ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ| ಮದ್ಯದ ಅಮಲಿನಲ್ಲಿ ಪೆಟ್ರೋಲ್‌ ಸುರಿದು ಮನೆಗೆ ಬೆಂಕಿ: 6 ಮಂದಿ ದುರ್ಮರಣ

ಮದ್ಯ ಸೇವಿಸಿದ ಆರೋಪಿಯ ಹುಚ್ಚಾಟ: ಘಟನೆಯಿಂದ ಬೆಚ್ಚಿಬಿದ್ದ ಜನ
Last Updated 3 ಏಪ್ರಿಲ್ 2021, 13:56 IST
ಅಕ್ಷರ ಗಾತ್ರ

ಮಡಿಕೇರಿ: ಪೊನ್ನಂಪೇಟೆ ತಾಲ್ಲೂಕಿನ ಮುಗುಟಗೇರಿ ಗ್ರಾಮದಲ್ಲಿ, ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಕುಟುಂಬದವರು ವಾಸವಾಗಿದ್ದ ಮನೆಗೇ ಶನಿವಾರ ನಸುಕಿನಲ್ಲಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾನೆ. ಈ ಘಟನೆಯಲ್ಲಿ, ನಾಲ್ವರು ಮಕ್ಕಳು ಹಾಗೂ ಆರೋಪಿಯ ಪತ್ನಿಯೂ ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ.

ಮೂವರು ಸ್ಥಳದಲ್ಲಿಯೇ ಸಜೀವ ದಹನವಾಗಿದ್ದರೆ, ಮತ್ತೆ ಮೂವರು ಮೈಸೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮನೆಯಲ್ಲಿ ಒಟ್ಟು ಎಂಟು ಮಂದಿ ನಿದ್ರಿಸುತ್ತಿದ್ದರು. ಆರೋಪಿಯ ಪತ್ನಿ ಬೇಬಿ (40), ಪಣಿ ಎರವರ ಸೀತೆ (45) ಹಾಗೂ ತೋಲ ಎಂಬುವರ ಪುತ್ರಿ ಪ್ರಾರ್ಥನಾ (6) ಸ್ಥಳದಲ್ಲೇ ಸಜೀವ ದಹನವಾಗಿದ್ದು, ದೇಹಗಳು ಗುರುತಿಸಲಾರದಷ್ಟು ಕರಕಲಾಗಿದ್ದವು. ಅವರ ಸಂಬಂಧಿಕರಾದ ಮಂಜು ಹಾಗೂ ತೋಲ ಅಪಾಯದಿಂದ ಪಾರಾಗಿದ್ದಾರೆ. ಆದರೆ, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಮಂಜು ಅವರ ಮಕ್ಕಳಾದ ಪ್ರಕಾಶ್‌ (6), ವಿಶ್ವಾಸ್‌ (3) ಹಾಗೂ ತೋಲ ಅವರ ಮಗ ವಿಶ್ವಾಸ್‌ (7) ಮೈಸೂರಿನ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.

ಆರೋಪಿ, ಎರವರ ಬೋಜ (45) ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ತಂಡ ರಚಿಸಿದ್ದಾರೆ. ಈ ದಾರುಣ ಘಟನೆಯಿಂದ ಕಾಫಿ ನಾಡು ಕೊಡಗು ಜಿಲ್ಲೆಯ ಮುಗುಟಗೇರಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

ಪತಿ ಬೋಜ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತಿದ್ದ ಬೇಬಿ, ಆತನ ಊರಾದ ಸೊಡ್ಲೂರು ಗ್ರಾಮಕ್ಕೆ ತೆರಳಲು ನಿರಾಕರಿಸಿದ್ದರು. ಹೀಗಾಗಿ, ಮುಗುಟಗೇರಿ ಗ್ರಾಮದಲ್ಲಿರುವ ಕಾಫಿ ಬೆಳೆಗಾರ ಕೋಳೆರ ಚಿಟ್ಯಪ್ಪ ಲೈನ್‍ಮನೆಯಲ್ಲಿ ತಮ್ಮ ಸಹೋದರರ ಜೊತೆಗೆ ವಾಸವಿದ್ದರು. ಇದೇ ಕೋಪದಲ್ಲಿ, ಪತ್ನಿಯನ್ನು ಕೊಲ್ಲುವ ಬೆದರಿಕೆ ಹಾಕಿದ್ದ ಬೋಜ, ಶನಿವಾರ ನಸುಕಿನಲ್ಲಿ ಈ ಕೃತ್ಯವೆಸಗಿ ಪರಾರಿಯಾಗಿದ್ದಾನೆ.

ಮದ್ಯ ಸೇವಿಸಿದ್ದ ಆರೋಪಿಯು, ನಸುಕಿನ ಮೂರು ಗಂಟೆಯ ಹೊತ್ತಿಗೆ ಲೈನ್‌ಮನೆ ಮನೆಯ ಬಳಿ ಬಂದು, ಕಿಟಕಿ ಬಾಗಿಲು ಮುಚ್ಚಿದ್ದಾನೆ. ಏಣಿ ಸಹಾಯದಿಂದ ಮನೆಯ ಮೇಲೆ ಹತ್ತಿ, ಹೆಂಚು ತೆಗೆದಿದ್ದಾನೆ. ಪತ್ನಿ ಮಲಗಿದ್ದ ಕೋಣೆಯನ್ನೇ ಗುರಿಯಾಗಿಸಿಕೊಂಡು ಪೆಟ್ರೋಲ್‌ ಸುರಿದು ಬೆಂಕಿ ಹಾಕಿದ್ದಾನೆ. ಬೆಂಕಿಯು ಕ್ಷಣಾರ್ಧದಲ್ಲಿ ವ್ಯಾಪಿಸಿದ್ದರಿಂದ, ಮನೆಯೊಳಗಿದ್ದವರು ಹೊರಗೆ ಬರಲು ಸಾಧ್ಯವಾಗಿಲ್ಲ.

ಪಾರಾಗಿ ಬಂದಿರುವ ಮಂಜು, ಆರೋಪಿಯ ಅಳಿಯ. ತೋಲ, ಮೃತಪಟ್ಟ ಸೀತೆಯ ಸಂಬಂಧಿ. ಇವರಿಬ್ಬರೂ ಬೇರೊಂದು ಕೋಣೆಯಲ್ಲಿ ಮಲಗಿದ್ದರು ಎಂದು ತಿಳಿದುಬಂದಿದೆ. ಜೀವನ್ಮರಣ ಸ್ಥಿತಿಯಲ್ಲಿದ್ದ ಮೂವರು ಮಕ್ಕಳನ್ನು ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ, ಅಲ್ಲಿಂದ ಮೈಸೂರಿಗೆ ಕಳುಹಿಕೊಡಲಾಗಿತ್ತು. ಆದರೆ, ಅವರು ಚಿಕಿತ್ಸೆಗೆ ಸ್ಪಂದಿಸಲಿಲ್ಲ.

ಆರೋಪಿ ವಿರುದ್ಧ ಆಕ್ರೋಶ

ಆರೋಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು, ಆತನನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ.

‘ಅನಕ್ಷರಸ್ಥರಾಗಿರುವ ಬೋಜ, ಮದ್ಯ ಸೇವಿಸಿ ನಡೆಸಿದ ಗಲಾಟೆಯಿಂದ ಆರು ಜೀವಗಳು ಬಲಿಯಾಗಿವೆ. ಪತಿ ಹಾಗೂ ಪತ್ನಿ ಇಬ್ಬರು ಒಟ್ಟಿಗೇ ಜೀವನ ನಡೆಸುತ್ತಿರಲಿಲ್ಲ. ಫೋನ್‌ ಮಾಡಿದಾಗಲೂ ಇಬ್ಬರು ಜಗಳವಾಡುತ್ತಿದ್ದರು’ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT