ಶುಕ್ರವಾರ, ಅಕ್ಟೋಬರ್ 22, 2021
29 °C

ಎಂ.ಸಿ. ಮನಗೂಳಿಯನ್ನು ಮನೆ ಮಗನಂತೆ ಬೆಳೆಸಿದ್ದೆ: ಎಚ್‌.ಡಿ.ದೇವೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸಿಂದಗಿ ಮತ್ತು ಹಾನಗಲ್‌ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲ ಮಾಡಿಕೊಡಲು ಜೆಡಿಎಸ್‌ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ನಮ್ಮ ಅಭ್ಯರ್ಥಿಗಳನ್ನು ಕಾಂಗ್ರೆಸ್‌ನವರು ಹೊತ್ತೊಯ್ದರೆ ನಾವೇನು ಮಾಡಬೇಕು’ ಎಂದು ಎಚ್‌.ಡಿ. ದೇವೇಗೌಡ ಪ್ರಶ್ನಿಸಿದರು.

ಜೆಡಿಎಸ್‌ ಪ್ರಧಾನ ಕಚೇರಿ ಜೆ.ಪಿ. ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿಂದಗಿಯಲ್ಲಿ ಎಂ.ಸಿ. ಮನಗೂಳಿ ಅವರಿಗೆ ಅವಕಾಶ ನೀಡಿದ್ದೇ ನಾನು. ಸಂಕಷ್ಟದಲ್ಲೂ ಅವರನ್ನು ಮಂತ್ರಿ ಮಾಡಿದ್ದೆವು. ಮನೆಯ ಮಗನಂತೆ ಬೆಳೆಸಿದ್ದೆ. ಆದರೆ, ಅವರ ಮಗ ಈಗ ಕಾಂಗ್ರೆಸ್‌ಗೆ ಹೋಗಿದ್ದಾರೆ. ಕಾಂಗ್ರೆಸ್‌ನವರಿಗೆ ನಮ್ಮ ಅಭ್ಯರ್ಥಿಯೇ ಬೇಕಾ’ ಎಂದು ಕೇಳಿದರು.

‘ನೀವು ನಮ್ಮ ಅಭ್ಯರ್ಥಿಯನ್ನು ಹೊತ್ತುಕೊಂಡು ಹೋದರೆ ನಾವು ಸುಮ್ಮನಿರಬೇಕಾ? ಬಿಜೆಪಿಯನ್ನು ಗೆಲ್ಲಿಸಲು ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಸಿದ್ದೇವೆ ಎಂಬುದು ಸುಳ್ಳು. ನಮ್ಮ ಅಭ್ಯರ್ಥಿಯನ್ನು ನಾವು ಸ್ಪರ್ಧೆಗಿಳಿಸಿದ್ದೇವೆ’ ಎಂದರು.

‘ಮುಸ್ಲಿಮರನ್ನು ನೀವು ಗುತ್ತಿಗೆಗೆ ಪಡೆದಿಲ್ಲ. ನಾನು ಬೆಳೆಸಿದ ಮುಸ್ಲಿಂ ಮುಖಂಡ ಈಗ ನಿಮಗೆ ಬಲಗೈ ಆಗಿ ಶಕ್ತಿ ತುಂಬಿದ್ದಾರೆ. ಅವರಿಗೆ ಬಲಗೈ ಬಂಟ ಎನ್ನುವುದಿಲ್ಲ’ ಎಂದು ಪರೋಕ್ಷವಾಗಿ ಜಮೀರ್‌ ಅಹಮ್ಮದ್ ಖಾನ್‌ ವಿಷಯ ಪ್ರಸ್ತಾಪಿಸಿದರು.

ಕಾಂಗ್ರೆಸ್‌ ಸ್ಥಿತಿ ಎಲ್ಲಿಗೆ ಬಂದು ತಲುಪಿದೆ ಎಂಬುದು ಗೊತ್ತಿದೆ. ಯಾವ ರಾಜ್ಯದಲ್ಲಿ ಏನೇನು ಆಗಿದೆ ಎಂಬುದೂ ಗೊತ್ತು. ತಮ್ಮನ್ನು ಕೆಣಕಿದರೆ ಸುಮ್ಮನಿರುವುದಿಲ್ಲ ಎಂದು ದೇವೇಗೌಡ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು