ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾ: ಹೆಚ್ಚಿದ ಅಪರಿಚಿತ ಮುಖಗಳು!

ಪ್ರಚಾರಕ್ಕಾಗಿ ಹೊರಗಿನಿಂದ ಬಂದರು * ಹಳ್ಳಿಗಳಲ್ಲಿ ರಾತ್ರಿ ಕಾರ್ಯಾಚರಣೆ
Last Updated 28 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವಾಗ ಕ್ಷೇತ್ರದಾದ್ಯಂತ ಅಪರಿಚಿತ ಮುಖಗಳು ಹೆಚ್ಚಾಗಿ ಕಾಣತೊಡಗಿವೆ.ಸಂಜೆಯಾಗುತ್ತಿದ್ದಂತೆಯೇ ಹಳ್ಳಿಗಳಿಗೆ ತೆರಳುವ ಅಪರಿಚಿತ ಮುಖಗಳು ‘ರಾತ್ರಿ ಕಾರ್ಯಾಚರಣೆ‘ ಮುಗಿಸಿ ಬೆಳಗಿನ ಜಾವ ಶಿರಾಕ್ಕೆ ಮರಳುತ್ತವೆ.

ಹೌದು! ರಾಜ್ಯದ ನಾನಾ ಭಾಗಗಳಿಂದ ಬಂದಿರುವ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದಾರೆ. ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಮೂರು ರಾಜಕೀಯ ಪಕ್ಷಗಳು ಜಿದ್ದಾಜಿದ್ದಿಗೆ ಬಿದ್ದಂತೆ ಪ್ರಚಾರದಲ್ಲಿ ತೊಡಗಿವೆ.

ಈ ಬಾರಿ ಶಿರಾ ಕೋಟೆಯಲ್ಲಿ ಕಮಲ ಅರಳಿಸಬೇಕು ಎಂದು ಪಣ ತೊಟ್ಟಿರುವ ಬಿಜೆಪಿಯು ರಾಜ್ಯದ ನಾನಾ ಭಾಗಗಳಿಂದ ಕಾರ್ಯಕರ್ತರನ್ನು ಇಲ್ಲಿಗೆ ಕರೆಸಿಕೊಂಡಿದೆ.

ಶಿರಾ ಸುತ್ತಮುತ್ತ ಹಳ್ಳಿಗಳಲ್ಲಿ ಕಾಣುವ ಅಪರಿಚಿತ ಮುಖಗಳಲ್ಲಿ ಬಿಜೆಪಿ ಕಾರ್ಯಕರ್ತರ ಸಂಖ್ಯೆಯೇ ಹೆಚ್ಚು. ಬೆಂಗಳೂರು, ಮಂಡ್ಯ, ಹಾಸನ, ಮಂಗಳೂರು, ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ ಹೀಗೆ ನಾನಾ ಜಿಲ್ಲೆಗಳಿಂದ ಸಂಘ ಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರು ಇಲ್ಲಿಗೆ ಪ್ರಚಾರಕ್ಕೆ ಬಂದಿದ್ದಾರೆ.

ರಾತ್ರಿ ಕಾರ್ಯಾಚರಣೆ: ಹೊರಗಿನಿಂದ ಕ್ಷೇತ್ರಕ್ಕೆ ಬಂದಿಳಿದ ಕಾರ್ಯಕರ್ತರ ಕಾರ್ಯಾಚರಣೆ ಶುರುವಾಗುವುದೇ ರಾತ್ರಿ ವೇಳೆ. ಸಂಜೆಯಾದರೆ ವಾಹನಗಳಲ್ಲಿ ಗ್ರಾಮಗಳತ್ತ ಹೊರಡುವ ಕಾರ್ಯಕರ್ತರು ಸ್ವಸಹಾಯ ಗುಂಪುಗಳು ಮತ್ತು ಮಹಿಳೆಯರ ಮನವೊಲಿಸುವ ಕೆಲಸ ಮಾಡುತ್ತಾರೆ.

ಮತದಾರರಿಗೆ ಹಣ ಹಂಚುವ ಉದ್ದೇಶಕ್ಕಾಗಿಯೇ ಹೊರಗಿನವರನ್ನು ಇಲ್ಲಿಗೆ ಕರೆಸಲಾಗಿದೆ ‌ಎನ್ನುವುದು ಕಾಂಗ್ರೆಸ್, ಜೆಡಿಎಸ್ ಆರೋಪ.

ಸ್ಥಳೀಯ ಮುಖಂಡರಿಗಿಂತ ಹೊರಗಿನಿಂದ ಬಂದ ಕಾರ್ಯಕರ್ತರನ್ನೇ ಸ್ತ್ರೀ ಶಕ್ತಿ ಸಂಘಗಳಿಗೆ ಮತ್ತು ಜನರಿಗೆ ‘ಉಡುಗೊರೆ’ ತಲುಪಿಸಲು ಬಿಜೆಪಿ ಬಳಸಿಕೊಳ್ಳುತ್ತಿದೆ ಎನ್ನುವ ಆರೋಪ ವ್ಯಾಪಕವಾಗಿದೆ.

ದ್ವಾರಾಳು ಗ್ರಾಮದಲ್ಲಿ ಈಚೆಗೆ ನರಸಿಂಹಯ್ಯ ಎಂಬುವರಿಗೆ ಬಿಜೆಪಿ ಕಾರ್ಯಕರ್ತರು ಎನ್ನಲಾದ ವ್ಯಕ್ತಿಗಳು ರಾತ್ರಿ ಹಣ ನೀಡಲು ಮುಂದಾಗಿದ್ದರು. ಸ್ತ್ರೀ ಶಕ್ತಿ ಸಂಘಗಳ ಮಹಿಳೆಯರಿಗೆ ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಬೆಂಬಲಿಗರು ಅರಿಸಿನ ಕುಂಕುಮಕ್ಕೆ ಎಂದು ತಲಾ ₹ 200 ಹಂಚಿದ ವಿಡಿಯೊಗಳು ಈಗಾಗಲೇ ವೈರಲ್ ಆಗಿವೆ.

ಬೆಳ್ಳಾವಿ ಕ್ರಾಸ್‌ ಮನೆಯಲ್ಲಿ ವಾಸ: ಹೊರಗಿನಿಂದ ಬಂದ ಕಾರ್ಯಕರ್ತರುಬೆಳ್ಳಾವಿ ಕ್ರಾಸ್‌ನ ಮನೆಯೊಂದರಲ್ಲಿ ವಾಸ್ತವ್ಯ ಹೂಡಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಕಂಡ ನಂತರವೇಹಳ್ಳಿಗಳತ್ತ ಮುಖ ಮಾಡುತ್ತಾರೆ.

ಈ ಹಿಂದಿನ ವಿಧಾನಸಭಾ ಚುನಾವಣೆಗಳನ್ನು ಗಮನಿಸಿದಾಗ ಶಿರಾದಲ್ಲಿ ಬಿಜೆಪಿಗೆ ಬಲಿಷ್ಠವಾದ ಕಾರ್ಯಕರ್ತರ ಪಡೆ ಇಲ್ಲ. ಹಾಗಾಗಿ ಬಿಜೆಪಿ ಹೊರಗಿನ ಕಾರ್ಯಕರ್ತರನ್ನು ಕರೆಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ.

ಬಾಕ್ಸ್

31ಕ್ಕೆ ಮಹಾಸಂಪರ್ಕ ದಿನ

ಬಹಿರಂಗ ಪ್ರಚಾರದ ಅಂತಿಮ ದಿನವಾದ ಅ.31ರಂದು ಬಿಜೆಪಿ ಕಾರ್ಯಕರ್ತರು ಆಯಾ ಮತಗಟ್ಟೆಗಳಲ್ಲಿಯೇ ಇರಬೇಕು ಎಂದು ಪಕ್ಷ ಸೂಚಿಸಿದೆ. ಅಂದು ಮಹಾಸಂಪರ್ಕ ದಿನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಒಂದೇ ದಿನ 2.15 ಲಕ್ಷ ಮತದಾರರನ್ನು ಭೇಟಿ ಮಾಡಬೇಕು ಎನ್ನುವ ಗುರಿ ನಿಗದಿಗೊಳಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT