ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ | ಜಿಲ್ಲಾಧಿಕಾರಿಗಳಿಂದ ಮಾಹಿತಿ: ಅವಕಾಶ ಕಲ್ಪಿಸುವಂತೆ ಸಿದ್ದರಾಮಯ್ಯ ಮನವಿ

Last Updated 10 ಜೂನ್ 2021, 8:47 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊರೊನಾ ವಿಚಾರದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಸೂಚಿಸಬೇಕು’ ಎಂದು ಆಗ್ರಹಿಸಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದು ಮನವಿ ಮಾಡಿದ್ದಾರೆ.

‘ಕೊರೊನಾ ಸಾಂಕ್ರಾಮಿಕ ನಿಭಾಯಿಸಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತು ಝೂಮ್ ತಂತ್ರಾಂಶದ ಮೂಲಕ ಮಾಹಿತಿ ಪಡೆಯಲು ಉದ್ದೇಶಿಸಿ ಅಧಿಕಾರಿಗಳಿಗೆ ಪತ್ರ ಬರೆದಿದ್ದೆ. ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಮುಖ್ಯ ಕಾರ್ಯದರ್ಶಿಗೂ ಪತ್ರ ಬರೆಯಲಾಗಿತ್ತು. ಮೂರು ದಿನಗಳ ನಂತರ ಮುಖ್ಯ ಕಾರ್ಯದರ್ಶಿ ಪತ್ರ ಬರೆದು, ವಿರೋಧ ಪಕ್ಷದ ನಾಯಕರು ಸಭೆ ನಡೆಸಬಾರದು, ಬೇಕಿದ್ದರೆ ಪತ್ರ ಬರೆದು ಮಾಹಿತಿ ಪಡೆಯಬಹುದೆಂದು ಮುಖ್ಯಮಂತ್ರಿ ಅನುಮೋದನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಕಳೆದ 21 ತಿಂಗಳಲ್ಲಿ ಸರ್ಕಾರಕ್ಕೆ ಹಲವು ಪತ್ರಗಳನ್ನು ಬರೆದಿದ್ದೇನೆ. ಕೋವಿಡ್ ಸಂದರ್ಭದಲ್ಲೂ ಸುಮಾರು 15ಕ್ಕೂ ಹೆಚ್ಚು ಪತ್ರಗಳನ್ನು ಬರೆದಿದ್ದೇನೆ. ಇವುಗಳಿಗೆ ಉತ್ತರ ಬಂದಿಲ್ಲ. ಸರ್ಕಾರವೊಂದು ಜೀವಂತವಾಗಿದ್ದರೆ, ಅದಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇದ್ದರೆ ವಿರೋಧ ಪಕ್ಷದ ನಾಯಕ ಪತ್ರ ಬರೆದ ಕೂಡಲೇ ಮಾಹಿತಿ ನೀಡುತ್ತಿತ್ತು. ವಿರೋಧ ಪಕ್ಷವಾಗಿ ನಾವೂ ಕೂಡಾ ಜನರ ಜೊತೆ ನಿಂತು ಅವರ ದುಃಖಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇವೆ. ಆದರೆ, ರಾಜ್ಯದ ಆರೋಗ್ಯ, ಆರ್ಥಿಕ ಮತ್ತು ಕೃಷಿ ವಲಯಗಳಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಂಡು ಅವುಗಳ ಸಮಸ್ಯೆಗಳನ್ನು ಸರಿಪಡಿಸುವಂತೆ ಒತ್ತಾಯಿಸಬೇಕಾದುದು, ಸಲಹೆಗಳನ್ನು ನೀಡಬೇಕಾದುದು ವಿರೋಧ ಪಕ್ಷದ ನಾಯಕನ ಶಾಸನಾತ್ಮಕ ಅಧಿಕಾರ. ವಿಳಂಬ ಮಾಡದೆ ವಿರೋಧ ಪಕ್ಷದ ನಾಯಕರಿಗೆ ಸಮರ್ಪಕವಾದ ಮಾಹಿತಿ ನೀಡಬೇಕಾಗಿರುವುದು ಸರ್ಕಾರದ ಸಂವಿಧಾನಾತ್ಮಕ ಜವಾಬ್ಧಾರಿ. ಆದರೆ ಈ ಜವಾಬ್ಧಾರಿಗಳನ್ನು ಸರ್ಕಾರ ನಿರ್ಲಕ್ಷಿಸಿದೆ. ಹೀಗಾಗಿ, ಸರ್ಕಾರ ಉದ್ದೇಶಪೂರ್ವಕವಾಗಿ ಮಾಹಿತಿ ಕೊಡದೆ ಹಕ್ಕು ಚ್ಯುತಿ ಉಂಟು ಮಾಡಿದೆ ಎಂಬ ನಿಲುವಿಗೆ ಬರಬೇಕಾದ ಕೃತ್ಯವೆಸಗುತ್ತಿದೆ’ ಎಂದೂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

‘ಅಧಿಕಾರಿಗಳ ಕಾರ್ಯವೈಖರಿ ಕುರಿತು ಪರಿಶೀಲಿಸುವ, ನಿರ್ದೇಶನಗಳನ್ನು ನೀಡುವ ಉದ್ದೇಶ ನನ್ನದಲ್ಲ. ಅಷ್ಟರಮಟ್ಟಿಗಿನ ಸಾಂವಿಧಾನಿಕ ಅರಿವು ನನಗಿದೆ. ಕೆಲವು ಮಾಹಿತಿ ಪಡೆಯುವುದಷ್ಟೇ ಉದ್ದೇಶ. ಮಾಹಿತಿ ನೀಡಬೇಕಾದ ನಮೂನೆಯನ್ನು ಅಧಿಕಾರಿಗಳಿಗೆ ನೀಡಲಾಗಿದೆ. ಅದನ್ನು ಅರ್ಥ ಮಾಡಿಕೊಂಡು ಭರ್ತಿ ಮಾಡುವಷ್ಟು ತಿಳಿವಳಿಕೆ ಇರುವವರೂ ಕಡಿಮೆ ಇದ್ದಾರೆ. ಎರಡು ವರ್ಷಗಳಿಂದ ನಾವು ಕೇಳಿರುವ ಮಾಹಿತಿಯೊಂದಾದರೆ, ಅಧಿಕಾರಿಗಳು ಇನ್ನೊಂದು ಮಾಹಿತಿ ನೀಡಿದ್ದಾರೆ. ಈ ಗೊಂದಲಗಳಿಗೆ ಅವಕಾಶ ನೀಡಬಾರದೆಂಬ ಉದ್ದೇಶದಿಂದಲೇ ನೇರವಾಗಿ ಮುಖತಃ ಮಾಹಿತಿ ಪಡೆಯಲು ಉದ್ದೇಶಿಸಿದ್ದೆ. ಅದಕ್ಕಾಗಿ ಒಂದು ಜಿಲ್ಲೆಗೆ ಅರ್ಧ ಗಂಟೆಯಿಂದ ಒಂದು ಗಂಟೆಯಷ್ಟು ಮಾತ್ರ ಕಾಲ ನಿಗದಿಪಡಿಸಿದ್ದೆ. ಖುದ್ದು ಮಾಹಿತಿ ಪಡೆಯುವ ನನ್ನ ಹಕ್ಕನ್ನು ಸರ್ಕಾರ ನಿರಾಕರಿಸಿರುವುದರಿಂದ ಅದು ಹಕ್ಕು ಚ್ಯುತಿಯಾಗುವುದಿಲ್ಲವೆ. ನಾನು ಕಳುಹಿಸಿದ್ದ ನಮೂನೆಯಲ್ಲಿ ಕೇವಲ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮಾತ್ರ ಮಾಹಿತಿ ಕಳುಹಿಸಿದ್ದಾರೆ. ಉಳಿದವರು ಬೇಜವಾಬ್ಧಾರಿ ವರ್ತನೆ ತೋರಿದ್ದು, ಅವರಿಗೆ ಯಾವ ಶಿಕ್ಷೆ ವಿಧಿಸುತ್ತೀರಿ’ ಎಂದು ಪ್ರಶ್ನಿಸಿದ್ದಾರೆ.

‘ಮುಖ್ಯ ಕಾರ್ಯದರ್ಶಿ ನನಗೆ ಕಳಿಸಿರುವ ಪತ್ರದಲ್ಲಿ 2009ರ ಸುತ್ತೋಲೆ ನಮೂದಿಸಿದ್ದಾರೆ. ಅದೇ ಸುತ್ತೋಲೆಯನ್ನು 2016ರಲ್ಲಿ ಪುನರುಚ್ಛರಿಸಲಾಗಿದೆ ಎಂದು ತಿಳಿಸಲಾಗಿದೆ. ಆದರೆ, ಹಿಂದೆ ಸುತ್ತೋಲೆಗಳನ್ನು ಹೊರಡಿಸಿದಾಗ ತಂತ್ರಜ್ಞಾನ ಸಂಬಂಧಿ ಅನುಕೂಲಗಳಿರಲಿಲ್ಲ. ಹೀಗಾಗಿ ಸಭೆ ಕರೆದು ಮಾಹಿತಿ ಪಡೆಯಬೇಕಾಗಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಝೂಮ್, ಗೂಗಲ್ ಮುಂತಾದ ತಂತ್ರಾಂಶಗಳ ಮೂಲಕ ಮಾಹಿತಿ ಪಡೆಯಬಹುದಾಗಿದೆ. ಸರ್ಕಾರ ಇದಿಷ್ಟನ್ನೂ ಅರ್ಥ ಮಾಡಿಕೊಳ್ಳದ ಸ್ಥಿತಿ ತಲುಪಿದೆ’ ಎಂದೂ ದೂರಿದ್ದಾರೆ.

‘ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ, ಬರ ಮುಂತಾದ ವಿಚಾರಗಳ ಕುರಿತು ಮಾಹಿತಿ ಪಡೆದಿದ್ದರು. ಅದಕ್ಕೆ ನನ್ನ ಸರ್ಕಾರ ವಿರೋಧ ವ್ಯಕ್ತಪಡಿಸಿರಲಿಲ್ಲ. ಆದರೆ, ಈಗ ಅದೇ ರೀತಿಯಲ್ಲಿ ತಂತ್ರಜ್ಞಾನದ ನೆರವು ಪಡೆದು ಮಾಹಿತಿ ಸಂಗ್ರಹಿಸುವುದನ್ನು ನಿರಾಕರಿಸಲಾಗುತ್ತಿದೆ. ಸರ್ಕಾರದ ಈ ಕ್ರಮ ಸಂವಿಧಾನದ ಹಲವು ಅನುಚ್ಛೇದಗಳ ಪ್ರಕಾರ ಹಕ್ಕುಚ್ಯುತಿ ಆಗುತ್ತದೆ’ ಎಂದೂ ಪತ್ರದಲ್ಲಿ ಸಿದ್ದರಾಮಯ್ಯ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT