ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಕಾಂಗ್ರೆಸ್‌ನಿಂದ ಹೊರಬರುತ್ತಾರೆ: ಕಟೀಲ್

ಯತ್ನಾಳ್ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಲಿದೆ
Last Updated 11 ಏಪ್ರಿಲ್ 2021, 20:05 IST
ಅಕ್ಷರ ಗಾತ್ರ

ಬೆಳಗಾವಿ: ‘ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ನಡೆದಿರುವ ಮೂರು ಕ್ಷೇತ್ರಗಳ ಉಪ ಚುನಾವಣೆ ಬಳಿಕ ಕಾಂಗ್ರೆಸ್‌ನಿಂದ ಹೊರಬರುತ್ತಾರೆ. ಒಂದು ವರ್ಷವೂ ಅಲ್ಲಿರುವುದಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ ಹೇಳಿದರು.

ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಒಳಜಗಳ ಬೀದಿಗೆ ಬಂದಿದೆ. ನಾನೇ‌ ಮುಂದಿನ ಮುಖ್ಯಮಂತ್ರಿ ಆಗುತ್ತೇನೆ ಎಂಬ ದುರಹಂಕಾರದಿಂದ ಸಿದ್ದರಾಮಯ್ಯ ಓಡಾಡುತ್ತಿದ್ದಾರೆ. ಅವರನ್ನು ಕಾಂಗ್ರೆಸ್‌ನಿಂದ ಹೊರ ಹಾಕಲು ಡಿ.ಕೆ. ಶಿವಕುಮಾರ್‌ ಮೊದಲಾದ ಕಾಂಗ್ರೆಸ್ ನಾಯಕರು ಒಗ್ಗಟ್ಟಾಗಿದ್ದಾರೆ. ನಾನಿಲ್ಲದ ಕಾಂಗ್ರೆಸ್ ಉಳಿಯಬಾರದು ಎನ್ನುವುದು ಸಿದ್ದರಾಮಯ್ಯ ಯೋಚನೆಯಾಗಿದೆ. ಹೀಗಾಗಿ, ಡಿಕೆಶಿ ಅಧ್ಯಕ್ಷರಾಗಿದ್ದಾಗ ಯಾವುದೇ ಉಪ ಚುನಾವಣೆ ಗೆಲ್ಲಬಾರದು ಎಂದು ನೋಡಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

‘ರಾಜರಾಜೇಶ್ವರಿ ಮತ್ತು ಶಿರಾ ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್‌ ನಮಗೆ ಉಪಕಾರ ಮಾಡಿದ್ದರು. ಈಗ ನಡೆದಿರುವ ಉಪ ಚುನಾವಣೆಗಳಲ್ಲೂ ಅವರ ಪ್ರಯತ್ನದಿಂದಾಗಿಯೇ ಗೆಲ್ಲುತ್ತೇವೆ. ಈ ಇಬ್ಬರು ಮಹಾನಾಯಕರು ಈ ಭಾಗದ ನಾಯಕ ಸತೀಶ ಜಾರಕಿಹೊಳಿ‌ ಅವರನ್ನು ಮುಗಿಸಲೆಂದು ಒಗ್ಗಟ್ಟಾಗಿದ್ದಾರೆ’ ಎಂದು ಟೀಕಿಸಿದರು.

‘ಏ.17ರಿಂದ ನಾಯಕತ್ವ ಬದಲಾವಣೆ ಪ್ರಕ್ರಿಯೆ ಶುರು’ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಅವರಿಗೆ ನೋಟಿಸ್ ನೀಡಿದ್ದು, ಪಕ್ಷ ಕ್ರಮ ಕೈಗೊಳ್ಳುತ್ತದೆ. 3 ಬಾರಿ ನೋಟಿಸ್ ನೀಡಲಾಗಿದೆ. ಪಕ್ಷದ ಬಿ ಫಾರಂ ಮೇಲೆ ಗೆದ್ದು ಶಾಸಕರಾದವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಕೆಲವು ನಿಯಮ ಅನುಸರಿಸಬೇಕಾಗುತ್ತದೆ. ಅವರ ಜವಾಬ್ದಾರಿ ತಿಳಿಸಿಕೊಡುವ ಕೆಲಸ ನಡೆದಿದೆ’ ಎಂದು ಹೇಳಿದರು.

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಿರುದ್ಧವೂ ಯತ್ನಾಳ್ ವಾಗ್ದಾಳಿ ನಡೆಸಿದ್ದಾರಲ್ಲಾ ಎಂಬ ಪ್ರಶ್ನೆಗೆ, ‘ಅವರು ಸಿದ್ಧವಿದ್ದರೆ ಪಕ್ಷ ಏನು ಮಾಡಬೇಕೋ ಅದನ್ನು ಮಾಡುತ್ತದೆ. ‌ಅವರಿಗೆ ನೋಟಿಸ್ ಯಾವುದು, ಲವ್ ಲೆಟರ್‌ ಯಾವುದು ಎನ್ನುವುದು ಗೊತ್ತಿಲ್ಲದಿದ್ದರೆ ಏನು ಮಾಡುವುದು?’ ಎಂದು ಕೇಳಿದರು.

‘ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಇಲ್ಲ’ ಎಂದರು.

‘ಅನುಕಂಪದಲ್ಲೂ ತಾರತಮ್ಯವೇ?’ ಎಂಬ ಪ್ರಶ್ನೆಗೆ, ‘ತೇಜಸ್ವಿನಿ ಅನಂತ್‌ಕುಮಾರ್‌ ವಿಷಯದಲ್ಲಿ, ಅದು ಸಾರ್ವತ್ರಿಕ ಚುನಾವಣೆ ಆಗಿತ್ತು. ಬೆಳಗಾವಿಯದ್ದು ಉಪ ಚುನಾವಣೆ. ದಿವಂಗತ ಸುರೇಶ ಅಂಗಡಿ ನೀಡಿದ್ದ ಕೊಡುಗೆ ಪರಿಗಣಿಸಿ ಟಿಕೆಟ್ ಕೊಡಲಾಗಿದೆ. ಕೆಲವು ಸಂದರ್ಭಗಳಲ್ಲಿ ಇಂಥ ನಿರ್ಧಾರ ಮಾಡಬೇಕಾಗುತ್ತದೆ. ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯವಾದರೆ ಸರಿಪಡಿಸುವ ಕೆಲಸವೂ ನಡೆದಿದೆ’ ಎಂದು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT