ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ತನಿಖೆಗೆ ಸಿದ್ದರಾಮಯ್ಯ ಒತ್ತಾಯ

Last Updated 4 ಸೆಪ್ಟೆಂಬರ್ 2022, 12:28 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಶಿಕ್ಷಣ ವ್ಯವಸ್ಥೆಯಲ್ಲೂ ಭಾರಿ ಪ್ರಮಾಣದ ಲಂಚದ ಹಾವಳಿ ಇದೆ ಎಂಬ ದೂರುಗಳು ಈಗ ಮುನ್ನೆಲೆಗೆ ಬಂದಿವೆ. ಈ ಕುರಿತು 'ಶಿಕ್ಷಣ: ಲಂಚವೇ ‘ಭೂಷಣ’!' ಎಂಬ ಶೀರ್ಷಿಕೆ ಅಡಿ ಪ್ರಜಾವಾಣಿಯಲ್ಲಿ ಇಂದು ವರದಿ ಪ್ರಕಟವಾಗಿತ್ತು.

ಈ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ತನಿಖೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದಾರೆ.

ಶಿಕ್ಷಣ ಸಚಿವ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಸಿದ್ಧರಾಮಯ್ಯ, #ಭಕ್ಷಣಾಸಚಿವ ಎಂಬ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಇದು ಶಿಕ್ಷಣವೋ? ಭಕ್ಷಣೆಯೋ? ಎಂದು ಸರಣಿ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ಆರ್‌ಎಸ್‌ಎಸ್‌ನಲ್ಲಿ ತರಬೇತಿ ಪಡೆದು ಬಂದಿರುವ ಬಿ.ಸಿ. ನಾಗೇಶ್ ಅವರು ರಾಜ್ಯ ಶಿಕ್ಷಣ ಸಚಿವರಾದ ಅಂದಿನಿಂದ ಶಿಕ್ಷಣ ಇಲಾಖೆ ಭ್ರಷ್ಟಾಚಾರದ ಕೊಂಪೆಯಾಗಿರುವ ಕತೆ ಒಂದೊಂದಾಗಿ ಹೊರಬೀಳುತ್ತಿವೆ. ಪಠ್ಯಪುಸ್ತಕಗಳ ವಿವಾದದ ಮರೆಯಲ್ಲಿ ಇಲ್ಲಿ ನಡೆಯುತ್ತಿರುವುದು ಲಂಚಾವತಾರದ ಕುಣಿದಾಟ ಎಂದು ಹೇಳಿದ್ದಾರೆ.

ಪ್ರಾರಂಭದಿಂದಲೇ ಶಿಕ್ಷಣ ಸಚಿವರ ವಿರುದ್ಧ ಕೇಳಿ ಬರುತ್ತಿದ್ದ ಭ್ರಷ್ಟಾಚಾರದ ಆರೋಪಗಳಿಗೆ ಈಗ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಸಂಘಟನೆ ಪುರಾವೆಗಳನ್ನು ನೀಡಿದೆ. ಈ ಸಂಘಟನೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದೆಯಂತೆ. ಖಾಸಗಿ ಶಾಲೆಗಳ ಪರವಾನಿಗೆಯಿಂದ ಹಿಡಿದು ನಿವೃತ್ತ ಶಿಕ್ಷಕರ ಪಿಂಚಣಿವರೆಗೆ ಶಿಕ್ಷಣ ಇಲಾಖೆಯಲ್ಲಿ ಲಂಚ ನೀಡದೆ ಯಾವ ಕೆಲಸವೂ ಆಗುತ್ತಿಲ್ಲವಂತೆ. ಲಂಚ ಪಡೆದು ಖಾಸಗಿ ಶಾಲೆಗಳಿಗೆ ಅಕ್ರಮವಾಗಿ ಅನುಮತಿ ನೀಡುವ ಇಲಾಖೆಯೇ, ಮತ್ತೆ ಅಕ್ರಮ ಎಸಗಿದ ಆರೋಪದ ಮೇಲೆ ದುಡ್ಡು ವಸೂಲಿ ಮಾಡುತ್ತಿದೆಯಂತೆ. ಎಂಥಾ ಅದ್ಭುತ ಪ್ಲಾನ್? ಇದು ಶಿಕ್ಷಣವೋ? ಭಕ್ಷಣೆಯೋ? ಎಂದು ಹೇಳಿದ್ದಾರೆ.

ಕಾಂಗ್ರೆಸ್‌ನ ಮಹತ್ವಾಕಾಂಕ್ಷೆಯ ಶಿಕ್ಷಣ ಹಕ್ಕಿನ ಕಾಯ್ದೆಯನ್ನೂ ರಾಜ್ಯ ಶಿಕ್ಷಣ ಇಲಾಖೆ ಹಳ್ಳ ಹಿಡಿಸಿದೆ. 2012ರಲ್ಲಿ ಆರ್‌ಟಿಇ ಫಲಾನುಭವಿ ವಿದ್ಯಾರ್ಥಿಗಳು 1.20 ಲಕ್ಷ, ಈಗ ಈ ವಿದ್ಯಾರ್ಥಿಗಳ ಸಂಖ್ಯೆ 7 ಸಾವಿರಕ್ಕೆ ಇಳಿದಿದೆ. ಖಾಸಗಿ ಶಾಲೆಗಳಿಗೆ ಬಿಜೆಪಿ ಸರ್ಕಾರದಿಂದಲೇ ಬೆಂಬಲ. ಆರ್‌ಟಿಇ ಯೋಜನೆಯಡಿ ಖಾಸಗಿ ಶಾಲೆಗಳಿಗೆ ಬಿಜೆಪಿ ಸರ್ಕಾರ ಸುಮಾರು ರೂ.900 ಕೋಟಿ ಬಾಕಿ ಪಾವತಿಸಬೇಕಂತೆ. ಶಿಕ್ಷಣ ಸಚಿವರು ಶೇ 40 ಕಮಿಷನ್ ಲೆಕ್ಕ ಹಾಕುತ್ತಿರುವಂತೆ ಕಾಣುತ್ತಿದೆ. ಕಮಿಷನ್ ಎಂಬ ಸಾಂಕ್ರಾಮಿಕ ರೋಗ ಶಿಕ್ಷಣ ಇಲಾಖೆಯನ್ನೂ ರೋಗಗ್ರಸ್ತ ಗೊಳಿಸಿದೆ ಎಂದು ಟ್ವೀಟಿಸಿದ್ದಾರೆ.

ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಅವರು ತಮ್ಮ ಇಲಾಖೆಯ ಲಂಚಾವತಾರದ ಕಡೆಗಿನ ಜನರ ಗಮನ ಬೇರೆಕಡೆ ಸೆಳೆಯಲಿಕ್ಕಾಗಿಯೇ ಪಠ್ಯಪುಸ್ತಕ, ಭಗವದ್ಗೀತೆ, ಮದರಸಾಕ್ಕೆ ಸಂಬಂಧಿಸಿದ ವಿವಾದ ಹುಟ್ಟು ಹಾಕುತ್ತಿದ್ದಾರೆ. ಲಂಚಕೋರರಿಗೆ ಮುಖ ಮರೆಸಿಕೊಳ್ಳಲು ಹಿಂದುತ್ವ ಒಂದು ಮುಖವಾಡ. ಗುತ್ತಿಗೆದಾರರು ಸರ್ಕಾರದ ಶೇ 40 ಕಮಿಷನ್ ಬಗ್ಗೆ ಪ್ರಧಾನಿಗೆ ಬರೆದ ಪತ್ರಗಳಿಗೆ ಉತ್ತರ ಸಿಕ್ಕಿಲ್ಲ. ಈಗ ಖಾಸಗಿ ಶಾಲೆಗಳ ಆಡಳಿತವೂ ಪ್ರಧಾನಿಗೆ ಪತ್ರ ಬರೆದಿದೆಯಂತೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಎಲ್ಲ ಪತ್ರಗಳ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರ ನಿಗಾವಣೆಯಲ್ಲಿ ನ್ಯಾಯಾಂಗ ತನಿಖೆಗೆ ಆದೇಶ ನೀಡಬೇಕೆಂದು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT