ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪನ ಪ್ರತಿಷ್ಠೆ ಉಳಿಸಲು ಪುತ್ರರ ಹೋರಾಟ

ಶಿರಾ: ರಾಜಕೀಯ ಭವಿಷ್ಯ ಭದ್ರತೆಗೆ ಯತ್ನ
Last Updated 30 ಅಕ್ಟೋಬರ್ 2020, 19:00 IST
ಅಕ್ಷರ ಗಾತ್ರ

ತುಮಕೂರು: ಅಪ್ಪ ಹಾಗೂ ಕುಟುಂಬದ ಪ್ರತಿಷ್ಠೆ ಮುಕ್ಕಾಗಬಾರದು ಎನ್ನುವ ಉದ್ದೇಶದಿಂದ ಶಿರಾ ಉಪಚುನಾವಣೆಯಲ್ಲಿ ಮಕ್ಕಳು ಹೋರಾಟದ ಕಂಕಣ ತೊಟ್ಟು ಪ್ರಚಾರದ ದಂಡನಾಯಕರಾಗಿದ್ದಾರೆ. ಪುತ್ರರೇ ‘ಸ್ಟಾರ್’ ಪ್ರಚಾರಕರು ಎನಿಸಿದ್ದಾರೆ.

ಶಿರಾ ಚುನಾವಣೆಯು ತಂದೆಯ ಪ್ರತಿಷ್ಠೆಯನ್ನು ಕಾಪಾಡುವ ಹೊಣೆಗಾರಿಕೆಯನ್ನು ಮಕ್ಕಳಿಗೆ ವಹಿಸಿದೆ. ಮತ್ತೊಂದೆಡೆ ಮಕ್ಕಳಿಗೆ ಕ್ಷೇತ್ರದಲ್ಲಿ ‘ಉತ್ತರಾಧಿಕಾರಿ’ ಸಾಮರ್ಥ್ಯ ತೋರುವ ವೇದಿಕೆಯೂ ಆಗಿದೆ.

ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರ ಪುತ್ರರಾದ ಸಂತೋಷ್ ಮತ್ತು ಸಂದೀಪ್ ತಂದೆಗೆ ಜಯದ ಮಾಲೆ ತೊಡಿಸಲು ಹಳ್ಳಿ ಹಳ್ಳಿಗಳ ಮೂಲೆ ಮೂಲೆಗಳನ್ನು ಸುತ್ತುತ್ತಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಅಮ್ಮಾಜಮ್ಮ ಅವರ ಓಡಾಟಕ್ಕಿಂತ ಅವರ ಪುತ್ರ ಸತ್ಯಪ್ರಕಾಶ್ ಪ್ರಚಾರದಲ್ಲಿ ಸಕ್ರಿಯರಾಗಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ, ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡರ ಕುಟುಂಬದ ಮೂರನೇ ತಲೆಮಾರಿನ ರಾಜಕಾರಣಿ ಪ್ರಜ್ವಲ್ ರೇವಣ್ಣ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಅವರ ಪುತ್ರ ಹಾಗೂ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್‌. ರಾಜೇಂದ್ರ, ತಮ್ಮ ಪಕ್ಷಗಳ ಅಭ್ಯರ್ಥಿಯ ಗೆಲುವಿಗಾಗಿ ಶಿರಾದಲ್ಲಿಯೇ ಬೀಡು ಬಿಟ್ಟಿದ್ದಾರೆ. ಈ ಮುಖಂಡರ ಜತೆ ಅವರದೇ ಆದ ಯುವಪಡೆ ಸಕ್ರಿಯವಾಗಿದೆ.

ಆಯಾ ಪಕ್ಷಗಳ ಜಿಲ್ಲಾಮಟ್ಟದ ಮುಖಂಡರ ಮಕ್ಕಳೂ ಶಿರಾದಲ್ಲಿ ಪ್ರಚಾರಕ್ಕೆ ಧುಮುಕಿದ್ದಾರೆ. ಇವರಿಗೂ ತಮ್ಮ ರಾಜಕೀಯ ಭವಿಷ್ಯ ಉತ್ತಮಪಡಿಸಿಕೊಳ್ಳಲು ಉಪ ಚುನಾವಣೆಯು ವೇದಿಕೆಯಾಗಿದೆ.

ಮುಖ್ಯಮಂತ್ರಿ ಬದಲಾವಣೆಯ ಧ್ವನಿಗಳನ್ನು ಅಡಗಿಸಿ ತಂದೆಯ ಗಾದಿ ಗಟ್ಟಿಗೊಳಿಸಬೇಕು ಎನ್ನುವ ದೃಷ್ಟಿಯಿಂದ ಬಿ.ವೈ. ವಿಜಯೇಂದ್ರ ಅವರಿಗೆ ಶಿರಾ ಉಪಚುನಾವಣೆ ಮಹತ್ವದ್ದಾಗಿದೆ. ಚುನಾವಣೆಯ ಆರಂಭದಿಂದಲೂ ಅವರು ಕ್ಷೇತ್ರದಲ್ಲಿಯೇ ಬೀಡು ಬಿಟ್ಟಿದ್ದಾರೆ. ಕೆ.ಆರ್‌.ಪೇಟೆ ನಂತರ ಶಿರಾ ಚುನಾವಣೆ ಅವರ ರಾಜಕೀಯ ತಂತ್ರಗಾರಿಕೆಗೆ ಪರೀಕ್ಷೆಯಾಗಿ ಒದಗಿ ಬಂದಿದೆ. ಶಿರಾದಲ್ಲಿ ವಿಜಯೇಂದ್ರ ಮುಂದಾಳತ್ವದಲ್ಲಿಯೇ ಚುನಾವಣೆ ನಡೆಯುತ್ತಿದೆ ಎಂದು ಯಡಿಯೂರಪ್ಪ ಸಹ ಹೇಳಿದ್ದಾರೆ.

ಜೆಡಿಎಸ್‌ನ ಭವಿಷ್ಯದ ನಾಯಕ ಎನಿಸಿರುವ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಹುಲಿಕುಂಟೆ ಹೋಬಳಿ ಜವಾಬ್ದಾರಿ ವಹಿಸಲಾಗಿದೆ. ಅಲ್ಲಿನ ಮನೆಯೊಂದರಲ್ಲಿ ವಾಸ್ತವ್ಯ ಹೂಡಿರುವ ಅವರು ವಿಜಯದಶಮಿಯನ್ನು ಶಿರಾದಲ್ಲಿಯೇ ಆಚರಿಸಿದ್ದಾರೆ.

ಬಿ.ಸತ್ಯನಾರಾಯಣ ಮೃತರಾದ ದಿನದಿಂದ ಅಮ್ಮಾಜಮ್ಮ ನಾಮಪತ್ರ ಸಲ್ಲಿಸುವವರೆಗಿನ ಎಲ್ಲ ಸಭೆ, ಸಮಾವೇಶಗಳಲ್ಲಿ ಪ್ರಜ್ವಲ್ ಪಾಲ್ಗೊಂಡಿದ್ದಾರೆ. ಜೆಡಿಎಸ್ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಹ ಸ್ಟಾರ್ ಪ್ರಚಾರಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT