ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ನಾಯಕರ ಓಲೈಕೆಗಾಗಿ ರಾಜ್ಯ ಸರ್ಕಾರದಿಂದ ಕನ್ನಡಿಗರಿಗೆ ಅವಮಾನ: ಸಿದ್ದರಾಮಯ್ಯ

Last Updated 5 ಆಗಸ್ಟ್ 2022, 10:11 IST
ಅಕ್ಷರ ಗಾತ್ರ

ಬೆಂಗಳೂರು: ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಕೇಂದ್ರ ಬಿಜೆಪಿ ನಾಯಕರ ಓಲೈಕೆಗಾಗಿ ಮತ್ತೆ ಮತ್ತೆ ಕನ್ನಡವನ್ನು ತುಳಿದು ಹಿಂದಿಯನ್ನು ಮೆರೆಸಿ‌‌ ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಅವಮಾನ ಮಾಡುತ್ತಿರುವುದು ಖಂಡನೀಯ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್‌ ಮಾಡಿರುವ ಅವರು, ಕೇಂದ್ರ ಸಚಿವ ಅಮಿತ್ ಶಾ ಭಾಗವಹಿಸಿದ್ದ ‘ಸಂಕಲ್ಪ್ ಸೆ ಸಿದ್ಧಿ' ಎಂಬ ಕಾರ್ಯಕ್ರಮದ ಬ್ಯಾನರ್ ಸಂಪೂರ್ಣ ಹಿಂದಿಮಯವಾಗಿತ್ತು.‌ ಇನ್ನೊಂದೆಡೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತನ್ನ ಜಾಲತಾಣದಲ್ಲಿ ಹಿಂದಿಯ ಕಿರೀಟ ಇಟ್ಟುಕೊಂಡು ಮೆರೆಸುತ್ತಿದೆ’ ಎಂದು ಆರೋಪಿಸಿದ್ದಾರೆ.

‘ರಾಜ್ಯದ ಬಿಜೆಪಿ ಸರ್ಕಾರ ತನ್ನತನವನ್ನು ಅಡವಿಟ್ಟು‌ ಹಿಂದಿ ಭಾಷೆಗೆ ಸಂಪೂರ್ಣ ಶರಣಾಗತವಾಗಿದೆ ಎಂಬುದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಾಲತಾಣವೇ ಸಾಕ್ಷಿ. ಮೊದಲು ಈ ಜಾಲತಾಣದಿಂದ ಹಿಂದಿಯನ್ನು ಕಿತ್ತೊಗೆದು, ಕನ್ನಡಿಗರ ಸ್ವಾಭಿಮಾನ ಉಳಿಸಿ’ ಎಂದು ಒತ್ತಾಯಿಸಿದ್ದಾರೆ.

‘ರಾಜ್ಯದಲ್ಲಿರುವುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ? ಅಥವಾ ಹಿಂದಿ‌ ಮತ್ತು ಸಂಸ್ಕೃತಿ ಇಲಾಖೆಯೇ? ಎನ್ನುವುದನ್ನು ಮುಖ್ಯಮಂತ್ರಿಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್‌ ಕುಮಾರ್‌ ಸ್ಪಷ್ಟಪಡಿಸಬೇಕು’ ಎಂದು ಟ್ವೀಟ್‌ ಮಾಡಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿಯ ರಕ್ಷಣೆ ಮತ್ತು‌ ಪೋಷಣೆಗಾಗಿ ಇರುವ ಇಲಾಖೆಯೇ ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡವನ್ನು ಹೊರಗಿಟ್ಟು ಹಿಂದಿ ಭಾಷೆಯ ಪ್ರಚಾರಕ್ಕೆ ಇಳಿದರೆ ಕನ್ನಡ ಭಾಷೆಯನ್ನು ರಕ್ಷಿಸುವವರು ಯಾರು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

‘ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ಕನ್ನಡಿಗರ ಸ್ವಾಭಿಮಾನವನ್ನು 'ಉತ್ತರ ಕುಮಾರ'ರ ಕಾಲಡಿ ಯಾಕೆ ಅಡವು ಇಡುತ್ತೀರಾ?’ ಎಂದು ಕೇಳಿದ್ದಾರೆ.

‘ಶರಣಾಗತಿ ಕನ್ನಡದ ಮಣ್ಣಿನ ಗುಣವಲ್ಲ, ವೀರರಾಣಿ ಅಬ್ಬಕ್ಕನ ನೆಲದಿಂದ ಬಂದ ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೆ ಇಂಥಾ ಗುಲಾಮಿ‌ ಮನಸ್ಥಿತಿ ಬರಬಾರದಿತ್ತು’ ಎಂದೂ ಸಿದ್ದರಾಮಯ್ಯ ಟ್ವೀಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT