ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂದಗಿ–ಹಾನಗಲ್‌ ಉಪಚುನಾವಣೆ: ಮತದಾನಕ್ಕೆ ಸಕಲ ಸಿದ್ಧತೆ

ನಾಳೆ ಬೆಳಿಗ್ಗೆ 7 ರಿಂದ ಸಂಜೆ 7ರವರೆಗೆ ಮತದಾನ
Last Updated 28 ಅಕ್ಟೋಬರ್ 2021, 22:15 IST
ಅಕ್ಷರ ಗಾತ್ರ

ವಿಜಯಪುರ: ರಾಜ್ಯ ರಾಜಕೀಯದಲ್ಲಿ ಕುತೂಹಲ ಕೆರಳಿಸಿರುವ ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ಅ.30ರಂದು ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಮತದಾನ ನಡೆಯಲಿದೆ.

ಮುಕ್ತ ನ್ಯಾಯಸಮ್ಮತ ಚುನಾವಣೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಮತದಾನಕ್ಕೆ ಸಂಬಂಧಿಸಿದಂತೆ ಒಟ್ಟು 297 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.ಮತದಾನ ಕಾರ್ಯಕ್ಕೆ 1,308 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಒಟ್ಟು 2,34,584 ಮತದಾರರಿದ್ದಾರೆ ಎಂದರು.

307 ಲೀಟರ್‌ ಮದ್ಯ ವಶ: ಉಪ ಚುನಾವಣೆಗೆ ಸಂಬಂಧಿಸಿದಂತೆ ಇದುವರೆಗೆ₹ 1.57 ಲಕ್ಷ ಬೆಲೆ ಬಾಳುವ 307 ಲೀಟರ್‌ ಮದ್ಯ,4 ಕೆ.ಜಿ ಗಾಂಜಾ, 7 ದ್ವಿಚಕ್ರವಾಹನ, ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ನ.2ರಂದು ಮತ ಎಣಿಕೆ: ವಿಜಯಪುರ ನಗರದ ಸೈನಿಕ ಶಾಲೆಯಲ್ಲಿ ನ.2 ರಂದು ಬೆಳಿಗ್ಗೆ 8 ರಿಂದ ಮತ ಎಣಿಕೆ ನಡೆಯಲಿದೆ. ಸಿಂದಗಿ ಆರ್.ಡಿ.ಪಾಟೀಲ್ ಕಾಲೇಜಿನಲ್ಲಿ ಮಸ್ಟರಿಂಗ್, ಡಿ–ಮಸ್ಟರಿಂಗ್ ಕೇಂದ್ರ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಮತಯಾಚನೆ: ಸಿಂದಗಿ ಉಪಚುನಾವಣೆ ಕಣದಲ್ಲಿರುವ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ ಮನಗೂಳಿ, ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ, ಜೆಡಿಎಸ್‌ ಅಭ್ಯರ್ಥಿ ನಾಜಿಯಾ ಅಂಗಡಿ ಅವರು ಗುರುವಾರ ಮನೆಮನೆಗೆ ತೆರಳಿ ಮತಯಾಚಿಸಿದರು.

263 ಮತಗಟ್ಟೆಗಳ ಸ್ಥಾಪನೆ
ಹಾವೇರಿ: ಬಿಜೆಪಿ–ಕಾಂಗ್ರೆಸ್‌ ನಡುವಿನ ಜಿದ್ದಾಜಿದ್ದಿ ಕಣವಾದ ಹಾನಗಲ್‌ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಅ.30ರಂದು ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಮತದಾನ ನಡೆಯಲಿದೆ.

ವ್ಯವಸ್ಥಿತ ಮತದಾನಕ್ಕಾಗಿ ಹಾನಗಲ್‌ ಕ್ಷೇತ್ರ ವ್ಯಾಪ್ತಿಯಲ್ಲಿ 263 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 1,155 ಸಿಬ್ಬಂದಿಯನ್ನು ನಿಯೋಜಿಸಿ ತರಬೇತಿ ನೀಡಲಾಗಿದೆ. ಒಟ್ಟು 2,04,481 ಮತದಾರರಿದ್ದಾರೆ. ಒಂದು ‘ಅಂಗವಿಕಲ ಸ್ನೇಹಿ’ ಮತಗಟ್ಟೆ ಹಾಗೂ ಎರಡು ‘ಸಖಿ’ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 121 ಮತಗಟ್ಟೆಗಳಲ್ಲಿ ‘ವೆಬ್ ಕಾಸ್ಟಿಂಗ್’ ಸೌಲಭ್ಯ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ತಿಳಿಸಿದ್ದಾರೆ.

ನ.2ರಂದು ಮತ ಎಣಿಕೆ: ಹಾವೇರಿ ನಗರದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ನ.2ರಂದು ಬೆಳಿಗ್ಗೆ 8ರಿಂದ ಮತ ಎಣಿಕೆ ನಡೆಯಲಿದೆ. ಹಾನಗಲ್‌ ಪಟ್ಟಣದ ಕುಮಾರೇಶ್ವರ ಕಾಲೇಜಿನಲ್ಲಿಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕೇಂದ್ರ ಸ್ಥಾಪಿಸಲಾಗಿದೆ.

ಮನೆ–ಮನೆ ಪ್ರಚಾರ: ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ, ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ ಹಾಗೂ ಜೆಡಿಎಸ್‌ ಅಭ್ಯರ್ಥಿ ನಿಯಾಜ್‌ ಶೇಖ್‌ ಹಾಗೂ ಪಕ್ಷೇತರ ಅಭ್ಯರ್ಥಿಗಳು ಮನೆ–ಮನೆಗೆ ತೆರಳಿ ಮತ ಯಾಚಿಸಿದರು.

ಕರ್ತವ್ಯ ಲೋಪ: ಉಪನ್ಯಾಸಕ ಅಮಾನತು
ಹಾವೇರಿ: ಹಾನಗಲ್‌ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಚಿಕ್ಕಾಂಶಿ ಹೊಸೂರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವಸಂತರಾಜ ಸಿ.ಎಸ್‌. ಅವರನ್ನು ಕರ್ತವ್ಯ ಲೋಪದ ಆರೋಪದಡಿ ಚುನಾವಣಾಧಿಕಾರಿ ಸಂಜಯ ಶೆಟ್ಟೆಣ್ಣನವರ ಅಮಾನತು ಮಾಡಿದ್ದಾರೆ.

ಹಾನಗಲ್‌ ತಾಲ್ಲೂಕಿನ ಗೊಂದಿ ಚೆಕ್‌ಪೋಸ್ಟ್‌ಗೆ ಚುನಾವಣಾ ಸಾಮಾನ್ಯ ವೀಕ್ಷಕರು ಗುರುವಾರ ಭೇಟಿ ನೀಡಿದ್ದ ಸಂದರ್ಭ, ಎಸ್‌.ಎಸ್‌.ಟಿ. ತಂಡದ ಮುಖ್ಯಸ್ಥರಾಗಿದ್ದ ವಸಂತರಾಜ ಸಮರ್ಪಕವಾಗಿ ಉತ್ತರಿಸದೇ ಕರ್ತವ್ಯ ನಿರ್ಲಕ್ಷ್ಯತನ ತೋರಿದ್ದಾರೆ ಎಂದು ವರದಿ ಸಲ್ಲಿಕೆಯಾಗಿತ್ತು ಎಂದು ಪ್ರಕಟಣೆ ತಿಳಿಸಿದೆ.

ಕೆಆರ್‌ಎಸ್‌ ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲು: ಚುನಾವಣಾ ಅಧಿಕಾರಿಗಳಿಂದ ಅನುಮತಿ ಪಡೆಯದೆ ವಾಹನಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದ ಆರೋಪದ ಮೇಲೆ ಕರ್ನಾಟಕ ರಾಷ್ಟ್ರೀಯ ಪಕ್ಷದ (ಕೆಆರ್‌ಎಸ್‌) ಅಭ್ಯರ್ಥಿ ಉಡಚಪ್ಪ ಉದ್ದನಕಾಲ ಮತ್ತು ಪಕ್ಷದ ಏಜೆಂಟ್‌ ಲಕ್ಕಪ್ಪ ದೂದಿಹಳ್ಳಿ ವಿರುದ್ಧ ಹಾನಗಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT