ಗುರುವಾರ , ಅಕ್ಟೋಬರ್ 28, 2021
19 °C

ವಿಧಾನಸಭೆಯಲ್ಲಿ ಸಿದ್ದರಾಮಯ್ಯ: ಇಡ್ಲಿ-ವಡೆ, ಮಸಾಲೆ ದೋಸೆ ಬೆಲೆ ಎಷ್ಟಪ್ಪಾ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

DH Photo

ಬೆಂಗಳೂರು: ಜನಾರ್ದನ ಹೋಟೆಲ್‌ನಲ್ಲಿ ಮಸಾಲೆ ಬೆಲೆ ಎಷ್ಟು? ₹60 ಆಗಿದೆಯಾ,ನಾನು ಯಾವತ್ತೂ ಬಿಲ್‌ ಕೊಟ್ಟಿಲ್ಲ, ಸ್ನೇಹಿತರೇ ಕೊಡ್ತಾರೆ’.

– ಹೀಗೆಂದು ವಿಧಾನ ಸಭೆಯಲ್ಲಿ ಬೆಲೆ ಏರಿಕೆಯ ಬಗ್ಗೆ ಸ್ವಾರಸ್ಯಕರ ಚರ್ಚೆಗೆ ಸಿದ್ದರಾಮಯ್ಯ ನಾಂದಿ ಹಾಡಿದರು.

‘ಹೋಟೆಲ್‌ಗಳಲ್ಲಿ ತಿಂಡಿ ಬೆಲೆ ದುಬಾರಿಯಾಗಿದೆ. ಇಡ್ಲಿ– ವಡೆ ಬೆಲೆ ಎಷ್ಟಿದೆ’ ಎಂದು ತಮ್ಮ ಪಕ್ಷದ ಸದಸ್ಯರತ್ತ ತಿರುಗಿ ಪ್ರಶ್ನಿಸಿದರು. ಯಾರೋ ಒಬ್ಬರು ‘₹39 ಆಗಿದೆ’ ಎಂದರು. ‘ಹೋಟೆಲ್‌ಗಳಲ್ಲಿ ತಿಂಡಿ ಬೆಲೆ ಜಾಸ್ತಿ ಆಗಿದ್ದರಿಂದ ಅಲ್ಲಿಗೆ ಹೋಗುತ್ತಿಲ್ಲ’ ಎಂದರು ಸಿದ್ದರಾಮಯ್ಯ.

‘ಅಡುಗೆ ಅನಿಲ, ಖಾದ್ಯ ತೈಲದ ಬೆಲೆ ಏರಿಕೆ ಆಗಿದ್ದರಿಂದ ತಿಂಡಿಗಳ ಬೆಲೆ ಜಾಸ್ತಿ ಆಗಿದೆ’ ಎಂದು ಸಿದ್ದರಾಮಯ್ಯ ವಿವರಿಸುತ್ತಿದ್ದಾಗ, ಗೃಹ ಸಚಿವ ಆರಗ ಜ್ಞಾನೇಂದ್ರ ಮಧ್ಯ ಪ್ರವೇಶಿಸಿ, ‘ಕೇವಲ ಅದೇ ಕಾರಣಗಳಿಗೆ ಬೆಲೆ ಜಾಸ್ತಿ ಆಗಿಲ್ಲ, ಅಕ್ಕಿ ಬೆಲೆಯೂ ಹೆಚ್ಚಾಗಿದೆ. ಅಕ್ಕಿ ಬೆಲೆ ಹೆಚ್ಚಾಗಿದ್ದರಿಂದ ರೈತರಿಗೆ ಒಳ್ಳೆ ದರ ಸಿಗುತ್ತಿದೆ’ ಎಂದರು.

‘ಜ್ಞಾನೇಂದ್ರ ಅವರಿಗೆ ಬೆಲೆ ಏರಿಕೆಯ ಬಿಸಿ ಗೊತ್ತಾಗಿಲ್ಲ. ನಿಮ್ಮ ಹೋಂ ಮಿನಿಸ್ಟರ್‌ಗೆ ಕೇಳಿ ಆಗ ಗೊತ್ತಾಗುತ್ತದೆ. ಡೀಸೆಲ್‌ ದರ ಹೆಚ್ಚಾದರೆ ಸಾಗಾಣಿಕೆ ದರ ಹೆಚ್ಚುತ್ತದೆ. ಅಡುಗೆ ಅನಿಲ ದರ ದುಪ್ಪಟ್ಟು ಆಗಿಲ್ಲವೇ, ನೀವು ನಿಮ್ಮ ಮನೆಯವರಿಗೆ ಇಂತಿಷ್ಟು ಅಂತ ದುಡ್ಡು ಕೊಟ್ಟು ಸುಮ್ಮನಾಗುತ್ತೀರಿ. ಬೆಲೆ ಏರಿಕೆ ಬಗ್ಗೆ ರಾತ್ರಿ ಹೋಂ ಮಿನಿಸ್ಟರ್‌ ಬಳಿ ಕೇಳಿ, ಬೆಳಿಗ್ಗೆ ಸದನಕ್ಕೆ ಹೇಳಿ ’ ಎಂದು ಸಿದ್ದರಾಮಯ್ಯ ತಿಳಿ ಹಾಸ್ಯದಿಂದ ಕುಟುಕಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು