ಶನಿವಾರ, ಸೆಪ್ಟೆಂಬರ್ 18, 2021
28 °C

ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಹೆಚ್ಚು ದಿನ ಬಾಳುವುದಿಲ್ಲ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಹೆಚ್ಚು ದಿನ ಬಾಳುವುದಿಲ್ಲ, ಯಾವುದೇ ಸಂದರ್ಭದಲ್ಲಿ ಪತನಗೊಳ್ಳುವ ಸಾಧ್ಯತೆ ಇದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭವಿಷ್ಯ ನುಡಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಸರ್ಕಾರದಲ್ಲಿ ಗೊಂದಲ ಮುಂದುವರಿದಿದೆ. ಈ ಸರ್ಕಾರ ಅವಧಿ ಪೂರ್ಣಗೊಳಿಸುವುದು ಅನುಮಾನ’ ಎಂದೂ ಹೇಳಿದರು.

‘ಆಡಳಿತ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬಸವನಗೌಡ ಪಾಟೀಲ್ ಯತ್ನಾಳ, ಅರವಿಂದ ಬೆಲ್ಲದ್, ರಾಮದಾಸ ಮತ್ತಿತರ ಶಾಸಕರು ದೆಹಲಿಗೆ ಹೋಗಿ, ಬಂದು ಮಾಡುತ್ತಿದ್ದಾರೆ. ಹೀಗಾಗಿ ಈ ಸರ್ಕಾರ ಬಹಳ ದಿನ ಬಾಳುವುದಿಲ್ಲ’ ಎಂದರು.

ಸರ್ಕಾರದ ಜವಾಬ್ದಾರಿ: ‘ಕೋವಿಡ್‌ ಮೂರನೇ ಅಲೆ ಆರಂಭವಾಗುತ್ತಿದೆ. ಕೊಡಗು, ದಕ್ಷಿಣ ಕನ್ನಡ, ಮೈಸೂರು ಸೇರಿದಂತೆ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಬಿಗಿ ಕ್ರಮ ಕೈಗೊಳ್ಳಬೇಕು. ಮೂರನೇ ಅಲೆಯಿಂದ ಜನ ತೊಂದರೆಗೆ ಒಳಗಾಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ವಾರಾಂತ್ಯದ ಲಾಕ್‌ಡೌನ್ ಘೋಷಣೆ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ. ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಬೇಕು’ ಎಂದು ಅಭಿಪ್ರಾಯಪಟ್ಟರು.

‘ಸರ್ಕಾರದ ಕ್ರಮಗಳ ಜೊತೆಗೆ ಜನರು ಕೂಡಾ ಕೋವಿಡ್‌ ಬಗ್ಗೆ ಎಚ್ಚರ ವಹಿಸಬೇಕು. ಮಾಸ್ಕ್, ಸ್ಯಾನಿಟೈಸರ್ ಬಳಸಬೇಕು. ರಾಜ್ಯದಲ್ಲಿ ಲಸಿಕೆ ಕೊರತೆ ಉಂಟಾಗಿದೆ. ಎಲ್ಲರಿಗೂ ಲಸಿಕೆ ಕೊಡಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಜವಾಬ್ದಾರಿ. ಮೂರನೇ ಅಲೆ ನಿಯಂತ್ರಣಕ್ಕೆ ಬರದಿದ್ದರೆ ಶಾಲೆ, ಕಾಲೇಜುಗಳನ್ನು ಆರಂಭಿಸುವುದು ಸೂಕ್ತವಲ್ಲ. ಇದರಿಂದ ಮಕ್ಕಳನ್ನು ನಾವೇ ತೊಂದರೆಗೆ ದೂಡಿದಂತೆ ಆಗುತ್ತದೆ’ ಎಂದರು.

‘ಜನಜಂಗುಳಿ ಹೆಚ್ಚಾಗಿರುವ ಕಾರ್ಯಕ್ರಮಗಳಿಗೆ ಸರ್ಕಾರ ಅನುಮತಿ ನೀಡಬಾರದು. ಈ ಒಂದು ವರ್ಷ ಹಬ್ಬ ಹರಿದಿನ, ಜಾತ್ರೆಗಳನ್ನು ಮಾಡದಿರುವುದು ಉತ್ತಮ. ಮುಂದಿನ ತಿಂಗಳು ಗಣೇಶನ ಹಬ್ಬ. ಸಾಧ್ಯವಾದಷ್ಟು ಮನೆಗಳಲ್ಲಿಯೇ ಮೂರ್ತಿ ಕೂರಿಸಿ ಪೂಜಿಸಬೇಕು’ ಎಂದೂ ಸಲಹೆ ನೀಡಿದರು.

ಭೇಟಿಯಲ್ಲಿ ವಿಶೇಷ ಇಲ್ಲ: ‘ಹೊಸಕೋಟೆಯಲ್ಲಿ ನಾನು ಮತ್ತು ಸಚಿವ ಎಂಟಿಬಿ ನಾಗರಾಜ್ ಶುಕ್ರವಾರ ಭೇಟಿ ಆಗಿರುವುದು ನಿಜ. ಆದರೆ, ಯಾವುದೇ ರಾಜಕೀಯ ವಿಚಾರ ಚರ್ಚೆ ಮಾಡಿಲ್ಲ. ಬಿಜೆಪಿಯವರ ಜೊತೆ ರಾಜಕೀಯ ಮಾತನಾಡುವುದೂ ಇಲ್ಲ. ಬಿಜೆಪಿಯವರು ಅಧಿಕಾರದಿಂದ ತೊಲಗಲಿ ಎಂದು ಹೇಳುವವನು ನಾನು’ ಎಂದರು.

‘ಕನಕ ಸಮೃದ್ಧಿ ಸಹಕಾರ ಬ್ಯಾಂಕ್ ಉದ್ಘಾಟನೆಯಲ್ಲಿ ಭಾಗವಹಿಸಲು ಹೊಸಕೋಟೆಗೆ ಹೋಗಿದ್ದೆ. ಕಾರ್ಯಕ್ರಮಕ್ಕೆ ಮೊದಲು ಕಾಂಗ್ರೆಸ್ ಮುಖಂಡರ ಮನೆಯಲ್ಲಿ ಊಟ ಇತ್ತು. ನಾಗರಾಜ್ ಕೂಡಾ ಅಲ್ಲಿಗೆ ಬಂದಿದ್ದರು ಅಷ್ಟೆ. ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯಿಲಿ, ಶಾಸಕರಾದ ಬೈರತಿ ಸುರೇಶ್, ಶರತ್ ಬಚ್ಚೇಗೌಡ ಕೂಡಾ ಇದ್ದರು’ ಎಂದರು.

ಈಶ್ವರಪ್ಪ ಆಸಕ್ತಿ ವಹಿಸಲಿ: ‘ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಗಣತಿ ವರದಿ ನಾನು ಮುಖ್ಯಮಂತ್ರಿ ಆಗಿದ್ದಾಗ ಸಿದ್ಧವಾಗಿರಲಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ವರದಿ ಸಿದ್ಧವಾಗಿತ್ತು. ಅಂದಿನ ಸಚಿವ ಪುಟ್ಟರಂಗ ಶೆಟ್ಟಿ ವರದಿ ಮಂಡನೆಗೆ ಮುಂದಾದಾಗ ಅವಕಾಶ ಕೊಡಲಿಲ್ಲ. ಈಗ ಈಶ್ವರಪ್ಪ ಸಚಿವರಾಗಿದ್ದಾರೆ. ಅವರು ವರದಿ ಸ್ವೀಕರಿಸುವಂತೆ ಮಾಡಲಿ’ ಎಂದರು.

‘ರಾಯಣ್ಣ ಬ್ರಿಗೇಡ್, ಕುರುಬರ ಎಸ್‌ಟಿ ಹೋರಾಟದ ಜೊತೆಗೆ ಈ ಕೆಲಸಕ್ಕೂ ಈಶ್ವರಪ್ಪ ಮುಂದಾಗಲಿ. ವರದಿ ಮಂಡನೆಗೆ ನಿರಾಕರಿಸಿದಾಗ ಸಿದ್ದರಾಮಯ್ಯ ರಾಜಿನಾಮೆ ನೀಡಬೇಕಿತ್ತು ಎಂದು ಈಶ್ವರಪ್ಪ ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ನಾನು ಮಂತ್ರಿ ಆಗಿರಲಿಲ್ಲ. ಸಮನ್ವಯ ಸಮಿತಿ ಅಧ್ಯಕ್ಷ ಆಗಿದ್ದೆ. ರಾಜಿನಾಮೆ ಪರಿಹಾರ ಎಂದಾಗಿದ್ದರೆ ಕೊಡುತ್ತಿದೆ. ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಅತಿ ಹಿಂದುಳಿದ ವರ್ಗಗಳ ವೇದಿಕೆ ಈಗ ವರದಿ ಸ್ವೀಕಾರಕ್ಕೆ ಸರ್ಕಾರವನ್ನು ಒತ್ತಾಯಿಸಿ ಹೋರಾಟ ಮಾಡುತ್ತಿದೆ. ಹೋರಾಟ ನಡೆಯಲಿ. ಬಳಿಕ ನಾನು ಮಾತನಾಡುತ್ತೇನೆ’ ಎಂದೂ ಹೇಳಿದರು.

ಹುತಾತ್ಮರಿಗೆ ನಮನ: ‘ದೇಶ 75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿದೆ. ನಾವೆಲ್ಲ ಸ್ವಾತಂತ್ರ್ಯದ ಫಲಾನುಭವಿಗಳು. ನಮ್ಮ ದೇಶವನ್ನು ಬ್ರಿಟಿಷರ ಸಂಕೋಲೆಯಿಂದ ಬಿಡುಗಡೆ ಮಾಡಿಸಲು ಮಹಾತ್ಮ ಗಾಂಧಿ, ಸುಭಾಷ್ ಚಂದ್ರಬೋಸ್  ಸೇರಿದಂತೆ ಲಕ್ಷಾಂತರ ಮಂದಿ ಹೋರಾಟ ಮಾಡಿದ್ದಾರೆ. ಅನೇಕರು ಹುತಾತ್ಮರಾಗಿದ್ದಾರೆ. ಸ್ವಾತಂತ್ರ್ಯ ಹೋರಾಟ ಮಾಡಿದವರಲ್ಲಿ ಎಲ್ಲ ಜಾತಿ, ಜನಾಂಗದವರು, ಧರ್ಮದವರು ಇದ್ದರು. ಹೋರಾಟ ನಡೆಸಿದ ಎಲ್ಲರಿಗೂ ನಮನಗಳನ್ನು ಸಲ್ಲಿಸುತ್ತೇನೆ’ ಎಂದೂ ಸಿದ್ದರಾಮಯ್ಯ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು