ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ವರ್ಷಗಳ ಆಡಳಿತದಲ್ಲಿ 23 ಹತ್ಯೆ: ಕೈಗೊಂಡ ಕ್ರಮಗಳ ಬಗ್ಗೆ ಸಿದ್ದರಾಮಯ್ಯ ಮಾಹಿತಿ

ಅಕ್ಷರ ಗಾತ್ರ

ಬೆಂಗಳೂರು: ತಮ್ಮ ಆಡಳಿತಾವಧಿಯಲ್ಲಿ ನಡೆದ ಕೋಮು ಹಿಂಸಾಚಾರ ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು ‘ರಾಜ್ಯದ ಯಾವ ಮೂಲೆಯಲ್ಲಿ ಕೋಮುಘರ್ಷಣೆ, ಹತ್ಯೆಗಳು ನಡೆದರೂ ನಮ್ಮ ಸರ್ಕಾರದ ಅವಧಿಯನ್ನು ಉಲ್ಲೇಖಿಸಿ ಸುಳ್ಳು ಮಾಹಿತಿ ನೀಡುವುದು ಬಿಜೆಪಿ ನಾಯಕರಿಗೆ ಚಟವಾಗಿಬಿಟ್ಟಿದೆ. ನಮ್ಮ ಸರ್ಕಾರದ ಕಾಲದಲ್ಲಿ ನಡೆದ ಕೋಮು ಹಿಂಸಾಚಾರ ಮತ್ತು ಕೈಗೊಂಡ ಕ್ರಮಗಳ ಪುಸ್ತಕವನ್ನೇ ಪ್ರಕಟಿಸಿದ್ದೇವೆ, ಓದಿಕೊಳ್ಳಿ’ ಎಂದು ತಿಳಿಸಿದ್ದಾರೆ.

‘ನಮ್ಮ ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ರಾಜಕೀಯ ಘರ್ಷಣೆ ಇಲ್ಲವೆ ಕೋಮು ಗಲಭೆಗಳಿಗೆ ಸಂಬಂಧ ಪಟ್ಟಂತೆ ಒಟ್ಟು 23 ಹತ್ಯೆಗಳಾಗಿವೆ. ಇವುಗಳಲ್ಲಿ ಹನ್ನೆರಡು ಮೃತ ವ್ಯಕ್ತಿಗಳು ಹಿಂದೂಗಳು, ಉಳಿದ ಹನ್ನೊಂದು ಮಂದಿ ಮುಸ್ಲಿಮರು’ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.

‘ಹನ್ನೆರಡು ಹಿಂದೂಗಳ ಹತ್ಯೆಯ ಎಂಟು ಪ್ರಕರಣಗಳಲ್ಲಿ ಪಿಎಫ್ಐ/ಎಸ್‌ಡಿಪಿಐ ಸಂಘಟನೆಯ ಕಾರ್ಯಕರ್ತರು ಆರೋಪಿಗಳಾಗಿದ್ದಾರೆ. ಒಂದು ಪ್ರಕರಣದಲ್ಲಿ ಮಾತ್ರ ಕಾಂಗ್ರೆಸ್ ಕಾರ್ಯಕರ್ತ ಆರೋಪಿಯಾಗಿದ್ದಾನೆ. ಇವರಲ್ಲಿ 99 ಆರೋಪಿಗಳನ್ನು ಬಂಧಿಸಲಾಗಿದೆ. ವಿಚಾರಣೆ ನಡೆಯುತ್ತಿದೆ’ ಎಂದು ಹೇಳಿದ್ದಾರೆ.

‘2013 ರಿಂದ 2017ರ ವರೆಗಿನ ಅವಧಿಯಲ್ಲಿ ನಡೆದ ಹನ್ನೊಂದು ಮುಸ್ಲಿಮರ ಹತ್ಯೆಗಳ ಎಂಟು ಪ್ರಕರಣಗಳಲ್ಲಿ ಬಜರಂಗದಳ, ತಲಾ ಒಂದು ಪ್ರಕರಣಗಳಲ್ಲಿ ಹಿಂದೂ ಜಾಗರಣಾ ವೇದಿಕೆ, ಶ್ರೀರಾಮಸೇನೆ ಮತ್ತು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಆರೋಪಿಗಳಾಗಿದ್ದಾರೆ. 115 ಆರೋಪಿಗಳ ವಿರುದ್ಧ ಕಾನೂನುಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.

‘ವೈಯಕ್ತಿಕ ಕಾರಣಗಳಿಗಾಗಿ ಹತ್ತು ಹತ್ಯೆಗಳಾಗಿದ್ದು 61 ವ್ಯಕ್ತಿಗಳನ್ನು ಬಂಧಿಸಲಾಗಿದೆ. ಪೊಲೀಸರು ಹತ್ಯೆಯ ಕಾರಣದ ತನಿಖೆ ನಡೆಸುತ್ತಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ತನಿಖೆ ಪೂರ್ಣಗೊಂಡಿರಲಿಲ್ಲ. ಈ ಎಲ್ಲ ಪ್ರಕರಣಗಳ ಮೊಕದ್ದಮೆಗಳ ಸಂಖ್ಯೆ ಸಮೇತ ಪುಸ್ತಕದಲ್ಲಿ ಪ್ರಕಟಿಸಲಾಗಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

‘ಈ ಹತ್ಯೆ ಪ್ರಕರಣಗಳ ತನಿಖೆಗೆ ಪೊಲೀಸರು ಸಮರ್ಥರಾಗಿದ್ದರೂ ವಿರೋಧ ಪಕ್ಷಗಳ ಒತ್ತಾಯಕ್ಕಾಗಿ ಕೆಲವು ಪ್ರಕರಣಗಳನ್ನು ಸಿಬಿಐ ಮತ್ತು ಎನ್ಐಎಗೆ ವಹಿಸಲಾಗಿತ್ತು. ಹೊನ್ನಾವರದ ಪರೇಶ್ ಮೇಸ್ತಾ ಸಾವಿನ ಪ್ರಕರಣವನ್ನು ಸಿಬಿಐಗೆ ಮತ್ತು ಬೆಂಗಳೂರಿನ ರುದ್ರೇಶ್ ಕೊಲೆ ಪ್ರಕರಣವನ್ನು ಎನ್ಐಎಗೆ ವಹಿಸಲಾಗಿದೆ’ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT