ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಬಿಜೆಪಿ ರಾಜ್ಯಮಟ್ಟದ ಪ್ರ ಶಿಕ್ಷಣ ವರ್ಗಕ್ಕೆ ಚಾಲನೆ

ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಿದ್ಧತೆ: ಸಿಎಂ
Last Updated 25 ನವೆಂಬರ್ 2022, 13:25 IST
ಅಕ್ಷರ ಗಾತ್ರ

ಶಿವಮೊಗ್ಗ: ’ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಯಾವ ರೀತಿ ಹಾಗೂ ಹೇಗೆ ಜಾರಿ ಮಾಡಬೇಕು ಎಂಬುದರ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದೇವೆ‘ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹೊರವಲಯದ ಕಿಮ್ಮನೆ ಗಾಲ್ಫ್ ರೆಸಾರ್ಟ್‌ನಲ್ಲಿ ಶುಕ್ರವಾರ ಆರಂಭವಾದ ಬಿಜೆಪಿ ರಾಜ್ಯ ಪದಾಧಿಕಾರಿಗಳು ಹಾಗೂ ಕಾರ್ಯಕಾರಿಣಿ ಸಮಿತಿ ಸದಸ್ಯರಿಗೆ ಮೂರು ದಿನಗಳ ಪ್ರ ಶಿಕ್ಷಣ ವರ್ಗ ಉದ್ಘಾಟನೆ ಸಮಾರಂಭದಲ್ಲಿ ಅವರುಮಾತನಾಡಿದರು.

ಸಂವಿಧಾನದ ಮೂಲ ಪ್ರಸ್ತಾವನೆಯಲ್ಲಿ ಅಡಕವಾಗಿರುವ ಸಮಾನತೆ ಆಶಯ ಕಾರ್ಯರೂಪಕ್ಕೆ ತರಲು ದೀನದಯಾಳ ಉಪಾಧ್ಯ ಅವರ ಕಾಲದಿಂದಲೂ ನಾವು (ಬಿಜೆಪಿ) ಏಕರೂಪ ನಾಗರಿಕ ಸಂಹಿತೆ ಜಾರಿಯ ಅಗತ್ಯದ ಬಗ್ಗೆ ಹೇಳುತ್ತಾ ಬಂದಿದ್ದೇವೆ. ಅದರ ಬಗ್ಗೆ ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಈಗ ಚರ್ಚೆಗಳು ನಡೆಯುತ್ತಿವೆ. ಅದನ್ನು ರಾಜ್ಯದಲ್ಲಿ ಸಕಾಲಕ್ಕೆ ಜಾರಿ ಮಾಡಬೇಕು ಎಂಬ ಉದ್ದೇಶವಿದೆ. ಜನ ಕಲ್ಯಾಣಕ್ಕಾಗಿ ಸಮಾನತೆ ತರುವುದನ್ನು ಪ್ರತಿಪಾದಿಸುವುದು ಮಾತ್ರವಲ್ಲ ಅದನ್ನು ಆಚರಣೆಗೆ ತರಲು ನಾವು ದಿಟ್ಟ ಕ್ರಮ ಕೈಗೊಳ್ಳಲಿದ್ದೇವೆ ಎಂದು ಹೇಳಿದರು.

ಪಕ್ಷದ ಗಟ್ಟಿ ನಿಲುವು ಹಾಗೂ ಸಿದ್ಧಾಂತ ಜನರ ಸಮಸ್ಯೆಗಳಿಗೆ ಪರಿಹಾರ ಕೊಡಲಿದೆ. ಆ ನಿಟ್ಟಿನಲ್ಲಿ ರಾಜ್ಯದಲ್ಲಿರುವ ಎಲ್ಲ ಶ್ರದ್ಧಾ ಕೇಂದ್ರಗಳು ಹಾಗೂ ಮಂದಿರಗಳನ್ನು ಅವುಗಳ ಭಕ್ತರೇ ಮೇಲ್ವಿಚಾರಣೆ ಮಾಡಬೇಕು ಎಂಬುದು ನಮ್ಮ ಪ್ರಬಲ ನಂಬಿಕೆ. ಬರುವ ದಿನಗಳಲ್ಲಿ ಆ ರೀತಿಯ ವ್ಯವಸ್ಥೆ ಮಾಡಲು ಸಿದ್ಧತೆ ನಡೆಸಿದ್ದೇವೆ ಎಂದರು.

ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಚುನಾವಣೆಯ ಸಮರಕ್ಕೆ ಸಿದ್ಧರಾಗಿ ಎಂದು ಪಕ್ಷದ ಪದಾಧಿಕಾರಿಗಳಿಗೆ ಸೂಚನೆ ನೀಡಿದ ಬೊಮ್ಮಾಯಿ, ನಾವು ಮಾಡಿರುವ ಅಭಿವೃದ್ಧಿ ಕೆಲಸಗಳ ಪಟ್ಟಿ ಹಾಗೂ ಮುಂದೆ ಮಾಡಬೇಕಾದ ಕೆಲಸಗಳ ಪಟ್ಟಿ ಇಟ್ಟುಕೊಂಡು ಜನರ ಮುಂದೆ ಹೋಗಬೇಕಾದ ಕಾಲ ಈಗ ಬಂದಿದೆ. ಬೂತ್ ಹಾಗೂ ಮಂಡಳ ಮಟ್ಟದಲ್ಲಿ ಪಕ್ಷದ ಸಂಘಟನೆ ಚುರುಕುಗೊಳಿಸಿ ಎಂದು ಕಿವಿಮಾತು ಹೇಳಿದರು.

ಪ್ರಶಿಕ್ಷಣ ಪ್ರಕೋಷ್ಠ ರಾಜ್ಯ ಸಂಚಾಲಕ ಶ್ರೀಕಾಂತ ಕುಲಕರ್ಣಿ, ಸಹಸಂಚಾಲಕ ಆರ್.ಕೆ.ಸಿದ್ರಾಮಣ್ಣ, ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ನಿರ್ಮಲ್‌ಕುಮಾರ್ ಸುರಾನಾ, ಬಿ.ವೈ.ವಿಜಯೇಂದ್ರ, ಸಚಿವರಾದ ಆರಗ ಜ್ಞಾನೇಂದ್ರ, ಆರ್.ಅಶೋಕ್, ಬಿ.ಶ್ರೀರಾಮುಲು, ಶಾಸಕರಾದ ಜಗದೀಶ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ವಿಧಾನಪರಿಷತ್ ಸದಸ್ಯರಾದ ಎನ್‌.ರವಿಕುಮಾರ್, ಡಿ.ಎಸ್.ಅರುಣ್ ಪಾಲ್ಗೊಂಡಿದ್ದರು.

ದೇಣಿಗೆ, ನೌಕರರ ವಿವೇಚನೆಗೆ; ಸಿಎಂ

ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿ ಬಿಜೆಪಿಯ ಆದರ್ಶವಿದೆ. ಹೀಗಾಗಿ ವಯಸ್ಸಾದ ದನ–ಕರುಗಳ ಪಾಲನೆಗೆ ಪುಣ್ಯಕೋಟಿ ಯೋಜನೆ ಜಾರಿಗೊಳಿಸಿದ್ದೇವೆ. ಇದು ಪುಣ್ಯದ ಕೆಲಸ ಎಂದು ದೇಣಿಗೆ ನೀಡಲು ಸರ್ಕಾರಿ ನೌಕರರ ಸಂಘದವರು ಸ್ವಯಂಪ್ರೇರಿತವಾಗಿ ಮುಂದೆ ಬಂದಿದ್ದಾರೆ. ಅವರಿಗೆ ನಾವು ಒತ್ತಾಯ ಮಾಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ದೇಣಿಗೆ ನೀಡಲು ಇಷ್ಟವಿಲ್ದವರಿಗೆ ಬೇಡ ಎಂದು ಹೇಳಲು ಇದೇ ತಿಂಗಳು 25ರವರೆಗೆ ಆಯ್ಕೆ ನೀಡಿದ್ದೇವೆ. ಆದರೂ ಕಾಂಗ್ರೆಸ್‌ನವರು ಸರ್ಕಾರ ದಿವಾಳಿ ಆಗಿದೆ ಎಂದು ಟೀಕೆ ಮಾಡುತ್ತಿದ್ದಾರೆ. ಸರ್ಕಾರದ ಕೆಲಸದಲ್ಲಿ ಜನರನ್ನು ಸಹಭಾಗಿಗಳಾಗಿಸಿಕೊಳ್ಳುವ ಒಳ್ಳೆಯ ಕಾರ್ಯಕ್ಕೂ ಕಲ್ಲು ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತ್ತೆ 15 ಸಾವಿರ ಶಿಕ್ಷಕರ ನೇಮಕ: ಬೊಮ್ಮಾಯಿ

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು 15 ಸಾವಿರ ಶಿಕ್ಷಕರ ನೇಮಕಾತಿ ಪೂರ್ಣಗೊಂಡಿದೆ. ಮತ್ತೆ 15 ಸಾವಿರ ಶಿಕ್ಷಕರ ನೇಮಕಾತಿಗೆ ಪ್ರಕ್ರಿಯೆ ಶೀಘ್ರ ಆರಂಭಿಸಲಿದ್ದೇವೆ. ಡಾ.ಬಿ.ಆರ್‌.ಅಂಬೇಡ್ಕರ್‌ ಹೆಸರಲ್ಲಿ 100 ಹಾಗೂ ಕನಕದಾಸರ ಹೆಸರಿನಲ್ಲಿ 50 ಹಾಸ್ಟೆಲ್‌ಗಳನ್ನು ತೆರೆಯಲು ಸಿದ್ಧತೆ ನಡೆದಿದೆ. ಕಾರವಾರ, ರಾಯಚೂರು ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಶೀಘ್ರ ಅಡಿಗಲ್ಲು ಹಾಕಲಾಗುವುದು. 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತಲಾ ₹10 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಿದ್ದೇವೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ₹5000 ಕೋಟಿ ನೀಡಲಿದ್ದೇವೆ ಎಂದು ಸಿಎಂ ಹೇಳಿದರು.

ವಾಸ್ತವಿಕ ನೆಲೆಯಲ್ಲಿ ಸಿದ್ಧತೆ: ಬಿಎಸ್‌ವೈ

ಶಿಬಿರ ಉದ್ಘಾಟಿಸಿದ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ವಿಧಾನಸಭೆ ಚುನಾವಣೆ ಕೇವಲ ಐದಾರು ತಿಂಗಳು ಮಾತ್ರ ಇದೆ. ದಕ್ಷಿಣ ರಾಜ್ಯಗಳಲ್ಲಿ ಕರ್ನಾಟಕದಲ್ಲಿ ಮಾತ್ರ ನಮ್ಮ ಸರ್ಕಾರ ಇದ್ದು ಇದನ್ನು ಉಳಿಸಿಕೊಳ್ಳಬೇಕಿದೆ. ಹೀಗಾಗಿ ಚುನಾವಣೆ, ಸಂಘಟನೆ ದೃಷ್ಟಿಯಿಂದ ತಯಾರಿ ನಡೆಸಬೇಕಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಇನ್ನು ಹೆಚ್ಚುಹೆಚ್ಚು ಬಾರಿ ಕರ್ನಾಟಕಕ್ಕೆ ಬರಲಿದ್ದಾರೆ ಎಂದರು.

ಪರಿಶಿಷ್ಟ ಜಾತಿ, ಪಂಗಡ, ಮಹಿಳೆಯರು, ಯುವಕರ ಸಂಘಟನೆಯತ್ತ ಗಮನ ಕೊಡಿ. ವಾಸ್ತವಿಕವಾಗಿ ನಮ್ಮ (ಬಿಜೆಪಿ) ಸ್ಥಿತಿ ಏನಿದೆ. ಬೇರೆ ಪಕ್ಷಗಳ ಸ್ಥಿತಿ ಏನಿದೆ. ಇದನ್ನು ಅರ್ಥಮಾಡಿಕೊಂಡು ಮುಂದುವರಿದಾಗ ಗುರಿ ತಲುಪಲು ಸಾಧ್ಯವಿದೆ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT