ಮಂಗಳವಾರ, ನವೆಂಬರ್ 29, 2022
29 °C
ಇದು ಪಿಎಫ್‌ಐ ಭಾಗ್ಯ

ಪಿಎಫ್ಐ: ಡಿಜಿಪಿ ಬೇಡವೆಂದರೂ ಮೊಕದ್ದಮೆ ವಾಪಸು ಪಡೆದಿದ್ದ ಸಿದ್ದರಾಮಯ್ಯ –ಆರ್ ಅಶೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪಿಎಫ್‌ಐ ನಿಷೇಧಿಸುವಂತೆ ನಾನೇ ಒತ್ತಾಯಿಸಿದ್ದೆ ಎಂದು ಈಗ ಹೇಳುವ ಸಿದ್ದರಾಮಯ್ಯ, ಹಿಂದೆ, 1,600 ಪಿಎಫ್ಐ ಕಾರ್ಯರ್ತರು ಭಾಗಿಯಾಗಿದ್ದ ವಿಧ್ವಂಸಕ ಕೃತ್ಯಗಳ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆದಿದ್ದರು‘ ಎಂದು ಕಂದಾಯ ಸಚಿವ ಆರ್. ಅಶೋಕ ದೂರಿದರು.

‘ಸಿದ್ದರಾಮಯ್ಯ ಪಿಎಫ್‌ಐ ಭಾಗ್ಯ’ ಹೆಸರಿನಲ್ಲಿ ಭಿತ್ತಿಚಿತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಹಿಂದೆ ತನ್ವೀರ್ ಸೇಠ್ ಪತ್ರ ಬರೆದು ಪಿಎಫ್‌ಐ ಕಾರ್ಯಕರ್ತರು ಅಮಾಯಕರು, ಅವರ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದಾರೆ. ಕೇಸ್ ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದ್ದರು. ಆದರೆ, ಯಾವುದೇ ಕಾರಣಕ್ಕೂ ಪ್ರಕರಣ ವಾಪಸ್ ಪಡೆಯಬಾರದೆಂದು ಅಂದಿನ ಪೊಲೀಸ್‌ ಮಹಾನಿರ್ದೇಶಕರು (ಡಿಜಿಪಿ) ಸರ್ಕಾರಕ್ಕೆ ಸಲಹೆ ನೀಡಿದ್ದರು. ಕಾನೂನು ಇಲಾಖೆ ಕೂಡಾ ವರದಿ ನೀಡಿತ್ತು’ ಎಂದರು.

‘ಯಾವುದೇ ಕಾರಣಕ್ಕೂ ಕೇಸ್ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲವೆಂದು ಅಂದಿನ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಲ್ ಕೂಡಾ ಹೇಳಿದ್ದರು. ಆದರೆ, ಈಗ ಪಿಎಫ್‌ಐ ನಿಷೇಧಿಸಲು ನಾವೇ ಹೇಳಿದ್ದು ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ’ ಎಂದರು.

‘ಕೊಡಗು, ಮೈಸೂರು, ಮಂಗಳೂರಿನಲ್ಲಿ ಪಿಎಫ್‌ಐನವರಿಗೆ ತರಬೇತಿ ನೀಡಲಾಗಿದೆ. ಬೈಕ್‌ನಲ್ಲಿ ಹೋಗುವಾಗ ಹೇಗೆ ಕತ್ತು ಕಡಿಯಬೇಕು, ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ ಗಲಭೆ ಹೇಗೆ ಮಾಡಬೇಕು ಎಂದೂ ತರಬೇತಿ ನೀಡಲಾಗಿದೆ. ಕೇಸ್ ಆಗದ ರೀತಿಯಲ್ಲಿ ಹೇಗೆ ಹತ್ಯೆ ಮಾಡಬೇಕೆಂದು ಕೇರಳದ ನಿವೃತ್ತ ಪೊಲೀಸರು ತರಬೇತಿ ನೀಡಿರುವ ಬಗ್ಗೆ ವರದಿಯಾಗಿದೆ. ಹೀಗಿರುವಾಗ ಸಿದ್ದರಾಮಯ್ಯ ನಿಷೇದಿಸಲು ನಾವೇ ಹೇಳಿದ್ದುಎಂದು ಹೇಳಿಕೊಳುತ್ತಾರೆ. ಅವರಿಗೆ ನಾಚಿಕೆಯಾಗಬೇಕು. ಕೂಡಲೇ ಅವರು ಕ್ಷಮೆ ಕೇಳಬೇಕು‘ ಎಂದು ಅಶೋಕ ಒತ್ತಾಯಿಸಿದರು.

‘ಪಿಎಫ್‌ಐನವರು ಇರುವ 175 ಕೇಸ್ ದಾಖಲಾಗಿದೆ. ಅವರಿಂದ ಪ್ರಾಯೋಜಿತರಾದ ಕೆಎಫ್‌ಡಿ ಭಾಗಿಯಾಗಿರುವ ಕೇಸ್ ಕೂಡಾ ಇದೆ’ ಎಂದರು.

‘ರಾಜಸ್ಥಾನ, ಛತ್ತಿಸ್‌ಗಡ್ ರಾಜ್ಯದಲ್ಲಿ ಮಾತ್ರ ಈಗ ಕಾಂಗ್ರೆಸ್ ಅಧಿಕಾರದಲ್ಲಿದೆ. ಉಳಿದಂತೆ ಕಾಂಗ್ರೆಸ್‌ಗೆ ಎಲ್ಲೂ ನೆಲೆ ಇಲ್ಲ. ಇನ್ನೇನು ರಾಜಸ್ಥಾನದಲ್ಲೂ ಕಾಂಗ್ರೆಸ್ ಮುಳುಗುವ ಹಂತಕ್ಕೆ ಬಂದಿದೆ. ಹೀಗಾಗಿ ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದೆ. ಹಿಂದೊಮ್ಮೆ ಕರ್ನಾಟಕ ಕಾಂಗ್ರೆಸ್ ಎಟಿಎಂ ಆಗಿತ್ತು’ ಎಂದು ಆರೋಪಿಸಿದರು.

‘ಕಾಂಗ್ರೆಸ್ ಪಾದಯಾತ್ರೆ ಕುಂಟುತ್ತಾ ಹೋಗುತ್ತಿದೆ. ಪಾದಯಾತ್ರೆ ಮುಗಿಸಿಕೊಂಡು ಬೇಗ ಗಂಟುಮೂಟೆ ಕಟ್ಟಿಕೊಂಡು ಹೋಗಲು ಕಾಂಗ್ರೆಸ್‌ನವರು ಸಿದ್ಧವಾಗಿದ್ದಾರೆ’ ಎಂದು ರಾಹುಲ್‌ ನೇತೃತ್ವದ ‘ಭಾರತ್ ಜೋಡೊ’ ಯಾತ್ರೆ ಬಗ್ಗೆ ಅಶೋಕ ಟೀಕಿಸಿದರು.

‘ಮೋದಿ ವಿರುದ್ಧ ಹೋರಾಡುವ ಧಮ್ ಕಾಂಗ್ರೆಸ್‌ನವರಿಗೆ ಇಲ್ಲ. ಹೀಗಾಗಿ ದೇಶದಲ್ಲಿ ರಾಹುಲ್ ಗಾಂಧಿ ವಾಯುವಿಹಾರ ಮಾಡುತ್ತಿದ್ದಾರೆ. ನ್ಯಾಷನಲ್ ಹೆರಾಲ್ಡ್ ಹೆಸರಲ್ಲಿ ನೂರಾರು ಕೋಟಿಹಣ ಮಾಡಿದ್ದರು. ಈಗ ಕಟಕಟ್ಟೆಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಅಂಥವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್‌ನವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಗಾಂಧೀಜಿ ಹೇಳಿದ ರಾಷ್ಟ್ರೀಯ ಕಾಂಗ್ರೆಸ್ ಮುಚ್ಚಲಾಗಿದೆ‌. ಈಗ ಇರುವುದು ಭ್ರಷ್ಟಾಚಾರದ ಕಾಂಗ್ರೆಸ್’ ಎಂದೂ ವಾಗ್ದಾಳಿ ನಡೆಸಿದರು.

ತೆರವು ಕಾರ್ಯಾಚರಣೆ ಮುಂದುವರಿಯಲಿದೆ: ‘ರಾಜಕಾಲುವೆ ಒತ್ತುವರಿಯಾಗಿದ್ದು ತೆರವು ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಈಗಾಗಲೇ ಒಂದು ಸುತ್ತಿನ ತೆರವು ಕಾರ್ಯಾಚರಣೆ ಆಗಿದೆ. ಆಯುಧ ಪೂಜೆ ಇರುವುದರಿಂದ ಎಲ್ಲರೂ ಊರಿಗೆ ಹೋಗಿದ್ದಾರೆ. ಹಬ್ಬ ಮುಗಿದ ನಂತರ ಮತ್ತೊಂದು ಸುತ್ತಿನ ತೆರವು ಕಾರ್ಯಚರಣೆ ನಡೆಯಲಿದೆ’ ಎಂದು ಅಶೋಕ ತಿಳಿಸಿದರು.

‘ಬಿಬಿಎಂಪಿ, ಕಂದಾಯ ಇಲಾಖೆ ಜಂಟಿ ಸಭೆ ನಡೆಸಲಾಗಿದೆ. ಎಷ್ಟೇ ದೊಡ್ಡವರಿದ್ದರೂ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಲಿದೆ’ ಎಂದೂ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು