ಭಾನುವಾರ, ಜುಲೈ 25, 2021
22 °C
ಎಸಿಬಿ ದಾಳಿಯಲ್ಲಿ ಎಸ್‌ಎಚ್‌ಡಿಪಿ ಸಿಪಿಒ ಆರ್‌.ಪಿ. ಕುಲಕರ್ಣಿ ಕರಾಮತ್ತು ಬಯಲು

ಅಕ್ರಮ ಗಳಿಕೆ ‘ಸಕ್ರಮ’ಕ್ಕೆ ನವೋದ್ಯಮದ ‘ಲಾಭ’!

ವಿ.ಎಸ್‌. ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಎಸ್‌ಎಚ್‌ಡಿಪಿ) ಮುಖ್ಯ ಯೋಜನಾಧಿಕಾರಿ (ಸಿಪಿಒ) ಹುದ್ದೆಯಲ್ಲಿರುವ ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್‌ ಆರ್‌.ಪಿ. ಕುಲಕರ್ಣಿ ಮಗನ ಹೆಸರಿನಲ್ಲಿ ಆರಂಭಿಸಿದ 13 ನವೋದ್ಯಮಗಳನ್ನು ಬಳಸಿಕೊಂಡು ತಮ್ಮ ಅಕ್ರಮ ಗಳಿಕೆಯನ್ನು ‘ಸಕ್ರಮ’ವಾಗಿ ಪರಿವರ್ತಿಸುತ್ತಿದ್ದರು ಎಂಬುದನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪತ್ತೆಮಾಡಿದೆ!

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಒಂಬತ್ತು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿರುವ ಎಸಿಬಿ, ರಾಜ್ಯದ 43 ಸ್ಥಳಗಳಲ್ಲಿ ಶುಕ್ರವಾರ ಶೋಧ ನಡೆಸಿತ್ತು. ಆರ್‌.ಪಿ. ಕುಲಕರ್ಣಿ ಪುತ್ರ ವಿಶಾಲ್‌ ಹೆಸರಿನಲ್ಲಿ ಕೆಲವೇ ವರ್ಷಗಳಿಂದ ಈಚೆಗೆ ಸಾಗಣೆ ವಹಿವಾಟಿಗೆ ಸಂಬಂಧಿಸಿದ 13 ನವೋದ್ಯಮಗಳನ್ನು ಆರಂಭಿಸಿ, ₹ 16 ಕೋಟಿ ಲಾಭದ ‘ಲೆಕ್ಕ’ ತೋರಿಸಿರುವ ದಾಖಲೆಗಳನ್ನು ತನಿಖಾ ತಂಡ ವಶಕ್ಕೆ ಪಡೆದಿದೆ.

ಗುತ್ತಿಗೆದಾರರೇ ಪಾಲುದಾರರು: ವಿಶಾಲ್‌ ಶಿಕ್ಷಣ ಮುಗಿಸಿ ಕೆಲವೇ ವರ್ಷಗಳಾಗಿವೆ. ಅವರ ಹೆಸರಿನಲ್ಲಿ ನಿರಂತರವಾಗಿ ಹೊಸ ಕಂಪನಿಗಳನ್ನು ಆರಂಭಿಸಲಾಗಿದೆ. ಈ ಎಲ್ಲ ಕಂಪನಿಗಳಿಗೂ ಲೋಕೋಪಯೋಗಿ, ಜಲ ಸಂಪನ್ಮೂಲ ಮತ್ತಿತರ ಇಲಾಖೆಗಳ ಕಾಮಗಾರಿಗಳನ್ನು ನಿರ್ವಹಿಸುವ ಪ್ರಥಮ ದರ್ಜೆ ಗುತ್ತಿಗೆದಾರರೇ ಪಾಲುದಾರರು ಎಂಬುದು ತನಿಖೆ ವೇಳೆ ಬಯಲಿಗೆ ಬಂದಿದೆ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಕುಲಕರ್ಣಿ ಮಗನ ಹೆಸರಿನಲ್ಲಿರುವ ನವೋದ್ಯಮಗಳು ಆರಂಭವಾದ ಕೆಲವೇ ತಿಂಗಳುಗಳಲ್ಲಿ ಹತ್ತಾರು ಕೋಟಿ ರೂಪಾಯಿ ವಹಿವಾಟು ನಡೆಸಿ, ಕೋಟ್ಯಂತರ ರೂಪಾಯಿ ಲಾಭ ಗಳಿಸಿವೆ ಎಂಬಂತೆ ದಾಖಲೆಗಳಲ್ಲಿ ತೋರಿಸಲಾಗಿದೆ. ಇವರ ಹೆಸರಿನಲ್ಲಿರುವ ಮಾಯಾದೇವಿ ಲಾಜಿಸ್ಟಿಕ್ಸ್‌ ಕಂಪನಿ ಹೆಸರಿನ ನವೋದ್ಯಮದ ಮೇಲೆ ದಾಳಿ ನಡೆಸಿದಾಗ ಹಲವು ದಾಖಲೆಗಳು ಲಭಿಸಿವೆ. ಹೆಚ್ಚಿನ ನವೋದ್ಯಮಗಳಲ್ಲಿ ಗುತ್ತಿಗೆದಾರರೇ ಪಾಲುದಾರರಾಗಿರುವುದು ಕಂಡುಬಂದಿದೆ’ ಎಂದು ಮೂಲಗಳು ಹೇಳಿವೆ.

ಎಸಿಬಿ ಬೆಂಗಳೂರು ನಗರ ಎಸ್‌ಪಿ ಯತೀಶ್‌ ಚಂದ್ರ ಜಿ.ಎಚ್‌. ನೇತೃತ್ವದ ತಂಡ ತನಿಖೆ ನಡೆಸುತ್ತಿದ್ದು, ಒಂದು ಮನೆ, ಐದು ಫ್ಲ್ಯಾಟ್‌, ಮೂರು ನಿವೇಶನ ಪತ್ತೆಯಾಗಿವೆ. ಬೆಂಗಳೂರಿನ ಜಯನಗರದ ಪಿಕಾಸೊ ಅಪಾರ್ಟ್‌ಮೆಂಟ್‌ನಲ್ಲಿ ₹ 4.5 ಕೋಟಿ ಮೌಲ್ಯದ ಫ್ಲ್ಯಾಟ್‌ ಖರೀದಿಗೆ ₹ 75 ಲಕ್ಷ ಮುಂಗಡ ನೀಡಿರುವ ದಾಖಲೆ ಸಿಕ್ಕಿದೆ. ಕುಲಕರ್ಣಿ, ಅವರ ಹೆಂಡತಿ ಮತ್ತು ಮಗನ ಬ್ಯಾಂಕ್‌ ಖಾತೆಗಳಲ್ಲಿ ₹ 2.15 ಕೋಟಿ ಠೇವಣಿ ಹಾಗೂ ಬ್ಯಾಂಕ್‌ನಲ್ಲಿ ₹ 2 ಕೋಟಿ ಹೂಡಿಕೆ ಪತ್ತೆಯಾಗಿದೆ ಎಂಬ ಮಾಹಿತಿ ಲಭಿಸಿದೆ.

ಡಿಸಿಎಫ್‌ ಬಳಿ ಮತ್ತಷ್ಟು ಆಸ್ತಿ ಪತ್ತೆ: ಮಂಡ್ಯ ಜಿಲ್ಲೆಯ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಟಿ. ವೆಂಕಟೇಶ್‌ ಬಳಿ ಮತ್ತಷ್ಟು ಆಸ್ತಿ ಪತ್ತೆಯಾಗಿದೆ. ಬೆಂಗಳೂರು ಮತ್ತು ಮೈಸೂರು ಜಿಲ್ಲೆಯ ವಿವಿಧೆಡೆ 20ಕ್ಕೂ ಹೆಚ್ಚು ನಿವೇಶನ ಖರೀದಿಸಿರುವ ದಾಖಲೆಯನ್ನು ಎಸಿಬಿ ದಕ್ಷಿಣ ವಲಯ ಎಸ್‌ಪಿ ಅರುಣಾಂಗ್ಷು ಗಿರಿ ನೇತೃತ್ವದ ತಂಡ ಪತ್ತೆಮಾಡಿದೆ. ಬೆಂಗಳೂರಿನ ಬ್ಯಾಂಕ್‌ನಲ್ಲಿದ್ದ ಲಾಕರ್‌ನಲ್ಲಿ 2 ಕೆ.ಜಿ. ಚಿನ್ನ ಮತ್ತು 8 ಕೆ.ಜಿ. ಬೆಳ್ಳಿ ಪತ್ತೆಯಾಗಿದೆ.

ತಂಗಿ ಹೆಸರಿನಲ್ಲಿ ಬೇನಾಮಿ ಆಸ್ತಿ: ವಿಜಯಪುರದಲ್ಲಿರುವ ಕೆಪಿಟಿಸಿಎಲ್‌ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸಿದ್ದರಾಮ ಮಲ್ಲಿಕಾರ್ಜುನ ಬಿರಾದಾರ, ತಮ್ಮ ತಂಗಿಯ ಹೆಸರಿನಲ್ಲಿ ಬೇನಾಮಿಯಾಗಿ ಸ್ಥಿರಾಸ್ತಿಗಳನ್ನು ಖರೀದಿಸಿರುವುದನ್ನು ಎಸಿಬಿ ಉತ್ತರ ವಲಯ ಎಸ್‌ಪಿ ನೇಮಗೌಡ ನೇತೃತ್ವದ ತಂಡ ಪತ್ತೆಮಾಡಿದೆ.

ಹಿಂದೆ ಹಾವೇರಿಯಲ್ಲಿದ್ದಾಗ ಲಂಚ ಪ್ರಕರಣದಲ್ಲಿ ಬಂಧಿತರಾಗಿದ್ದ ಸಿದ್ದರಾಮ, ನಂತರ ತಂಗಿ ಹೆಸರಿನಲ್ಲಿ ರಾಜ್ಯ ಹಾಗೂ ಮಹಾರಾಷ್ಟ್ರದಲ್ಲಿ ಆಸ್ತಿ ಖರೀದಿಸಿರುವ ದಾಖಲೆಗಳನ್ನು ತನಿಖಾ ತಂಡ ವಶಕ್ಕೆ ಪಡೆದಿದೆ. ಆರೋಪಿ ಅಧಿಕಾರಿ ಬಳಿ ₹ 1.5 ಕೋಟಿ ಮೌಲ್ಯದ ಮನೆ ಪತ್ತೆಯಾಗಿದೆ. ಆದರೆ, ದಾಖಲೆಯಲ್ಲಿ ₹ 80 ಲಕ್ಷ ಖರೀದಿ ಮೌಲ್ಯ ನಮೂದಿಸಲಾಗಿದೆ. ಉದ್ದೇಶಪೂರ್ವಕವಾಗಿ ಕಡಿಮೆ ಮೌಲ್ಯ ದಾಖಲಿಸಿರುವ ಸಂಶಯ ವ್ಯಕ್ತವಾಗಿದೆ.

ಹಣ, ದಾಖಲೆ ಹೊರಗೆಸೆದ ಅಧಿಕಾರಿ

ಎಸಿಬಿ ಬಳ್ಳಾರಿ ವಲಯದ ಎಸ್‌ಪಿ ಗುರುನಾಥ್‌ ಬಿ. ಮತ್ತೂರು ನೇತೃತ್ವದ ತನಿಖಾ ತಂಡ ಬಳ್ಳಾರಿಯ ಎಲೆಕ್ಟ್ರಿಕ್‌ ಇನ್‌ಸ್ಪೆಕ್ಟರ್‌ ಎ.ಎನ್‌. ವಿಜಯಕುಮಾರ್‌ ಮನೆಯ ಶೋಧಕ್ಕೆ ತೆರಳಿದ್ದಾಗ ಆರೋಪಿ ಅಧಿಕಾರಿ ಬಾಗಿಲು ತೆಗೆಯದೇ ಸತಾಯಿಸಿದ್ದರು. ₹ 3 ಲಕ್ಷ ನಗದು ಮತ್ತು ಆಸ್ತಿಯ ದಾಖಲೆಗಳಿದ್ದ ಚೀಲವನ್ನು ಮನೆಯಿಂದ ಹೊರಕ್ಕೆ ಎಸೆದು ತಪ್ಪಿಸಿಕೊಳ್ಳಲು ಯತ್ನಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಆರೋಪಿಗಳಿಗೂ ಮಾಸ್ಕ್‌, ಸ್ಯಾನಿಟೈಸರ್‌!

ಒಂಬತ್ತು ಅಧಿಕಾರಿಗಳ ಮೇಲೆ ದಾಳಿಗೆ ಎಸಿಬಿ ಹಲವು ದಿನಗಳ ಹಿಂದೆಯೇ ತಯಾರಿ ನಡೆಸಿತ್ತು. ಲಾಕ್‌ಡೌನ್‌ ಕಾರಣದಿಂದ ಕಾರ್ಯಾಚರಣೆ ವಿಳಂಬವಾಗಿತ್ತು.

ಶುಕ್ರವಾರ 43 ಸ್ಥಳಗಳಲ್ಲಿ ಶೋಧಕ್ಕೆ ಹೋಗುವಾಗ ಎಸಿಬಿ ಅಧಿಕಾರಿಗಳು ಕೋವಿಡ್‌ ನಿಯಂತ್ರಣ ಮುನ್ನೆಚ್ಚರಿಕೆ ಕ್ರಮವನ್ನೂ ಕೈಗೊಂಡಿದ್ದರು. ಆರೋಪಿತ ಅಧಿಕಾರಿಗಳು, ಅವರ ಕುಟುಂಬದ ಸದಸ್ಯರು ಮತ್ತು ನಿಕಟವರ್ತಿಗಳಿಗೂ ಮಾಸ್ಕ್‌, ಸ್ಯಾನಿಟೈಸರ್‌ ಕೊಂಡೊಯ್ದಿದ್ದರು ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು