ಭಾನುವಾರ, ಏಪ್ರಿಲ್ 2, 2023
23 °C

ಮೊಟ್ಟೆ ಬದಲು ಚಿಕ್ಕಿ ಕೊಡಿ: ಮೊಟ್ಟೆ ಕೊಟ್ಟರೆ ತಾರತಮ್ಯ -ವರದಿಯಲ್ಲಿ ಉಲ್ಲೇಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಾಲೆಗಳಲ್ಲಿ ಮಧ್ಯಾಹ್ನದ ಊಟದ ಜೊತೆ ಮೊಟ್ಟೆ ನೀಡುವುದು ಮಕ್ಕಳ ಮಧ್ಯೆ ತಾರತಮ್ಯಕ್ಕೆ ಕಾರಣವಾಗುತ್ತದೆ. ಪೌಷ್ಟಿಕಾಂಶ ವಿತರಣೆಯಲ್ಲಿ ಅಸಮತೋಲನ ಸೃಷ್ಟಿಸುತ್ತದೆ ಎಂದು ರಾಷ್ಟ್ರೀಯ ಶಿಕ್ಷಣ ನೀತಿಯಡಿ ಆರೋಗ್ಯ ಮತ್ತು ಯೋಗಕ್ಷೇಮ ಕುರಿತು ಸಿದ್ಧಪಡಿಸಿದ ವರದಿಯಲ್ಲಿ (ಪೊಸಿಷನ್ ಪೇ‌ಪರ್‌) ಉಲ್ಲೇಖಿಸಲಾಗಿದೆ.

ಭಾರತೀಯರು ಸಣ್ಣ ಗಾತ್ರದ ದೇಹದಾರ್ಢ್ಯ ಹೊಂದಿದ್ದು, ಮೊಟ್ಟೆ, ಮಾಂಸದ ನಿರಂತರ ಸೇವನೆಯಿಂದ ಹೆಚ್ಚುವರಿ ಕೊಬ್ಬಿನಾಂಶವು ಸೇರಿಕೊಳ್ಳುತ್ತದೆ. ಇದರಿಂದ ಮಕ್ಕಳಲ್ಲಿ ಜೀವನಶೈಲಿಯ ಅಸ್ವಸ್ಥತೆಗಳಿಗೂ ಕಾರಣವಾಗುತ್ತದೆ ಎಂದು ನಿಮ್ಹಾನ್ಸ್‌ನ ‘ಮಕ್ಕಳ ಮತ್ತು ಹದಿಹರೆಯದವರ ಮನೋವೈದ್ಯಶಾಸ್ತ್ರ’ ವಿಭಾಗದ ಮುಖ್ಯಸ್ಥ ಜಾನ್ ವಿಜಯ್ ಸಾಗರ್‌ ನೇತೃತ್ವದ ತಜ್ಞರ ಸಮಿತಿ ತನ್ನ ಶಿಫಾರಸಿನಲ್ಲಿ ತಿಳಿಸಿದೆ. ಈ ವರದಿಯು ಎನ್‌ಸಿಇಆರ್‌ಟಿ ವೆಬ್‌ಸೈಟ್‌ನಲ್ಲಿ ಇದೆ.

ಅಲ್ಲದೇ, ಕೆಲವು ಮಕ್ಕಳಿಗೆ ಮೊಟ್ಟೆ, ಇನ್ನೂ ಕೆಲವರಿಗೆ ಬಾಳೆಹಣ್ಣು ನೀಡಿದರೆ ತಾರತಮ್ಯವಾಗುತ್ತದೆ. ಸ್ನೇಹಿತರ ಮಧ್ಯೆ ಭಾವನಾತ್ಮಕ ಬಾಂಧವ್ಯಕ್ಕೂ ಅಡ್ಡಿಯಾಗುತ್ತದೆ. ಶಾಲೆಯಲ್ಲಿ ಎಲ್ಲಾ ಮಕ್ಕಳನ್ನೂ ಸಮಾನವಾಗಿ, ತಾರತಮ್ಯವಿಲ್ಲದೆ ಪರಿಗಣಿಸುವುದು ಸೂಕ್ತ. ಇದು ಭಾರತೀಯ ಪರಂಪರೆ ಎಂದೂ ಹೇಳಿದೆ.

‘ವಿಶ್ವ ಸಂಸ್ಥೆಯ ಮಕ್ಕಳ ಒಡಂಬಡಿಕೆಗೆ ಸಹಿ ಹಾಕಿದ ನಂತರ ಮಕ್ಕಳ ಆರೋಗ್ಯ ಹಿತಾಸಕ್ತಿ ಕಾಪಾಡುವುದು ಸರ್ಕಾರಗಳ ಜವಾಬ್ದಾರಿ. ಶಾಲೆಗಳಲ್ಲಿ ನೀಡುವ ಆಹಾರವು ಮಕ್ಕಳ ಹಕ್ಕಿನ ಒಂದು ಭಾಗವಾಗಿರಬೇಕು. ಜಾತಿ, ಧರ್ಮದ ಆಧಾರದಲ್ಲಿ ಪರಿಗಣಿಸಬಾರದು. ಅಪೌಷ್ಟಿಕತೆ, ರಕ್ತ ಹೀನತೆಯಿಂದ ಬಳಲುವ ಶೇ 32ರಷ್ಟು ಮಕ್ಕಳಿಗೆ ಬೇಕಿರುವುದು ಅಗತ್ಯ ಪ್ರೋಟಿನ್‌. ಒಣ ಹಣ್ಣುಗಳು, ಮಾಂಸ ಪದಾರ್ಥಗಳಿಗೆ ಹೋಲಿಸಿದರೆ ಅತಿ ಕಡಿಮೆ ವೆಚ್ಚದಲ್ಲಿ ದೊರೆಯುವುದು ಮೊಟ್ಟೆ. ಶಾಲೆಗೆ ಕಡಿಮೆ ಮಕ್ಕಳು ಬಂದರೆ ಮರು ದಿನವೂ ಕೊಡಲು ಸಾಧ್ಯವಾಗುವ ಪ್ರೋಟಿನ್‌ ಯುಕ್ತ ಆಹಾರ. ಇಂತಹ ಆಹಾರ ನಿಷೇಧಿಸುವುದು ಸಲ್ಲದು’ ಎನ್ನುತ್ತಾರೆ ಶಿಕ್ಷಣ ತಜ್ಞ ವಿ.ಪಿ. ನಿರಂಜನರಾಧ್ಯ.

ಭಾಷಾ ನೀತಿ: ಸಿ.ಎಂಗೆ ದೂರು
ರಾಷ್ಟ್ರೀಯ ಶಿಕ್ಷಣ ನೀತಿಯಡಿ ಪ್ರಾಥಮಿಕ ಹಂತದ ಪಠ್ಯಕ್ರಮ ರೂಪಿಸಲು ಭಾಷಾ ಶಿಕ್ಷಣ ಕುರಿತು ಸಿದ್ದಪಡಿಸಿದ ವರದಿಗೆ ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ದೂರು ಸಲ್ಲಿಸಿದೆ.

ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಶಿಫಾರಸು ಮಾಡಲಾಗಿದೆ. ಬೋಧನಾ ಮಾಧ್ಯಮವು ಪೋಷಕರು ಮತ್ತು ಮಗುವಿನ ಆಯ್ಕೆಯಾಗಿದೆ ಎಂದು ಸುಪ್ರೀಂಕೋರ್ಟ್‌ ಸಾಂವಿಧಾನಿಕ ಪೀಠ ಹೇಳಿದೆ. ಇಂತಹ ಮಹತ್ವದ ತೀರ್ಪು ಅರ್ಥಮಾಡಿಕೊಳ್ಳುವಲ್ಲಿ ಸಮಿತಿ ವಿಫಲವಾಗಿದೆ. ಆದರೆ, ರಾಜ್ಯ ಸರ್ಕಾರ ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತದೆ. ಬಡವರು, ಹಿಂದುಳಿದವರು, ದುರ್ಬಲ ವರ್ಗಗಳನ್ನು ರಕ್ಷಿಸುತ್ತದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು