ಮಂಗಳವಾರ, ಡಿಸೆಂಬರ್ 7, 2021
27 °C
ಸಿಂದಗಿ ವಿಧಾನಸಭೆ ಉಪ ಚುನಾವಣೆ; ಲಕ್ಷ್ಮಣ ಸವದಿ ತಂತ್ರಕ್ಕೆ ಗೆಲುವು

DNP ಜಾತಿ ಸಮೀಕರಣಕ್ಕೆ ಅರಳಿದ ‘ಕಮಲ’

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಸಿಂದಗಿ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಭರ್ಜರಿ ಗೆಲುವು ದಾಖಲಿಸಿದ್ದಾರೆ.

ಕ್ಷೇತ್ರಕ್ಕೆ ಇದುವರೆಗೆ ನಡೆದ ಚುನಾವಣೆಯಲ್ಲಿಅಭ್ಯರ್ಥಿಗಳ ಸೋಲು– ಗೆಲುವು ಅಂತರ ಏಳೆಂಟು ಸಾವಿರಕ್ಕೆ ಸೀಮಿತವಾಗಿತ್ತು. ಆದರೆ, ಪ್ರಥಮ ಬಾರಿಗೆ 31,088 ಮತಗಳಿಂದ ಭೂಸನೂರ ಗೆಲುವು ಸಾಧಿಸಿ, ಮೂರನೇ ಬಾರಿ ಶಾಸಕರಾಗಿದ್ದಾರೆ.

ಸಿಂದಗಿ ಚುನಾವಣಾ ಉಸ್ತುವಾರಿ ಲಕ್ಷ್ಮಣ ಸವದಿ ಸಿಂದಗಿ ಪಟ್ಟಣದ ಜವಾಬ್ದಾರಿ ಜೊತೆಗೆ ಕ್ಷೇತ್ರದಲ್ಲಿ ಸಮುದಾಯ ಸಮೀಕರಣಕ್ಕೆ ಆದ್ಯತೆ ನೀಡಿದ ಫಲ ಗೆಲುವು ಸುಲಭವಾಗಿದೆ.

ಸಚಿವರಾದ ಗೋವಿಂದ ಕಾರಜೋಳ, ವಿ.ಸೋಮಣ್ಣ, ಸಿ.ಸಿ.ಪಾಟೀಲ, ಶಶಿಕಲಾ ಜೊಲ್ಲೆ ಅವರಿಗೆ ಸಿಂದಗಿ ವಿಧಾನಸಭಾ ವ್ಯಾಪ್ತಿಯಲ್ಲಿರುವ ಏಳು ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ಉಸ್ತುವಾರಿಯನ್ನು ವಹಿಸಿ, ಒಂದು ತಿಂಗಳು ಕ್ಷೇತ್ರದ ಹಳ್ಳಿ, ಹಳ್ಳಿಯನ್ನು ಸುತ್ತಿ ಎಲ್ಲ ಸಮುದಾಯದ ಮುಖಂಡರು, ಮತದಾರರ ಬೇಕು, ಬೇಡಗಳನ್ನು ಆಲಿಸಿ, ಬೇಡಿಕೆ ಈಡೇರಿಸಿದರು. ಬಹುಸಂಖ್ಯೆಯಲ್ಲಿರುವ ತಳವಾರ ಸಮುದಾಯಕ್ಕೆ ಎಸ್.ಟಿ.ಮೀಸಲಾತಿ ನೀಡುವುದಾಗಿ ಭರವಸೆ ನೀಡಿ ಆ ಸಮುದಾಯದ ಮತಗಳನ್ನು ಸೆಳೆದು ಗೆಲುವನ್ನು ಸುಲಭವಾಗಿಸಿದರು.

ಭೂಸನೂರ ಅವರ ಸರಳ ವ್ಯಕ್ತಿತ್ವ ಮತ್ತು 2018ರಲ್ಲಿ ಸೋತರೂ ಜನರೊಂದಿಗಿನ ನಿರಂತರ ಸಂಪರ್ಕ ಹಾಗೂ ಕಡಿಮೆ ಅಂತರದ ಸೋಲಿನ ಅನುಕಂಪ ಈ ಬಾರಿ ಗೆಲುವಿಗೆ ಸೋಪಾನವಾಯಿತು.

ಕೈಹಿಡಿಯದ ಅನುಕಂಪ, ಅಹಿಂದ:

ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗೆ ತಂದೆ, ಮಾಜಿ ಸಚಿವ ಎಂ.ಸಿ.‌ಮನಗೂಳಿ ಸಾವಿನ ಅನುಕಂಪ ಚುನಾವಣೆಯಲ್ಲಿ ಕೈಹಿಡಿಯಲಿಲ್ಲ. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಅವರಿಗೆ ಮೂಲ ಕಾಂಗ್ರೆಸ್ಸಿಗರು ಚುನಾವಣೆಯಲ್ಲಿ ಕೈಕೊಟ್ಟಿರುವುದು ಫಲಿತಾಂಶ ಸಾಬೀತುಪಡಿಸಿದೆ.

ಸಿಂದಗಿಯಲ್ಲಿ ಇದುವರೆಗೆ ಹಿಂದುಳಿದ ವರ್ಗದವರಿಗೆ ಟಿಕೆಟ್‌ ನೀಡುತ್ತಾ ಬಂದಿದ್ದ ಕಾಂಗ್ರೆಸ್‌, ಮೊದಲ ಸಲ ಲಿಂಗಾಯತ ಅಭ್ಯರ್ಥಿಗೆ ಮಣೆ ಹಾಕಿತ್ತು. ಮತಗಳಿಕೆಯಲ್ಲಿ ಎರಡನೇ ಸ್ಥಾನಕ್ಕೇರಿದರೂ ’ಅಹಿಂದ‘ ಮತದಾರರ ವಿಶ್ವಾಸ ಗಳಿಸುವಲ್ಲಿ ವಿಫಲವಾಯಿತು.

ಕಾಂಗ್ರೆಸ್‌ ಮುಖಂಡರು ಬೃಹತ್‌ ಸಮಾವೇಶಕ್ಕೆ ಸೀಮಿತವಾದರು. ತಳಮಟ್ಟದಲ್ಲಿ ಜನರ ಮನವೊಲಿಸುವ ಕಾರ್ಯಕ್ಕೆ ಆದ್ಯತೆ ನೀಡಲಿಲ್ಲ. ಮತದಾನ ಸಮೀಪಿಸುವಾಗ ಮಾಡಿದ ಜಾತಿ ಮುಖಂಡರ ಸಮಾವೇಶ ಪ್ರಯೋಜನವಾಗಲಿಲ್ಲ.

ಬೆಲೆ ಏರಿಕೆ, ಕೋವಿಡ್‌ ಪರಿಸ್ಥಿತಿ ನಿರ್ವಹಣೆಯಲ್ಲಿ ರಾಜ್ಯ, ಕೇಂದ್ರ ಸರ್ಕಾರದ ವೈಫಲ್ಯ, ರಾಜ್ಯ ಸರ್ಕಾರದ ಭ್ರಷ್ಟಾಚಾರ, ಪೊಲೀಸ್‌ ಕೇಸರಿಕರಣ, ಕಂಬಳಿ ವಿವಾದಗಳು ಮತದಾರರ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.

ಕ್ಷೇತ್ರ ಕಳೆದುಕೊಂಡ ಜೆಡಿಎಸ್‌:

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಕುಟುಂಬವೇ ಸಿಂದಗಿಯಲ್ಲಿ ಬೀಡುಬಿಟ್ಟು ಪ್ರಚಾರ ನಡೆಸಿದರೂ ಮತದಾರರ ಒಲವು ತೋರಲಿಲ್ಲ.

ರಾಜಕೀಯದ ಗಂಧಗಾಳಿ ಗೊತ್ತಿಲ್ಲದ ಅಭ್ಯರ್ಥಿ ನಾಜಿಯಾ ಅಂಗಡಿ ಕನಿಷ್ಠ ಸ್ಪರ್ಧೆಯನ್ನೂ ಒಡ್ಡದೇ ಠೇವಣಿ ಕಳೆದುಕೊಂಡಿದ್ದಾರೆ. ಜೊತೆಗೆ ಜೆಡಿಎಸ್‌ ತನ್ನ ಕ್ಷೇತ್ರವನ್ನು ಕಳೆದುಕೊ‌ಂಡಿದೆ.

ಜೆಡಿಎಸ್‌ ಎರಡು ಭಾರಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದೂ ಎಂ.ಸಿ ಮನಗೂಳಿ ಅವರ ವರ್ಚಸ್ಸಿನಿಂದ ಎಂಬುದು ಈ ಚುನಾವಣೆಯಲ್ಲಿ ಸಾಬೀತಾಗಿದೆ.

‘ಜೆಡಿಎಸ್‌ಗೆ ಈ ಕ್ಷೇತ್ರದಲ್ಲಿ ಗೆಲ್ಲುವುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್‌ ಸೋಲಿಸಬೇಕು ಎಂಬುದೇ ಒಂದಂಶದ ಕಾರ್ಯಕ್ರಮವಾಗಿತ್ತು’ ಎಂಬ ಕಾಂಗ್ರೆಸ್‌ ಮುಖಂಡರ ಮಾತಿಗೆ ಮುಸ್ಲಿಂ ಮತದಾರರು ಓಗೊಟ್ಟ ಪರಿಣಾಮ ಜೆಡಿಎಸ್‌ ಹೀನಾಯ ಸೋಲು ಅನುಭವಿಸಬೇಕಾಯಿತು.

***

ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಲಕ್ಷ್ಮಣ ಸವದಿ, ಪಕ್ಷದ ಅಧ್ಯಕ್ಷರು, ಸಚಿವರು, ಎಲ್ಲ ನಾಯಕರ ಶ್ರಮವಹಿಸಿ ನನ್ನನ್ನು ಗೆಲ್ಲಿಸಿದ್ದಾರೆ. ಜನರಿಗೆ ನೀಡಿರುವ ಭರವಸೆ ಈಡೇರಿಸಲು ಆದ್ಯತೆ ನೀಡುತ್ತೇನೆ
–ರಮೇಶ ಭೂಸನೂರ, ವಿಜೇತ ಬಿಜೆಪಿ ಅಭ್ಯರ್ಥಿ,ಸಿಂದಗಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.