ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲೂ ಹಿರಿಯರು ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯಬೇಕು: ಲಹರ್‌ ಸಿಂಗ್

Last Updated 10 ನವೆಂಬರ್ 2022, 18:22 IST
ಅಕ್ಷರ ಗಾತ್ರ

ಬೆಂಗಳೂರು: ‘ಗುಜರಾತ್‌ನಲ್ಲಿ ಮಾಜಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಕೆಲವು ಮಾಜಿ ಮಂತ್ರಿಗಳು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ಕರ್ನಾಟಕದಲ್ಲೂ ಪಕ್ಷದ ಹಿರಿಯರು ಅದೇ ಮಾದರಿ ಅನುಸರಿಸಬೇಕು. ಯುವಕರಿಗೆ ಅವಕಾಶ ನೀಡ ಬೇಕು’ ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ಲಹರ್‌ ಸಿಂಗ್ ಸಿರೋಯಾ ಟ್ವೀಟ್‌ ಮಾಡಿದ್ದಾರೆ.

ಕರ್ನಾಟಕ ಬಿಜೆಪಿಯಲ್ಲಿ ಬಿ.ಎಸ್‌. ಯಡಿಯೂರಪ್ಪ, ಜಗದೀಶ ಶೆಟ್ಟರ್, ಡಿ.ವಿ. ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಕೆ.ಎಸ್. ಈಶ್ವರಪ್ಪ, ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಆರ್. ಅಶೋಕ, ಸಿ.ಎನ್. ಅಶ್ವತ್ಥನಾರಾಯಣ ಅವರು ಉಪ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.ಈಶ್ವರಪ್ಪ ಅವರನ್ನು ಮತ್ತೆ ಸಚಿವರನ್ನಾಗಿ ಮಾಡಬೇಕು ಎಂದು ಕುರುಬ ಸಮುದಾಯದ ಕೆಲವು ಮುಖಂಡರು ಬಿಜೆಪಿ ವರಿಷ್ಠರ ಮೇಲೆ ಒತ್ತಡ ಹೇರಿರುವ ಬೆನ್ನಲ್ಲೇ ಲಹರ್‌ಸಿಂಗ್ ಟ್ವೀಟ್‌ ಆ ಪಕ್ಷದಲ್ಲಿ ಚರ್ಚೆಗೆ ಕಾರಣವಾಗಿದೆ.

‘ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾಣಿ, ಮಾಜಿ ಉಪ ಮುಖ್ಯಮಂತ್ರಿ ನಿತಿನ್‌ಭಾಯ್‌ ಪಟೇಲ್‌, ಮಾಜಿ ಸಚಿವರಾದ ಭೂಪೇಂದ್ರ ಸಿನ್ಹಾ ಮತ್ತು ಪ್ರದೀಪ್‌ಸಿಂಗ್‌ ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಸ್ವಯಂ ತೀರ್ಮಾನ ತೆಗೆದುಕೊಂಡಿದ್ದಾರೆ. ಈ ತೀರ್ಮಾನ ಕರ್ನಾಟಕಕ್ಕೂ ಮಾದರಿಯಾಗಬೇಕು’ ಎಂದು ಲಹರ್ ಸಿಂಗ್‌ ಹೇಳಿದ್ದಾರೆ.

‘ಬಿಜೆಪಿ ಮಾತ್ರವಲ್ಲ ಎಲ್ಲ ರಾಜಕೀಯ ಪಕ್ಷಗಳಿಗೂ ಇಂತಹ ನಡೆ ಅತಿಮುಖ್ಯ. ರಾಜಕೀಯದಲ್ಲಿ ತಲೆಮಾರಿನ ಬದಲಾವಣೆಗಾಗಿ ಹಿರಿಯ ರಾಜಕಾರಣಿಗಳು ಯುವಪೀಳಿಗೆಗೆ ಅವಕಾಶ ಮಾಡಿಕೊಡುವುದರಿಂದ ಪ್ರಜಾತಂತ್ರ ಇನ್ನಷ್ಟು ಶಕ್ತಿಶಾಲಿಯಾಗಲಿದೆ. ಕರ್ನಾಟಕದಲ್ಲಿ ಇನ್ನು ಕೆಲವೇ ತಿಂಗಳುಗಳಲ್ಲಿ ಚುನಾವಣೆ ನಡೆಯಲಿದೆ. ಆದ್ದರಿಂದ, ಪಕ್ಷದ ಹಿರಿಯ ನಾಯಕರು ರಾಜ್ಯ ಮತ್ತು ದೇಶದ ಹಿತಾಸಕ್ತಿಯಿಂದ ಯುವ ಜನತೆಗೆ ದಾರಿ ಮಾಡಿಕೊಡಬೇಕು’ ಎಂದು ಮನವಿ ಮಾಡಿದ್ದಾರೆ.

‘ನಮ್ಮ ರಾಜ್ಯದ ಉದಾಹರಣೆ ತೆಗೆದುಕೊಂಡರೆ ಎಚ್‌.ಡಿ.ದೇವೇಗೌಡ ಅವರು 38 ನೇ ವಯಸ್ಸಿಗೇ ದೇವರಾಜ ಅರಸು ಎದುರು ವಿರೋಧಪಕ್ಷ ನಾಯಕರಾಗಿ ಕೆಲಸ ಮಾಡಿದ್ದನ್ನು ಸ್ಮರಿಸಬಹುದು. ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರು ಅತಿ ಚಿಕ್ಕ ವಯಸ್ಸಿನಲ್ಲೇ ಪಕ್ಷದ ಅಧ್ಯಕ್ಷರಾದರೆ, ದಿವಂಗತ ಅನಂತಕುಮಾರ್‌ ಚಿಕ್ಕ ಪ್ರಾಯದಲ್ಲೇ ಕೇಂದ್ರ ಸಚಿವರಾದ ಉದಾಹರಣೆ ನಮ್ಮ ಮುಂದೆ ಇದೆ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಪಕ್ಷದಲ್ಲಿ ಹಲವು ಬಾರಿ ಸಚಿವರಾದ ಹಿರಿತನ ಹೊಂದಿರುವ ನಾಯಕರು ಯುವಕರಿಗೆ ದಾರಿ ಮಾಡಿಕೊಡಬೇಕು. ಇಲ್ಲವಾದಲ್ಲಿ ಇದರ ಲಾಭವನ್ನು ಆಮ್‌ ಆದ್ಮಿ ‍ಪಾರ್ಟಿಯಂತಹ ಪಕ್ಷಗಳು ಪಡೆದುಕೊಳ್ಳಲಿವೆ’ ಎಂದು ಲಹರ್‌ ಸಿಂಗ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT