ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲ ರಾಜ್ಯಗಳಿಂದ ಅನ್ಯಾಯ: ಪ್ರಧಾನಿ ಮೋದಿ ಆರೋಪಕ್ಕೆ ವಿರೋಧ ಪಕ್ಷಗಳಿಂದ ಆಕ್ಷೇಪ

ಪ್ರಧಾನಿ ನರೇಂದ್ರ ಮೋದಿ ಆರೋಪಕ್ಕೆ ವಿರೋಧ ಪಕ್ಷಗಳಿಂದ ಆಕ್ಷೇಪ
Last Updated 27 ಏಪ್ರಿಲ್ 2022, 19:32 IST
ಅಕ್ಷರ ಗಾತ್ರ

ನವದೆಹಲಿ: ‘ಪೆಟ್ರೋಲ್‌ ಮತ್ತು ಡೀಸೆಲ್‌ನ ಬೆಲೆ ಏರಿಕೆಯ ಹೊರೆಯನ್ನು ಜನರ ಮೇಲಿಂದ ಇಳಿಸಲು ಕಳೆದ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಎಕ್ಸೈಸ್‌ ಸುಂಕವನ್ನು ಇಳಿಸಿತ್ತು. ರಾಜ್ಯಗಳೂ ತಮ್ಮ ಪಾಲಿನ ತೆರಿಗೆಯನ್ನು ಕಡಿತ ಮಾಡುವಂತೆ ಕೋರಿಕೊಂಡಿದ್ದೆವು. ಕೆಲವು ರಾಜ್ಯಗಳು ತೆರಿಗೆ ಕಡಿತ ಮಾಡಿದ್ದವು. ಕೆಲವು ರಾಜ್ಯಗಳು ತೆರಿಗೆ ಕಡಿತ ಮಾಡದೆ, ಅದರ ಲಾಭವನ್ನು ಜನರಿಗೆ ನೀಡಿಲ್ಲ. ಈ ಮೂಲಕ, ಆ ರಾಜ್ಯಗಳು ತಮ್ಮ ನಾಗರಿಕರಿಗೆ ಅನ್ಯಾಯ ಮಾಡಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆರೋಪಿಸಿದ್ದಾರೆ.

ಪ್ರಧಾನಿ ಅವರ ಈ ಆರೋಪಕ್ಕೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪವ್ಯಕ್ತಪಡಿಸಿವೆ.

ದೇಶದಲ್ಲಿನ ಕೋವಿಡ್‌ ಪರಿಸ್ಥಿತಿ ಯನ್ನು ಕುರಿತು ಚರ್ಚಿಸಲು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ಬುಧವಾರ ಆಯೋಜಿಸಲಾಗಿದ್ದ ವಿಡಿಯೊ ಸಂವಾದದಲ್ಲಿ ಮೋದಿ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಕೋವಿಡ್‌ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಈ ವಿಷಯಪ್ರಸ್ತಾಪಿಸಿದಕ್ಕೆ ಟಿಎಂಸಿ ಆಕ್ಷೇಪ ವ್ಯಕ್ತಪಡಿಸಿದೆ.

‘ಬಾಹ್ಯ ಕಾರಣಗಳ ಪರಿಣಾಮವು ದೇಶದಲ್ಲಿ ಆಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಕಾರೀ ಒಕ್ಕೂಟ ವ್ಯವಸ್ಥೆಯ ತತ್ವಗಳ ಅಡಿಯಲ್ಲಿ, ಅಂತಹ ಸಂದರ್ಭಗಳನ್ನು ಒಟ್ಟಾಗಿ ಎದುರಿಸಿದ್ದವು. ಮುಂದೆಯೂ ಅದೇ ರೀತಿ ಎದುರಿಸಲೇಬೇಕಾಗುತ್ತದೆ. ಆದರೆ ಪೆಟ್ರೋಲ್‌ ಮತ್ತು ಡೀಸೆಲ್ ಮೇಲಿನ ತೆರಿಗೆ ಕಡಿತ ವಿಚಾರದಲ್ಲಿ ಹೀಗಾಗಲಿಲ್ಲ. ನಾವು ಎಕ್ಸೈಸ್‌ ಸುಂಕ ಕಡಿತ ಮಾಡಿದೆವು. ನಮ್ಮ ಭಾವನೆಯನ್ನು ಅರ್ಥ ಮಾಡಿಕೊಂಡು ಕರ್ನಾಟಕ, ಗುಜರಾತ್‌ನಂತಹ ರಾಜ್ಯಗಳು ತಮ್ಮ ತೆರಿಗೆಯನ್ನು ಕಡಿತ ಮಾಡಿದವು. ಈ ರಾಜ್ಯಗಳ ಪಕ್ಕದ ರಾಜ್ಯಗಳು ತೆರಿಗೆ ಕಡಿತವನ್ನು ಮಾಡಲಿಲ್ಲ. ಆ ಮೂಲಕ ಇದರ ಲಾಭವನ್ನು ಜನರಿಗೆ ನೀಡಲಿಲ್ಲ. ಇದರಿಂದ ಈ ರಾಜ್ಯಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಈಗಲೂ
ಹೆಚ್ಚೇ ಇದೆ’ ಎಂದು ಅವರು ಆರೋಪಿಸಿದ್ದಾರೆ.

‘ತೆರಿಗೆ ಕಡಿತ ಮಾಡಿದ ರಾಜ್ಯಗಳ ಖಜಾನೆಗೆ ನಷ್ಟವಾಯಿತು. ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತು ಜಾರ್ಖಂಡ್‌ನ ಸರ್ಕಾರಗಳು ತೆರಿಗೆ ಕಡಿತ ಮಾಡಲಿಲ್ಲ. ಈ ರಾಜ್ಯಗಳ ಆದಾಯ ಅತಿಯಾಗಿ ಹೆಚ್ಚಾಯಿತು. ಈ ರಾಜ್ಯಗಳು ತಮ್ಮ ಜನರಿಗೂ ಅನ್ಯಾಯ ಮಾಡಿದವು. ಜತೆಗೆ ಬೇರೆರಾಜ್ಯಗಳು ನಷ್ಟ ಅನುಭವಿಸುವಂತೆ ಮಾಡಿದವು’ ಎಂದು ಮೋದಿ ಆರೋಪಿಸಿದ್ದಾರೆ.

‘ನವೆಂಬರ್‌ನಿಂದ ಇಲ್ಲಿಗೆ ಆರು ತಿಂಗಳಾಗಿದೆ. ಈ ಅವಧಿಯಲ್ಲಿ ತೆರಿಗೆ ಕಡಿತ ಮಾಡದೇ ಇರುವ ಮೂಲಕ ಈ ರಾಜ್ಯಗಳು ಗಳಿಸಿರುವ ಹೆಚ್ಚು ಆದಾಯವು, ಅವುಗಳ ಬಳಿಯೇ ಇರಲಿ. ಅದು ಆ ರಾಜ್ಯಗಳಿಗೇ ಉಪಯೋಗಕ್ಕೆ ಬರುತ್ತದೆ. ಆದರೆ, ಈಗಲಾದರೂ ತೆರಿಗೆ ಕಡಿತ ಮಾಡುವ ಮೂಲಕ, ಅದರ ಲಾಭವನ್ನು ಜನರಿಗೆ
ತಲುಪಿಸಲಿ’ ಎಂದು ಮೋದಿ ಕರೆ ನೀಡಿದ್ದಾರೆ.

‘ಏರಿಕೆ ವಾಪಸ್‌ ಪಡೆಯಿರಿ’

‘ಕಾಂಗ್ರೆಸ್‌ನ ಯುಪಿಎ ಸರ್ಕಾರವಿದ್ದಾಗ ಪ್ರತಿ ಲೀಟರ್‌ ಪೆಟ್ರೋಲ್‌ ಮೇಲೆ ₹9.48 ಮತ್ತು ಪ್ರತಿ ಲೀಟರ್‌ ಡೀಸೆಲ್ ಮೇಲೆ ₹3.56 ಎಸ್ಕೈಸ್‌ ಸುಂಕ ವಿಧಿಸಲಾಗುತ್ತಿತ್ತು. ಮೋದಿ ಸರ್ಕಾರದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ ₹27.90 ಮತ್ತು ಪ್ರತಿ ಲೀಟರ್‌ ಡೀಸೆಲ್‌ಗೆ ₹21.80 ಎಕ್ಸೈಸ್‌ ಸುಂಕ ವಿಧಿಸಲಾಗುತ್ತಿದೆ. ನೀವು ಪ್ರತಿ ಲೀಟರ್‌ ಪೆಟ್ರೋಲ್‌ ಮೇಲೆ ₹18.42 ಮತ್ತು ಪ್ರತಿ ಲೀಟರ್‌ ಡೀಸೆಲ್‌ ಮೇಲೆ ₹18.24ರಷ್ಟು ಮಾಡಿದ ಏರಿಕೆಯನ್ನು ವಾಪಸ್‌ ಪಡೆಯಿರಿ’ ಎಂದು ಕಾಂಗ್ರೆಸ್‌ ‍ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಆಗ್ರಹಿಸಿದ್ದಾರೆ.

‘ಜಿಎಸ್‌ಟಿ ಬಾಕಿ ನೀಡಿ’

ಮುಂಬೈನಲ್ಲಿ ಬಿಕರಿಯಾಗುವ ಪ್ರತಿ ಲೀಟರ್‌ ಡೀಸೆಲ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ₹24.38 ತೆರಿಗೆ ಸಂದಾಯವಾದರೆ, ರಾಜ್ಯ ಸರ್ಕಾರಕ್ಕೆ ₹22.37 ತೆರಿಗೆ ದೊರೆಯುತ್ತದೆ. ಪ್ರತಿ ಲೀಟರ್‌ ಪೆಟ್ರೋಲ್‌ನಲ್ಲಿ ಕೇಂದ್ರಕ್ಕೆ ₹31.58, ರಾಜ್ಯಕ್ಕೆ ₹32.55 ತೆರಿಗೆ ಸಂದಾಯವಾಗುತ್ತಿದೆ. ರಾಜ್ಯ ಸರ್ಕಾರದಿಂದ ಮಾತ್ರ ಪೆಟ್ರೋಲ್‌ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಿಲ್ಲ. ದೇಶದ ಒಟ್ಟು ನೇರ ತೆರಿಗೆ ಆದಾಯದಲ್ಲಿ ಮಹಾರಾಷ್ಟ್ರದ ಪಾಲು ಶೇ 38.3ರಷ್ಟಿದೆ. ದೇಶದ ಒಟ್ಟು ಜಿಎಸ್‌ಟಿಯಲ್ಲಿ ರಾಜ್ಯದ ಪಾಲು ಶೇ 15ರಷ್ಟಿದೆ. ಆದರೆ, ಕೇಂದ್ರ ಸರ್ಕಾರದ ಒಟ್ಟು ತೆರಿಗೆ ಆದಾಯದಲ್ಲಿ ಮಹಾರಾಷ್ಟ್ರಕ್ಕೆ ದೊರೆಯುವುದು ಶೇ 5.5ರಷ್ಟು ಮಾತ್ರ. ಕೇಂದ್ರವು ಮಹಾರಾಷ್ಟ್ರಕ್ಕೆ ₹ 26,500 ಕೋಟಿ ಜಿಎಸ್‌ಟಿ ಪರಿಹಾರ ನೀಡಬೇಕಿದೆ. ಅದನ್ನು ಮೊದಲು ನೀಡಲಿ

ಉದ್ಧವ್ ಠಾಕ್ರೆ,ಮಹಾರಾಷ್ಟ್ರ ಮುಖ್ಯಮಂತ್ರಿ

ವಿಶೇಷ ಸಂದರ್ಭದಲ್ಲಿ ಸೆಸ್‌ ಮತ್ತು ಸರ್‌ಚಾರ್ಜ್‌ಗಳನ್ನು ಆರು ತಿಂಗಳಿಂದ ಒಂದು ವರ್ಷದ ಸೀಮಿತ ಅವಧಿಯವರೆಗೆ ಮಾತ್ರ ಏರಿಕೆ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಕೇಂದ್ರ ಸರ್ಕಾರವು ಸೆಸ್‌ ಮತ್ತು ಸರ್‌ಚಾರ್ಜ್‌ಗಳನ್ನು ಏರಿಕೆ ಮಾಡಿದೆ. ಆದರೆ ವರ್ಷಗಳ ನಂತರವೂ ಇಳಿಕೆ ಮಾಡಿಲ್ಲ. ಇದರಿಂದಲೇ ಬೆಲೆ ಏರಿಕೆಯಾಗುತ್ತಿದೆ. ಕೇರಳ ಸರ್ಕಾರವು ಆರು ವರ್ಷಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್‌) ಒಂದು ರೂಪಾಯಿಯಷ್ಟೂ ಏರಿಕೆ ಮಾಡಿಲ್ಲ. ತೆರಿಗೆ ಕಡಿತ ಮಾಡಿ ಎಂದು ನಮಗೆ ಹೇಳಿದರೆ, ಎಲ್ಲಿಂದ ಕಡಿತ ಮಾಡುವುದು? ಜನರ ಹಾದಿತಪ್ಪಿಸುವಂತಹ ಮಾತುಗಳನ್ನು ಪ್ರಧಾನಿ ಆಡಬಾರದು

ಕೆ.ಎನ್‌.ಬಾಲಗೋಪಾಲ್,ಕೇರಳ ಹಣಕಾಸು ಸಚಿವ

ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ತಮ್ಮ ಆರ್ಥಿಕ ನಿರ್ವಹಣೆಯ ವೈಫಲ್ಯದ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಮೋದಿ ಅವರು ರಾಜ್ಯಗಳನ್ನು ದೂಷಿಸುತ್ತಿದ್ದಾರೆ. ಕೇಂದ್ರ ಸರ್ಕಾರವು ಎಕ್ಸೈಸ್‌ ಸುಂಕ ಕಡಿತ ಮಾಡಿದ್ದು ಅತ್ಯಂತ ಕಡಿಮೆ ಮತ್ತು ತೀರಾ ತಡವಾಗಿ. ರಾಜ್ಯಗಳಿಗೆ ನೀಡಬೇಕಿರುವ ಜಿಎಸ್‌ಟಿ ಪರಿಹಾರ ಬಾಕಿಯನ್ನು ಕೇಂದ್ರ ಸರ್ಕಾರ ಮೊದಲು ಚುಕ್ತಾ ಮಾಡಲಿ

ಸೌಗತಾ ರಾಯ್,ಟಿಎಂಸಿ ಸಂಸದ

‘ಆರ್ಥಿಕ ಪರಿಸ್ಥಿತಿ ಆಧರಿಸಿ ನಿರ್ಧಾರ’

ಬೆಂಗಳೂರು: ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆ ಇಳಿಕೆ ಕುರಿತಂತೆ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಆಧರಿಸಿ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕೇಂದ್ರ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯನ್ನು2021ರ ನವೆಂಬರ್‌ನಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಸಿತ್ತು. ಆಗ, ರಾಜ್ಯ ಸರ್ಕಾರವೂ ತೆರಿಗೆ ಕಡಿತ ಮಾಡಿತ್ತು. ಬುಧವಾರ ನಡೆದ ವಿಡಿಯೊ ಕಾನ್ಫರೆನ್ಸಿಂಗ್‌ನಲ್ಲಿಈ ವಿಚಾರ ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ, ‘ಕರ್ನಾಟಕದ ನಡೆಯನ್ನು ಇತರ ರಾಜ್ಯಗಳೂ ಅನುಸರಿಸಬೇಕು’ ಎಂದು ಸಲಹೆ ನೀಡಿದ್ದರು.

ಸಭೆಯ ಬಳಿಕ ಸುದ್ದಿಗಾರರ ಜತೆ ಬೊಮ್ಮಾಯಿ ಮಾತನಾಡುವಾಗ ‘ಪುನಃ ಕರ್ನಾಟಕದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆ ಕಡಿತ ಮಾಡಲಾಗುವುದೆ’ ಎಂಬ ಪ್ರಶ್ನೆಗೆ ಅವರು, ‘ಯೋಚಿಸುತ್ತೇವೆ. ಈ ವಿಚಾರದಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕವೇ ಮುಂದಿನ ಹೆಜ್ಜೆ ಇಡಬೇಕಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT