ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುಪತಿಯಿಂದ ಆಕಸ್ಮಿಕವಾಗಿ ದೆಹಲಿಗೆ ಹೋಗಿದ್ದ ವೃದ್ಧೆ ಯೋಧನ ನೆರವಿನಿಂದ ಮನೆಗೆ

ತಿರುಪತಿಯಲ್ಲಿ ಊರವರ ಗುಂಪಿನಿಂದ ತಪ್ಪಿಸಿಕೊಂಡು ದೆಹಲಿಗೆ ತೆರಳಿದ್ದ ಶಿವಮ್ಮ ಪಾಟೀಲ
Last Updated 17 ಏಪ್ರಿಲ್ 2021, 12:45 IST
ಅಕ್ಷರ ಗಾತ್ರ

ಬಾಗಲಕೋಟೆ: ತಿರುಪತಿಯಿಂದ ಆಕಸ್ಮಿಕವಾಗಿ ರೈಲು ಹತ್ತಿ ದೆಹಲಿಗೆ ತೆರಳಿದ್ದ ಹುನಗುಂದ ತಾಲ್ಲೂಕಿನ ದಾಸಬಾಳ ಗ್ರಾಮದ ವೃದ್ಧೆ ಶಿವಮ್ಮ ಶೇಖರಗೌಡ ಪಾಟೀಲ (70) ಅವರನ್ನು ಅಲ್ಲಿನ ಕರ್ನಾಟಕದ ಯೋಧರೊಬ್ಬರ ಶನಿವಾರ ನಸುಕಿನಲ್ಲಿ ಸುರಕ್ಷಿತವಾಗಿ ಮನೆಗೆ ಕರೆತಂದು ಬಿಟ್ಟಿದ್ದಾರೆ.

ಯುಗಾದಿ ಪಾಡ್ಯಕ್ಕೆಂದು ದಾಸಬಾಳ ಗ್ರಾಮದ ಶಿವಮ್ಮ ಸೇರಿದಂತೆ ಊರಿನ 36 ಮಂದಿ ಮೂರು ಕ್ರೂಸರ್ ವಾಹನಗಳಲ್ಲಿ ಕಳೆದ ಏಪ್ರಿಲ್ 11ರಂದು ತಿರುಪತಿಗೆ ತೆರಳಿದ್ದರು. ಅಲ್ಲಿ ಕಾಲ್ನಡಿಗೆಯಲ್ಲಿ ಬೆಟ್ಟ ಏರುವಾಗ ಹನುಮಂತನ ಗುಡಿ ಸಮೀಪ ಶಿವಮ್ಮ ಗುಂಪಿನಿಂದ ಬೇರೆಯಾಗಿದ್ದರು.

ಜನಜಂಗುಳಿಯ ನಡುವೆ ಸಿಲುಕಿ ಜೊತೆಯವರಿಂದ ದೂರವಾದ ಅಜ್ಜಿ ತಿರುಪತಿ ರೈಲು ನಿಲ್ದಾಣಕ್ಕೆ ಬಂದಿದ್ದರು. ಪ್ರತಿ ಭಾನುವಾರ ತಿರುಪತಿ–ದೆಹಲಿ ನಡುವೆ ಸಂಚರಿಸುವ ವೀಕ್ಲಿ ಎಕ್ಸ್‌ಪ್ರೆಸ್ ರೈಲು ಹತ್ತಿ. ಏಪ್ರಿಲ್ 14ರಂದು ಬುಧವಾರ ರಾತ್ರಿ ದೆಹಲಿಯ ನಿಜಾಮುದ್ದೀನ್ ರೈಲು ನಿಲ್ದಾಣ ತಲುಪಿದ್ದಾರೆ.

ನೆರವಾದ ಇಳಕಲ್ ಸೀರೆ:

’ಭಾಷೆ ಬಾರದೇ ಸಂಕಷ್ಟಕ್ಕೆ ಸಿಲುಕಿ ರೈಲು ನಿಲ್ದಾಣದಲ್ಲಿ ಅಲೆದಾಡುತ್ತಿದ್ದ ನಮ್ಮ ಅಜ್ಜಿ ಶಿವಮ್ಮ ಅವರನ್ನು, ರಜೆ ನಿಮಿತ್ತ ಊರಿಗೆ ಹೊರಟು ನಿಂತಿದ್ದ ಗದುಗಿನ ನಿವಾಸಿ ಭಾರತೀಯ ಸೇನೆಯ ಯೋಧ ಮುದುಕುಯ್ಯ ಹಿರೇಮಠ ನೋಡಿದ್ದಾರೆ. ಆಕೆ ಉಟ್ಟಿದ್ದ ಇಳಕಲ್ ಸೀರೆಯಿಂದ ನಮ್ಮ ಭಾಗದವರೇ ಇರಬೇಕು ಎಂದು ಊಹಿಸಿ ಮಾತನಾಡಿಸಿದ್ದಾರೆ‘ ಎಂದು ಶಿವಮ್ಮ ಅವರ ಮೊಮ್ಮಗ ಶರಣಗೌಡ ಪಾಟೀಲ ’ಪ್ರಜಾವಾಣಿ‘ಗೆ ತಿಳಿಸಿದರು.

ಕನ್ನಡದಲ್ಲಿ ಮಾತಾಡಿಸುತ್ತಿದ್ದಂತೆಯೇ ಅಜ್ಜಿ ಊರಿನ ವಿವರ ನೀಡಿದ್ದಾರೆ. ಆಗ ರೈಲ್ವೆ ಪೊಲೀಸರ ನೆರವಿನಿಂದ ನಮ್ಮೂರಿನ ವಿಳಾಸ, ಕುಟುಂಬದ ಮೊಬೈಲ್ ಸಂಖ್ಯೆ ಪಡೆದ ಯೋಧ ಮುದುಕಯ್ಯ ಹಿರೇಮಠ ನಮ್ಮನ್ನು ಸಂಪರ್ಕಿಸಿದರು. ತಮ್ಮೊಂದಿಗೆ ಅಜ್ಜಿಯನ್ನು ಊರಿಗೆ ಕರೆತಂದು ಬಿಟ್ಟರು ಎಂದು ಶರಣಗೌಡ ಹೇಳಿದರು.

ಯೋಧ ಮುದುಕಪ್ಪ ಹಿರೇಮಠ ತುಮಕೂರಿನ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT