ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ‘ಸಿರಿ’ ಕಸಿದ ದುಬಾರಿ ‘ಸಿರಿಧಾನ್ಯ’

ಶಿರಸಿಯ ಕದಂಬ ಕಂಪನಿ ಒಪ್ಪಂದ: ವಿದೇಶದಲ್ಲಿ ಕಡಿಮೆಯಾದ ಬೇಡಿಕೆ
Last Updated 30 ಮಾರ್ಚ್ 2021, 19:28 IST
ಅಕ್ಷರ ಗಾತ್ರ

ರಾಯಚೂರು: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹ 60 ಸಾವಿರ ಬೆಲೆ ಇರುವ ‘ಟೆಫ್ಫ್‌’ ಹೆಸರಿನ ಸಿರಿಧಾನ್ಯ
ಬೆಳೆದಿರುವ ದೇವದುರ್ಗ ತಾಲ್ಲೂಕಿನ ರಾಮದುರ್ಗದ ರೈತರು ನಷ್ಟದ ಸುಳಿಗೆ ಸಿಲುಕಿದ್ದಾರೆ. ಒಂದು ವರ್ಷದಿಂದ ಸಿರಿಧಾನ್ಯ ಮಾರಾಟವಾಗಿಲ್ಲ.

ಶಿರಸಿಯ ‘ಕದಂಬ ಅಗ್ರೊ ಪ್ರೊಡ್ಯೂಸರ್ ಲಿಮಿಟೆಡ್‌’ ಕಂಪನಿಯು 2019ರ ಮಾರ್ಚ್‌ 15ರಂದು ರೈತರೊಂದಿಗೆ ಒಪ್ಪಂದ ಮಾಡಿಕೊಂಡು, ಎರಡು ವರ್ಷಗಳವರೆಗೆ ಸಿರಿಧಾನ್ಯ ಖರೀದಿಸುವುದಾಗಿ ಹೇಳಿತ್ತು.

ರೈತ ವಿರೂಪನಗೌಡ ಅವರು ಮೊದಲ ವರ್ಷ ಮೂರು ಎಕರೆಯಲ್ಲಿ ನಾಲ್ಕು ಕ್ವಿಂಟಲ್‌ ಟೆಫ್ಫ್‌ ಬೆಳೆದಿದ್ದರು. ಪ್ರತಿ ಕ್ವಿಂಟಲ್‌ಗೆ ₹ 50 ಸಾವಿರ ಕೊಟ್ಟು ಕಂಪನಿ ಖರೀದಿಸಿತ್ತು. ಎರಡನೇ ವರ್ಷ ಹಲವು ರೈತರು ಸೇರಿ 40 ಕ್ವಿಂಟಲ್‌ನಷ್ಟು ಸಿರಿಧಾನ್ಯ ಬೆಳೆದಿದ್ದಾರೆ. ಆದರೆ, 2020ರ ಮಾರ್ಚ್‌ನಲ್ಲಿ ಬೆಳೆದಿದ್ದ ಫಸಲನ್ನು ಕದಂಬ ಕಂಪನಿ ಇದುವರೆಗೂ ಖರೀದಿಸಿಲ್ಲ ಎಂಬುದು ರೈತರ ದೂರು.

ಕದಂಬ ಕಂಪನಿಯ ಸಿಇಒ ನಾಗರಾಜ ಭಟ್‌ ಅವರನ್ನು ಈ ಕುರಿತು ವಿಚಾರಿಸಿದಾಗ, ‘ಲಾಕ್‌ಡೌನ್‌ ಅವಧಿಯಲ್ಲಿ ದೇಶ–ವಿದೇಶಗಳಲ್ಲಿರುವ ಎಲ್ಲ ತಾರಾ ಹೋಟೆಲ್‌ಗಳು ಬಂದ್ ಆಗಿದ್ದವು. ಈ ದುಬಾರಿ ಸಿರಿಧಾನ್ಯವನ್ನು ಇಂತಹ
ಹೋಟೆಲ್‌ಗಳಲ್ಲಿ ಮಾತ್ರ ಬಳಕೆ ಮಾಡುತ್ತಿದ್ದಾರೆ. ದೇವದುರ್ಗದ ರೈತರಿಂದ ಮೊದಲು ಖರೀದಿಸಿರುವ ಸಿರಿಧಾನ್ಯ ಕೂಡಾ ಹಾಗೇ ಉಳಿದಿದೆ. ಕಂಪನಿಯೇ ಲಕ್ಷಾಂತರ ರೂಪಾಯಿ ನಷ್ಟದಲ್ಲಿದ್ದು, ರೈತರಿಂದ ಮತ್ತೆ ಸಿರಿಧಾನ್ಯ ಖರೀದಿಸುವುದಕ್ಕೆ ಆಗುತ್ತಿಲ್ಲ’ ಎಂದರು.

‘ಕಂಪನಿ ಜತೆಗಿನ ಒಪ್ಪಂದ ನಂಬಿಕೊಂಡು ಒಂದು ವರ್ಷದಿಂದ ಟೆಫ್ಫ್‌ ಸಿರಿಧಾನ್ಯ ಸಂರಕ್ಷಣೆ ಮಾಡಿದ್ದೇವೆ. ಹತ್ತು ರೈತರು ಸಿರಿಧಾನ್ಯ ಬೆಳೆದಿದ್ದು, ಎಕರೆಗೆ ಒಂದೂವರೆ ಕ್ವಿಂಟಲ್‌ ಮಾತ್ರ ಇಳುವರಿ ಬರುತ್ತದೆ. ಬೆಳೆಗಾಗಿ ಸಾಲ ಮಾಡಿದ್ದು, ಮಾರಾಟವಾಗದೇ ನಷ್ಟ ಆಗುತ್ತಿದೆ‘ ಎಂದು ರೈತ ವಿರೂಪನಗೌಡ ಅಳಲು ತೋಡಿಕೊಂಡರು.

ಏನಿದು ಟೆಫ್ಫ್‌?: ಪೂರ್ವ ಆಫ್ರಿಕಾದ ಎರಿಟ್ರಿಯಾ ಮತ್ತು ಇಥಿಯೋಪಿಯಾ ರಾಷ್ಟ್ರಗಳಲ್ಲಿ ಇದನ್ನು ಹೆಚ್ಚಾಗಿ ಬೆಳೆಯುತ್ತಾರೆ. ಭಾರತ, ಆಸ್ಟ್ರೇಲಿಯಾ, ಅಮೆರಿಕ ಹಾಗೂ ಜರ್ಮನಿ ದೇಶಗಳಿಗೆ ಈಚೆಗೆ ಬೆಳೆ ಪರಿಚಯಿಸಲಾಗಿದೆ. ಇದು ಹುಲ್ಲಿನಂತೆ ಬೆಳೆಯುತ್ತದೆ.

ಅಲ್ಕೊಹಾಲ್‌ ತಯಾರಿಕೆಯಲ್ಲಿ ಇದನ್ನು ಬಳಕೆ ಮಾಡಲಾಗುತ್ತದೆ. ಜಾನುವಾರುಗಳಿಗೆ ಮೇವು ಆಗಿಯೂ ಉಪಯೋಗಿಸಲಾಗುತ್ತದೆ. ಕ್ಯಾಲ್ಸಿಯಂ, ಕಬ್ಬಿಣ ಹಾಗೂ ವಿಟಮಿನ್‌ ಸಿ ಅಂಶಗಳು ಇದರಲ್ಲಿ ಹೆಚ್ಚಾಗಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT