ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಿಗ ಕುಟುಂಬ ಹಸಿವಿನಿಂದ ಕಂಗಾಲು

ನೆರವು ನೀಡಲು ಜನಪದ ಕಲಾವಿದೆ ಮಾರಕ್ಕ ಸಣ್ಣಚಿತ್ತಪ್ಪ ಮನವಿ l ಹುಣಸೆಮರದ ಕೆಳಗೆ ಆಶ್ರಯ ಪಡೆದ ಕುಟುಂಬ
Last Updated 14 ಜೂನ್ 2021, 20:22 IST
ಅಕ್ಷರ ಗಾತ್ರ

ಮಾಗಡಿ:ಭಿಕ್ಷೆ ಬೇಡುವ ಮೂಲಕ ಅನ್ನದ ಮಾರ್ಗ ಕಂಡುಕೊಂಡಿದ್ದ ಗಿರಿಜನ ಕುಟುಂಬವೊಂದಕ್ಕೆ ಕೊರೊನಾ ಲಾಕ್‌ಡೌನ್‌ನಿಂದಾಗಿ ಭಿಕ್ಷೆ ಬೇಡುವುದಕ್ಕೂ ಅವಕಾಶವಿಲ್ಲದೆ ಹಸಿವಿನಿಂದ ಕಂಗಾಲಾಗಿದೆ.

ಪಟ್ಟಣದ ರೇಷ್ಮೆ ಇಲಾಖೆಯ ಫಾರಂ ಹಿಂದಿನ ಖಾಸಗಿ ಜಮೀನಿನಲ್ಲಿ ಇರುವ ಹುಣಸೆ ಮರವೊಂದು ದಿಕ್ಕಿಲ್ಲದ ನಿರ್ಲಕ್ಷಿತ ಕಡುಬಡ ಗಿರಿಜನ ಕುಟುಂಬಕ್ಕೆ ಆಶ್ರಯ ನೀಡಿದೆ. ಆದರೆ ಹಸಿವು ಇವರನ್ನು ಬಿಡದೆ ಕಾಡುತ್ತಿದೆ. ಸೋಲಿಗ ಜಾತಿಗೆ ಸೇರಿರುವ ಭೀಮ ಮತ್ತು ಗೌರಿ ಕುಟುಂಬದ ಕರುಣಾಜನಕ ಕಥೆ ಇದು.

ಅರಣ್ಯವನ್ನೇ ತಾಯಿತಂದೆ ಎಂದು ನಂಬಿಕೊಂಡು ವನವಾಸಿಗಳಾಗಿ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿ ಕೊಂಡಿದ್ದ ಗಿರಿಜನರಿಗೆ ಅರಣ್ಯ ಭೂಮಿ ಅಕ್ರಮ ಒತ್ತುವರಿಯಿಂದಾಗಿ ಸ್ವಂತ ಊರು, ಸ್ವಂತದ್ದು ಎಂದು ಹೇಳಿ ಕೊಳ್ಳಲು ನಿವೇಶನ, ಮನೆ, ಭೂಮಿ ಏನೂ ಇಲ್ಲದಂತಾಗಿದೆ. ಭೀಮ ಅಲಿಯಾಸ್ ಮಂಜುನಾಥ, ಗೌರಿ ದಂಪತಿ ಪಟ್ಟಣದ ಹುಣಸೆಮರದ ಕೆಳಗೆ ಹಲವು ವರ್ಷಗಳಿಂದ ವಾಸವಾಗಿದ್ದಾರೆ. ಹಗಲೆಲ್ಲ ಭಿಕ್ಷೆ ಬೇಡುವುದು.ಸಿಕ್ಕಷ್ಟು ತಂಗಳು ತಿಂದು ಮರದ ನೆರಳಿನಲ್ಲಿ ಮಲಗುವುದು ಇವರ ದಿನಚರಿ
ಯಾಗಿತ್ತು. ಲಾಕ್‌ಡೌನ್ ನಿರ್ಗತಿಕರ ಬದುಕನ್ನು ಲಾಕ್ ಮಾಡಿದೆ.

‘ರವಿ, ಕಬ್ಬಾಳು, ಚಿನ್ನಿ ಮಕ್ಕಳೊಂದಿಗೆ ಐದು ಜನರದ್ದು ಚಿಂತಾಜನಕ ಸ್ಥಿತಿ. ದಿನಸಿ ಕಿಟ್ ವಿತರಿಸಲಾಗುತ್ತಿದೆ. ನಿಜವಾದ ನಿರ್ಗತಿಕರಿಗೆ ದಾನಿಗಳು ನೀಡುವ ದಿನಸಿ ಕಿಟ್ ತಲುಪುತ್ತಿಲ್ಲ. ನಿರ್ಗತಿಕರತ್ತ ಯಾರೂ ನೋಡುವುದಿಲ್ಲ. ಒಂದು ತಿಂಗಳ ಹಿಂದೆ ಮೂರು ಪುಟಾಣಿಗಳು ಭಿಕ್ಷೆಗೆ ಬಂದಿದ್ದವು. ಮಕ್ಕಳನ್ನು ಅಕ್ಕರೆಯಿಂದ ಹತ್ತಿರ ಕರೆದು, ಮಕ್ಕಳಿಗೆ ಊಟಕ್ಕೆ ನೀಡಿ, ಮೊಮ್ಮಕ್ಕಳ ಮೂರು ಜೊತೆ ಬಟ್ಟೆ ನೀಡಿ ಕಳುಹಿಸಿದ್ದೆ’ ಎಂದು ಅವರ ಸ್ಥಿತಿಯನ್ನು ವಿವರಿಸಿದವರು ಇಳಿ ವಯಸ್ಸಿನ ಜನಪದ ಕಲಾವಿದೆ ಮಾರಕ್ಕ ಸಣ್ಣಚಿತ್ತಪ್ಪ.

ಭಿಕ್ಷೆ ಬೇಡಲು ಬಂದು ಪುಟಾಣಿಗಳ ಜಾಡುಹಿಡಿದು ಅವರ ಹಿಂದೆ ತೆರಳಿ ದಾಗ ನಾಗರಿಕ ಪ್ರಪಂಚದ ಅನಾಗ ರಿಕತೆಯೊಂದನ್ನು ಕಂಡು ಕಣ್ಣು ಮಂಜಾ ಯಿತು. ದಿಕ್ಕಿಲ್ಲದವರಿಗೆ ದೇವರಾದರೂ ಕರುಣೆ ತೋರಿ, ಪ್ರಪಂಚ ಅರಿಯದೆ ಮುಗ್ದ ಮಕ್ಕಳ ಹಸಿವು ನೀಗಿಸಬಾರದೆ ಎಂದು ಕಲಾವಿದೆ ವಿವರಿಸಿದರು.

ಚಿಕ್ಕವಯಸ್ಸಿಗೆ ಮೂರು ಮಕ್ಕಳ ತಾಯಿಯಾಗಿರುವ ಗೌರಿ ಮಾತನಾಡಿ, ‘ನಾವು ಗಿರಿಜನ ಸೋಲಿಗರು. ಮಾಗಡಿಗೆ ತಾಲ್ಲೂಕಿನ ದುಡುಪನಹಳ್ಳಿ ನಮ್ಮ ಪೂರ್ವಜರಿದ್ದ ಕಾಡು ನಾಶವಾಗಿದೆ. ಪಟ್ಟಣದಲ್ಲಿ ಮತ್ತು ಸುತ್ತಲಿನ ಹಳ್ಳಿಗಳಲ್ಲಿ ಭಿಕ್ಷೆ ಭೇಡುತ್ತಾ 34 ವರ್ಷಗಳು ಕಳೆದಿವೆ. ನಮ್ಮ ದುಃಸ್ಥಿತಿ ಕಂಡೊಡನೆ ಜನ ನಮ್ಮನ್ನು ಪ್ರಾಣಿಗಳಿಗಿಂತ ಕಡೆಯಾಗಿ ಗದರಿಸಿ ಓಡಿಸುತ್ತಿದ್ದಾರೆ. ಹುಣಸೆ ಮರಮಾತ್ರ ನಮ್ಮೆಲ್ಲರ ತಾಯಿಯಂತೆ ಆಶ್ರಯ ನೀಡಿದೆ. ರಾತ್ರಿಯಾದೊಡನೆ ಹಾವು, ಇಲಿ, ಹೆಗ್ಗಣ, ಹರಿದಾಡುತ್ತಿವೆ. ವಿಷಜಂತುಗಳಾದರೂ ಸಹ ನಮ್ಮನ್ನು ಎಂದೂ ಕಚ್ಚಿಲ್ಲ. ಸೊಳ್ಳೆಗಳು ಮಾತ್ರ ನಮ್ಮನ್ನು ಕಚ್ಚದೆ ಬಿಡುವುದೇ ಇಲ್ಲ’ ಎನ್ನುತ್ತಾರೆ.

‘ಪಡಿತರ ಚೀಟಿ, ಆಧಾರ್ ಕಾರ್ಡ್‌, ಮತದಾರರ ಗುರುತಿನ ಚೀಟಿ ಇತರೆ ಯಾವುದೇ ದಾಖಲೆಗಳಿಲ್ಲ. ದಾಖಲೆಗಳನ್ನು ಮಾಡಿಸಿಕೊಳ್ಳುವ ದಾರಿ ನಮಗೆ ಗೊತ್ತಿಲ್ಲ. ನಮ್ಮ ದುಃಸ್ಥಿತಿ ಇರಲಿ. ನಮ್ಮ ಮೂರು ಮಕ್ಕಳಾದರು ಶಾಲೆಗೆ ಸೇರಲಿ ಎಂದರೆ ಯಾರೂ ನಮ್ಮತ್ತ ಸುಳಿ ಯುತ್ತಿಲ್ಲ. ಲಾಕ್‌ಡೌನ್‌ನಿಂದಾಗಿ ಭಿಕ್ಷೆ ಸಹ ದೊರೆಯುತ್ತಿಲ್ಲ’ ಎಂದು ಕಂಬನಿ ಮಿಡಿದರು.

ಭೀಮ ಮಾತನಾಡಿ, ‘ಸ್ವಾಮಿ ಬಡವರ ಬಗ್ಗೆ ಯಾರಿಗೂ ಕನಿಕರವಿಲ್ಲ. ಗಿರಿಜನರಿಗೆ ವಿಶೇಷ ಸವಲತ್ತಗಳು ಇವೆಯಂತೆ. ಅವುಗಳ ಬಗ್ಗೆ ಅನಕ್ಷರಸ್ಥನಾದ ನನಗೆ ಏನೂ ತಿಳಿಯದು. ವಿಶೇಷ ಸವಲತ್ತುಗಳು ಇಲ್ಲದಿದ್ದರೆ ಚಿಂತೆಇಲ್ಲ. ನಮ್ಮ ಪುಟಾಣಿ ಮಕ್ಕಳಿಗೆ ಕನಿಷ್ಠ ನೆರಳು ನೀಡಲು ಒಂದು ಪ್ಲಾಸ್ಟಿಕ್ ಟಾರ್ಪಾಲ್ ನೀಡಿ ಟೆಂಟ್ ಹಾಕಿಕೊಳ್ಳಲು ಸಹಾಯ ಮಾಡಿದರೆ ಸಾಕು. ವಾಸಕ್ಕೆ ಒಂದು ಮನೆ, ಪಡಿತರ ಚೀಟಿ ಮಾಡಿಸಿಕೊಟ್ಟರೆ ಸಾಕು ಎಂದು ಹಂಬಲಿಸುತ್ತಿದ್ದೇವೆ. ಲಾಕ್ ಡೌನ್ ತೆರವಾದ ಮೇಲೆ ಭಿಕ್ಷೆ ಬೇಡಿ ಮಕ್ಕಳ ಹೊಟ್ಟೆ ತುಂಬಿಸುತ್ತೇನೆ. ಪುಣ್ಯಾತ್ಮರು ನಮಗೆ ದಿನಸಿ ಕಿಟ್, ಹಳೆಯ ಬಟ್ಟೆ, ನೀಡಿದರೆ ಬದುಕುತ್ತೇವೆ. ಇಲ್ಲವಾದರೆ ಹಸಿವಿನಿಂದ ಸಾಯುತ್ತೇವೆ’ ಎಂದರು.

ಇವರು ವಾಸವಾಗಿರುವ
ಸ್ಥಳಕ್ಕೆ ಹೋದಾಗ ಮಳೆ ಸುರಿಯುತ್ತಿತ್ತು. ಹುಣಸೆ ಮರದ ಕೆಳಗೆ ಪುಳ್ಳೆ ಸೌದೆ ಇಟ್ಟು ಒಲೆ ಉರಿಯುತ್ತಿತ್ತು. ಒಲೆಯ ಮೇಲೆ ಬೇಯುತ್ತಿದ್ದ ಅಕ್ಕಿ, ಮಳೆಯನೀರು ಬಿದ್ದು ಒಲೆಯಲ್ಲಿ ನೀರು ತುಂಬಿ ಹೊಗೆ ಏಳಲಾರಂಭಿಸಿತು. ಹಸಿವಿನಿಂದ ಪುಟಾಣಿ ಮಕ್ಕಳು ರೋದಿಸುತ್ತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT