ಗುರುವಾರ , ನವೆಂಬರ್ 26, 2020
22 °C
ತ್ರಿಕೋನ ಸ್ಪರ್ಧೆ: ಫಲಿತಾಂಶದ ಲೆಕ್ಕ ಬದಲಿಸಲಿದೆಯೇ ಬಿಜೆಪಿ ಬಂಡಾಯ ಅಭ್ಯರ್ಥಿಗಳ ಮತಬೇಟೆ?

ಆಗ್ನೇಯ ಅಗ್ನಿಕುಂಡದಲ್ಲಿ ಜಿಲ್ಲೆಗೊಂದು ಚಿತ್ರಣ

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

ತುಮಕೂರು: ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಹಾಗೂ ದಾವಣಗೆರೆ (ಹರಿಹರ, ದಾವಣಗೆರೆ, ಜಗಳೂರು ತಾಲ್ಲೂಕುಗಳು ಮಾತ್ರ) ಜಿಲ್ಲೆಯನ್ನು ಒಳಗೊಂಡ ಆಗ್ನೇಯ ಪದವೀಧರ ಕ್ಷೇತ್ರ ಮೂರು ಪಕ್ಷಗಳ ಪ್ರತಿಷ್ಠೆಯ ಕಣವಾಗಿದೆ.

ಚುನಾವಣೆ ಘೋಷಣೆಗೂ ಮುನ್ನವೇ ಪ್ರಮುಖ ಅಭ್ಯರ್ಥಿಗಳು ಬಯಲು ಸೀಮೆಯ ಈ ಕ್ಷೇತ್ರದಲ್ಲಿ ‘ಆಟ’ಕ್ಕೆ ವೇದಿಕೆ ಸಿದ್ಧಗೊಳಿಸಿಕೊಂಡಿದ್ದರು. ಜೆಡಿಎಸ್‌ನ ಚೌಡರೆಡ್ಡಿ ತೂಪಲ್ಲಿ ಪುನರಾಯ್ಕೆಯ ಪ್ರಯತ್ನದಲ್ಲಿ ಇದ್ದರೆ, ಕಾಂಗ್ರೆಸ್‌ನ ರಮೇಶ್ ಬಾಬು, ಬಿಜೆಪಿಯ ಚಿದಾನಂದಗೌಡ ಪರಿಷತ್ ಪ್ರವೇಶದ ಆಸೆ ಹೊತ್ತಿದ್ದಾರೆ. ಬಿಜೆಪಿ ಮತಬೇಟೆಗೆ ಬಂಡಾಯ ಅಭ್ಯರ್ಥಿಗಳಾದ ಡಿ.ಟಿ.ಶ್ರೀನಿವಾಸ್, ಹಾಲನೂರು ಲೇಪಾಕ್ಷ ಸವಾಲಾಗಿದ್ದಾರೆ.

ದಾವಣಗೆರೆ, ತುಮಕೂರು, ಚಿತ್ರದುರ್ಗ ಜಿಲ್ಲೆಯಲ್ಲಿ ಗಣನೀಯವಾಗಿರುವ ವೀರಶೈವ, ಲಿಂಗಾಯತ ಸಮುದಾಯದ ಹಾಲನೂರು ಲೇಪಾಕ್ಷ ಮತ್ತು ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಪತಿ, ರಾಜ್ಯ ಗೊಲ್ಲರ (ಯಾದವ) ಸಂಘದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್ ಅವರ, ‘ಮತಬೇಟೆ’ ಫಲಿತಾಂಶದ ಏರುಪೇರಿಗೆ ಕಾರಣವಾಗಲಿದೆ.

ಪ್ರಾದೇಶಿಕತೆ, ಜಾತಿ ಲೆಕ್ಕಾಚಾರ, ತಮ್ಮದೇ ಆದ ವೈಯಕ್ತಿಕ ಸಂಪರ್ಕ, ಅಭಿವೃದ್ಧಿ ಮುನ್ನೋಟಗಳು, ಸಮಸ್ಯೆಗಳನ್ನು ಪರಿಹರಿಸುವ ಭರವಸೆ, ಅನುಕಂಪ, ‘ಸಜ್ಜನ’ ಎನ್ನುವ ಹಣೆಪಟ್ಟಿ, ಪಕ್ಷಾಂತರ, ಆಮಿಷಗಳು... ಹೀಗೆ ನಾನಾ ಲೆಕ್ಕಾಚಾರಗಳನ್ನು ಆಗ್ನೇಯ ಕ್ಷೇತ್ರದ ಅಗ್ನಿಕುಂಡಗಳಲ್ಲಿ ಅಭ್ಯರ್ಥಿಗಳು ಹದವಾಗಿ ಬೇಯಿಸುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಎನಿಸಿದೆ.

ಹಿಂದಿನ ‌ಚುನಾವಣೆಗಳನ್ನು ಗಮನಿಸಿದರೆ ಕಾಂಗ್ರೆಸ್ ಇಲ್ಲಿ ‘ಪ್ರಭಾವಿ’ ಎನಿಸಿಲ್ಲ. ಆ ಪಕ್ಷ ಗೆದ್ದು ಎರಡು ದಶಕಗಳೇ ಆಗಿವೆ. ಬಿಜೆಪಿ ಮತ್ತು ಜೆಡಿಎಸ್ ಪರಂಪರಾಗತ ಎದುರಾಳಿಗಳು. 2002ರಲ್ಲಿ ಜೆಡಿಎಸ್‌ನ ಎಚ್‌.ಎಸ್‌.ಶಿವಶಂಕರ್, 2008ರಲ್ಲಿ ಬಿಜೆಪಿಯ ಡಾ.ಎ.ಎಚ್‌.ಶಿವಯೋಗಿಸ್ವಾಮಿ, 2014ರಲ್ಲಿ ಜೆಡಿಎಸ್‌ನ ಚೌಡರೆಡ್ಡಿ ತೂಪಲ್ಲಿ ಗೆಲುವು ಕಂಡಿದ್ದರು.

ರಮೇಶ್ ಬಾಬು ಅವರ ಕಾಂಗ್ರೆಸ್ ಪ್ರವೇಶದಿಂದಾಗಿ ಚಿತ್ರಣವನ್ನು ಬದಲಿಸಿದೆ. ಆ ಪಕ್ಷದಲ್ಲಿ ಹುರುಪು ಮೂಡಿದೆ. ಈ ಹಿಂದೆ ರಮೇಶ್ ಬಾಬು ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಗೆಲುವು ಕಂಡಿದ್ದರು. ವಿಶೇಷ ಅಂದರೆ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಜೆಡಿಎಸ್ ಮೂಲದವರು. ‘ಹಳೇ ಸಂಪರ್ಕ’ದ ವಿಶ್ವಾಸದಲ್ಲಿ ಜೆಡಿಎಸ್ ಮತಬುಟ್ಟಿಗೂ ಕೈ ಇಟ್ಟಿದ್ದಾರೆ. ರಮೇಶ್ ಬಾಬು, ಚಿದಾನಂದಗೌಡ ತುಮಕೂರು ಜಿಲ್ಲೆಯವರಾದರೆ, ಚೌಡರೆಡ್ಡಿ ಕೋಲಾರ ಜಿಲ್ಲೆಯವರು.

ಕ್ಷೇತ್ರದ ಒಂದೊಂದು ಜಿಲ್ಲೆಯಲ್ಲಿಯೂ ಒಂದೊಂದು ‘ಮತ‌’ ಗಣಿತವಿದೆ. ಮೂರೂ ಪಕ್ಷಗಳ ಅಭ್ಯರ್ಥಿಗಳಿಗೆ ಇದೇ ಪ್ರಮುಖ ನೆಲೆಗಟ್ಟು.

‘ಚೌಡರೆಡ್ಡಿ ಗೆಲುವು ಕಂಡ ನಂತರ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗೆ ಮಾತ್ರ ಸೀಮಿತರಾಗಿದ್ದರು. ನಮಗೊಂದು ಅವಕಾಶ ಕೊಡಿ ಎಂದು ಪ್ರತಿಸ್ಪರ್ಧಿಗಳು ಕೋರುತ್ತಿದ್ದಾರೆ. ‘ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಮತ್ತೆ ಗೆಲ್ಲಿಸಿ’ ಎನ್ನುವುದು ಚೌಡರೆಡ್ಡಿ ಮನವಿ.

32 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ‌ಆಗ್ನೇಯ ಪದವೀಧರ ಕ್ಷೇತ್ರ ವ್ಯಾಪ್ತಿಯಲ್ಲಿ 13 ಮಂದಿ ಕಾಂಗ್ರೆಸ್, 12 ಮಂದಿ ಬಿಜೆಪಿ, 5 ಮಂದಿ ಜೆಡಿಎಸ್, ಒಬ್ಬ ಪಕ್ಷೇತರ ಶಾಸಕ (ಮುಳಬಾಗಿಲು ಪಕ್ಷೇತರ ಶಾಸಕ ನಾಗೇಶ್ ಬಿಜೆಪಿಗೆ ಬೆಂಬಲಿಸಿ ಸಚಿವರೂ ಆಗಿದ್ದಾರೆ) ಇದ್ದಾರೆ. ಜೆಡಿಎಸ್ ಶಾಸಕ ಸತ್ಯನಾರಾಯಣ್ ನಿಧನದಿಂದ ಶಿರಾದಲ್ಲಿ ಉಪಚುನಾವಣೆ ನಡೆಯುತ್ತಿದೆ. ಐದು ಮಂದಿ ಸಂಸದರು, ಒಬ್ಬ ವಿಧಾನಪರಿಷತ್ ಸದಸ್ಯರ ಬಲವೂ ಬಿಜೆಪಿಗೆ ಇದೆ.

ಬಿಜೆಪಿಗೆ ಬಂಡಾಯ ಬಿಸಿ: ಶಿರಾದ ಪ್ರೆಸಿಡೆನ್ಸಿ ಶಿಕ್ಷಣ ಸಂಸ್ಥೆಗಳ ಮಾಲೀಕ ಚಿದಾನಂದ್, ಬಿಜೆಪಿ ಅಭ್ಯರ್ಥಿಯಾಗುತ್ತಾರೆ ಎನ್ನುವ ಸುಳಿವು ದೊರೆತಾಗಲೇ ಟಿಕೆಟ್ ಆಕಾಂಕ್ಷಿಗಳು ಬಂಡಾಯದ ಎಚ್ಚರಿಕೆ ನೀಡಿದ್ದರು. ಚಿದಾನಂದ ಅವರು ಅಧಿಕೃತ ಅಭ್ಯರ್ಥಿಯಾದ ತರುವಾಯ ಆಕಾಂಕ್ಷಿಗಳು ತಮ್ಮದೇ ‘ಬಳಗ’ (ಸಿಂಡಿಕೇಟ್) ರೂಪಿಸಿಕೊಂಡು ಹಾಲನೂರು ಲೇಪಾಕ್ಷ ಅವರನ್ನು ಕಣಕ್ಕಿಳಿಸಿದ್ದಾರೆ. ಡಿ.ಟಿ.ಶ್ರೀನಿವಾಸ್ ಮತ್ತು ಲೇಪಾಕ್ಷ ‘ನಾವೇ ನೈಜ ಬಿಜೆಪಿ’ ಎಂದು ಪ್ರತಿಪಾದಿಸುತ್ತಿದ್ದಾರೆ. ‘ಶಿಸ್ತಿನ ಪಕ್ಷ’ ಹಣೆಪಟ್ಟಿಯ ಬಿಜೆಪಿ ಬಂಡಾಯ ಅಭ್ಯರ್ಥಿಗಳ ವಿರುದ್ಧ ಇಲ್ಲಿಯವರೆಗೂ ಕ್ರಮ ಜರುಗಿಸಿಲ್ಲ.

2014ರ ಚುನಾವಣೆ ನೋಟ

ಗೆದ್ದವರು: ಚೌಡರೆಡ್ಡಿ ತೂಪಲ್ಲಿ (ಜೆಡಿಎಸ್‌),

ಪಡೆದ ಮತ; 23,440
ಸಮೀಪದ ಸ್ಪರ್ಧಿ:

ಎ.ಎಚ್‌.ಶಿವಯೋಗಿಸ್ವಾಮಿ (ಬಿಜೆಪಿ)

ಪಡೆದ ಮತ: 16,906

***

ಅಭ್ಯರ್ಥಿಗಳ ಸಂದರ್ಶನ
________________

*ನೀವು ಗೆದ್ದ ನಂತರ ಮತದಾರರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎನ್ನುವ ಆರೋಪವನ್ನು ಪ್ರತಿಸ್ಪರ್ಧಿಗಳು ಮಾಡುತ್ತಿದ್ದಾರಲ್ಲ?

ನನ್ನ ಕೊಠಡಿ ಆರು ವರ್ಷಗಳಲ್ಲಿ ಒಂದು ದಿನವೂ ಮುಚ್ಚಿಲ್ಲ. ಯಾರೇ ಕರೆ ಮಾಡಿದರೂ ಸ್ವೀಕರಿಸಿದ್ದೇನೆ. ಸ್ಪಂದಿಸಿದ್ದೇನೆ. ಎಲ್ಲರಿಗೂ ಸುಲಭವಾಗಿ ಸಿಕ್ಕಿದ್ದೇನೆ. ಕೈಯಲ್ಲಾದ ಕೆಲಸ ಮಾಡಿಕೊಟ್ಟಿದ್ದೇನೆ. ಇದೆಲ್ಲವೂ ಮತದಾರರಿಗೆ ತಿಳಿದಿದೆ.

*ನೀವು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಮಾತ್ರ ಸೀಮಿತ ಎಂಬ ದೂರು ಇದೆಯಲ್ಲ?

ಈ ರೀತಿಯ ಮಾತು ಮತದಾರರಿಂದ ಕೇಳಿ ಬರುತ್ತಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ತುಮಕೂರಿನವರು, ನಾನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯವನು. ಆದರೆ ಇಡೀ ಕ್ಷೇತ್ರದಲ್ಲಿ ಚೌಡರೆಡ್ಡಿ ಸಜ್ಜನ ಎನ್ನುವ ಭಾವನೆ ಇದೆ. ವೀರಶೈವರಿಗೆ ಬಿಜೆಪಿ ಟಿಕೆಟ್ ತಪ್ಪಿಸಿದೆ. ಆ ಸಮುದಾಯದವರೂ ನನ್ನ ಬಗ್ಗೆ ಸದಭಿಪ್ರಾಯ ಹೊಂದಿದ್ದಾರೆ.

*ಯಾವ ವಿಚಾರಗಳನ್ನು ಮುಂದಿಟ್ಟು ಮತ ಕೇಳುತ್ತಿದ್ದೀರಿ?

ಬೆಂಗಳೂರು ‘ಮೆಟ್ರೊ’ದಲ್ಲಿ ಈ ಹಿಂದೆ ಪದವೀಧರರಿಗೆ ಕಿರುಕುಳ ಆಗುತ್ತಿತ್ತು. ಆ ಸಮಸ್ಯೆ ಪರಿಹರಿಸಿ ಅವರ ಮನ ಗೆದ್ದಿದ್ದೇನೆ. ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯಲ್ಲಿ ರೋಸ್ಟರ್ ಅನುಸಾರ 900 ಜನರನ್ನು ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ತೆಗೆದುಕೊಂಡಿದ್ದರು. ಯೋಜನೆ ಪೂರ್ಣವಾಗುವ ಮುನ್ನವೇ ತೆಗೆದರು. ಇದನ್ನು ವಿರೋಧಿಸಿ ವಿಧಾನ ಪರಿಷತ್‌ನಲ್ಲಿ ಧ್ವನಿ ಎತ್ತಿದ್ದೇನೆ. ಅತಿಥಿ ಉಪನ್ಯಾಸರು, ಮೊರಾರ್ಜಿ ವಸತಿ ಶಾಲೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ.

-ಚೌಡರೆಡ್ಡಿ ತೂಪಲ್ಲಿ, ಜೆಡಿಎಸ್‌

***

*ಈ ಹಿಂದೆ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ ಉತ್ತಮ ಸಾಧನೆ ತೋರಿಲ್ಲವಲ್ಲ...

ಕಾಂಗ್ರೆಸ್‌ಗೆ ಭದ್ರವಾದ ನೆಲೆ ಇದೆ. ಆದರೆ ಸಮರ್ಥ ಅಭ್ಯರ್ಥಿಗಳ ಕೊರತೆಯಿಂದ ಕ್ಷೇತ್ರ ‘ಕೈ’ ತಪ್ಪುತ್ತಿತ್ತು. 1975ರಲ್ಲಿ ರೆಡ್ಡಿ ಎನ್ನುವವರು ಕಾಂಗ್ರೆಸ್‌ನಿಂದ ಗೆದ್ದಿದ್ದರಂತೆ. ನಂತರ ದಾವಣಗೆರೆಯ ವೀರಭದ್ರಯ್ಯ ಗೆದಿದ್ದರು. ಈ ಬಾರಿ ಕಾಂಗ್ರೆಸ್ ಗೆಲ್ಲುತ್ತದೆ.

* ಯಾವ ವಿಚಾರಗಳನ್ನು ಪ್ರಸ್ತಾಪಿಸಿ ಮತ ಕೇಳುತ್ತಿದ್ದೀರಿ?

ಆಗ್ನೇಯ ಶಿಕ್ಷಕರ ಕ್ಷೇತ್ರದ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಆಗ ನನ್ನ ಅನುದಾನದ ಜತೆಗೆ ವೈಯಕ್ತಿಕ ನೆಲೆಯಲ್ಲಿ ವಿವಿಧ ಸಚಿವರ ಮೂಲಕ ತುಮಕೂರು ಜಿಲ್ಲೆಗೇ ₹ 15 ಕೋಟಿ ವೆಚ್ಚದ ಕಾಮಗಾರಿಗಳಿಗೆ ಅನುದಾನ ಕೊಡಿಸಿದ್ದೇನೆ. ಶಿಕ್ಷಕರ ಸಂಘ, ಸರ್ಕಾರಿ ನೌಕರರ ಸಂಘಗಳ ಕಟ್ಟಡ ನಿರ್ಮಾಣಗಳಿಗೆ ಅನುದಾನ ನೀಡಿದ್ದೇನೆ. ಸೋತ ನಂತರವೂ ಜನರ ಸಂಪರ್ಕದಿಂದ ದೂರವಾಗಿಲ್ಲ. ರಮೇಶ್ ಬಾಬು ಸಜ್ಜನ ಎನ್ನುವ ಅಭಿಪ್ರಾಯ ಬಿಜೆಪಿ, ಜೆಡಿಎಸ್‌ನವರಲ್ಲಿಯೇ ಇದೆ.

* ಈ ‘ಸಜ್ಜನ’ ಅಭಿಪ್ರಾಯ ಮತ ತಂದುಕೊಡುವ ವಿಶ್ವಾಸ ಇದೆಯೇ?

ಖಂಡಿತ ಇದೆ. ಯಾವುದೇ ಒಂದು ಸಮುದಾಯ ಪ್ರಾಬಲ್ಯ ಇಲ್ಲದ ಕ್ಷೇತ್ರ ಇದು. ದಾವಣಗೆರೆಯಲ್ಲಿ ಲಿಂಗಾಯತರು, ಚಿತ್ರದುರ್ಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ, ಚಿಕ್ಕಬಳ್ಳಾಪುರದಲ್ಲಿ ಬಲಿಜ, ಕೋಲಾರದಲ್ಲಿ ರೆಡ್ಡಿ ಮತ್ತು ತುಮಕೂರಿನಲ್ಲಿ ಎಲ್ಲ ಸಮುದಾಯಗಳ ಮತದಾರರು ಇದ್ದಾರೆ. ದಾವಣಗೆರೆಯಲ್ಲಿ ರಮೇಶ್ ಬಾಬು ಮತ್ತು ಬಿಜೆಪಿ ನಡುವೆ ಹಣಾಹಣಿ ಎನ್ನುತ್ತಿದ್ದಾರೆ. ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಚೌಡರೆಡ್ಡಿ ಮತ್ತು ನನ್ನ ನಡುವೆ ಸ್ಪರ್ಧೆ ಎನ್ನುವರು. ಚಿತ್ರದುರ್ಗದಲ್ಲಿ ರಮೇಶ್ ಬಾಬು ಮತ್ತು ಬಿಜೆಪಿ, ತುಮಕೂರಿನಲ್ಲಿ ತ್ರಿಕೋನ ಸ್ಪರ್ಧೆ ಎನ್ನುತ್ತಿದ್ದಾರೆ.

-ರಮೇಶ್ ಬಾಬು, ಕಾಂಗ್ರೆಸ್‌ 

***
*ಬಂಡಾಯ ಅಭ್ಯರ್ಥಿಗಳು ನಿಮಗೆ ತೊಡಕಾಗುವುದಿಲ್ಲವೆ?

ಇಲ್ಲಿ ಚಿದಾನಂದ ಗೌಡ ನೆಪಮಾತ್ರ. ಬಿಜೆಪಿಗೆ ಯಾವುದೇ ಒಬ್ಬ ವ್ಯಕ್ತಿ ಸವಾಲು ಹಾಕಲು ಸಾಧ್ಯವಿಲ್ಲ. ಬಂಡಾಯ ಅಭ್ಯರ್ಥಿಗಳು ಆರ್ಭಟ ಮಾಡಬಹುದು ಅಷ್ಟೇ. ಅವರ ಹೋರಾಟ, ಓಡಾಟ ಮತಗಳಾಗಿ ಪರಿವರ್ತನೆ ಆಗುವುದಿಲ್ಲ. ಇಲ್ಲಿನ ಮತದಾರರು ಪ್ರಜ್ಞಾವಂತರಿದ್ದಾರೆ. ಯಾರಿಗೂ 10 ಮತಗಳನ್ನು ಹಾಕಿಸುವ ಶಕ್ತಿ ಇಲ್ಲ.  ಬಂಡಾಯದಿಂದ ನಮಗೆ ಸ್ವಲ್ಪವೂ ಹಾನಿ ಇಲ್ಲ.

* ಗೆಲುವಿನ ವಿಶ್ವಾಸಕ್ಕೆ ಕಾರಣಗಳೇನು?

ಬಿಜೆಪಿ ಟಿಕೆಟ್ ಆಕಾಂಕ್ಷೆ ಇಟ್ಟುಕೊಂಡು 40 ಸಾವಿರ ಮಂದಿಯನ್ನು ಮತದಾರರಾಗಿ ನೋಂದಾಯಿಸಿದ್ದೇನೆ. ಪಕ್ಷದ ಶಕ್ತಿ ಕೇಂದ್ರಗಳಿಂದಲೂ ಇಷ್ಟೇ ಸಂಖ್ಯೆಯಲ್ಲಿ ನೋಂದಣಿ ಆಗಿದೆ. ಕೊರೊನಾ ಎದುರಾದರೂ ರಾಜ್ಯ ಬಿಜೆಪಿ ಸರ್ಕಾರವು ಸರ್ಕಾರಿ ನೌಕರರ ವೇತನ ಕಡಿತ ಮಾಡಿಲ್ಲ. ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳು ನನ್ನ ಬೆನ್ನಿಗಿವೆ. ಪಕ್ಷದ ತತ್ವ ಸಿದ್ಧಾಂತದಿಂದ ಪ್ರಭಾವಿತರಾದವರು ಬೆಂಬಲಿಸುತ್ತಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಶೇ 90, ಚಿತ್ರದುರ್ಗ, ತುಮಕೂರಿನಲ್ಲಿ ಶೇ 80, ಚಿಕ್ಕಬಳ್ಳಾಪುರ ಶೇ 70, ಕೋಲಾರದಲ್ಲಿ ಶೇ 60ರಷ್ಟು ಮತದಾರರು ಬಿಜೆಪಿ ಬೆಂಬಲಿಸುವ ವಿಶ್ವಾಸ ಇದೆ.

* ಯಾವ ಭರವಸೆಗಳನ್ನು ನೀಡಿ ಮತ ಕೇಳುತ್ತಿದ್ದೀರಿ?

30 ವರ್ಷದಿಂದ ಶಿಕ್ಷಣ ಕ್ಷೇತ್ರದಲ್ಲಿ ಇದ್ದೇನೆ. ಖಾಸಗಿ, ಸರ್ಕಾರಿ ಶಾಲೆ, ಕಾಲೇಜುಗಳ ಸಂಕಷ್ಟಗಳ ಅರಿವು ಇದೆ. ನಿರುದ್ಯೋಗಿ ಪದವೀಧರರು ಹೆಚ್ಚಿದ್ದಾರೆ. ಅವರಿಗಾಗಿಯೇ ಕಾರ್ಯಕ್ರಮಗಳನ್ನು ಮಾಡಬೇಕಿದೆ. ತಾಲ್ಲೂಕು ಕೇಂದ್ರಗಳಲ್ಲಿ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ತೆರೆಯುವುದು, ನಿರೋದ್ಯೋಗಿ ಪದವೀಧರರಿಗೆ ತರಬೇತಿ ನೀಡಿ ಉದ್ಯೋಗ ಕಲ್ಪಿಸಲು ಕೌಶಲ ಕೇಂದ್ರಗಳನ್ನು ಆರಂಭಿಸುವ ಭರವಸೆ ನೀಡುತ್ತಿದ್ದೇನೆ. ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ಕಲ್ಪಿಸುವುದೇ ನನ್ನ ಮೂಲ ಉದ್ದೇಶ.

-ಚಿದಾನಂದ ಗೌಡ, ಬಿಜೆಪಿ

***

*ಯಾವ ವಿಶ್ವಾಸದ ಮೇಲೆ ಸ್ಪರ್ಧೆ ಮಾಡಿದ್ದೀರಿ?

ನಮ್ಮ ವೀರಶೈವ/ ಲಿಂಗಾಯತ ಸಮಾಜದ ಮತದಾರರು ತುಮಕೂರು, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಹೆಚ್ಚಿದ್ದಾರೆ. ಮೂರು ಪಕ್ಷದವರೂ ನಮ್ಮ ಸಮಾಜದ ಅಭ್ಯರ್ಥಿಗೆ ಟಿಕೆಟ್ ನೀಡಿಲ್ಲ. ನನ್ನ ಸಮಾಜ ನನ್ನ ಕೈಹಿಡಿದೇ ಹಿಡಿಯುತ್ತದೆ ಎನ್ನುವ ನಂಬಿಕೆ ಇದೆ. ಮತ್ತೊಂದು ಕಡೆ ಜಾತ್ಯತೀತವಾದ ಸ್ನೇಹಿತರ ಬಳಗ ಸಹ ಇದೆ. ಐದು ಜಿಲ್ಲೆಗಳಲ್ಲಿ ತಂಡಗಳಾಗಿ ಕೆಲಸ ಮಾಡುತ್ತಿದ್ದೇವೆ. ಬಹಳ ಮಂದಿ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ.

* ನಿಮಗೆ ಟಿಕೆಟ್ ತಪ್ಪಲು ಪ್ರಮುಖ ಕಾರಣ ಯಾರು?

ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮತ್ತು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ಸ್ವಜಾತಿ ಪ್ರೇಮವೇ ಟಿಕೆಟ್ ಕೈತಪ್ಪಲು ಪ್ರಮುಖ ಕಾರಣ. ಬಿ.ಎಸ್.ಯಡಿಯೂರಪ್ಪ ಅವರು ಸಹ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ನಾನು ಸಿದ್ಧಗೊಳಿಸಿದ್ದ ವೇದಿಕೆಯಲ್ಲಿ ನಾರಾಯಣಸ್ವಾಮಿ ಗೆದ್ದರು. ಆದರೆ ಟಿಕೆಟ್ ನೀಡುವ ವಿಚಾರ ಬಂದಾಗ ನನ್ನನ್ನು ಬೆಂಬಲಿಸಲಿಲ್ಲ.

* ‘ಬಂಡಾಯ’ ನಿಮ್ಮ ರಾಜಕೀಯ ಭವಿಷ್ಯಕ್ಕೆ ತೊಡಕಾಗುವುದಿಲ್ಲವೇ?

ನಾನು ಬಿಜೆಪಿಗಾಗಿ ದುಡಿದ ಪ್ರಾಮಾಣಿಕ ಕಾರ್ಯಕರ್ತ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರನ್ನು ಬಾಯಿಗೆ ಬಂದಂತೆ ಬೈಯ್ದವರೇ ಈಗ ಬಿಜೆಪಿ ಅಭ್ಯರ್ಥಿ. ಕಳೆದ ಬಾರಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿ ಫಾರಂ ನೀಡಿ ಕೊನೆ ಕ್ಷಣದಲ್ಲಿ ವಾಪಸ್ ಪಡೆದರು. ನನಗೆ ಅನ್ಯಾಯವಾಗಿದೆ. ಇದು ಕಾರ್ಯಕರ್ತರು, ಮುಖಂಡರಿಗೆ ಗೊತ್ತು. ಲೇ‍ಪಾಕ್ಷ ಅವರಿಗೆ ಟಿಕೆಟ್ ತಪ್ಪಬಾರದಿತ್ತು ಎನ್ನುವ ಅನುಕಂಪ ಮೂಡಿದೆ. ಅನ್ಯಾಯ ಸರಿಪಡಿಸಬೇಕು ಎನ್ನುವ‌ ಮಾತು ಕೇಳಿ ಬರುತ್ತಿದೆ.

-ಹಾಲನೂರು ಲೇಪಾಕ್ಷ, ಪಕ್ಷೇತರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು