ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಗೆ ನಡೆದುಕೊಳ್ಳಬೇಕು ಎಂದು ಕಲಿಯಿರಿ: ಸಚಿವ ಚವ್ಹಾಣಗೆ ಸಭಾಪತಿ ಹೊರಟ್ಟಿ ಪಾಠ

Last Updated 16 ಫೆಬ್ರುವರಿ 2023, 6:32 IST
ಅಕ್ಷರ ಗಾತ್ರ

ಬೆಂಗಳೂರು: ‘ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಸದನದಲ್ಲಿ ಕಲಿಯಬೇಕು, ನಿಮ್ಮ ನಡೆ ಸರಿಯಲ್ಲ, ಜವಾಬ್ದಾರಿ ಸ್ಥಾನದಲ್ಲಿ ಕುಳಿತಿರುವಾಗ ಅದನ್ನು ನಿಭಾಯಿಸಬೇಕು. . .’

–ಇದು ವಿಧಾನ ಪರಿಷತ್‌ನಲ್ಲಿ ಪಶುಸಂಗೋಪನಾ ಸಚಿವ ಪ್ರಭು ಬಿ. ಚವ್ಹಾಣ ಅವರಿಗೆ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ ಪಾಠ.

ಕಲಾಪ ಬುಧವಾರ ಬೆಳಿಗ್ಗೆ ಆರಂಭವಾಗುತ್ತಿದ್ದಂತೆ ಜೆಡಿಎಸ್‌ನ ಎಸ್‌.ಎಲ್‌.ಭೋಜೇಗೌಡ, ರಾಜ್ಯದಿಂದ ಗೋವಾಕ್ಕೆ ಎಷ್ಟು ಪ್ರಮಾಣದಲ್ಲಿ ದನದ ಮಾಂಸ ರಫ್ತಾಗುತ್ತಿದೆ ಎನ್ನುವ ಕುರಿತು ಫೆ. 4ರಂದೇ ಪ್ರಶ್ನೆ ಕಳುಹಿಸಲಾಗಿದೆ. ಆದರೆ, ಇಲ್ಲಿಯವರೆಗೂ ಉತ್ತರ ನೀಡಿಲ್ಲ. ಉತ್ತರ ನೀಡಿದ ನಂತರ ಮುಂದಿನ ಕಲಾಪಗಳಿಗೆ ಅವಕಾಶ ಕೊಡಬೇಕು ಎಂದು ಪಟ್ಟುಹಿಡಿದರು.

ಆಗ ಭೋಜೇಗೌಡರ ನೆರವಿಗೆ ಬಂದ ಸಭಾಪತಿ, ‘ಸದಸ್ಯರ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಬೇಕು. ನಿಮಗೆ ಅಧಿಕಾರಿಗಳ ಮೇಲೆ ಹಿಡಿತವಿಲ್ಲವೇ, ಇದು ಸರಿಯಲ್ಲ. ಸದನ ಮುಗಿಯುವ ಮೊದಲು ಉತ್ತರ ಕೊಡಬೇಕು’ ಎಂದು ತಾಕೀತು ಮಾಡಿದರು.

‘ಅಂಬೇಡ್ಕರ್ ವಸತಿ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಲು ಬದ್ಧ’
‘ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ಬದ್ಧವಾಗಿದೆ’ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ವಿಧಾನಸಭೆಯಲ್ಲಿ ಬಿಜೆಪಿಯ ಮಸಾಲ ಜಯರಾಂ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ರಾಜ್ಯದಲ್ಲಿ ಒಟ್ಟು 830 ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗಳಿವೆ. ಈ ಪೈಕಿ, 240 ಶಾಲೆಗಳು ಬಾಡಿಗೆ ಕಟ್ಟಡಗಳಲ್ಲಿವೆ. ಅವುಗಳ ನಿರ್ವಹಣೆಗೆ ಈಗಾಗಲೇ ₹ 700 ಕೋಟಿ ಬಿಡುಗಡೆ ಮಾಡಲಾಗಿದೆ. ಉಳಿದ ಹಣವನ್ನು ಶೀಘ್ರ ಬಿಡುಗಡೆ ಮಾಡಲಾಗುವುದು’ ಎಂದರು.

ಜೆಡಿಎಸ್‌ನ ಕೃಷ್ಣಾರೆಡ್ಡಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಮೊರಾರ್ಜಿ ದೇಸಾಯಿ ಶಾಲೆಗೆ ಹೆಚ್ಚಿನ ಆದ್ಯತೆ ನೀಡಲು ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು’ ಎಂದರು.

‘ಕಳೆದ ಬಜೆಟ್‌ನಲ್ಲಿ 37 ವಸತಿ ಶಾಲೆ ಮಂಜೂರು ಮಾಡಲಾಗಿತ್ತು. ಇದರಲ್ಲಿ 11 ವಸತಿ ಶಾಲೆಗಳಿಗೆ ಕಾಮಗಾರಿ ಆರಂಭವಾಗಿದ್ದು, ಉಳಿದ ಶಾಲೆಗಳನ್ನು ಈ ವರ್ಷದ ಬಜೆಟ್‌ನಲ್ಲಿ ಸೇರಿಸಲು ಮನವಿ ಮಾಡಲಾಗಿದೆ. ಬಜೆಟ್ ಬಳಿಕ ಉಳಿದ ಶಾಲೆಗಳ ಕಾಮಗಾರಿ ಆರಂಭವಾಗಲಿದೆ’ ಎಂದರು.

ಎಂಎಸ್‌ಪಿ: ಕಡಲೆ ಖರೀದಿಗೆ ಆದೇಶ: ಸಚಿವ ಸೋಮಶೇಖರ್‌
‘ಧಾರವಾಡ, ಗದಗ, ಬೆಳಗಾವಿ, ವಿಜಯಪುರ, ಕಲಬುರಗಿ, ಯಾದಗಿರಿ, ಬೀದರ್‌, ರಾಯಚೂರು, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕಡಲೆ ಕಾಳು ಖರೀದಿಗೆ ಬುಧವಾರ ಆದೇಶ ಹೊರಡಿಸಲಾಗಿದೆ’ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

ಜೆಡಿಎಸ್‌ನ ವೆಂಕಟರಾವ್‌ ನಾಡಗೌಡ ಅವರ ಗಮನ ಸೆಳೆಯುವ ಸೂಚನೆಗೆ ಬುಧವಾರ ವಿಧಾನಸಭೆಯಲ್ಲಿ ಉತ್ತರ ನೀಡಿರುವ ಅವರು, ‘ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಮೂಲಕ ಖರೀದಿ ನಡೆಯಲಿದೆ. ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಲ್‌ ಖರೀದಿಗೆ ಅವಕಾಶ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

ವಿದ್ಯಾರ್ಥಿನಿಲಯ ದುರಸ್ತಿಗೆ ₹ 150 ಕೋಟಿ: ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯಿಂದ 1,203 ವಿದ್ಯಾರ್ಥಿ ನಿಲಯಗಳ ದುರಸ್ತಿಗೆ ₹ 150 ಕೋಟಿ ಅನುದಾನ ಒದಗಿಸಿದ್ದು, ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಆದೇಶ ಹೊರಡಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಅಭಿವೃದ್ಧಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಬಿಜೆಪಿಯ ಕುಮಾರ್‌ ಬಂಗಾರಪ್ಪ ಅವರ ಗಮನ ಸೆಳೆಯುವ ಸೂಚನೆಗೆ ಬುಧವಾರ ಉತ್ತರ ನೀಡಿದ ಅವರು, ‘ವಿದ್ಯಾರ್ಥಿ ನಿಲಯಗಳಿಗೆ ಮೂಲಸೌಕರ್ಯ ಒದಗಿಸಲು ₹ 100 ಕೋಟಿ ಒದಗಿಸಲಾಗಿದೆ. ₹ 150 ಕೋಟಿ ವೆಚ್ಚದಲ್ಲಿ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT