ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಾಂತರ ಕಾಯ್ದೆ: ಕಾಂಗ್ರೆಸ್‌–ಬಿಜೆಪಿ ವಾಗ್ವಾದ

ಮತಾಂತರ ನಿಷೇಧ ಅಸಾಂವಿಧಾನಿಕ:ವಿನಿಶಾ ನೆರೋ
Last Updated 25 ಮಾರ್ಚ್ 2022, 19:40 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಿರುವುದು ಅಸಾಂವಿಧಾನಿಕ ಎಂದು ಕಾಂಗ್ರೆಸ್‌ನ ಆಂಗ್ಲೋ ಇಂಡಿಯನ್‌ ಸದಸ್ಯೆ ವಿನಿಶಾ ನೆರೋ ವಿಧಾನಸಭೆಯಲ್ಲಿ ಹೇಳಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರ ಮಧ್ಯೆ ವಾಗ್ವಾದಕ್ಕೆ ಕಾರಣವಾಯಿತು.

ಶುಕ್ರವಾರ ವಿವಿಧ ಇಲಾಖೆಗಳ ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುವ ಸಂದರ್ಭದಲ್ಲಿ ಅವರು ಆಂಗ್ಲೋ ಇಂಡಿಯನ್‌ ಸದಸ್ಯರ ಸದಸ್ಯತ್ವ ರದ್ದುಗೊಳಿಸುವುದು ಮತ್ತು ಮತಾಂತರ ನಿಷೇಧ ಕಾಯ್ದೆ ಮಾಡಿರುವುದು ಸಂವಿಧಾನ ಬಾಹಿರ ಎಂದು ಹೇಳಿದರು.

ವಿನಿಶಾ ನೆರೋ ಅವರ ಹೇಳಿಕೆಗೆ ಬಿಜೆಪಿಯ ಪಿ.ರಾಜೀವ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮತಾಂತರ ನಿಷೇಧ ಮಸೂದೆಯನ್ನು ವಿಧಾನಸಭೆಯಲ್ಲಿ ಬಹುಮತದಿಂದ ಅಂಗೀಕಾರ ಮಾಡಲಾಗಿದೆ. ಆದ್ದರಿಂದ ಸಂವಿಧಾನ ಬಾಹಿರ ಎಂದು ಹೇಳುವುದು ತಪ್ಪು. ಇವರ ಪ್ರಕಾರ ಈ ಸದನ ಸಂವಿಧಾನ ಬಾಹಿರ ನಿರ್ಧಾರ ಕೈಗೊಂಡಿದೆಯೇ ಎಂದು ಪ್ರಶ್ನಿಸಿದರು. ಬಿಜೆಪಿ ಸದಸ್ಯರು ಇದಕ್ಕೆ ಧ್ವನಿಗೂಡಿಸಿದರು.

ವಿನಿಶಾ ಅವರ ನೆರವಿಗೆ ಧಾವಿಸಿದ ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆ, ವಿನಿಷಾ ಅವರ ಹೇಳಿಕೆಯನ್ನು ರಾಜೀವ್‌ ತಪ್ಪಾಗಿ ಅರ್ಥೈಸಿದ್ದಾರೆ. ಆಂಗ್ಲೋ ಇಂಡಿಯನ್ ಸದಸ್ಯತ್ವ ರದ್ದುಗೊಳಿಸಿರುವುದು ಸಂವಿಧಾನ ಬಾಹಿರ ಎಂದು ಹೇಳಿದ್ದಾರೆಯೇ ಹೊರತು ಮತಾಂತರ ನಿಷೇಧ ಕಾಯ್ದೆಯ ಬಗ್ಗೆ ಹೇಳಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಸದಸ್ಯರ ಸಮಜಾಯಿಷಿ ಒಪ್ಪದ ರಾಜೀವ್‌, ಸದಸ್ಯರು ಮಾತನಾಡಿರುವ ಕಡತವನ್ನು ತೆಗೆದು ನೋಡಿ. ಮತಾಂತರ ನಿಷೇಧ ಕಾಯ್ದೆ ಅಸಾಂವಿಧಾನಿಕ ಎಂದೇ ಹೇಳಿದ್ದಾರೆ. ಸದನದ ತೀರ್ಮಾನವನ್ನು ವಿರೋಧಿಸುವುದು, ಸದನಕ್ಕೆ ಮಾಡುವ ಅಪಮಾನ. ಅವರು ಹೇಳಿರುವ ಮಾತುಗಳನ್ನು ಕಡತದಿಂದ ತೆಗೆಯಬೇಕು ಎಂದು ಒತ್ತಾಯಿಸಿದರು.

ರಾಜೀವ್‌ ಮಾತಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಪ್ರಿಯಾಂಕ್‌ ಖರ್ಗೆ, ವಿರೋಧ ಪಕ್ಷಗಳ ವಿರೋಧದ ಮಧ್ಯೆ ಮತ್ತು ಸಭಾತ್ಯಾಗ ಮಾಡಿದಾಗ ಮತಾಂತರ ನಿಷೇಧ ಮಸೂದೆಗೆ ಒಪ್ಪಿಗೆ ಪಡೆಯಲಾಯಿತು. ಇದಕ್ಕೆ ಸದನದ ಒಪ್ಪಿಗೆ ಇರಲಿಲ್ಲ. ಆದ್ದರಿಂದ ಅಸಾಂವಿಧಾನಿಕ ಎಂದು ಹೇಳಿದ್ದರಲ್ಲಿ ತಪ್ಪಿಲ್ಲ ಎಂದರು.

ಆಗ ಸಮಜಾಯಿಷಿ ನೀಡಿದ ವಿನಿಶಾ ನೆರೋ, ‘ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿದ್ದಾರೆ. ಆಂಗ್ಲೋ ಇಂಡಿಯನ್‌ ಸದಸ್ಯತ್ವ ರದ್ದುಪಡಿಸಿರುವುದು ಅಸಾಂವಿಧಾನಿಕ ಮಾತ್ರ ಎಂದು ಹೇಳಿದ್ದೇನೆ’ ಎಂದರು. ಈ ಮಾತನ್ನು ಒಪ್ಪದ ರಾಜೀವ್‌, ‘ಮತಾಂತರ ಕಾಯ್ದೆ ಬಗ್ಗೆಯೇ ಮಾತನಾಡಿದ್ದು, ಕಡತ ತೆಗೆಸಿ ನೋಡಿ’ ಎಂದು ಪಟ್ಟು ಹಿಡಿದರು. ಕಡತ ನೋಡುವುದಾಗಿ ಉಪಸಭಾಧ್ಯಕ್ಷ ಆನಂದ ಮಾಮನಿ ಭರವಸೆ ನೀಡಿದ ಬಳಿಕ ರಾಜೀವ್‌ ಸುಮ್ಮನಾದರು.

‘ಸಚಿವರು, ಶಾಸಕರ ಪತ್ರ ನನ್ನ ಬಳಿ ಇದೆ’
‘ಕ್ರೈಸ್ತರು ನಡೆಸುವ ಶಾಲೆಗಳಲ್ಲಿ ಸೀಟು ಕೊಡಿಸಿ ಎಂದು ಎಷ್ಟೊ ಸಚಿವರು ಮತ್ತು ಶಾಸಕರು ನನಗೆ ಪತ್ರ ಕೊಡುತ್ತಾರೆ. ಆ ಪತ್ರಗಳು ನನ್ನ ಬಳಿ ಇವೆ. ಕ್ರೈಸ್ತರು ಎಂದರೆ ಮತಾಂತರ ಮಾಡುವವರಲ್ಲ. ಅವರು ಪ್ರೀತಿ ಹಂಚುವವರು, ಶಿಕ್ಷಣ ಮತ್ತು ಆರೋಗ್ಯದ ವಿಚಾರದಲ್ಲಿ ಸೇವೆ ಸಲ್ಲಿಸುವವರು’ ಎಂದು ವಿನಿಷಾ ನಿರೋ ಹೇಳಿದರು.

‘ಕ್ರೈಸ್ತರು ನಡೆಸುವ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಉತ್ತಮವಾಗಿರುವುದರಿಂದಲೇ ಜನ ಬರುತ್ತಾರೆ. ಆದರೆ, ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ ಅನುದಾನ ಕಡಿತ ಮಾಡಲಾಗಿದೆ. ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ನೆರವಿನ ಪ್ರಮಾಣ ತಗ್ಗಿಸಲಾಗಿದೆ. ಚರ್ಚ್‌ಗಳ ಮೇಲೆ ದಾಳಿ ಹೆಚ್ಚಾಗಿದೆ. ನಮ್ಮ ಆಹಾರ ಪದ್ಧತಿಗೆ ವಿರುದ್ಧವಾದ ಕಾನೂನು ರೂಪಿಸಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT