ಬುಧವಾರ, ಆಗಸ್ಟ್ 17, 2022
25 °C
ಕೃಷಿ ಉತ್ಪನ್ನ ಮಾರಾಟದ ಆಯ್ಕೆ ರೈತನದು ಎಂದು ಪ್ರತಿಪಾದಿಸಿದ್ದ ಪತ್ರ * ಪತ್ರ ತೋರಿಸಿದ ಮಾಧುಸ್ವಾಮಿ

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಎಪಿಎಂಸಿ ಕುರಿತು ಬರೆದಿದ್ದ ಪತ್ರದಿಂದ ಗದ್ದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:‘ರೈತರು ಬೆಳೆದ ಹಣ್ಣು, ತರಕಾರಿಗಳನ್ನು ಎಪಿಎಂಸಿ ವ್ಯಾಪ್ತಿಯಿಂದ ಹೊರಗೆ ಮಾರುವ ಆಯ್ಕೆಯನ್ನು ಅವರಿಗೇ ನೀಡಬೇಕು. ಎಪಿಎಂಸಿ ವ್ಯಾಪ್ತಿಯಿಂದ ಈ ಕೃಷಿ ಉತ್ಪನ್ನಗಳನ್ನು ಮುಕ್ತಗೊಳಿಸಬೇಕು’ ಎಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಸಹಕಾರ ಇಲಾಖೆಯ ಕಾರ್ಯದರ್ಶಿಗೆ ಬರೆದಿದ್ದ ಪತ್ರ ವಿಧಾನಸಭೆಯಲ್ಲಿ ಮಂಗಳವಾರ ಭಾರೀ ಗದ್ದಲಕ್ಕೆ ಕಾರಣವಾಯಿತು.

ಕನಿಷ್ಠ ಬೆಂಬಲ ಬೆಲೆಯ ವಿಷಯದ ಕುರಿತು ಸಿದ್ದರಾಮಯ್ಯ ಮಾತನಾಡುವಾಗ ಕೇಂದ್ರ ಸರ್ಕಾರ  ತಂದಿರುವ ಕೃಷಿ ಕಾಯ್ದೆಯ ಕುರಿತು ಟೀಕಾ ಪ್ರಹಾರ ನಡೆಸಲಾರಂಭಿಸಿದರು. ಆಗ ಎದ್ದು ನಿಂತ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ‘ನಿಮ್ಮ ಅಭಿಪ್ರಾಯದ ಪ್ರಕಾರ ಎಪಿಎಂಸಿ ವ್ಯವಸ್ಥೆ ಬೇಕೋ, ಬೇಡವೂ ಹೇಳಿ’ ಎಂದು ಪ್ರಶ್ನಿಸಿದರು.

ಅದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ‘ಎಪಿಎಂಸಿ ವ್ಯವಸ್ಥೆ ಬೇಕು’ ಎಂದರು.

ತಕ್ಷಣವೇ ಪತ್ರವೊಂದನ್ನು ಹೊರತೆಗೆದ ಮಾಧುಸ್ವಾಮಿ, ‘ನೀವು 30–12–2013 ರಲ್ಲಿ  ಬರೆದ ಪತ್ರವನ್ನು ಓದುತ್ತೇನೆ ಕೇಳಿ... ರೈತರು ತಾವು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರುವ ಆಯ್ಕೆ ನೀಡಬೇಕು. ರೈತನಿಗೂ ಉತ್ತಮ ಬೆಲೆ ಸಿಗಬೇಕು, ಗ್ರಾಹಕರಿಗೂ ಕಡಿಮೆ ಬೆಲೆಯಲ್ಲಿ ಸಿಗಬೇಕು. ಆದ್ದರಿಂದ, ಹಣ್ಣು, ತರಕಾರಿ ಮತ್ತು ಇತರ ಅತಿ ಬೇಗನೇ ಕೆಡಬಲ್ಲ ಉತ್ಪನ್ನಗಳನ್ನು ಎಪಿಎಂಸಿ ವ್ಯಾಪ್ತಿಯಿಂದ ತೆಗೆದು ಹಾಕುವ ಅವಶ್ಯಕತೆ ಇದೆ ಎಂದು ಸಹಕಾರ ಕಾರ್ಯದರ್ಶಿಗೆ ಹೇಳಿದ್ದೀರಿ’ ಎಂದರು.

ಇದರಿಂದ ತೀವ್ರ ಮುಜುಗರಕ್ಕೆ ಒಳಗಾದ ಸಿದ್ದರಾಮಯ್ಯ, ‘ಅದು ನಾನು ಬರೆದ ಪತ್ರನಾ, ಕಳಿಸಿ ಈ ಕಡೆ, ನೋಡ್ತೇನೆ’ ಎಂದರು. ಮಾಧುಸ್ವಾಮಿ ಪತ್ರವನ್ನು ಅವರಿಗೆ ಕಳಿಸಿದರು. ಪತ್ರವನ್ನು ಪರಿಶೀಲಿಸಿ ಬಳಿಕ, ‘ಹೌದು, ನಾನೇ ಬರೆದದ್ದು. ಬೇಗನೆ ಕೆಡುವ ಕೃಷಿ ಉತ್ಪನ್ನಗಳಿಗೆ ಮಾತ್ರ ಅನ್ವಯಿಸಿ ಹೇಳಿದ್ದು. ಬೇರೆಯದಕ್ಕಲ್ಲ’ ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡರು.

‘ಇದರ ಅರ್ಥ ನಿಮಗೂ ಎಪಿಎಂಸಿ ವ್ಯವಸ್ಥೆ ಮೇಲೆ ವಿಶ್ವಾಸವಿಲ್ಲ ಎಂದಾಯಿತು. ನಾವೂ ಅದನ್ನೇ ಹೇಳುತ್ತಿರುವುದು. ರೈತರಿಗೆ ಉತ್ತಮ ಬೆಲೆ ಸಿಗಲಿ, ಎಪಿಎಂಸಿ ದಲ್ಲಾಳಿಗಳಿಂದ ದೂರವಾಗಿ  ರೈತರು ತಮ್ಮ ಉತ್ಪನ್ನಗಳನ್ನು ಉತ್ತಮ ಬೆಲೆಗೆ ಮಾರಲಿ ಎನ್ನುವುದೂ ನಮ್ಮ ಉದ್ದೇಶ. ಆದರೆ, ಈಗ ನೀವು ರೈತರಿಗೆ ಅನ್ಯಾಯ ಮಾಡಲು ಹೊರಟಿದ್ದೀರಿ. ರೈತರಿಗೆ ಮೋಸ ಆದರೂ ಪರವಾಗಿಲ್ಲ ಎಂಬ ನಿಲುವಿಗೆ ನಿಮ್ಮ ಪಕ್ಷ ಬಂದಿದೆ’ ಎಂದು ಮಾಧುಸ್ವಾಮಿ ತರಾಟೆಗೆ ತೆಗೆದುಕೊಂಡರು.

ಈ ಹಂತದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಆಗ ಮಧ್ಯಪ್ರವೇಶಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ‘ವೈಯಕ್ತಿಕವಾಗಿ ನಿಮಗೂ ಎಪಿಎಂಸಿ ವ್ಯವಸ್ಥೆಯ ಬಗ್ಗೆ ನಂಬಿಕೆ ಇಲ್ಲ. ಕೃಷಿ ಉತ್ಪನ್ನ ಮಾರಾಟದ ಆಯ್ಕೆ ರೈತನಿಗೆ ನೀಡಬೇಕು ಎನ್ನುವುದಕ್ಕೆ ನಿಮ್ಮ ಪತ್ರವೇ ಅದಕ್ಕೆ ಪುರಾವೆಯಾಗಿದೆ’ ಎಂದು ಛೇಡಿಸಿದರು.

‘ಹಣ್ಣು– ತರಕಾರಿಗಳ ಬಗ್ಗೆ ಮಾತ್ರ ಬರೆದದ್ದು. ಖಾಸಗಿಯವರಿಗೆ ಕೊಡಿ ಎಂದು ಪತ್ರದಲ್ಲಿ ಬರೆದಿರಲಿಲ್ಲ. ಆದರೆ, ನೀವು ಖಾಸಗಿಯವರಿಗೆ ಮಣೆ ಹಾಕಿದ್ದೀರಿ’ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

‘ಈಗ ಪಕ್ಷದ ಅಸ್ಥಿತ್ವ ಉಳಿಸಿಕೊಳ್ಳಲು ರೈತರನ್ನು ತಪ್ಪು ದಾರಿಗೆ ಎಳೆದಿದ್ದೀರಿ’ ಎಂದು ಮಾಧುಸ್ವಾಮಿ ಮಧ್ಯ ಪ್ರವೇಶಿಸಿ ನುಡಿದರು.

‘ಕೃಷಿ ಕ್ಷೇತ್ರವನ್ನು ಖಾಸಗಿಯವರಿಗೆ ಬಾಗಿಲು ತೆರೆದದ್ದು ನಿಮ್ಮ ಸರ್ಕಾರವೇ. ಅಂಬಾನಿ ಬಗ್ಗೆ ಈಗ ದೊಡ್ಡ ಮಾತು ಹೇಳುತ್ತೀರಿ. ರಿಲಯನ್ಸ್‌ಗೆ ಕೃಷಿ ಕ್ಷೇತ್ರದಲ್ಲಿ ಪ್ರವೇಶ ಮಾಡಲು ಅವಕಾಶ ನೀಡಿದ್ದು ನೀವಲ್ಲವೆ. ಮೆಟ್ರೊ ಕ್ಯಾಷ್‌ ಅಂಡ್‌ ಕ್ಯಾರಿಗೆ ಅನುಮತಿ ನೀಡಿದ್ದು ಯಾರು? 40 ಕ್ಕೂ ಹೆಚ್ಚು ಖಾಸಗಿ ಕಂಪನಿಗಳಿಗೆ ಕೃಷಿ ಕ್ಷೇತ್ರಕ್ಕೆ ಪ್ರವೇಶ ನೀಡಿದ್ದು ಕಾಂಗ್ರೆಸ್ ಅಲ್ಲವೆ. ಈಗ ರಾಜಕೀಯ ರೊಟ್ಟಿ ಸುಟ್ಟುಕೊಳ್ಳಲು ಹೊರಟಿದ್ದೀರಿ’ ಎಂದು ಬಸವರಾಜ್ ಬೊಮ್ಮಾಯಿ ಕಿಡಿಕಾರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು