ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಿ: ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಪತ್ರ

Last Updated 1 ಜನವರಿ 2022, 12:13 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರನ್ನು ಸರ್ಕಾರ ಶೋಷಣೆ ಮಾಡದೆ, ಅವರ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಒತ್ತಾಯಿಸಿ ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

‘ರಾಜ್ಯದ 440 ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ 14,183 ಅತಿಥಿ ಉಪನ್ಯಾಸಕರು ಹಲವು ದಿನಗಳಿಂದ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಅತಿಥಿ ಉಪನ್ಯಾಸಕರ ಜೊತೆ ಮಾನವೀಯತೆಯಿಂದ ವರ್ತಿಸಬೇಕು’ ಎಂದೂ ಪತ್ರದಲ್ಲಿ ಅವರು ಆಗ್ರಹಿಸಿದ್ದಾರೆ.

‘ಸೇವೆಗೆ ಕನಿಷ್ಠ ಭದ್ರತೆ ನೀಡಬೇಕು ಮತ್ತು ವರ್ಷದ ಎಲ್ಲ ತಿಂಗಳು ಸಂಬಳ ನೀಡಬೇಕು. ಜೊತೆಗೆ, ಘನತೆಯಿಂದ ಬದುಕುವುದಕ್ಕೆ ಬೇಕಾಗುವಷ್ಟನ್ನು ಸಂಬಳವನ್ನು ಹೆಚ್ಚಿಸಬೇಕು ಎಂದು ಅತಿಥಿ ಉಪನ್ಯಾಸಕರು ಬೇಡಿಕೆ ಇಟ್ಟಿದ್ದಾರೆ. ಈ ಬೇಡಿಕೆಗಳು ದುಬಾರಿಯಾದುವೇನಲ್ಲ. ಸರ್ಕಾರ ಈಗ ನೀಡುತ್ತಿರುವುದಕ್ಕೆ ಗರಿಷ್ಠ ₹ 200 ಕೋಟಿ ಹೆಚ್ಚು ನೀಡಿದರೆ ಈ ಸಮಸ್ಯೆ ಬಗೆಹರಿಯುತ್ತದೆ. ಆದರೆ, ಸರ್ಕಾರ ಅವರ ಬೇಡಿಕೆಗಳ ಕುರಿತು ಕಣ್ಣು, ಕಿವಿ ಮುಚ್ಚಿಕೊಂಡು ಕುಳಿತಿದೆ. ಸರ್ಕಾರದ ಈ ನಿರ್ಲಕ್ಷ್ಯ ಅಮಾನವೀಯವಾದುದು’ ಎಂದೂ ಸಿದ್ದರಾಮ್ಯ ಅಭಿಪ್ರಾಯಪಟ್ಟಿದ್ದಾರೆ.

‘ಎರಡು ವರ್ಷಗಳಲ್ಲಿ ಪ್ರತಿ ವಸ್ತುಗಳ ಬೆಲೆ‌ ದುಪ್ಪಟ್ಟಾಗಿದೆ. ಆದ್ದರಿಂದ ಸರ್ಕಾರ ನೀಡುತ್ತಿರುವ ಪುಡಿಗಾಸಿನಲ್ಲಿ ಇವರು ಬದುಕುವುದು ಹೇಗೆ? ಈ ಉಪನ್ಯಾಸಕರುಗಳು ಎಂ.ಎ, ಎಂ.ಎಸ್ಸಿ, ಎಂ.ಕಾಂ, ಪಿಎಚ್.ಡಿ ಪದವಿ ಪಡೆದಿದ್ದಾರೆ. ಯುಜಿಸಿ ನಡೆಸುವ ಅರ್ಹತಾ ಪರೀಕ್ಷೆಗಳನ್ನು ಪಾಸು ಮಾಡಿದ್ದಾರೆ. ಅವರಿಗೆ ಗೌರವಧನವೆಂದು ತಿಂಗಳಿಗೆ ₹ 11 ಸಾವಿರದಿಂದ ₹ 13 ಸಾವಿರ ಮಾತ್ರ ನೀಡಲಾಗುತ್ತಿದೆ. ಅದೂ ವರ್ಷದಲ್ಲಿ ಎಂಟು ತಿಂಗಳು ಮಾತ್ರ. ಈ ಅತಿಥಿ ಉಪನ್ಯಾಸಕರು ಕೂಡ ಯುಜಿಸಿ ಸಂಬಳ ಪಡೆಯುವ ಉಪನ್ಯಾಸಕರಷ್ಟೆ ಪರಿಣಾಮಕಾರಿಯಾಗಿ ಪಾಠ- ಪ್ರವಚನಗಳನ್ನು ಮಾಡುತ್ತಾರೆ. ಆದರೂ ಅತಿ ಕಡಿಮೆ ಗೌರವಧನ ಪಡೆಯುತ್ತಾರೆ. ಹೀಗಾಗಿ ಇದನ್ನು ಕೆಲವರು ಶೋಷಣೆ ಎಂದು ಕರೆದಿದ್ದಾರೆ’ ಎಂದಿದ್ದಾರೆ.

‘ಸರ್ಕಾರ ಶೋಷಣೆ ಮಾಡುತ್ತಿದೆ ಎಂಬ ಅತಿಥಿ ಉಪನ್ಯಾಸಕರ ಮಾತಿಗೆ ಸಚಿವರೊಬ್ಬರು ಕೆರಳಿ ಪ್ರತಿಭಟನಾಕಾರರನ್ನು ನಿಂದಿಸಿದ್ದಾರೆಂದು ಪತ್ರಿಕೆಗಳು ವರದಿ ಮಾಡಿವೆ. ಇದು ಸರಿಯಾದ ಕ್ರಮವಲ್ಲ. ಸರ್ಕಾರದ ನಿಲುವು ಖಂಡನೀ’ ಎಂದು ಹೇಳಿದ್ದಾರೆ.

‘ಅತಿಥಿ ಉಪನ್ಯಾಸಕರು ತರಗತಿಗಳನ್ನು ತೆಗೆದುಕೊಳ್ಳದ ಕಾರಣದಿಂದ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗದೆ ಕಾರಿಡಾರುಗಳಲ್ಲಿ ಓಡಾಡುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಸರ್ಕಾರಿ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳು ಹೊಡೆದಾಡಿಕೊಂಡು ವಿದ್ಯಾರ್ಥಿಯೊಬ್ಬ ಜೀವನ್ಮರಣದ ಸ್ಥಿತಿಯಲ್ಲಿ ಕೆ.ಸಿ. ಜನರಲ್ ಆಸ್ಪತ್ರೆಯ ಐಸಿಯುನಲ್ಲಿದ್ದಾನೆಂದು ವೈದ್ಯರೊಬ್ಬರು ಇಂದು ಹೇಳುತ್ತಿದ್ದರು. ಸರ್ಕಾರ ಕೂಡಲೆ ಗಮನ ಹರಿಸಿ ಆ ವಿದ್ಯಾರ್ಥಿಗೆ ಉತ್ತಮ ಚಿಕಿತ್ಸೆ ಕೊಡಿಸಿ ಗಾರೆ ಕೆಲಸ ಮಾಡುವ ಬಡ ಕೂಲಿಕಾರನ ಮಗನನ್ನು ಉಳಿಸಿಕೊಡಬೇಕು’ ಎಂದೂ ಅವರು ಒತ್ತಾಯಿಸಿದ್ದಾರೆ.

‘ಸರಿಯಾಗಿ ಸಂಬಳವಿಲ್ಲದೆ ಕೋವಿಡ್ ಸಂದರ್ಭದಲ್ಲಿ ಅನೇಕ ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಯಿಲೆಗಳಿಗೆ ಚಿಕಿತ್ಸೆ ಪಡೆದುಕೊಳ್ಳಲಾಗದೆ ಅಸುನೀಗಿದ್ದಾರೆ. ಹೀಗಾಗಿ ಸರ್ಕಾರ ಅವರನ್ನು ಇನ್ನಷ್ಟು ಶೋಷಣೆ ಮಾಡದೆ, ಬೇಡಿಕೆಗಳನ್ನು ಈಡೇರಿಸಿ ತಕ್ಷಣ ಬಗೆಹರಿಸಿ ತರಗತಿಗಳನ್ನು ತೆಗೆದುಕೊಳ್ಳುವಂತೆ ಮಾಡಬೇಕು’ ಎಂದೂ ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT