ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರಕ್ಕೆ ಜೊಲ್ಲೆ ‘ಅತಿಥಿ’ ಉಸ್ತುವಾರಿ ಸಚಿವರು

ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇರುವ ಆಸಕ್ತಿ ಜನರ ಸಮಸ್ಯೆ ಆಲಿಸಲು ಇಲ್ಲ
Last Updated 4 ಜೂನ್ 2022, 19:30 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ವಿಜಯನಗರದ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ ಅವರು ಜಿಲ್ಲೆಯ ‘ಅತಿಥಿ’ ಉಸ್ತುವಾರಿ ಸಚಿವರಾಗಿದ್ದಾರೆ ಎಂಬ ಮಾತುಗಳು ಜಿಲ್ಲೆಯಾದ್ಯಂತ ಕೇಳಿ ಬರುತ್ತಿವೆ.

ಅವರು ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಜನಸಾಮಾನ್ಯರು ‘ಅತಿಥಿ’ ಉಸ್ತುವಾರಿ ಸಚಿವೆ ಎಂದು ಕರೆಯುತ್ತಿರುವುದರಲ್ಲಿ ಯಾವುದೇ ರೀತಿಯ ತಪ್ಪಿಲ್ಲ ಅನಿಸುತ್ತದೆ. ಶಶಿಕಲಾ ಅವರ ಐದು ತಿಂಗಳ ಕಾರ್ಯಚಟುವಟಿಕೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಹೆಸರಿಗಷ್ಟೇ ಅವರು ಜಿಲ್ಲೆಯ ಉಸ್ತುವಾರಿ ಸಚಿವೆಯಾಗಿದ್ದಾರೆ ಎಂದು ಎಂತಹವರಿಗೂ ಅನಿಸದೇ ಇರದು.

ಈ ವರ್ಷದ ಜನವರಿಯಲ್ಲಿ ಶಶಿಕಲಾ ಅವರನ್ನು ವಿಜಯನಗರ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ನೇಮಕ ಮಾಡಲಾಗಿದೆ. ಈ ಐದು ತಿಂಗಳ ಅವಧಿಯಲ್ಲಿ ಅವರು ಜನಸಾಮಾನ್ಯರ ಅಹವಾಲು ಆಲಿಸಿದ್ದು ತೀರ ಕಡಿಮೆ. ಮೂರು ಸಲ ಪ್ರಗತಿ ಪರಿಶೀಲನೆ ಸಭೆ ನಡೆಸಿದ್ದಾರೆ. ಇದಕ್ಕಿಂತಲೂ ಹೆಚ್ಚಿನ ಸಮಯವನ್ನು ಬಿಜೆಪಿ ಪಕ್ಷದ ಸಭೆ, ಸಮಾರಂಭ ಹಾಗೂ ಆರ್‌ಎಸ್‌ಎಸ್‌ ಕಚೇರಿಯಲ್ಲಿ ನಡೆದ ಸಭೆಗಳಲ್ಲಿ ಕಳೆದಿದ್ದಾರೆ ಎಂಬ ಆರೋಪ ಇದೆ.

ಏಪ್ರಿಲ್‌ನಲ್ಲಿ ನಗರದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಂದರ್ಭದಲ್ಲಿ ಅವರು ನಾಲ್ಕೈದು ದಿನಗಳ ಕಾಲ ನಗರದಲ್ಲೇ ಠಿಕಾಣಿ ಹೂಡಿದ್ದರು. ಈ ಐದು ತಿಂಗಳ ಅವಧಿಯಲ್ಲಿ ಹೆಚ್ಚು ದಿನಗಳನ್ನು ಜಿಲ್ಲೆಯಲ್ಲಿ ಕಳೆದಿದ್ದು ಬಿಜೆಪಿ ಕಾರ್ಯಕ್ರಮಕ್ಕಾಗಿ. ಆದರೆ, ಜನಸಾಮಾನ್ಯರ ದೂರು, ದುಮ್ಮಾನ ಆಲಿಸಲು, ಜಿಲ್ಲೆಯ ಪ್ರಗತಿಗೆ ಸಂಬಂಧಿಸಿದಂತೆ ಅಲ್ಲ.

‘ಬೆಳಗಾವಿ ನನಗೆ ಗಂಡನ ಮನೆಯಾದರೆ, ವಿಜಯನಗರ ತವರು ಮನೆಯಿದ್ದಂತೆ’ ಎಂದು ಶಶಿಕಲಾ ಅವರು ಸಭೆ, ಸಮಾರಂಭಗಳಲ್ಲಿ ಹೇಳುತ್ತಾರೆ. ಆದರೆ, ಅದಕ್ಕೆ ತಕ್ಕಂತೆ ಅವರು ನಡೆದುಕೊಳ್ಳುತ್ತಿಲ್ಲ. ವಿಜಯನಗರ ಅವರ ಪಾಲಿಗೆ ಮಲತಾಯಿ ಇದ್ದಂತೆ. ಹೀಗಾಗಿಯೇ ಜಿಲ್ಲೆಯಿಂದ ದೂರ ಉಳಿದುಕೊಳ್ಳುತ್ತಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪ. ಇಷ್ಟೇ ಅಲ್ಲ, ಪ್ರತಿ ವಾರ ಜಿಲ್ಲೆಗೆ ಭೇಟಿ ನೀಡುವೆ ಎಂದೂ ಸಚಿವರು ಹೇಳಿದ್ದರು. ಆದರೆ, ಆ ಕೆಲಸವೂ ಪ್ರಾಮಾಣಿಕವಾಗಿ ಮಾಡುತ್ತಿಲ್ಲ ಎನ್ನುವುದು ಜನರ ದೂರು.

ಏ.30ರಂದು ನಗರದಲ್ಲಿ ಏರ್ಪಡಿಸಿದ್ದ ಆರೋಗ್ಯ ಮೇಳ, ಡಿಎಂಎಫ್‌ ಸಭೆಯಲ್ಲಿ ಶಶಿಕಲಾ ಅವರು ಪಾಲ್ಗೊಂಡಿದ್ದರು. ಅದಾದ ನಂತರ ಅವರು ಜಿಲ್ಲೆಯತ್ತ ಮುಖ ಮಾಡಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಹತ್ವದ ಕಾರ್ಯಕ್ರಮಗಳಿಗೆ ಗೈರಾಗಿದ್ದಾರೆ. ತಿಂಗಳಿಂದ ಜಿಲ್ಲೆಯ ಪ್ರಗತಿ ಪರಿಶೀಲನೆ ನಡೆದಿಲ್ಲ. ಹೀಗೆ ತಿಂಗಳಿಗೂ ಹೆಚ್ಚು ಕಾಲ ದೂರ ಇರುತ್ತಿರುವುದರಿಂದ ಅಧಿಕಾರಿಗಳ ಕಾರ್ಯವೈಖರಿಯನ್ನು ಯಾರೂ ಕೇಳುವವರು, ನೋಡುವವರು ಇಲ್ಲದಂತಾಗಿದೆ. ಎಲ್ಲವೂ ಜಿಲ್ಲಾಧಿಕಾರಿಗಳೇ ನೋಡಿಕೊಳ್ಳುವಂತಾಗಿದೆ.

ನಾಮಕಾವಸ್ತೆ ಕಚೇರಿ: ನಗರದ ಅಮರಾವತಿ ಜಿಲ್ಲಾಧಿಕಾರಿ ಕಚೇರಿಯ ನೆಲಮಹಡಿಯಲ್ಲಿ ಸಚಿವರಿಗಾಗಿ ಕಚೇರಿ ಕಾಯ್ದಿರಿಸಲಾಗಿದೆ. ಆದರೆ, ಅದು ನಾಮಕಾವಸ್ತೆ ಎಂಬಂತಾಗಿದೆ. ಒಮ್ಮೆಯೂ ಸಚಿವರು ಕಚೇರಿಯೊಳಗೆ ಕುಳಿತು, ಜನಸಾಮಾನ್ಯರ ಸಮಸ್ಯೆ ಆಲಿಸಿಲ್ಲ. ನಾಲ್ಕೈದು ದಿನಗಳ ಹಿಂದೆ ಕಚೇರಿಯಲ್ಲಿ ಆಪ್ತ ಸಹಾಯಕನನ್ನು ನೇಮಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಆದರೆ, ಸಾರ್ವಜನಿಕರಿಗೆ ಈ ವಿಷಯ ಗೊತ್ತೇ ಇಲ್ಲ. ಗೊತ್ತು ಪಡಿಸುವ ಕೆಲಸವೂ ಆಗಿಲ್ಲ.

‘ಪ್ರತಿ ವಾರ ಭೇಟಿ ಕೊಡುವೆ’

‘ಏ.30ರಂದು ನಗರದಲ್ಲಿ ಡಿಎಂಎಫ್‌ ಸಭೆ ನಡೆಸಿ, ಅಲ್ಲಿ ತೆಗೆದುಕೊಂಡ ನಿರ್ಣಯಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡಿದ್ದೆ. ಅನಂತರ ಚುನಾವಣೆಗಳು ಘೋಷಣೆಯಾದವು. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವಿಜಯನಗರದಲ್ಲಿ ಆಯೋಜಿಸಲಾಗಿದ್ದ ಕೆಲವೊಂದು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಲಿಲ್ಲ. ಆದರೆ, ಈಗಾಗಲೇ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಮ್ಮ ಕಚೇರಿಯನ್ನು ಪ್ರಾರಂಭಿಸಿ, ಆಪ್ತ ಸಹಾಯಕನನ್ನು ನೇಮಕ ಮಾಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾ ಸಾಹೇಬ್‌ ಜೊಲ್ಲೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

‘ಪ್ರತಿದಿನ ಜಿಲ್ಲೆಯ ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಜಿಲ್ಲೆಯ ಪ್ರಮುಖ ವಿಷಯಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುತ್ತೇನೆ. ಚುನಾವಣೆ ಮುಗಿದ ನಂತರ ಜಿಲ್ಲೆಯ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತೇನೆ. ಪ್ರತಿವಾರ ಜಿಲ್ಲೆ ಭೇಟಿ ನೀಡುತ್ತೇನೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT