ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿವಾರು ಸಭೆ ನಡೆಸಿ ಮುಖ್ಯಮಂತ್ರಿಯಿಂದ ಆಮಿಷ: ಡಿ.ಕೆ.ಶಿವಕುಮಾರ್‌ ಆರೋಪ

Last Updated 12 ಏಪ್ರಿಲ್ 2021, 11:50 IST
ಅಕ್ಷರ ಗಾತ್ರ

ಬೆಂಗಳೂರು: ‘ಮತ ಕ್ಷೇತ್ರಗಳಿಗೆ ತೆರಳಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಾತಿವಾರು ಸಭೆ ನಡೆಸುತ್ತಿದ್ದಾರೆ. ಅವರಿಗೆ ಸೋಲಿನ ಭೀತಿ ಎದುರಾಗಿದೆ. ಹೀಗಾಗಿ, ಆಮಿಷಗಳನ್ನು ಒಡ್ಡುತ್ತಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ವಿದ್ಯಾರ್ಥಿಗಳು, ಕಾರ್ಮಿಕರು, ಮಹಿಳೆಯರು, ರೈತರು, ವಿದ್ಯಾವಂತರು ಹೀಗೆ ಯಾವುದೇ ವರ್ಗಕ್ಕೆ ನೀಡಿದ ಭರವಸೆಗಳನ್ನು ಸರ್ಕಾರ ಈಡೇರಿಸಿಲ್ಲ. ಮತದಾರರು ರಾಜ್ಯದಲ್ಲಿ ರಾಜಕೀಯ ಬದಲಾವಣೆ ಬಯಸುತ್ತಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಜನ ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ ಉಪ ಚುನಾವಣೆ ನಡೆಯಲಿರುವ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲುವ ವಿಶ್ವಾಸವಿದೆ’ ಎಂದರು.

‘ರಾಜ್ಯದಲ್ಲಿ ಆಡಳಿತ ಕುಸಿದು ಹೋಗಿದೆ. ಈ ವರ್ಷ ನಡೆದಷ್ಟು ಪ್ರತಿಭಟನೆ, ಮುಷ್ಕರ ಎಂದೂ ನಡೆದಿಲ್ಲ. ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಎಲ್ಲ ವರ್ಗದವರಿಗೆ ಸಮಸ್ಯೆ ತಂದಿಟ್ಟಿದೆ. ಉಪಚುನಾವಣೆ ನಡೆಯಲಿರುವ ಮೂರೂ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಬಂದಿದ್ದೇನೆ. ಎಲ್ಲ ಕಡೆ ಈ ರಾಜ್ಯದಲ್ಲಿ ಬದಲಾವಣೆ ತರಬೇಕು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಸರ್ಕಾರದ ಬಗ್ಗೆ ಸಿಟ್ಟಿದೆ. ಈ ಚುನಾವಣೆಗಳಲ್ಲಿ ಪಕ್ಷದ ಪರ ಜನರು ಅಪಾರ ಪ್ರೀತಿ, ಅಭಿಮಾನ ತೋರಿಸಿದ್ದಾರೆ’ ಎಂದರು.

‘ಸಾರಿಗೆ ವ್ಯವಸ್ಥೆ ಸರ್ಕಾರದ ಸೇವಾ ವ್ಯವಸ್ಥೆಗಳು. ಅವು ಆದಾಯ ತಂದುಕೊಡುವ ವಿಭಾಗವಲ್ಲ. ಮುಷ್ಕರನಿರತ ಸಾರಿಗೆ ನೌಕರರನ್ನು ಕರೆದು ಚರ್ಚಿಸಬೇಕು. ಅವರ ನೋವು ಕೇಳಿ, ಸಮಸ್ಯೆ ಬಗೆಹರಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ನಾವು ಖಾಸಗೀಕರಣ ತಡೆದಿದ್ದೆವು. ಆದರೆ, ಈಗ ಮತ್ತೆ ಖಾಸಗೀಕರಣ ಮಾಡುವ ಒಳಸಂಚು ನಡೆದಿರುವ ಅನುಮಾನವಿದೆ’ ಎಂದರು.

‘ಎನ್‌ಡಿಎ ಅಧಿಕಾರಕ್ಕೆ ಬಂದ ನಂತರ ಒಂದೊಂದೇ ಸಂಸ್ಥೆಯನ್ನು ಖಾಸಗೀಕರಣ ಮಾಡಲು ಆರಂಭಿಸಿದೆ. ರಾಜ್ಯದ ವಿವಿಧ ನಗರಗಳಲ್ಲಿ ನೀರು ಪೂರೈಕೆಯನ್ನು ಖಾಸಗಿಯವರಿಗೆ ವಹಿಸಲಾಗುತ್ತಿದೆ. ನಾವು ಅದನ್ನು ವಿರೋಧಿಸುತ್ತೇವೆ. ಸಾರಿಗೆ ಖಾಸಗೀಕರಣ ಒಳ್ಳೆಯದಲ್ಲ. ಜನರ ಅನುಕೂಲ ನೋಡಿಕೊಳ್ಳಿ. ಹಬ್ಬದ ಸಂದರ್ಭ ಜನ ಊರುಗಳಿಗೆ ತೆರಳಬೇಕು. ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಿ. ಸಾರಿಗೆ ಸಿಬ್ಬಂದಿಗೆ ಬಾಕಿ ಇರುವ ವೇತನ ನೀಡಿ. ಒಂದೆರಡು ದಿನದಲ್ಲಿ ಮಾತುಕತೆ ನಡೆಸಿ’ ಎಂದು ಸರ್ಕಾರಕ್ಕೆ ಅವರು ಸಲಹೆ ನೀಡಿದರು.

‘ಇಂಥ ಕೆಟ್ಟ ಸರ್ಕಾರ ನಾನು ನೋಡಿಲ್ಲ. ಬೆಳಗಾವಿಯಲ್ಲಿ ಅಧಿವೇಶನ ಮಾಡಿಲ್ಲ. ಈಗ ಮತ್ತೆ ಕೊರೊನಾ ಆತಂಕ ಆರಂಭವಾಗಿದೆ. ಲಸಿಕೆ ಪಡೆದವರಿಗೂ ಕೊರೊನಾ ಬರುತ್ತಿದೆ. ಅಂತರ ಪಾಲನೆ ಆಗುತ್ತಿಲ್ಲ. ರಾತ್ರಿ ಮಾತ್ರ ಕೊರೊನಾ ಹರಡುತ್ತದೆಯೇ? ಚಿತ್ರರಂಗ, ಜಿಮ್ ಸಮಸ್ಯೆಗೆ ಒಳಗಾಗಿದೆ. ಬೆಲೆ ಹೆಚ್ಚಳ ಮಿತಿ ಮೀರಿದೆ. ರಸಗೊಬ್ಬರಗಳ ದರ ಹೆಚ್ಚಾಗಿದೆ. ಪ್ರಧಾನಿ, ಮುಖ್ಯಮಂತ್ರಿ, ಸಂಸದರು ಏನೂ ಮಾತನಾಡುತ್ತಿಲ್ಲ. ರೈತರ ಬದುಕಿಗೆ ತೊಂದರೆ ಆಗುತ್ತಿದೆ. ರೈತರಿಗೆ ನೀಡಿದ ಪರಿಹಾರ, ಸೌಕರ್ಯದ ಪಟ್ಟಿ ಕೊಡಿ. ಯಾರಿಗೆ ಸಹಾಯ ಮಾಡಿದ್ದೀರಾ ಎಂಬ ಬಗ್ಗೆ ಜಾಹೀರಾತು ನೀಡಿ ತಿಳಿಸಿ’ ಎಂದು ಆಗ್ರಹಿಸಿದ ಶಿವಕುಮಾರ್‌,‘ನೀವು (ಸರ್ಕಾರ) ಜನರನ್ನು ಹಿಂಡುತ್ತಿದ್ದೀರಿ’ ಎಂದು ಬೇಸರ ವ್ಯಕ್ತಪಡಿಸಿದರು.

‘ಹೋರಾಟಗಾರರ ಪರವಾಗಿ ಕಾಂಗ್ರೆಸ್ ಪಕ್ಷ ಇರಲಿದೆ. ಸರ್ಕಾರದ ವೈಫಲ್ಯ, ದುರಾಡಳಿತ ವಿರುದ್ಧ ದನಿಯಾಗಿ ಉಪಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ ನೀಡಿ ಕಾಂಗ್ರೆಸ್ ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡುತ್ತೇನೆ. ಬಿಜೆಪಿಪರ ಪ್ರಚಾರಕ್ಕೆ ಬರುವವರಿಗೆ ಮಸ್ಕಿಯಲ್ಲಿ ತಲಾ ₹ 300 ಹಂಚುವುದು ದೃಢಪಟ್ಟಿದೆ. ಹೀಗಾಗಿ, ಬಿಜೆಪಿ ಅಭ್ಯರ್ಥಿಯನ್ನು ಸ್ಪರ್ಧೆಯಿಂದ ಅನರ್ಹಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT