ಸೋಮವಾರ, ಆಗಸ್ಟ್ 15, 2022
27 °C

ನುಡಿನಮನ: ‘ಕನ್ನಡ ಸಾಹಿತ್ಯಕ್ಕೆ ಹೊಸ ಕಣ್ಣು ನೀಡಿದ್ದ ಕವಿ ಸಿದ್ದಲಿಂಗಯ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕವಿ ಡಾ.ಸಿದ್ದಲಿಂಗಯ್ಯ

ಬೆಂಗಳೂರು: ‘ಸಿದ್ದಲಿಂಗಯ್ಯ ಕನ್ನಡ ಸಾಹಿತ್ಯಕ್ಕೆ ಹೊಸ ಕಣ್ಣು ನೀಡಿದ್ದ ಕವಿ. ಅವರ ಹಾಡುಗಳು ದಲಿತ ಸಂಘರ್ಷ ಸಮಿತಿಯ ಪ್ರಾರ್ಥನಾ ಗೀತೆಗಳಾಗಿದ್ದವು. ಅವರ ಕಾವ್ಯ ಒಂದು ಸಮುದಾಯವನ್ನೇ ಬದಲಿಸಿತ್ತು’ ಎಂದು ರಾಜ್ಯಸಭಾ ಸದಸ್ಯ ಎಲ್‌.ಹನುಮಂತಯ್ಯ ತಿಳಿಸಿದರು.‌‌‌

ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆ ಆನ್‌ಲೈನ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಸಿದ್ದಲಿಂಗಯ್ಯ–ನುಡಿನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಿದ್ದಲಿಂಗಯ್ಯನವರ ಬರವಣಿಗೆಯಲ್ಲಿ ಹೊಸತನವಿತ್ತು. ಬಂಡಾಯ ಸಾಹಿತ್ಯದ ಹುಟ್ಟಿಗೆ ಕಾರಣರಾದವರಲ್ಲಿ ಅವರು ಕೂಡ ಒಬ್ಬರು. ರಾಮಕೃಷ್ಣ ಹೆಗಡೆ ಅವರೇ ಅವರ ಅಭಿಮಾನಿಯಾಗಿದ್ದರು’ ಎಂದರು.

ಸಾಹಿತಿ ಬರಗೂರು ರಾಮಚಂದ್ರಪ್ಪ ‘ದಲಿತ ಮತ್ತು ಬಂಡಾಯ ಸಾಹಿತ್ಯ ಚಳವಳಿಗಳಿಗೆ ಸಿದ್ದಲಿಂಗಯ್ಯನವರ ಕೊಡುಗೆ ಅಪಾರ. ಅವರ ಗೀತೆಗಳಲ್ಲಿ ಹೋರಾಟದ ಶಕ್ತಿ ಇತ್ತು. ಎಡಶಕ್ತಿಗಳ ಪ್ರತಿರೋಧ ಎದುರಿಸಿದ್ದ ಅವರು ಹಾಸ್ಯ ಪ್ರಜ್ಞೆ ಮೈಗೂಡಿಸಿಕೊಂಡಿದ್ದರು. ಅವರು ಸದಾ ಅಮರ’ ಎಂದು ತಿಳಿಸಿದರು.  

ಸಾಹಿತಿ ಬಸವರಾಜ ಸಬರದ ‘ಸಿದ್ದಲಿಂಗಯ್ಯ ಜನಸಮುದಾಯವನ್ನು ಸೆಳೆದ ಮಾಂತ್ರಿಕ. ನಾಲ್ಕು ದಶಕಗಳಿಂದ ಬಂಡಾಯ ಸಂಘಟನೆಯೊಂದಿಗೆ ಒಡನಾಟ ಹೊಂದಿದ್ದ ಅವರು ಬಳಿಕ ದೂರ ಉಳಿದಿದ್ದರು. ಬಂಡಾಯಕ್ಕೆ ಹೊಸ ಆಯಾಮ ನೀಡಿದ್ದರು’ ಎಂದು ಸ್ಮರಿಸಿದರು. 

ಕವಯತ್ರಿ ಕೆ.ಶರೀಫಾ ‘ಸಿದ್ದಲಿಂಗಯ್ಯ ಜೊತೆಗಿನ ಒಡನಾಟದ ನೆನಪುಗಳು ಎಂದಿಗೂ ಮಾಸುವುದಿಲ್ಲ. ಅವರ ಬೌದ್ಧಿಕ ಚಿಂತನೆಗಳಲ್ಲಿ ನವಿರಾದ ಹಾಸ್ಯ ಅಡಗಿರುತ್ತಿತ್ತು. ಸಿದ್ದಲಿಂಗಯ್ಯ ಅಂಬೇಡ್ಕರ್‌ ಹಾಗೂ ಮಾರ್ಕ್ಸ್‌ವಾದಿಯಾಗಿ ಅನೇಕ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಅವರು ಸಂಘಟನಾ ಶಕ್ತಿಯಾಗಿದ್ದರು. ತಳಮಟ್ಟದ ಜನರ ಒಡನಾಡಿಯಾಗಿ ಕನ್ನಡಕ್ಕೆ ಹೊಸ ಪರಿಭಾಷೆಯ ಕಾವ್ಯಗಳನ್ನು ನೀಡಿದರು. ಅವರ ಕವಿತೆಗಳು ಜನರನ್ನು ಆಯಷ್ಕಾಂತದಂತೆ ಸೆಳೆದವು’ ಎಂದು ತಿಳಿಸಿದರು.

ವಿಮರ್ಶಕ ರಾಜಪ್ಪ ದಳವಾಯಿ ‘ಜೀವಿತಾವಧಿಯಲ್ಲಿ ಮರೆಯಲಾರದ ಹಾಡುಗಳನ್ನು ಅವರು ನೀಡಿದ್ದರು. ದ.ಸಂ.ಸ ಹಾಗೂ ಬಂಡಾಯ ಸಾಹಿತ್ಯದ ಸಂಗಾತಿಯಾಗಿ, ನಿಜವಾದ ಜನಕವಿಯಾಗಿದ್ದರು. ರಂಗಭೂಮಿಗೆ ಅಪೂರ್ವ ಕೊಡುಗೆ ನೀಡಿದ್ದರು. ಅವರು ಸಾಂಸ್ಕೃತಿಕ ಲೋಕವನ್ನು ವ್ಯಾಪಿಸಿಕೊಂಡ ಶಕ್ತಿ. ಅಲಕ್ಷಿತರ ಪ್ರತಿನಿಧಿಯಾಗಿ ಸಾಂಸ್ಕೃತಿಕ ಲೋಕದಲ್ಲಿ ಹೆಜ್ಜೆಗುರುತು ಮೂಡಿಸಿದ್ದರು. ವಿನಯದ ಪ್ರತಿರೂಪದಂತಿದ್ದರು’ ಎಂದರು. 

ಬಂಡಾಯ ಸಾಹಿತಿ ಯಲ್ಲಪ್ಪ ಹಿಮ್ಮಡಿ ‘ಸಾಹಿತ್ಯವು ಸಮಾಜವನ್ನು ಬದಲಿಸುತ್ತದೆ ಎಂಬುದಕ್ಕೆ ಸಿದ್ದಲಿಂಗಯ್ಯ ಸಾಕ್ಷಿಯಂತಿದ್ದರು. ಅವರ ಹಾಡುಗಳಿಂದ ಪ್ರಭಾವಿತಗೊಂಡ ಅನೇಕರು ಅಂಬೇಡ್ಕರ್‌ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು