ಬೆಂಗಳೂರು: ರಾಜ್ಯದಾದ್ಯಂತ ಶುಕ್ರವಾರ ಆರಂಭವಾದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಸುಗಮವಾಗಿ ನಡೆದವು.
ಕನ್ನಡ ಸೇರಿದಂತೆ ಪ್ರಥಮ ಭಾಷಾ ವಿಷಯಗಳ ಪರೀಕ್ಷೆ ಬರೆಯಲು 8,27,276 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು. 12,550 ವಿದ್ಯಾರ್ಥಿಗಳು ಗೈರುಹಾಜರಾಗಿದ್ದು, 8,14,726 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದರು.
ಪ್ರಥಮ ಭಾಷೆಗಳಾದ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ ಪರೀಕ್ಷೆಯನ್ನು ವಿದ್ಯಾರ್ಥಿಗಳು ಬರೆದರು. ಏ.3ರಂದು ಗಣಿತ ಪರೀಕ್ಷೆ ನಡೆಯಲಿದೆ.
ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ವಿದ್ಯಾರ್ಥಿಗಳ ಆರೋಗ್ಯ ಪರೀಕ್ಷಿಸಿದರು. ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಸೇರಿದಂತೆ ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.
ಹಾಲ್‌ಟಿಕೆಟ್ ಇಲ್ಲದೇ ಪರದಾಟ: ಬೆಂಗಳೂರು ದಕ್ಷಿಣದ ಖಾಸಗಿ ಅನುದಾನರಹಿತ ಶಾಲೆಯ 10 ವಿದ್ಯಾರ್ಥಿಗಳು ಹಾಲ್‌ಟಿಕೆಟ್ ದೊರಕದ ಕಾರಣ ಪರೀಕ್ಷೆ ಬರೆಯಲು ಪರದಾಡಿದರು.
ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕವನ್ನು ಶಾಲೆಗೆ ಪಾವತಿಸಿದ್ದರೂ, ಶಾಲಾ ಆಡಳಿತ ಮಂಡಳಿ ಪರೀಕ್ಷಾ ಮಂಡಳಿಗೆ ಜಮೆ ಮಾಡಿರಲಿಲ್ಲ. ಹಾಗಾಗಿ, ಅವರಿಗೆ ಹಾಲ್ ಟಿಕೆಟ್ ಬಂದಿರಲಿಲ್ಲ. ವಿಷಯ ಗಮನಕ್ಕೆ ಬಂದ ನಂತರ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿತು.
ವಿದ್ಯಾರ್ಥಿಗಳನ್ನು ವಂಚಿಸಿದ ಶಾಲೆಗೆ ನೋಟಿಸ್ ನೀಡಿ, ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಹಿತಿ
ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.