ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನಿಯಾ ಗಾಂಧಿ ಭಾವನೆಗಳಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ: ವೀರಪ್ಪ ಮೊಯಿಲಿ

Last Updated 25 ಆಗಸ್ಟ್ 2020, 17:01 IST
ಅಕ್ಷರ ಗಾತ್ರ

ಬೆಂಗಳೂರು: 'ನಾವು ಅವರ (ಸೋನಿಯಾ ಗಾಂಧಿ) ಭಾವನೆಗಳನ್ನು ನೋಯಿಸಿದ್ದರೆ, ಅದಕ್ಕಾಗಿ ವಿಷಾದಿಸುತ್ತೇವೆ' ಎಂದು ತುರ್ತು ಸಾಂಸ್ಥಿಕ ಸುಧಾರಣೆಗಳನ್ನು ಕೋರಿದ 23 ಹಿರಿಯ ಕಾಂಗ್ರೆಸ್ ನಾಯಕರಲ್ಲಿ ಒಬ್ಬರಾದ ಎಂ ವೀರಪ್ಪ ಮೊಯಿಲಿ ಅವರು, ಸೋನಿಯಾ ಅವರ ನಾಯಕತ್ವವನ್ನು ನಾವು ಪ್ರಶ್ನಿಸಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಇದೇ ವೇಳೆ ಪಕ್ಷವನ್ನು ಪುನಶ್ಚೇತನಗೊಳಿಸುವ ಮತ್ತು ಪುನರ್‌ರಚಿಸುವ ಅಗತ್ಯವನ್ನು ಒತ್ತಿ ಹೇಳಿ ಮಧ್ಯಂತರ ಕಾಂಗ್ರೆಸ್ ಅಧ್ಯಕ್ಷರನ್ನು ಉದ್ದೇಶಿಸಿ ಬರೆದಿರುವ ಪತ್ರವನ್ನು ಅವರು ಸಮರ್ಥಿಸಿಕೊಂಡಿದ್ದಾರೆ.

ಪತ್ರವನ್ನುಮಾಧ್ಯಮ ಸೋರಿಕೆ ಮಾಡಿದ ಸಂಗತಿಯನ್ನು ಅವರುನಿರಾಕರಿಸಿದ್ದಾರೆ. ಮಾಧ್ಯಮಕ್ಕೆ ಸೋರಿಕೆ ಮಾಡಿದವರನ್ನುಕಂಡುಹಿಡಿದು ಪಕ್ಷದ ಆಂತರಿಕ ವಿಚಾರಣೆಗೊಳಪಡಿಸಬೇಕು.ಅಂಥವರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಪತ್ರವನ್ನು ಬರೆದಿರುವ 23 ಜನರಿಗೂ ಕಾಂಗ್ರೆಸ್ ಪಕ್ಷವನ್ನು ಬಿಡುವ ಯಾವುದೇ ಉದ್ದೇಶವಿಲ್ಲ ಎಂದಿದ್ದಾರೆ. 'ನಾವು ಸೋನಿಯಾ ಅವರ ನಾಯಕತ್ವವನ್ನು ಪ್ರಶ್ನೆ ಮಾಡಿಲ್ಲ. ಸೋನಿಯಾ ಅವರು ಪಕ್ಷದ ತಾಯಿಯಿದ್ದಂತೆ. ನಾವು ಈಗಲೂ ಅವರನ್ನು ಗೌರವಿಸುತ್ತೇವೆ. ಅವರ ಭಾವನೆಗಳನ್ನು ನೋಯಿಸುವ ಯಾವುದೇ ಉದ್ದೇಶದ ಪ್ರಶ್ನೆಯೇ ಇಲ್ಲ. ಒಂದು ವೇಳೆ ಅವರ ಭಾವನೆಗಳಿಗೆ ನಾವು ನೋವುಂಟು ಮಾಡಿದ್ದರೆ, ಅದಕ್ಕಾಗಿ ನಾವು ಕ್ಷಮೆ ಕೇಳುತ್ತೇವೆ' ಎಂದು ತಿಳಿಸಿದ್ದಾರೆ.

ಸದ್ಯ ಪಕ್ಷದ ಹಂಗಾಮಿ ಅಧ್ಯಕ್ಷರಾಗಿ ಮುಂದುವರಿಯಲು ಸೋನಿಯಾ ಒಪ್ಪಿಗೆ ನೀಡಿದ್ದಾರೆ ಆದರೆ ಈ ವ್ಯವಸ್ಥೆಯನ್ನು ಹೀಗೆ ಉಳಿಯಲು ಬಿಡಲು ಸಾಧ್ಯವಿಲ್ಲ. ಏಕೆಂದರೆ ಪಕ್ಷದ ಹೊಸ ಮುಖ್ಯಸ್ಥರನ್ನು ಶೀಘ್ರದಲ್ಲೇ ಆಯ್ಕೆ ಮಾಡಬೇಕಾಗುತ್ತದೆ. ತನ್ನ ಸಹೋದ್ಯೋಗಿಗಳಲ್ಲಿ ಯಾರೊಬ್ಬರೋ ತನ್ನ ವಿರುದ್ಧ ನೀಡಿದ ಹೇಳಿಕೆಗಳು ಎಷ್ಟೇ ನೋವನ್ನುಂಟುಮಾಡಿದ್ದರೂ ಕೂಡ ಆ ಬಗ್ಗೆ ವಿರೋಧ ಅಥವಾ ಯಾವುದೇ ರೀತಿಯ 'ಕೆಟ್ಟ ಇಚ್ಛಾಶಕ್ತಿ'ಯನ್ನು ತಾನು ಹೊಂದಿಲ್ಲ ಎಂದು ಸೋನಿಯಾ ಅವರೇ ತಿಳಿಸಿದ್ದಾರೆ. ಪಕ್ಷವು ಕಷ್ಟದ ದಿನಗಳನ್ನು ಎದುರಿಸುತ್ತಿರುವುದನ್ನು ಗಮನಿಸಿ, 'ನಮ್ಮ ಬೆವರು, ಸಮರ್ಪಣೆ ಮತ್ತು ತ್ಯಾಗದಿಂದ ನಾವು ಪೋಷಿಸಿರುವ ಕಾಂಗ್ರೆಸ್ ಪಕ್ಷವನ್ನು ಕಳೆದುಕೊಳ್ಳಲು ನಮಗೆ ಸಾಧ್ಯವಿಲ್ಲ' ಎಂದು ತಿಳಿಸಿದ್ದಾರೆ.

ಸೋನಿಯಾ ಜಿ ಮಾಡಿದ ತ್ಯಾಗವನ್ನು ನಾವು ಗುರುತಿಸುತ್ತೇವೆ, ಅವರಿಗೆ ಇಷ್ಟವಿರಲಿಲ್ಲ (ಈ ಮೊದಲು ಈ ಹುದ್ದೆಯನ್ನು ವಹಿಸಿಕೊಳ್ಳಲು), ಆದರೆ ಅವರು ಕಾಂಗ್ರೆಸ್ ಪಕ್ಷಕ್ಕೆ ಜೀವ ನೀಡಿದರು. ಸೋನಿಯಾ ಜಿಗೆ ಯಾರೂ ಕೃತಜ್ಞರಾಗಿಲ್ಲದಿರಲು ಸಾಧ್ಯವಿಲ್ಲ. ಮತ್ತು ನಾವು ಇನ್ನೂ ಕೂಡ ಅವರನ್ನು ನಮ್ಮ ತಾಯಿಯಂತೆ ಪರಿಗಣಿಸುತ್ತೇವೆ. ಪಕ್ಷ ಮತ್ತು ರಾಷ್ಟ್ರದ ಕುರಿತು ಮಾರ್ಗದರ್ಶನ ನೀಡುವುದನ್ನು ಬಯಸುತ್ತೇವೆ ಎಂದಿದ್ದಾರೆ.

'ಆ ಗೌರವವು ಮುಂದುವರಿಯುತ್ತದೆ. ಆದರೆ ಅದೇ ವೇಳೆಯಲ್ಲಿ ಪಕ್ಷವನ್ನು ಪುನಶ್ಚೇತನಗೊಳಿಸುವ ಅಗತ್ಯವಿದೆ. ಪತ್ರದ ಪ್ರಮುಖ ಉದ್ದೇಶವೇ ಎಲ್ಲ ಹಂತಗಳಲ್ಲೂ ಪಕ್ಷವನ್ನು ಪುನಶ್ಚೇತನಗೊಳಿಸುವುದಾಗಿದೆ. ಅದರರ್ಥ ಅವರು ಅಧ್ಯಕ್ಷರಾಗಬಾರದು ಎಂಬುದು ಇದರರ್ಥವಲ್ಲ. ಅವರು ಮತ್ತೆ ಹಂಗಾಮಿ ಅಧ್ಯಕ್ಷರಾಗಿರುವುದು ಸ್ವಾಗತಾರ್ಹ. ನಾವೆಲ್ಲರೂ ಅವರನ್ನು ಪ್ರೀತಿಸುತ್ತೇವೆ. ಪಕ್ಷವನ್ನು ಪುನಶ್ಚೇತನಗೊಳಿಸಲು ತುಂಬು ಹೃದಯದ ಪ್ರಯತ್ನಗಳನ್ನು ಮಾಡಬೇಕು. ಪಕ್ಷ ಸಂಘಟನೆಯನ್ನು ಸರಿಯಾಗಿ ಮಾಡಬೇಕಾಗಿದೆ' ಎಂದೂ ಅವರು ತಿಳಿಸಿದ್ದಾರೆ.

ನಾಯಕರು ಬರೆದ ಪತ್ರವನ್ನು ಕೆಲವು ದುಷ್ಕರ್ಮಿಗಳು ಸೋರಿಕೆ ಮಾಡಿದ್ದಾರೆ. 'ಇದು ಯಾರಿಂದ ಸೋರಿಕೆಯಾಯಿತು ಎಂದು ನನಗೆ ತಿಳಿದಿಲ್ಲ. ನಾವು ಅದನ್ನು ಒಪ್ಪುವುದಿಲ್ಲ, ನಮ್ಮಲ್ಲಿ ಯಾರೂ ಅದನ್ನು ಒಪ್ಪುವುದಿಲ್ಲ. ಪತ್ರಕ್ಕೆ ಸಹಿ ಮಾಡಿದವರು ಯಾರೂ ಅದನ್ನು ಸೋರಿಕೆ ಮಾಡಿಲ್ಲ. ಪಕ್ಷದಲ್ಲಿ ಆಂತರಿಕ ತನಿಖೆ ನಡೆಸಿ ಸೋರಿಕೆ ಮಾಡಿದವರಿಗೆ ಶಿಕ್ಷೆ ನೀಡಬೇಕು ಎಂದು ನಾನು ಭಾವಿಸುತ್ತೇನೆ' ಎಂದು ಸ್ಪಷ್ಟಪಡಿಸಿದರು.

ನಮ್ಮಲ್ಲಿ ಯಾರೊಬ್ಬರಿಗೂ ಪಕ್ಷವನ್ನು ಧೂಷಿಸುವ ಅಥವಾ ಪಕ್ಷದಿಂದ ಹೊರನಡೆಯುವ ಮಾತಿಲ್ಲ. ಹಾಗೆ ಬಿಜೆಪಿಯೊಂದಿಗೆ ಕೈಜೋಡಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಾವು ಬಿಜೆಪಿಯನ್ನು ಧ್ವೇಷಿಸುತ್ತೇವೆ. ಬಿಜೆಪಿಯನ್ನು ಧ್ವೇಷಿಸುವುದನ್ನು ಮತ್ತು ನರೇಂದ್ರ ಮೋದಿಯವರ (ಪ್ರಧಾನಿ) ನೀತಿಗಳನ್ನು ವಿರೋಧಿಸುವುದನ್ನು ಮುಂದುವರಿಸುತ್ತೇವೆ ಎಂದರು.

ಕಪಿಲ್ ಸಿಬಲ್ ಮತ್ತು ಶಶಿ ತರೂರ್ ಸೇರಿದಂತೆ ಕೆಲವು ಹಿರಿಯ ಕಾಂಗ್ರೆಸ್ ಮುಖಂಡರು, ಸಿಡಬ್ಲ್ಯುಸಿ ಸಭೆಯ ನಂತರ ಸೋಮವಾರ ಸಂಜೆ ದೆಹಲಿಯ ತಮ್ಮ ಹಿರಿಯ ಸಹೋದ್ಯೋಗಿ ಗುಲಾಮ್ ನಬಿ ಆಜಾದ್ ಮನೆಯಲ್ಲಿ ಸಭೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT