು ಸೇರಿ ವಿಡಿಯೋ ಮೂಲಕ ಉಚಿತ ಸಲಹೆ ನೀಡಲು ಮುಂದೆ ಬಂದೆವು. ತಪಾಸಣ ವರದಿ ಆಧರಿಸಿ ವೈದ್ಯಕೀಯ ಸಲಹೆ ನೀಡಿದೆವು. ಅಗತ್ಯ ಇರುವವರಿಗೆ ಚಿಕಿತ್ಸೆ ಕೊಡಿಸಲೂ ನೆರವಾದೆವು.

ಡಾ. ಮುರಳೀಧರ್‌

 

ಪ್ರಶಸ್ತಿ ಪುರಸ್ಕೃತರು (ಹೆಸರು; ಕ್ಷೇತ್ರ)

- ಶಾಂತಪ್ಪ ಜಡೆಮ್ಮನವರ್, ಪಿಎಸ್‌ಐ; ವಲಸೆ ಕಾರ್ಮಿಕರ ಮಕ್ಕಳಿಗೆ ಪಾಠ 

- ರಾಜು ಕಲ್ಪಳ್ಳಿ– ಕೋವಿಡ್‌ನಿಂದ ಸತ್ತವರ ಶವ ಸಂಸ್ಕಾರ

- ನಾಗಭೂಷಣ, ಸಾಫ್ಟ್‌ವೇರ್ ಎಂಜಿನಿಯರ್‌; ಕೊಳೆಗೇರಿ ನಿವಾಸಿಗಳಿಗೆ ಅನ್ನದಾಸೋಹ

- ಸುಮುಖ್‌ ಬೆಟಗೇರಿ, ಕಾನೂನು ವಿದ್ಯಾರ್ಥಿ–ವಲಸಿಗರು ಊರಿಗೆ ಮರಳಲು ನೆರವು 

- ಅಂತೋನಿ ಸ್ವಾಮಿ ಕುಟ್ಟಿ– ಕೋವಿಡ್‌ನಿಂದ ಸತ್ತವರ ಶವ ಸಂಸ್ಕಾರ, ಪಿ.ಎಂ.ಕೇರ್‌ ನಿಧೀಗೆ ₹ 60 ಸಾವಿರ ದೇಣಿಗೆ 

- ಮೊಹಮ್ಮದ್‌ ಅಯೂಬ್‌ ಪಾಷಾ; ಕೋವಿಡ್‌ ನಿಂದ ಸತ್ತವರ ಮೃತದೇಹ ಒಯ್ಯಲು ನೆರವು

- ಚಿನ್ನಮ್ಮ, ಪೌರಕಾರ್ಮಿಕೆ; ವಯಸ್ಸಿನ ಕಾರಣಕ್ಕೆ ಸ್ವಚ್ಛತಾ ಕಾರ್ಯದಿಂದ ವಿನಾಯಿತಿ ನೀಡಿದರೂ ನಿತ್ಯವೂ ಕರ್ತವ್ಯ ನಿರ್ವಹಣೆ‌

- ಪ್ರಶಾಂತ್‌; ಅಧಿಕಾರಿಗಳಷ್ಟೇ ಅಲ್ಲ, ಜನರಿಂದಲೂ ಮೆಚ್ಚುಗೆ ಪಡೆದ ಪೌರಕಾರ್ಮಿಕ.

- ಮೊಹ್ಸಿನ್‌ ತಾಜ್‌, ಆಶಾ ಕಾರ್ಯಕರ್ತೆ; ಮನೆ ಮನೆಗೆ ತೆರಳಿ ಜನ ಜಾಗೃತಿ ಮೂಡಿಸುವಿಕೆಯಲ್ಲಿ ಮುಂಚೂಣಿ 

- ಸುಜಾತಾ, ಆಶಾ ಕಾರ್ಯಕರ್ತೆ; ಕೋವಿಡ್‌ ನಿಯಂತ್ರಣ ಕಾರ್ಯದಲ್ಲಿ ಮುಂಚೂಣಿ 

- ಮೆಹರುನ್ನೀಸಾ, ಸಂಪರ್ಕ ಕಾರ್ಯಕರ್ತೆ;  ದಿನದಲ್ಲಿ 100ಕ್ಕೂ ಅಧಿಕ ಮಂದಿಯ ಗಂಟಲ ದ್ರವ ಸಂಗ್ರಹ  

- ತೇಜಾವತಿ; ಸಂಪರ್ಕ ಕಾರ್ಯಕರ್ತೆ; ಪಾಲಿಕೆಯ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ಮುಂಚೂಣಿ

- ಪ್ರಶಾಂತ್ ಗುತ್ತೇದಾರ್, ಶುಶ್ರೂಷಕ ಅಧಿಕಾರಿ; ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರಜೆ ಪಡೆಯದೆ ರೋಗಿಗಳ ಆರೈಕೆ 

- ಶಾಂತಾ ಎಂ, ಶುಶ್ರೂಷಕಿ; ರಾಜ್ಯದ ಪ್ರಥಮ ಕೋವಿಡ್ ಪೀಡಿತ ವ್ಯಕ್ತಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಆರೈಕೆ

- ಡಾ. ಆಶಾಕಿರಣ್ ಟಿ. ರಾಥೋಡ್; ಕೋವಿಡ್ ಪೀಡಿತ ಗರ್ಭಿಣಿಯರು ಬಾಣಂತಿಯರು ಸೇರಿ ಸುಮಾರು 450 ಮಂದಿಯ ಆರೈಕೆ ಮಾಡುವಲ್ಲಿ ಪ್ರಮುಖ ಪಾತ್ರ

- ಮಂಜುನಾಥ್ ಎಸ್‌, ಶುಶ್ರೂಷಕ; ಕೋವಿಡ್ ಸೇವೆ ಪ್ರಾರಂಭವಾದ ಬಳಿಕ ಬಹುತೇಕ ದಿನ ಐಸಿಯುನಲ್ಲಿ ಕಾರ್ಯನಿರ್ವಹಣೆ

- ಡಾ. ಸುರೇಶ್ ಕೆ.ಜಿ, ವೈದ್ಯ; – ಕೋವಿಡ್ ಜಯಿಸಿ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಕೆ 

- ಡಾ.ಮುರಳೀಧರ, ವೈದ್ಯ; ಕೋವಿಡ್‌ ನಿರ್ವಹಣೆಗಾಗಿ ಸರ್ಕಾರ ತಜ್ಞರ ತಂಡವನ್ನು ರಚಿಸುವ ಮುನ್ನವೇ ಪರಿಣಿತರ ತಂಡ  ರಚಿಸಿ ವೈದ್ಯಕೀಯ ಸೇವೆ

- ಬದರಿನಾಥ ವಿಠ್ಠಲ್‌ ಮತ್ತು ಇಂದಿರಾ ವಿಠ್ಠಲ್‌ ದಂಪತಿ; ಬಡಮಕ್ಕಳ ಶಿಕ್ಷಣಕ್ಕೆ ನೆರವು 

- ಅಮೀರ್ ಜಾನ್, ಆಂಬುಲೆನ್ಸ್ ಚಾಲಕ; ಕೋವಿಡ್‌ನಿಂದ ಮೃತಪಟ್ 350 ಮಂದಿಯ ಶವಸಂಸ್ಕಾರಕ್ಕೆ ನೆರವು

- ನಂಜಪ್ಪ, ಕೆಎಸ್‌ಆರ್‌ಟಿಸಿ ಚಾಲಕ;  ಲಾಕ್‌ಡೌನ್ ಸಂದರ್ಭದಲ್ಲಿ ಎರಡು ತಿಂಗಳು ಮನೆಗೇ ಹೋಗದೆ ಡಿಪೋನಲ್ಲೇ ಕರ್ತವ್ಯ ನಿರ್ವಹಣೆ 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು