ಭಾನುವಾರ, ನವೆಂಬರ್ 27, 2022
27 °C

ಕರ್ನಾಟಕದ ಏಕೈಕ ವಿಲನ್‌ ಸಿದ್ದರಾಮಯ್ಯ: ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ‘ಕರ್ನಾಟಕ ರಾಜ್ಯದ ಏಕೈಕ ವಿಲನ್‌ ಎಂದರೆ ಅದು ಸಿದ್ದರಾಮಯ್ಯ, ಮುಸ್ಲಿಮರ ವೋಟಿಗಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬ್ಯಾನ್‌ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ’ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಶನಿವಾರ ಆರೋಪಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಆರ್‌ಎಸ್‌ಎಸ್‌ ಕಾರ್ಯಕರ್ತರು ಹಳ್ಳಿಹಳ್ಳಿಗಳಲ್ಲಿ ಭಾರತಾಂಬೆಗೆ ಜೈ ಎನ್ನುತ್ತಿದ್ದಾರೆ. ಇವರನ್ನು ಕಂಡರೆ ಕಾಂಗ್ರೆಸ್‌ನವರಿಗೆ ಆಗುತ್ತಿಲ್ಲ. ಸಿದ್ದರಾಮಯ್ಯ– ಇಬ್ರಾಹಿಂ ಇಬ್ಬರೂ ಬೀಗರಾಗಿದ್ದು ಇವರಿಗೆ ಮುಸ್ಲಿಮರ ವೋಟು ಬೇಕಾಗಿವೆ, ಅದಕ್ಕಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ’ ಎಂದರು.

‘ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್‌ಗೆ, ಕಾಂಗ್ರೆಸ್‌ಗೆ, ಕರ್ನಾಟಕಕ್ಕೆ ವಿಲನ್‌ ಆಗಿದ್ದಾರೆ, ಮುಸ್ಲಿಮರಿಗೆ ಮಾತ್ರ ಹೀರೊ ಆಗಿದ್ದಾರೆ. ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ವಿದೂಷಕ ಎನ್ನುತ್ತಾರೆ, ಬಿಜೆಪಿಯನ್ನು ದೂಳಿಪಟ ಮಾಡುತ್ತೇವೆ ಎನ್ನುತ್ತಾರೆ. ಕಾಂಗ್ರೆಸ್‌ ಈಗಾಗಲೇ ರಾಜ್ಯದಲ್ಲಿ ದೂಳಿಪಟವಾಗಿದೆ. ಕಾಂಗ್ರೆಸ್‌ನವರ ಮನೆಗೆ ಹೋಗಿ ಅವರ ಹೆಂಡತಿ, ಮಕ್ಕಳನ್ನು ಕೇಳಿದರೂ ನರೇಂದ್ರ ಮೋದಿ ಹೆಸರು ಹೇಳುತ್ತಾರೆ’ ಎಂದರು.

‘ರಾಹುಲ್‌ ಗಾಂಧಿ ರಾಜ್ಯಕ್ಕೆ ಬಂದಿರುವುದು ಸ್ವಾಗತ, ಆದರೆ ಅವರು ಭಾರತವನ್ನು ಜೋಡಿಸುವುದಕ್ಕೂ ಮೊದಲು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರನ್ನು ಜೋಡಿಸಲಿ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ 4 ಸೀಟು ಗೆಲ್ಲಲಿಲ್ಲ, ಕರ್ನಾಟಕದಲೂ ಇದೇ ಪರಿಸ್ಥಿತಿ ಬರುತ್ತದೆ. ರಾಮನಗರದಲ್ಲಿ ಸಿ.ಪಿ.ಯೋಗೇಶ್ವರ್‌ ಕಾರಿನ ಮೇಲೆ ದಾಳಿ ಮಾಡಿರುವುದನ್ನು ಖಂಡಿಸುತ್ತೇನೆ. ಗೂಡಾಂಗಿರಿಯನ್ನು ಎಲ್ಲಿ ಮಟ್ಟ ಹಾಕಬೇಕೋ ಅಲ್ಲಿ ಮಟ್ಟ ಹಾಕುತ್ತೇವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು