ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜರಂಗದಳ ಕಾರ್ಯಕರ್ತನ ಕೊಲೆ ಪ್ರಕರಣ: ಎನ್‌ಐಎ ತನಿಖೆಗೆ ಶೋಭಾ, ರವಿ ಆಗ್ರಹ

Last Updated 21 ಫೆಬ್ರುವರಿ 2022, 16:11 IST
ಅಕ್ಷರ ಗಾತ್ರ

ಬೆಂಗಳೂರು: ಶಿವಮೊಗ್ಗದಲ್ಲಿ ನಡೆದಿರುವ ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸುವಂತೆ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಶೋಭಾ, ‘ಹರ್ಷ ಕೊಲೆಯ ಹಿಂದೆ ಭಾರಿ ಷಡ್ಯಂತ್ರಗಳಿರುವುದು ಕಂಡುಬರುತ್ತಿದೆ. ಹಿಂದುತ್ವ ಪರ ಸಂಘಟನೆಗಳಲ್ಲಿ ಗುರುತಿಸಿಕೊಂಡವರನ್ನು ಹತ್ಯೆ ಮಾಡುವುದು ಹಿಂದೆಯೂ ನಡೆದಿದೆ. ಬೆಂಗಳೂರಿನ ರುದ್ರೇಶ್‌ ಕೊಲೆಯನ್ನು ಪಿಎಫ್‌ಐ ಸದಸ್ಯರು ಮಾಡಿರುವುದು ಸಾಬೀತಾಗಿದೆ. ಹರ್ಷ ಕೊಲೆಯ ಹಿಂದಿರುವ ಪಿತೂರಿಯನ್ನು ಪತ್ತಹೆಚ್ಚಲು ತನಿಖೆಯನ್ನು ಎನ್‌ಐಎಗೆ ವರ್ಗಾಯಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಇದೇ ಪ್ರಕರಣ ಕುರಿತು ಟ್ವೀಟ್‌ ಮಾಡಿರುವ ರವಿ, ‘ಹರ್ಷ ಕೊಲೆಯ ಹಿಂದೆ ಬಲವಾದ ಸಂಚು ನಡೆದಿರುವ ಅನುಮಾನವಿದೆ. ಸರ್ಕಾರವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಉನ್ನತಮಟ್ಟದ ತನಿಖೆ ನಡೆಸಬೇಕು. ಅಗತ್ಯವಿದ್ದಲ್ಲಿ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಎಸ್‌ಡಿಪಿಐ, ಪಿಎಫ್‌ಐ ನಿಷೇಧಿಸಿ’

‘ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯ ಹಿಂದೆ ಎಸ್‌ಡಿಪಿಐ ಮತ್ತು ಪಿಎಫ್‌ಐ ಸದಸ್ಯರಿದ್ದಾರೆ. ಈ ಎರಡೂ ಸಂಘಟನೆಗಳನ್ನು ನಿಷೇಧಿಸಬೇಕು’ ಎಂದು ವಿಶ್ವ ಹಿಂದೂ ಪರಿಷತ್‌ ಆಗ್ರಹಿಸಿದೆ.

‘ಎಸ್‌ಡಿಪಿಐ ಮತ್ತು ಪಿಎಫ್‌ಐ ಸದಸ್ಯರುಬ ಹಲವು ವರ್ಷಗಳಿಂದ ನಿರಂತರವಾಗಿ ಹಿಂದೂಗಳ ಮಾರಣಹೋಮ ಮಾಡುತ್ತಿದ್ದಾರೆ. ಕೇರಳದಿಂದ ಬಂದು ಕರ್ನಾಟಕದಲ್ಲಿ ಹತ್ಯೆಗಳನ್ನು ಮಾಡುತ್ತಿದ್ದಾರೆ’ ಎಂದು ವಿಶ್ವ ಹಿಂದೂ ಪರಿಷತ್‌ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಬಜರಂಗದಳದ ತುಮಕೂರು ಜಿಲ್ಲಾ ಸಂಯೋಜಕ ಮಂಜು ಭಾರ್ಗವ ಮೇಲೆ ಹಲ್ಲೆ ನಡೆಸಿದ್ದರು. ಶಿವಮೊಗ್ಗದಲ್ಲೂ ನಾಗೇಶ್‌ ಎನ್ನುವವರ ಮೇಲೆ ಹಲ್ಲೆ ಮಾಡಿದ್ದರು. ಪ್ರಶಾಂತ ಪೂಜಾರಿ, ಮಡಿಕೇರಿಯ ವಿಶ್ವ ಹಿಂದೂ ಪರಿಷತ್‌ ಮುಖಂಡ ಕುಟ್ಟಪ್ಪ, ಬೆಂಗಳೂರಿನ ರುದ್ರೇಶ್‌ ಹೀಗೆ ಹಲವರನ್ನು ಇದೇ ಸಂಘಟನೆಗಳ ಸದಸ್ಯರು ಹತ್ಯೆ ಮಾಡಿದ್ದಾರೆ. ಈಗ ಹರ್ಷ ಕೊಲೆಯಲ್ಲೂ ಅವರ ಕೈವಾಡವಿದೆ ಎಂದು ಹೇಳಿದ್ದಾರೆ.

ಎಸ್‌ಡಿಪಿಐ ಮತ್ತು ಪಿಎಫ್‌ಐ ನಿಷೇಧಿಸಲು ತಕ್ಷಣ ಕ್ರಮ ಜರುಗಿಸಬೇಕು. ಪ್ರಕರಣದ ತನಿಖೆಯನ್ನು ಎನ್‌ಐಎಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT