ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಿಗುಡಿ ಪೂಜೆ: ಮುಸ್ಲಿಂ ವ್ಯಾಪಾರಿಗಳಿಗೆ ನಿರಾಕರಣೆ

ಕಾಪು ಪುರಸಭೆ ಮುಖ್ಯಾಧಿಕಾರಿಗೆ, ದೇವಸ್ಥಾನ ಆಡಳಿತ ಮಂಡಳಿಗೆ ಮನವಿ
Last Updated 18 ಮಾರ್ಚ್ 2022, 21:27 IST
ಅಕ್ಷರ ಗಾತ್ರ

ಕಾಪು (ಉಡುಪಿ ಜಿಲ್ಲೆ): ಕಾಪುವಿನ ಮೂರು ಮಾರಿಗುಡಿಗಳಲ್ಲಿ ಮಾ.22 ಹಾಗೂ 23ರಂದು ನಡೆಯುವ ಸುಗ್ಗಿ ಮಾರಿ ಪೂಜೆಯಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ಅಂಗಡಿಗಳನ್ನು ನೀಡಬಾರದು ಎಂದು ಹಿಂದೂ ಕಾರ್ಯಕರ್ತರು ಕಾಪು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಮಾಡಿದ್ದಾರೆ.

‘ಸುಗ್ಗಿ ಮಾರಿ ಪೂಜೆಯ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದವರಿಗೆ ಅಂಗಡಿ, ಸ್ಟಾಲ್‌ಗಳನ್ನು ಹಾಕಲು ಅವಕಾಶ ಕೊಟ್ಟರೆ ಮುಂದೆ ಎದುರಾಗುವ ತೊಂದರೆ ಹಾಗೂ ಅನಾಹುತಗಳಿಗೆ ನೀವೇ ಜವಾಬ್ದಾರರು’ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್‌ ನಾವಡ, ‘ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ಕೆಲವು ಹಿಂದೂ ಕಾರ್ಯಕರ್ತರು ಮನವಿ ನೀಡಿದ್ದಾರೆ. ಆದರೆ, ಸರ್ಕಾರದ ನೀತಿ ನಿಯಮಗಳು ಹಾಗೂ ಸಂವಿಧಾನಕ್ಕೆ ಬದ್ಧವಾಗಿ ನಡೆದುಕೊಳ್ಳಬೇಕಿದೆ. ಸುಗ್ಗಿ ಮಾರಿ ಪೂಜೆಯಲ್ಲಿ ನಿರ್ದಿಷ್ಟ ಸಮುದಾಯದವರಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂಬ ನಿಯಮವಿಲ್ಲ. ಯಾವುದೇ ಸಮಯದಾಯದವರು ವ್ಯಾಪಾರ ಮಾಡಬಹುದು. ವ್ಯಾಪಾರಿಗಳಿಂದ ಶುಚಿತ್ವ ಶುಲ್ಕ ಮಾತ್ರ ಪಡೆದು ಅನುಮತಿ ನೀಡಲಾಗುತ್ತಿದೆ. ಈ ವರ್ಷವೂ ಅದೇ ಪದ್ಧತಿ ಮುಂದುವರಿಸಲಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.

ಹಿಂದೂಗಳಿಗೆ ಮಾತ್ರ ಅನುಮತಿ:‘ಸುಗ್ಗಿ ಮಾರಿ ಪೂಜೆಯಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರ ಮಾಡಲು ಅವಕಾಶ ನೀಡಬೇಕು ಎಂದು ಹಿಂದೂ ಸಂಘಟನೆಗಳು ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿವೆ. ಇಲಾಖೆಯ ಕಾಯ್ದೆಯ ಪ್ರಕಾರ ದೇವಸ್ಥಾನಕ್ಕೆ ಸೇರಿದ ಕಟ್ಟಡ ಹಾಗೂ ನಿವೇಶನಗಳನ್ನು ಹಿಂದೂಗಳಲ್ಲದವರಿಗೆ ಗುತ್ತಿಗೆ ನೀಡುವಂತಿಲ್ಲ. ಅದರಂತೆ ಸುಗ್ಗಿ ಮಾರಿ ಜಾತ್ರೆಯಲ್ಲಿ ಕೇವಲ ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅಂಗಡಿಗಳನ್ನು ನೀಡಲು ದೇವಸ್ಥಾನದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ’ ಎಂದು ಕಾಪು ಹೊಸ ಮಾರಿಗುಡಿ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ: ಹೈಕೋರ್ಟ್‌ ತೀರ್ಪು ವಿರೋಧಿಸಿ ಮುಸ್ಲಿಂ ವರ್ತಕರು ಗುರುವಾರ ಅಂಗಡಿಗಳನ್ನು ಬಂದ್‌ ಮಾಡಿದ್ದರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಸಲಾಗುತ್ತಿದೆ ವ್ಯಾಪಾರ ಸ್ಥಗಿತಗೊಳಿಸಿ ದವರ ಜೊತೆ ವ್ಯವಹಾರ ಬೇಡ ಎಂಬ ಸಂದೇಶಗಳು ಹರಿದಾಡುತ್ತಿವೆ.

ಮಂಗಳೂರಿನಲ್ಲಿ ಗುರುವಾರ ಬಂದ್‌ ಆಗಿದ್ದ ವ್ಯಾಪಾರ ಕೇಂದ್ರಗಳ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ‘ಈ ಅಂಗಡಿಗಳಲ್ಲಿ ವ್ಯಾಪಾರ ನಡೆಸುವುದು ಬೇಡ’ ಎನ್ನುವ ಸಂದೇಶಗಳನ್ನು ಹಾಕಲಾಗುತ್ತಿದೆ.

ಶಿವಮೊಗ್ಗ ಮಾರಿಕಾಂಬಾ ಜಾತ್ರೆಗೂ ನಿರ್ಬಂಧ
ಶಿವಮೊಗ್ಗ
: ಹಲವು ದಶಕಗಳಿಂದ ಸೌಹಾರ್ದಕ್ಕೆ ಹೆಸರಾಗಿದ್ದ ಮಾರಿಕಾಂಬಾ ಜಾತ್ರೆಗೂ ಈ ಬಾರಿ ಕೋಮುದ್ವೇಷದ ಕರಿನೆರಳು ಆವರಿಸಿದ್ದು, ಜಾತ್ರೆಯಲ್ಲಿ ಮುಸ್ಲಿಮರು ಅಂಗಡಿ ಹಾಕುವುದನ್ನು ತಡೆಯುವಲ್ಲಿ ಬಿಜೆಪಿ ಹಾಗೂ ಬಜರಂಗದಳದ ಮುಖಂಡರು ಯಶಸ್ವಿಯಾಗಿದ್ದಾರೆ.

ಕೋಟೆ ರಸ್ತೆಯ ಮಾರಿಕಾಂಬಾ ದೇವಿಯ ಜಾತ್ರೆ ಮಾರ್ಚ್‌ 22ರಿಂದ ಆರಂಭವಾಗಲಿದೆ. ಈ ಬಾರಿಯ ಜಾತ್ರಾ ಮಹೋತ್ಸವದಲ್ಲಿ ಚಿನ್ನಯ್ಯ ಎಂಬುವವರು ಮಳಿಗೆಗಳ ವಿತರಣೆ, ನಿರ್ವಹಣೆಯ ಗುತ್ತಿಗೆ ಪಡೆದಿದ್ದರು. ಎರಡು ದಿನಗಳ ಹಿಂದೆ ಅವರ ಬಳಿ ತೆರಳಿದ್ದ ಬಿಜೆಪಿ, ಬಜರಂಗ ದಳದ ಮುಖಂಡರು ಮುಸ್ಲಿಮರಿಗೆ ಮಳಿಗೆ ಹಾಕಲು ಅವಕಾಶ ನೀಡದಂತೆ ತಾಕೀತು ಮಾಡಿದರು. ಇದರಿಂದ ಗುತ್ತಿಗೆದಾರ ಜವಾಬ್ದಾರಿಯಿಂದ ಹಿಂದೆ ಸರಿದರು. ಘಟನೆ ಬೆಳಕಿಗೆ ಬರುತ್ತಿದ್ದಂತೆ ಮಾರಿಕಾಂಬಾ ದೇವಸ್ಥಾನ ಸಮಿತಿಯ ಅಧ್ಯಕ್ಷ ಎಸ್‌.ಕೆ.ಮರಿಯಪ್ಪ ತುರ್ತು ಸಭೆ ನಡೆಸಿದರು. ಬಜರಂಗ ದಳದ ಜಿಲ್ಲಾ ಸಂಚಾಲಕ ದೀನ ದಯಾಳ್‌, ಪ್ರಸಾದ್‌, ಅರ್ಚಕ ರಾಜು,ಬಿಜೆಪಿ ಮುಖಂಡ ಎಸ್‌.ಎನ್‌. ಚನ್ನಬಸಪ್ಪ ಅವರ ಜೊತೆ ಚರ್ಚಿಸಿದರು.

ಈ ಸಮಯದಲ್ಲಿ ಮುಸ್ಲಿಮರಿಗೆ ಮಳಿಗೆ ಕೊಡಬಾರದು ಎಂದು ಪಟ್ಟು ಹಿಡಿದರು. ಜಾತ್ರೆಗೆ ಅಗತ್ಯವಾದ ಹಣ ಸಂಗ್ರಹಿಸಿ ಕೊಡುವ ಭರವಸೆಯನ್ನೂ ನೀಡಿದರು. ಆದರೆ, ದೇವಸ್ಥಾನ ಸಮಿತಿಯು ಪ್ರತಿವರ್ಷದ ಸಂಪ್ರದಾಯದಂತೆ ಎಲ್ಲರಿಗೂ ಅವಕಾಶ ನೀಡಬೇಕಿದೆ. ಟೆಂಡರ್‌ ಮೂಲಕವೇ ಹಣ ಸಂಗ್ರಹಿಸುವುದಾಗಿ ಪಟ್ಟು ಹಿಡಿಯಿತು. ಕೊನೆಗೆ ಟೆಂಡರ್ಹಣ ₹ 9 ಲಕ್ಷ ನೀಡಿ, ತಾವೇ ಮಳಿಗೆ ಹಂಚಿಕೆ ಮಾಡುವುದಾಗಿ ಬಜರಂಗದಳದ ಮುಖಂಡರು ಒಪ್ಪಿದರು. ಅದಕ್ಕೆ ದೇವಸ್ಥಾನ ಸಮಿತಿ ಸಮ್ಮತಿಸಿದೆ. ಸಭೆಯಲ್ಲಿ ಹಲವರು ‘ಜೈ ಶ್ರೀರಾಮ್‌’ ಘೋಷಣೆ ಕೂಗುತ್ತಿದ್ದಂತೆ, ಕೆಲವರು ‘ಜೈ ಮಾರಮ್ಮ’ ಘೋಷಣೆ ಮೊಳಗಿಸಿದರು.

*

ಟೆಂಡರ್‌ ಹಣ ಕಟ್ಟಲು ಬಜರಂಗದಳದ ಮುಖಂಡರು ಒಪ್ಪಿದ್ದಾರೆ. ಮಳಿಗೆಗಳನ್ನು ಯಾರಿಗೆ ಕೊಡಬೇಕು ಎನ್ನುವುದು ಅವರಿಗೇ ಬಿಟ್ಟ ವಿಷಯ.
-ಎನ್‌.ಮಂಜುನಾಥ್, ಕಾರ್ಯದರ್ಶಿ, ಮಾರಿಕಾಂಬಾ ದೇವಸ್ಥಾನ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT