ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬಿಸಿ ಅನುದಾನಕ್ಕೆ ಬಿಜೆಪಿ ಕತ್ತರಿ: ಸಿದ್ದರಾಮಯ್ಯ ದೂರಿದ್ದಾರೆ.

‘ಬಹಿರಂಗ ಚರ್ಚೆಗೆ ಬೊಮ್ಮಾಯಿ ಹಿಂದೇಟು ಏಕೆ?’
Last Updated 1 ನವೆಂಬರ್ 2022, 21:12 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಂದುಳಿದ ವರ್ಗಗಳಿಗೆ ಆದಷ್ಟು ಅನ್ಯಾಯ ಬೇರೆ ಯಾವುದೇ ಸರ್ಕಾರದ ಕಾಲದಲ್ಲೂ ಆಗಿಲ್ಲ. ಈ ವರ್ಗಗಳಿಗೆ ಸೇರಿದ 11ಕ್ಕೂ ಹೆಚ್ಚು ಅಭಿವೃದ್ಧಿ ನಿಗಮಗಳಿಗೆ ನೀಡುತ್ತಿದ್ದ ಅನುದಾನವನ್ನು ಕಡಿಮೆ ಮಾಡಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದೂರಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮ, ಅಂಬೇಡ್ಕರ್‌ ಅಭಿವೃದ್ಧಿ ನಿಗಮ, ಜಗಜೀವನ್‌ರಾಂ ಅಭಿವೃದ್ಧಿ ನಿಗಮಗಳಿಗೆ ಅನುದಾನ ಕಡಿಮೆ ಮಾಡಲಾಗಿದೆ. ಇದು ಹಿಂದುಳಿದವರ ಮೇಲೆ ಬಿಜೆಪಿಗಿರುವ ಕಾಳಜಿಗೆ ಸಾಕ್ಷಿ ಎಂದು ಲೇವಡಿ ಮಾಡಿದರು.

ಹಿಂದುಳಿದ ಜಾತಿಗಳ ಕಲ್ಯಾಣಕ್ಕೆ 2017-18 ರಲ್ಲಿ ₹2,791 ಕೋಟಿ ನೀಡಲಾಗಿತ್ತು. 2021-22ರಲ್ಲಿ ₹2,318 ಕೋಟಿ ಘೋಷಿಸಿ, ₹2,257 ಕೋಟಿ ಖರ್ಚು ಮಾಡಲಾಗಿದೆ. ಬಸವರಾಜ ಬೊಮ್ಮಾಯಿ ಅವರಿಗೆ ಹಿಂದುಳಿದ ಜಾತಿಗಳ ಮೇಲೆ ಇರುವ ಪ್ರೀತಿ ಇಷ್ಟೆನಾ ಎಂದೂ ಪ್ರಶ್ನಿಸಿದರು.

‘2013–14 ರಲ್ಲಿ ನಾವು ಅಧಿಕಾರಕ್ಕೆ ಬಂದ ಮೇಲೆ ಅನುದಾನ ₹1,200 ಕೋಟಿ ಇದ್ದದ್ದು, ನಂತರದ ವರ್ಷಗಳಲ್ಲಿ ₹2,267 ಕೋಟಿಗೆ ಹೆಚ್ಚಿಸಲಾಯಿತು. ಬೊಮ್ಮಾಯಿ ಸರ್ಕಾರ ಸಾಮಾಜಿಕ ನ್ಯಾಯದ ಪರವಾಗಿಲ್ಲ. ಹಿಂದುಳಿದ ಮತ್ತು ದಲಿತ ವಿರೋಧಿ ಸರ್ಕಾರ’ ಎಂದು ಹರಿಹಾಯ್ದರು.

‘ಹಿಂದುಳಿದ ಜಾತಿಗಳ ಸಮಾವೇಶ ಮಾಡಿ, ನನ್ನನ್ನು ಟಾರ್ಗೆಟ್‌ ಮಾಡಿಕೊಂಡು ಸುಳ್ಳು ಭಾಷಣ ಮಾಡುತ್ತಿದ್ದಾರೆ, ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಇವರಿಗೆ ನನ್ನನ್ನು ಕಂಡರೆ ಎಷ್ಟು ಭಯ ಎಂದರೆ ದೊಡ್ಡಬಳ್ಳಾಪುರ, ಕಲಬುರಗಿ ಸೇರಿ ಎಲ್ಲಿ ಹೋದರೂ ನನ್ನ ಬಗ್ಗೆಯೇ ಮಾತನಾಡುತ್ತಾರೆ. ಆದ್ದರಿಂದಲೇ, ಹಿಂದುಳಿದವರಿಗೆ ಏನು ಮಾಡಿದ್ದೀರಿ ಎಂಬುದರ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಬೊಮ್ಮಾಯಿಗೆ ಸವಾಲು ಹಾಕಿದ್ದೇನೆ. ಆದರೆ ಇವತ್ತಿನವರೆಗೆ ಅವರು ಚರ್ಚೆಗೆ ಬಂದಿಲ್ಲ’ ಎಂದು ಹೇಳಿದರು.

‘ಒಂದು ಆದೇಶ ಪ್ರತಿ ಹಿಡಿದುಕೊಂಡು ಕಲಬುರಗಿ ಸಮಾವೇಶಕ್ಕೆ ಹೋಗಿದ್ದ ಬಸವರಾಜ ಬೊಮ್ಮಾಯಿ, ಕುರಿಗಾರರಿಗೆ ಒಂದು ದೊಡ್ಡ ಕಾರ್ಯಕ್ರಮ ಕೊಟ್ಟಿರುವುದಾಗಿ ಹೇಳಿಕೊಂಡಿದ್ದಾರೆ. ಸಾಲ ಕೊಡಿಸುವುದು ಸಾಧನೆಯೇ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

‘ಕಾರ್ಯಕ್ರಮಕ್ಕೆ ಹೋಗುವ ಮುನ್ನ ತರಾತುರಿಯಲ್ಲಿ ಆದೇಶ ಹೊರಡಿಸಲಾಗಿದೆ. 20 ಸಾವಿರ ಜನರಿಗೆ ₹354 ಕೋಟಿ ವೆಚ್ಚದಲ್ಲಿ ತಲಾ 20 ಕುರಿಗಳು ಮತ್ತು ಒಂದು ಟಗರನ್ನು ಒಳಗೊಂಡ ಒಂದು ಘಟಕಕ್ಕೆ ₹1.75 ಲಕ್ಷ ನೀಡುವ ಆದೇಶ ಮಾಡಿದ್ದೇನೆ ಎಂದು ಬೊಮ್ಮಾಯಿ ಆದೇಶ ಪ್ರತಿ ತೋರಿಸಿದರು. ಆದರೆ, ₹1.75 ಲಕ್ಷದಲ್ಲಿ
ಶೇ 50 ರಷ್ಟು ಹಣವನ್ನು ಎನ್‌ಸಿಡಿಸಿ ಮೂಲಕ ಸಾಲದ ರೂಪದಲ್ಲಿ ನೀಡಲಾಗುತ್ತದೆ. ಶೇ 25 ಸಬ್ಸಿಡಿ, ಶೇ 25 ರಷ್ಟು ಫಲಾನುಭವಿಯೇ ನೀಡಬೇಕು. ಆದರೆ, ಭಾಷಣದಲ್ಲಿ ಮಾತ್ರ ಉಚಿತವಾಗಿ ನೀಡುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ’ ಎಂದು ಸಿದ್ದರಾಮಯ್ಯ ಕುಟುಕಿದರು..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT