ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರ ಮೇಲೆ ನಡೆವ ಕಪ್ಪೆ ಪ್ರಭೇದ ಪತ್ತೆ

Last Updated 21 ಫೆಬ್ರುವರಿ 2022, 19:05 IST
ಅಕ್ಷರ ಗಾತ್ರ

ಬೆಂಗಳೂರು: ನೀರಿನ ಮೇಲ್ಮೈನಲ್ಲಿ ಸರಸರನೆ ನಡೆದು ಸಾಗುವ (ಸ್ಕಿಟರಿಂಗ್‌) ಇನ್ನೊಂದು ಕಪ್ಪೆಯ ಪ್ರಭೇದವನ್ನು ಜೂವಾಲಾಜಿಕಲ್‌ ಸರ್ವೆ ಆಫ್‌ ಇಂಡಿಯಾ (ಜೆಡ್‌ಎಸ್‌ಐ), ನಗರದ ಮೌಂಟ್‌ ಕಾರ್ಮೆಲ್‌ ಕಾಲೇಜು ಹಾಗೂ ರಾಷ್ಟ್ರೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ (ಎನ್ಐಎಸ್‌ಇಆರ್‌) ವಿಜ್ಞಾನಿಗಳ ತಂಡವು ಪಶ್ಚಿಮ ಕರಾವಳಿ ತೀರ ಪ್ರದೇಶದಲ್ಲಿ ಪತ್ತೆಹಚ್ಚಿದೆ.

ಹೊಸ ಪ್ರಭೇದದ ಕಪ್ಪೆಗಳು ದೇಶದ ಪಶ್ಚಿಮ ಕರಾವಳಿ ತೀರದಲ್ಲಿ ಹಾಗೂ ಪಶ್ಚಿಮ ಘಟ್ಟ ಶ್ರೇಣಿ ಚಾಚಿಕೊಂಡಿರುವ ಪ್ರದೇಶಗಳ ಸಿಹಿನೀರಿನ ಮೂಲಗಳಲ್ಲಿ ಮಾತ್ರ ಕಂಡುಬರುತ್ತವೆ. ಈ ಹೊಸ ಕಪ್ಪೆ ಪ್ರಭೇದದ ವೈಜ್ಞಾನಿಕ ಹೆಸರು ಯೂಫ್ಲಿಕ್ಟಿಸ್‌ ಜಲಧಾರಾ (Euphlyctis jaladhara). ಈ ಕುರಿತ ವೈಜ್ಞಾನಿಕ ಪ್ರಬಂಧವು ನ್ಯೂಜಿಲೆಂಡ್‌ನ ‘ಝೂಟ್ಯಾಕ್ಸಾ’ ಅಂತರರಾಷ್ಟ್ರಿಯ ವಿಜ್ಞಾನ ನಿಯತಕಾಲಿಕೆಯಲ್ಲಿ ಇತ್ತೀಚೆಗೆ ಪ್ರಕಟವಾಗಿದೆ.

ಈ ಪ್ರಭೇದವು ಮೊದಲ ಬಾರಿ ಕೇರಳದ ಥಟ್ಟೆಕಾಡ್‌ ಪಕ್ಷಿಧಾಮದಲ್ಲಿ ಕಂಡುಬಂದಿತ್ತು. ಕರ್ನಾಟಕ, ಗೋವಾ ಮಹಾರಾಷ್ಟ್ರ, ಕೇಂದ್ರಾಡಳಿತ ಪ್ರದೇಶಗಳಾದ ದಿಯು, ದಾಮನ್‌, ನಗರ್‌ಹವೇಲಿ ಸೇರಿದಂತೆ ಕೇರಳದಿಂದ ಗುಜರಾತ್‌ ನಡುವಿನ ಕರಾವಳಿ ತೀರದುದ್ದಕ್ಕೂ ಇವುಗಳ ನೆಲೆ ಇರುವುದನ್ನು ವಿಜ್ಞಾನಿಗಳ ತಂಡವು ಕಂಡುಹಿಡಿದಿದೆ. ಈ ಸಂಶೋಧನೆಯು ಜೂವಾಲಾಜಿಕಲ್‌ ಸರ್ವೆ ಆಫ್‌ ಇಂಡಿಯಾ ಹಮ್ಮಿಕೊಂಡ ಪ್ರಾಣಿಗಳ ಸಂಶೋಧನೆ ಮತ್ತು ದಾಖಲೀಕರಣ ಕಾರ್ಯಕ್ರಮದ ಭಾಗ. ನೀರಿನ ಮೇಲೆ ಸರಸರನೇ ನಡೆಯುವ ಕಪ್ಪೆಯ ಇನ್ನೊಂದು ಪ್ರಭೇದವನ್ನು (ಫ್ರೈನೋಡರ್ಮ ಕೇರಳ) 2021ರಲ್ಲಿ ಇದೇ ವಿಜ್ಞಾನಿಗಳ ತಂಡವು ಪತ್ತೆಹಚ್ಚಿತ್ತು.

ಈ ಹೊಸ ಪ್ರಭೇದದ ಕಪ್ಪೆಗಳು ದೇಶದ ಪೂರ್ವ ಕರಾವಳಿ ತೀರ, ದಖ್ಖನ್‌ ಪ್ರಸ್ಥಭೂಮಿ ಹಾಗೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡುಬರುವ ನಡೆಯುವ ಕಪ್ಪೆಗಳನ್ನು (ಯೂಫ್ಲಿಕ್ಟಿಸ್‌ ಸಯನೋಫ್ಲಿಕ್ಟಿಸ್‌ ಪ್ರಭೇದ) ಹೋಲುತ್ತವೆ. ಯೂಫ್ಲಿಕ್ಟಿಸ್‌ ಸಯನೋಫ್ಲಿಕ್ಟಿಸ್‌ ಪ್ರಭೇದದ ಕಪ್ಪೆಗಳನ್ನು 220 ವರ್ಷಗಳ ಹಿಂದೆ ಪತ್ತೆಹಚ್ಚಲಾಗಿತ್ತು.

‘ಹೊಸ ಪ್ರಭೇದದ ಕಪ್ಪೆ ಸಂತತಿ ಅಪಾಯದಲ್ಲಿದೆ’

‘ಕಪ್ಪೆಗಳು ನೀರಿನಲ್ಲಿ ಹಾಗೂ ಭೂಮಿಯ ಮೇಲೆ ವಾಸಿಸುವ ಕಶೇರುಕ ಜೀವಿಗಳ ಕೊಂಡಿಗಳು. ಸಿಹಿನೀರಿನಲ್ಲಿ ಮಾತ್ರ ಕಂಡುಬರುವ ಈ ಹೊಸ ಪ್ರಭೇದದ ಕಪ್ಪೆಗಳ ಸಂತತಿ ಅಪಾಯದಲ್ಲಿದೆ. ಕರಾವಳಿಯಲ್ಲಿ ಸಿಹಿನೀರಿನ ಮೂಲಗಳು ಕ್ಷೀಣಿಸುತ್ತಿವೆ. ಇವು ಸಮುದ್ರದ ಉಪ್ಪುನೀರಿನಲ್ಲಿ ಬದುಕುವುದಿಲ್ಲ. ಪಶ್ಚಿಮಘಟ್ಟವನ್ನು ಹತ್ತಿ ಹೋಗುವ ಸಾಮರ್ಥ್ಯ ಇವುಗಳಿಗಿಲ್ಲ. ನೀರಿನ ಮಾಲಿನ್ಯವೂ ಇವುಗಳ ಸಂತತಿಗೆ ಅಪಾಯ ತಂದೊಡ್ಡುತ್ತದೆ. ಸಿಹಿನೀರಿನ ಮೂಲಗಳು ಶುದ್ಧವಾಗಿರುವಂತೆ ಎಚ್ಚರ ವಹಿಸುವ ಮೂಲಕ ಇವುಗಳ ರಕ್ಷಣೆಗೆ ವಿಶೇಷ ಕಾಳಜಿ ವಹಿಸಬೇಕು’ ಎಂದು ವಿಜ್ಞಾನಿ ಡಾ.ಕೆ.ಪಿ. ದಿನೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT