ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಸಿ ಸಂಗೀತದ ಮರುಹುಟ್ಟಿಗೆ ಪ್ರತಿಷ್ಠಾನಗಳು ಒಗ್ಗೂಡಲಿ: ಹಂಸಲೇಖ

ಡಾ. ತಿ.ನಂ. ಶಂಕರನಾರಾಯಣ, ಚಿತ್ತಪ್ಪಗೆ ಸಿರಿಬೆಳಗು ಪ್ರಶಸ್ತಿ ಪ್ರದಾನ
Last Updated 29 ಮೇ 2022, 15:11 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿರುವ ಎಲ್ಲ ಸಾಂಸ್ಕೃತಿಕ ಪ್ರತಿಷ್ಠಾನಗಳು ಒಗ್ಗೂಡಿ ದೇಸಿ ಸಂಗೀತದ ಮರು ಹುಟ್ಟಿಗೆ ಕಾರಣವಾಗುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು’ ಎಂದು ಸಂಗೀತ ನಿರ್ದೇಶಕ ಹಂಸಲೇಖ ಅಭಿಪ್ರಾಯಪಟ್ಟರು.

ನಾಡೋಜ ಸಿರಿಯಜ್ಜಿ ಸಾಂಸ್ಕೃತಿಕ ಪ್ರತಿಷ್ಠಾನ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಸಿರಿ ಬೆಳಗು’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ದೇಸಿ ಸಂಗೀತದ ಪುನರುಜ್ಜೀವನದ ಅಗತ್ಯವಿದೆ. ಈ ನಿಟ್ಟಿನಲ್ಲಿ ರೂಪಿಸುವ ಯೋಜನೆಗಳಿಗೆ ತಮ್ಮ ದೇಸಿ ಸಂಸ್ಥೆ ಸಹ ಸಹಕಾರ ನೀಡಲಿದೆ‘ ಎಂದರು.

‘ಜಾನಪದ ವಿಶ್ವಕೋಶ ಎಂದೇ ಖ್ಯಾತನಾಮರಾಗಿದ್ದ ಸಿರಿಯಜ್ಜಿ ನಾಡಿನ ಸಿರಿಯಾಗಿದ್ದರು. ಅವರು ನಿಜಕ್ಕೂ ದೇಸಿ ಪ್ರತಿನಿಧಿಯಾಗಿದ್ದರು. ಜಾನಪದವನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ದ ಮಹಾನ್‌ ದೇಸಿ ಕಲಾವಿದೆಯಾಗಿದ್ದರು. ತಿಳಿವಳಿಕೆ ಮತ್ತು ಅನುಭವದ ಅಕ್ಷರಗಳನ್ನು ಇರಿಸಿಕೊಂಡಿದ್ದ ಮಹಾಜ್ಞಾನಿ ಮತ್ತು ಪ್ರತಿಭೆಯಾಗಿದ್ದರು’ ಎಂದು ಸ್ಮರಿಸಿದರು.

ನಿವೃತ್ತ ಐಪಿಎಸ್‌ ಅಧಿಕಾರಿ ಡಿ.ಎನ್‌. ಮುನಿಕೃಷ್ಣ ಮಾತನಾಡಿ, ‘ಸಾಧನೆ ವೈಯಕ್ತಿಕವಾದರೂ ಸಾರ್ವಜನಿಕವಾಗಿ ಮನ್ನಣೆ ಪಡೆಯಬೇಕು. ಈ ನಿಟ್ಟಿನಲ್ಲಿ ಸಿರಿಯಜ್ಜಿಯ ಸಾಹಿತ್ಯದ ಮೌಲ್ಯಗಳು ಆದರ್ಶಪ್ರಾಯವಾಗಿದ್ದು, ಹೆಚ್ಚು ಜನಪ್ರಿಯಗೊಳಿಸುವ ಅಗತ್ಯವಿದೆ’ ಎಂದು ಸಲಹೆ ನೀಡಿದರು.

ನಾಡೋಜ ಸಿರಿಯಜ್ಜಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನೀಡುವ ‘ಸಿರಿಬೆಳಗು’ ಪ್ರಶಸ್ತಿಯನ್ನು ಬುಡಕಟ್ಟು ಪದಗಾರ ದಳವಾಯಿ ಚಿತ್ತಪ್ಪ ಮತ್ತು ಜಾನಪದ ವಿದ್ವಾಂಸರಾಗಿದ್ದ ದಿವಂಗತ ಡಾ.ತೀ.ನಂ. ಶಂಕರನಾರಾಯಣ ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ₹10 ಸಾವಿರ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ.

ಡಾ. ತೀ.ನಂ. ಶಂಕರನಾರಾಯಣ ಪರವಾಗಿ ಪ್ರಶಸ್ತಿ ಪಡೆದ ಅವರ ಪುತ್ರಿಯರಾದ ಅಪ‍ರ್ಣಾ ಮತ್ತು ಪೂರ್ಣಿಮಾ ಅವರು ಪ್ರಶಸ್ತಿ ಮೊತ್ತವನ್ನು ಪ್ರತಿಷ್ಠಾನಕ್ಕೆ ಹಿಂತಿರುಗಿಸುವ ಜತೆಗೆ ₹90 ಸಾವಿರ ಮೊತ್ತವನ್ನು ತಾವೇ ದೇಣಿಗೆಯಾಗಿ ನೀಡಿದರು. ಒಟ್ಟು ₹1 ಲಕ್ಷ ಮೊತ್ತದಲ್ಲಿ ತಮ್ಮ ತಂದೆ ಹೆಸರಿನಲ್ಲಿ ದತ್ತಿ ನಿಧಿ ಸ್ಥಾಪಿಸುವಂತೆ ಕೋರಿದರು.

ಡಾ. ಕೃಷ್ಣಮೂರ್ತಿ ಹನೂರು ಅವರ ‘ಬುಡಕಟ್ಟು ಪ್ರತಿಭೆ ಸಿರಿಯಜ್ಜಿ’ ಕೃತಿಯನ್ನು ಡಿ.ಎನ್‌. ಮುನಿಕೃಷ್ಣ ಬಿಡುಗಡೆ ಮಾಡಿದರು. ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದ ಅಧ್ಯಕ್ಷ ರಾಜಣ್ಣ, ಪ್ರತಿಷ್ಠಾನದ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT