ಗುರುವಾರ , ಫೆಬ್ರವರಿ 25, 2021
19 °C

ಪಿಟಿಸಿಎಲ್‌‌ ಕಾಯ್ದೆಗೆ ತಿದ್ದುಪಡಿ ಅಗತ್ಯ: ಶೈಲೇಂದ್ರ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು:‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಭೂ ಪರಭಾರೆ ನಿಷೇಧ ಕಾಯ್ದೆ (ಪಿಟಿಸಿಎಲ್) ಹಾಗೂ ಇನಾಂ ಜಮೀನುಗಳ ಮರು ಮಂಜೂರಾತಿ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಮರುಪರಿಶೀಲಿಸುವ ಬದಲಿಗೆ ಕಾಯ್ದೆಗೆ ತಿದ್ದುಪಡಿ ಮಾಡಬೇಕು’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶೈಲೇಂದ್ರ ಕುಮಾರ್ ಅಭಿಪ್ರಾಯಪಟ್ಟರು.

ಬೆಂಗಳೂರು ನಗರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಹಾಗೂ ಆದಿಜಾಂಬವ ಸಂಘದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ‘1978ರ ಪಿಟಿಸಿಎಲ್ ಕಾಯ್ದೆ ಮತ್ತು ಇನಾಂ ಜಮೀನುಗಳ ಮರು ಮಂಜೂರಾತಿ’ ಕುರಿತ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

ವಿಧಾನ ಪರಿಷತ್ ಸದಸ್ಯ ಧರ್ಮಸೇನ, ‘ತಳ ಸಮುದಾಯದವರು ಎಲ್ಲಿಯವರೆಗೆ ಕಾನೂನುಗಳ ಕುರಿತು ಜಾಗೃತರಾಗಿರುವುದಿಲ್ಲವೋ ಅಲ್ಲಿಯವರೆಗೂ ಪ್ರಮಾದಗಳು ತಪ್ಪದು. ಈ ಬಗ್ಗೆ ಜನಪ್ರತಿನಿಧಿಗಳನ್ನು ದೂಷಿಸುವುದು ಸರಿಯಲ್ಲ. ಚುನಾವಣೆ ಸಂದರ್ಭದಲ್ಲಿ ಕೊಂಚ ಎಚ್ಚರಿಕೆ ವಹಿಸಿದರೆ ನ್ಯಾಯ ದೊರೆಕಿಸಿಕೊಳ್ಳಲು ಸಾಧ್ಯ’ ಎಂದರು.

ವಕೀಲ ಪ್ರೊ.ಹರಿರಾಮ್, ‘ನ್ಯಾಯಾಲಯಗಳ ತೀರ್ಪು ಲೋಪದಿಂದ ಕೂಡಿದ್ದರೆ, ಅದರ ಪುನರ್ಪರಿಶೀಲನೆ ಕುರಿತು ಸರ್ಕಾರಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಪಿಟಿಸಿಎಲ್ ಕಾಯ್ದೆ ಕುರಿತ ತೀರ್ಪನ್ನು ಪ್ರಶ್ನಿಸಿ, ಮೇಲ್ಮನವಿ ಸಲ್ಲಿಸಲು ಸರ್ಕಾರಗಳು ಮುಂದೆ ಬರುವುದಿಲ್ಲ. ಸಲ್ಲಿಸಿದರೂ ಸೂಕ್ತ ನ್ಯಾಯ ದೊರಕುವ ಸಾಧ್ಯತೆ ಕಡಿಮೆ. ಹಾಗಾಗಿ, ತಿದ್ದುಪಡಿಯ ಅಗತ್ಯವಿದೆ. ಜನಪ್ರತಿನಿಧಿಗಳು ಶಾಸನ ಸಭೆಯಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ತಿದ್ದುಪಡಿ ತರುವುದು ಅನಿವಾರ್ಯ’ ಎಂದರು.

‘ಕಾಯ್ದೆ ತಿದ್ದುಪಡಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಾಜ್ಯದಾದ್ಯಂತ ಜ. 31ರಂದು ಭಾರತೀಯ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು’ ಎಂದು ಹೇಳಿದರು.

ಆದಿ ಜಾಂಬವ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಂಬೂದ್ವೀಪ ಸಿದ್ದರಾಜು,‘ದಲಿತರಿಗೆ ಮಂಜೂರಾಗಿ ಪರಭಾರೆಯಾಗಿರುವ ಜಮೀನುಗಳನ್ನು ಕಸಿದುಕೊಂಡವರಿಂದ ಬಿಡಿಸಿ ಕೊಡಬೇಕಾದ ಉಪವಿಭಾಗಾಧಿಕಾರಿಗಳು, ಮೂಲ ಮಂಜೂರುದಾರರ ವಿರುದ್ಧವೇ ತೀರ್ಪು ನೀಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಜಮೀನು ಖರೀದಿದಾರರು ಹಾಗೂ ಕಂದಾಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ನಮಗೆ ಪರಿಹಾರ ಒದಗಿಸಿ ಎಂದು ಒತ್ತಾಯಿಸಿ ನೊಂದ ಕುಟುಂಬಗಳು ಕಾರ್ಯಕ್ರಮದಲ್ಲಿ ಅಹವಾಲು ಸಲ್ಲಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.